ಕೆಳಕೋಡ್ಲಿಯಲ್ಲಿ ವಾತ್ಸಲ್ಯ ಮನೆ ಹಸ್ತಾಂತರ

ವಾತ್ಸಲ್ಯ ಮನೆ ನಾಮಫಲಕವನ್ನು ಜಿಲ್ಲಾ ನಿರ್ದೇಶಕಿ ಲೀಲಾವತಿ ಅನಾವರಣಗೊಳಿಸಿದರು. ಮುತ್ತಣ್ಣ, ಹನುಮಂತ ಅಂಗಡಿ, ಹರೀಶ್ ಅಪ್ಸರಿ, ಅಕ್ಕಮ್ಮ ಮತ್ತಿತರರಿದ್ದರು.
ವಾತ್ಸಲ್ಯ ಮನೆ ನಾಮಫಲಕವನ್ನು ಜಿಲ್ಲಾ ನಿರ್ದೇಶಕಿ ಲೀಲಾವತಿ ಅನಾವರಣಗೊಳಿಸಿದರು. ಮುತ್ತಣ್ಣ, ಹನುಮಂತ ಅಂಗಡಿ, ಹರೀಶ್ ಅಪ್ಸರಿ, ಅಕ್ಕಮ್ಮ ಮತ್ತಿತರರಿದ್ದರು.
Published on
ಶನಿವಾರಸಂತೆ: ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಳಕೊಡ್ಲಿ ಗ್ರಾಮದ ಅಕ್ಕಮ್ಮ ಅವರು ಮನೆ ಇಲ್ಲದೆ ಶಿಥಿಲಗೊಂಡ ಮನೆಯಲ್ಲೇ ವಾಸ ಮಾಡುತ್ತಿದ್ದುದ್ದನ್ನು ಮನಗಂಡು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಯೋಜನೆಯಡಿಯಲ್ಲಿ ಮನೆ ನಿರ್ಮಿಸಿ ಹಸ್ತಾಂತರ ಮಾಡಲಾಯಿತು.
ಧರ್ಮಸ್ಥಳ ಯೋಜನಾ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ನಿರ್ಗತಿಕ ಕುಟುಂಬದವರಿಗಾಗಿ ಧರ್ಮಾಧಿಕಾರಿಗಳು ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ, ಶೈಕ್ಷಣಿಕ, ಕೃಷಿ, ಆರೋಗ್ಯ, ಸಾಮಾಜಿಕ ಸಬಲೀಕರಣ ಜತೆಯಲ್ಲಿ ಧಾರ್ಮಿಕ ತಳಹದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದೇಶದ ಏಕೈಕ ಸಾಮಾಜಿಕ ಸೇವಾ ಸಂಸ್ಥೆಯಾಗಿದೆ. ಮಹಿಳೆಯರು ಆತ್ಮಸ್ಥೈರ್ಯ, ಆರ್ಥಿಕ ಮತ್ತು ಸಾಮಾಜಿಕವಾಗಿ ಸದೃಢರಾದರೆ ಸಮಾಜದಲ್ಲಿ ಸುಖಿ ಜೀವನ ನಡೆಸಬಹುದೆಂಬ ಮೂಲ ಉದ್ದೇಶ ಇಟ್ಟುಕೊಂಡು ಗ್ರಾಮಾಭಿವೃದ್ಧಿ ಯೋಜನೆ ಸ್ಥಾಪಿಸಿದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಕನಸು ಇಂದು ನನಸಾಗಿದೆ ಎಂದರು.
ಧರ್ಮಸ್ಥಳ ಸಂಘವು ಇಂದು ಗ್ರಾಮೀಣ ಪ್ರದೇಶಗಳಲ್ಲಿ ಹತ್ತು ಹಲವು ಯೋಜನೆಯ ಮೂಲಕ ಗ್ರಾಮೀಣ ಭಾಗವನ್ನು ಅಭಿವೃದ್ಧಿಗೊಳಿಸಲು ಸರ್ಕಾರದ ಜತೆ ಕೈಜೋಡಿಸುತ್ತಿರುವ ಜತೆಯಲ್ಲಿ ಧಾರ್ಮಿಕ, ಜಾತ್ಯತೀತವಾಗಿ ಧರ್ಮದ ತಳಹದಿಯಲ್ಲಿ ಬೆರೆಯಲು ಅವಕಾಶ ಮಾಡಿಕೊಡುತ್ತಿದೆ ಎಂದು ಎಂದರು.
ಧರ್ಮಸ್ಥಳ ಸಂಘದ ತಾಲೂಕು ಯೋಜನಾಧಿಕಾರಿ ಹನುಮಂತ ಅಂಗಡಿ ಮಾತನಾಡಿ, ಗ್ರಾಮೀಣ ಮಹಿಳೆಯರ ಆರ್ಥಿಕ ಸದೃಢತೆ, ಆರ್ಥಿಕ ಸಬಲೀಕರಣ ಗ್ರಾಮಾಭಿವೃದ್ಧಿ ಪರಿಕಲ್ಪನೆಯಲ್ಲಿ ನಾಲ್ಕು ದಶಕಗಳ ಹಿಂದೆ ಸ್ಥಾಪಿಸಿದ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಮೂಲ ಉದ್ದೇಶ ಸಂಸ್ಥೆಯ ಹಲವಾರು ಕಾರ್ಯಕ್ರಮಗಳ ಮೂಲಕವಾಗಿ ಇಂದು ಗ್ರಾಮೀಣ ಪ್ರದೇಶದಲ್ಲಿ ಶೇ.80 ರಷ್ಟು ಪ್ರಗತಿ ಸಾಧಿಸುತ್ತಿದೆ ಎಂದರು.
ಸಂಸ್ಥೆಯು ಗ್ರಾಮೀಣ ಭಾಗದ ಅಸಹಾಯಕರ ಆರ್ಥಿಕ ಸಬಲೀಕರಣ ಮೂಲ ಶಕ್ತಿಯಾಗಬೇಕೆಂಬ ಉದ್ದೇಶದಿಂದ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಎಲ್ಲ ರೀತಿಯ ಸಾಲ ಸೌಲಭ್ಯ ನೀಡುತ್ತಿರುವ ಜತೆಯಲ್ಲಿ ಯೋಜನೆಗಳ ಮೂಲಕ ಸಮಾಜ ಸೇವೆ ಮಾಡುತ್ತಿದೆ ಎಂದರು.
ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಅಪ್ಸರಿ, ಮಾಜಿ ಅಧ್ಯಕ್ಷ ಮುತ್ತಣ್ಣ ಮತ್ತು ಸದಸ್ಯರು ಹಾಗೂ ಧರ್ಮಸ್ಥಳ ಸಂಘದ ಕೃಷಿ ಮೇಲ್ವಿಚಾರಕ ಹರೀಶ್, ವಾತ್ಸಲ್ಯ ಮನೆ ಫಲಾನುಭವಿ ಅಕ್ಕಮ್ಮ , ಜ್ಞಾನವಿಕಾಸ ಸಮನ್ವಯಾಧಿಕಾರಿ ಕವನ ಹಾಗೂ ಸಂಘದ ಸದಸ್ಯರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net