ವಿಶ್ವಕರ್ಮ ಸಮುದಾಯದವರನ್ನು ಒಂದುಗೂಡಿಸುವ ಪ್ರಯತ್ನವಾಗಲಿ

ವಿರಾಜಪೇಟೆ ತಾಲೂಕಿನ ವಿಶ್ವಕರ್ಮ ಸೇವಾ ಸಮಿತಿ ವತಿಯಿಂದ ನಗರದ ಶ್ರೀ ರಾಜರಾಜೇಶ್ವರಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತಾಲೂಕು ವಿಶ್ವಕರ್ಮ ಸಮುದಾಯ ಬಾಂಧವರ ಮತ್ತು ವಿವಿಧ ಬಾಷಿಕರ ಸಭೆಯಲ್ಲಿ ಅಧ್ಯಕ್ಷ ಕೆ.ಜೆ.ದಿವಾಕರ್ ಮಾತನಾಡಿದರು. ಸೋಮಣ್ಣ ಆಚಾರ್ಯ, ಸುಮೇಶ್ ಗೋವಿಂದನ್, ಟಿ.ಸಿ.ಸುರೇಶ್, ದಾಮೋದರ್ ಆಚಾರ್ಯ ಇದ್ದರು.
ವಿರಾಜಪೇಟೆ ತಾಲೂಕಿನ ವಿಶ್ವಕರ್ಮ ಸೇವಾ ಸಮಿತಿ ವತಿಯಿಂದ ನಗರದ ಶ್ರೀ ರಾಜರಾಜೇಶ್ವರಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತಾಲೂಕು ವಿಶ್ವಕರ್ಮ ಸಮುದಾಯ ಬಾಂಧವರ ಮತ್ತು ವಿವಿಧ ಬಾಷಿಕರ ಸಭೆಯಲ್ಲಿ ಅಧ್ಯಕ್ಷ ಕೆ.ಜೆ.ದಿವಾಕರ್ ಮಾತನಾಡಿದರು. ಸೋಮಣ್ಣ ಆಚಾರ್ಯ, ಸುಮೇಶ್ ಗೋವಿಂದನ್, ಟಿ.ಸಿ.ಸುರೇಶ್, ದಾಮೋದರ್ ಆಚಾರ್ಯ ಇದ್ದರು.
Published on

ವಿಶ್ವಕರ್ಮ ಸೇವಾ ಸಮಿತಿ ವಿರಾಜಪೇಟೆ ತಾಲೂಕು ಅಧ್ಯಕ್ಷ ಕೆ.ಜೆ.ದಿವಾಕರ್ ಕರೆ

ವಿರಾಜಪೇಟೆ: ಸನಾತನ ಹಿಂದೂ ಆಚರಣಾ ಪದ್ಧತಿಯಲ್ಲಿ ದೇವರು ಮತ್ತು ಗುರುವಾಗಿ ಪ್ರತಿಪಾದಿಸುವ ವಿಶ್ವಕರ್ಮ ವಿಷ್ಣು ಸ್ವರೂಪ ಎಂದು ಪರಿಗಣಿಸಲಾಗಿರುವ ನಿಟ್ಟಿನಲ್ಲಿ ವಿಶ್ವಕರ್ಮ ಸಮುದಾಯ ಬಾಂಧವರು
ಸಂಘಟಿತರಾಗಬೇಕೆಂದು ತಾಲೂಕು ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ಕೆ.ಜೆ.ದಿವಾಕರ್ ಕರೆ ನೀಡಿದರು.
ವಿಶ್ವಕರ್ಮ ಸೇವಾ ಸಮಿತಿ ವಿರಾಜಪೇಟೆ ತಾಲೂಕು ವತಿಯಿಂದ ನಗರದ ಶ್ರೀ ರಾಜರಾಜೇಶ್ವರಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತಾಲೂಕು ವಿಶ್ವಕರ್ಮ ಸಮುದಾಯ ಬಾಂಧವರ ಮತ್ತು ವಿವಿಧ ಬಾಷಿಕರ ಸಭೆಯಲ್ಲಿ ಮಾತನಾಡಿ, ಸರ್ಕಾರವು ಕೆಲವು ವರ್ಷಗಳಿಂದ ವಿಶ್ವಕರ್ಮ ಜಯಂತಿಯನ್ನು ಆಚರಿಸಿಕೊಂಡು ಬಂದಿದೆ. ವಿಶ್ವಕರ್ಮ ಸೇವಾ ಸಮಿತಿಯು ವಿಶ್ವಕರ್ಮ ಪೂಜೆ ಮತ್ತು ಸಮುದಾಯದವರಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದೆ. ಕಾರ್ಯಕ್ರಮದಲ್ಲಿ ಸಮುದಾಯದವರು ಭಾಗಿಯಾಗುತ್ತಿರುವುದು ವಿರಳವಾದ್ದರಿಂದ ಕಾರ್ಯಕ್ರಮ ಸಂಘಟಿಸುವಲ್ಲಿ ಹಿನ್ನಡೆಯಾಗಿದೆ ಎಂದು ಬೇಸರಿಸಿದರು.
ವಿಶ್ವಕರ್ಮ ಸಮುದಾಯದ ಮುಖಂಡ ಸುಮೇಶ್ ಗೋವಿಂದನ್ ಮಾತನಾಡಿ, ವಿಶ್ವಕರ್ಮ ಸಮುದಾಯದವರು ವಿವಿಧ ಭಾಷಿಕರನ್ನು ಒಳಗೊಂಡ ಒಂದು ಸಮುದಾಯ. ಸರ್ವರನ್ನು ಒಂದೇ ವೇದಿಕೆಯಲ್ಲಿ ಕರೆತಂದು ಬೃಹತ್ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸೇವಾ ಸಮಿತಿ ಪದಾಧಿಕಾರಿ ಟಿ.ಸಿ.ಸುರೇಶ್ ಮಾತನಾಡಿ, ಸಮುದಾಯದವರು ತಾಲೂಕಿನ ವಿವಿಧ ಭಾಗಗಳಲ್ಲಿ ಹಂಚಿ ಹೋಗಿದ್ದಾರೆ. ಅವರನ್ನು ಗುರುತಿಸಿ ಸಂಘಟನೆಯ ಸದಸ್ಯತ್ವವನ್ನು ಪಡೆಯಲು ಪ್ರೋತ್ಸಾಹಿಸಬೇಕು. ಅಲ್ಲದೆ ಎಲ್ಲ ಭಾಷಿಕರನ್ನು ಗಣನೆಗೆ ತೆಗೆದುಕೊಂಡು ಮುಂದಿನ ವಿಶ್ವಕರ್ಮ ಪೂಜೆಯನ್ನು ವಿಜೃಂಭಣೆಯಿಂದ ಆಚರಣೆ ಮಾಡಬೇಕು ಎಂದು ಸಲಹೆ ನೀಡಿದರು.
ವಿಶ್ವಕರ್ಮ ಸೇವಾ ಸಮಿತಿ ಮಾಜಿ ಅಧ್ಯಕ್ಷ ದಾಮೋದರ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವಕರ್ಮ ಜನಾಂಗದ ವಿವಿಧ ಭಾಷಿಕರು ತಾಲೂಕಿನಾದ್ಯಂತ ನೆಲೆ ಕಂಡುಕೊಂಡಿದ್ದಾರೆ. ಅಲ್ಲದೆ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದಾರೆ. ಒಂದೇ ಭಾಷೆ, ಜನಾಂಗಕ್ಕೆ ಸೀಮಿತವಾಗದೆ ಎಲ್ಲ ಭಾಷಿಕರನ್ನು ಸಂಘಟಿಸಿ ಸಮಿತಿ ರಚನೆ ಮಾಡಿ ಪ್ರತಿವರ್ಷ ಕಾರ್ಯಕ್ರಮ ಆಚರಣೆ ಮಾಡುವ ನಿಟ್ಟಿನಲ್ಲಿ ಈ ಸಭೆಯನ್ನು ಕರೆಯಲಾಗಿದೆ. ಸರ್ವರ ಅಭಿಪ್ರಾಯ ಸಂಗ್ರಹಿಸಿ ಸಮಿತಿ ರಚಿಸುವ ಮೂಲಕ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದರು. ವಿಶ್ವಕರ್ಮ ಮುಖಂಡ ಬಿ.ಪಿ. ಸೋಮಣ್ಣ ಆಚಾರ್ಯ ಉಪಸ್ಥಿತರಿದ್ದರು.
ವಿರಾಜಪೇಟೆ ನಗರ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ ವಿಶ್ವಕರ್ಮ ಸಮೂದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net