ವಿದ್ಯಾರ್ಥಿಗಳ ಭವಿಷ್ಯದ ಆಯ್ಕೆ ವಿದ್ಯಾರ್ಥಿಗಳಿಗೇ ಇರಲಿ

ಉಮ್ಮತ್ ಒನ್ ಕೊಡಗು ಮತ್ತು ಶಾಹಿನ್ ಶಿಕ್ಷಾ ಯಾತ್ರೆ ವತಿಯಿಂದ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗಾಗಿ ವೃತ್ತಿ ತರಬೇತಿ ವ್ಯಕ್ತಿತ್ವ ವಿಕಸನ ಕಾರ್ಯಗಾರದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಉಮ್ಮತ್ ಒನ್ ಕೊಡಗು ಮತ್ತು ಶಾಹಿನ್ ಶಿಕ್ಷಾ ಯಾತ್ರೆ ವತಿಯಿಂದ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗಾಗಿ ವೃತ್ತಿ ತರಬೇತಿ ವ್ಯಕ್ತಿತ್ವ ವಿಕಸನ ಕಾರ್ಯಗಾರದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Published on
ಮಡಿಕೇರಿ:
ವಿದ್ಯಾರ್ಥಿಗಳಲ್ಲಿ ವಿವಿಧ ರೀತಿಯ ಪ್ರತಿಭೆಗಳಿದ್ದು ಅವರ ಮುಂದಿನ ಭವಿಷ್ಯವನ್ನು ಆಯ್ಕೆ ಮಾಡಲು ಅವರಿಗೇ ಸ್ವಾತಂತ್ರ ನೀಡಬೇಕು ಎಂದು ದೆಹಲಿಯ ಖ್ಯಾತ ವ್ಯಕ್ತಿತ್ವ ವಿಕಸನ ತರಬೇತುದಾರ ಅತೀಖು ರೆಹಮಾನ್ ಹೇಳಿದರು. ಉಮ್ಮತ್ ಒನ್ ಕೊಡಗು ಮತ್ತು ಶಾಹಿನ್ ಶಿಕ್ಷಾ ಯಾತ್ರೆ ವತಿಯಿಂದ ಮಡಿಕೇರಿಯ ಕಾವೇರಿ ಹಾಲ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗಾಗಿ ವೃತ್ತಿ ತರಬೇತಿ ವ್ಯಕ್ತಿತ್ವ ವಿಕಸನ ಕಾರ್ಯಗಾರದಲ್ಲಿ ಮಾತನಾಡಿದರು.
ಪೋಷಕರು ತಮ್ಮ ಮಕ್ಕಳು ಇಂಥದ್ದೇ ವೃತ್ತಿ ಆಯ್ಕೆ ಮಾಡಬೇಕು ಎಂಬ ಧೋರಣೆಯನ್ನು ಕೈ ಬಿಡಬೇಕು. ವಿದ್ಯಾರ್ಥಿಗಳಲ್ಲಿ ವಿವಿಧ ರೀತಿಯ ಪ್ರತಿಭೆಗಳು ಇರುವುದರಿಂದ ಅವರ ಮುಂದಿನ ಭವಿಷ್ಯವನ್ನು ಆಯ್ಕೆ ಮಾಡುವ ಅವಕಾಶ ಅವರಿಗೇ ಕೊಡಬೇಕು. ಇಂದು ಡಾಕ್ಟರ್ ಮತ್ತು ಎಂಜಿನಿಯರ್ ಹುದ್ದೆಗಳನ್ನು ಆಯ್ಕೆ ಮಾಡಲು ಪ್ರೋತ್ಸಾಹಿಸುತ್ತಿರುವುದು ಕಂಡು ಬರುತ್ತಿದೆ. ಇದು ಅವರಲ್ಲಿರುವ ಅಭಿರುಚಿಗಳಿಗೆ ವಿರುದ್ಧವಾಗುತ್ತದೆ. ಮಾತ್ರವಲ್ಲ ಅವರ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು.
ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ತಮ್ಮ ಸಹಪಾಠಿಗಳು ಯಾವುದನ್ನು ಆಯ್ಕೆ ಮಾಡುತ್ತಾರೆ ಅದನ್ನು ನಾನು ಮಾಡುತ್ತೇನೆ ಎಂಬ ಧೋರಣೆಯನ್ನು ಕೈ ಬಿಡಬೇಕು. ನಿಮ್ಮಲ್ಲಿರುವ ಅಭಿರುಚಿಗಳಿಗೆ ತಕ್ಕಂತೆ ನೀವು ಮುಂದುವರಿಯಬೇಕು ಎಂದು ಹೇಳಿದರು.
ಸಲಹಾ ಸಮಿತಿ ಸದಸ್ಯ ಹಾರೂನ್ ಕಾರ್ಯಗಾರ ಉದ್ಘಾಟಿಸಿದರು. ಉಮ್ಮತ್ ಒನ್ ಕೊಡಗು ಅಧ್ಯಕ್ಷ ಎಂ.ಬಿ ಬಷೀರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಟ್ಕಲ್ ಮಸೀದಿ ಖತೀಬ ಅಲೀ ಮುಸ್ಲಿಯಾರ್ ಪ್ರಾರ್ಥನೆ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಖಾಲಿದ್, ಕೋಶಾಧಿಕಾರಿ ಸಿ.ಎಂ ಹಮೀದ್ ಫೈಝಿ, ಶಾಹಿನ್ ಸಂಸ್ಥೆ ನಿರ್ದೇಶಕ ಶಕನೂರು ಸಾಂಬರ್ಕರ್ ಪುಣೆ, ಶಾಹಿನ್ ಅಕಾಡೆಮಿ ಘಟಕದ ಮುಖ್ಯಸ್ಥ ಫೈಝೂನ್ ದಾವೀಸ್ ಹಾಗೂ ಉಮ್ಮತ್ ಒನ್ ಸಂಘಟನೆಯ ಪದಾದಿಕಾರಿಗಳು ಇದ್ದರು. ಮಡಿಕೇರಿ ಮತ್ತು ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು ನಾನೂರಕ್ಕೂ ಹೆಚ್ಚು ಪದವಿಪೂರ್ವ ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net