ಎಲ್ಲೆಂದರಲ್ಲಿ ಕಸ ಬಿಸಾಡುವ ಪ್ರವೃತ್ತಿ ಬದಲಾಗಲಿ

ಮಡಿಕೇರಿ ಸ್ಟೋನ್ ಹಿಲ್‌ನಲ್ಲಿ ಸಂಗ್ರಹ ಹಾಕಿರುವ ತ್ಯಾಜ್ಯ ರಾಶಿ
ಮಡಿಕೇರಿ ಸ್ಟೋನ್ ಹಿಲ್‌ನಲ್ಲಿ ಸಂಗ್ರಹ ಹಾಕಿರುವ ತ್ಯಾಜ್ಯ ರಾಶಿ
Published on
ಮಡಿಕೇರಿ:
ಕೊಡಗು ಇಂದು ಒಂದು ಗಂಭೀರ ಸಮಸ್ಯೆ ಎದುರಿಸುತ್ತಿದೆ. ಜಿಲ್ಲೆಯ ಜೀವನಾಡಿಗಳಾದ ಕಾವೇರಿ, ಲಕ್ಷ್ಮಣತೀರ್ಥ ಸೇರಿದಂತೆ ನದಿಗಳಿಗೆ ಹಾಗೂ ರಸ್ತೆ ಬದಿಗಳಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರು ಪ್ಲಾಸ್ಟಿಕ್ ಮತ್ತು ತ್ಯಾಜ್ಯವನ್ನು ಎಸೆಯುವ ಕೃತ್ಯಗಳು ಹೆಚ್ಚಾಗುತ್ತಿವೆ. ಸ್ಥಳೀಯ ಆಡಳಿತ ಮತ್ತು ಪಂಚಾಯಿತಿಗಳು ದಂಡ ವಿಧಿಸುತ್ತಿದ್ದರೂ, ಕಸ ಎಸೆಯುವ ಅಭ್ಯಾಸಕ್ಕೆ ಮುಕ್ತಿ ಸಿಕ್ಕಿಲ್ಲ. ದಂಡದಿAದ ಮಾತ್ರ ಈ ಸಮಸ್ಯೆಯನ್ನು ತಡೆಯಲು ಸಾಧ್ಯವಿಲ್ಲ ಎಂಬುದಕ್ಕೆ ಪ್ರಸ್ತುತ ಸ್ಥಿತಿಯೇ ಸಾಕ್ಷಿ. ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಈ ಪ್ರವೃತ್ತಿಗೆ ತಡೆ ಹಾಕಲು ಹೊಸ ಮಾದರಿಯ ಪ್ರಯತ್ನಗಳು ಅಗತ್ಯವಾಗಿವೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಪ್ರತಿಯೊಂದು ಗ್ರಾಮ ಪಂಚಾಯಿತಿ ಮತ್ತು ಕಾವೇರಿ ನದಿ ತೀರದ ಗ್ರಾಮಗಳಲ್ಲಿ ಸ್ವಚ್ಛತಾ ಸಮಿತಿಗಳನ್ನು ರಚಿಸಬೇಕು. ಸ್ಥಳೀಯ ಯುವಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಈ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡು, ಕಸ ಎಸೆಯುವವರನ್ನು ತಕ್ಷಣವೇ ಗುರುತಿಸಿ ಅವರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಹೆಚ್ಚಾಗಿ ಕಸ ಎಸೆಯುವ ನದಿ, ಸೇತುವೆಗಳು ಮತ್ತು ರಸ್ತೆ ಬದಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಕಸ ಎಸೆಯುವ ಸಾರ್ವಜನಿಕರು ಅಥವಾ ಪ್ರವಾಸಿಗರ ದೃಶ್ಯಗಳನ್ನು ಪತ್ತೆಹಚ್ಚಿ, ಅವರ ಮೇಲೆ ಕೇವಲ ದಂಡ ವಿಧಿಸುವುದಷ್ಟೇ ಅಲ್ಲದೆ, ಅಂತಹ ತ್ಯಾಜ್ಯವನ್ನು ಅವರ ಕೈಯಿಂದಲೇ ಮರಳಿ ತೆಗೆಸುವಂತೆ ಮಾಡಬೇಕು.
ಕೊಡಗಿಗೆ ಆಗಮಿಸುವ ಪ್ರವಾಸಿ ವಾಹನಗಳಿಗೆ ಚೆಕ್‌ಪೋಸ್ಟ್ಗಳಲ್ಲೇ ಸ್ವಚ್ಛತೆಯ ಕುರಿತು ಜಾಗೃತಿ ನೀಡಬೇಕು. ಪ್ರತಿಯೊಂದು ಪ್ರವಾಸಿ ವಾಹನದಲ್ಲೂ ಕಸದ ಚೀಲ ಇಟ್ಟುಕೊಳ್ಳುವುದನ್ನು ಕಡ್ಡಾಯಗೊಳಿಸಬೇಕು. ಕಸ ಎಸೆದರೆ ವಾಹನದ ನೋಂದಣಿ ರದ್ದುಗೊಳಿಸಲಾಗುವುದು ಎಂಬ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ಪ್ರವೇಶ ದ್ವಾರಗಳಲ್ಲೇ ನೀಡಬೇಕು. ನದಿ ಹಾಗೂ ಅರಣ್ಯ ಸಂರಕ್ಷಣೆಯ ಮಹತ್ವವನ್ನು ಶಾಲಾ ಹಂತದಲ್ಲೇ ಮಕ್ಕಳ ಮನಸ್ಸಿನಲ್ಲಿ ಬಿತ್ತಬೇಕು.
ಕೊಡಗಿನ ಕಾವೇರಿ ನದಿಗೆ ಪವಿತ್ರ ಸ್ಥಾನವಿದೆ. ಕಾವೇರಿ ಸಂಕ್ರಮಣದAತಹ ಪ್ರಮುಖ ಹಬ್ಬಗಳು ಮತ್ತು ಸ್ಥಳೀಯ ದೇವಸ್ಥಾನದ ಉತ್ಸವಗಳ ಸಂದರ್ಭದಲ್ಲಿ ನದಿ ಮಾಲಿನ್ಯ ಮಾಡುವುದು ಧರ್ಮಕ್ಕೆ ಹಾಗೂ ಪ್ರಕೃತಿಗೆ ಎಸಗುವ ಅಪಚಾರ ಎಂಬ ಸಂದೇಶವನ್ನು ಧಾರ್ಮಿಕ ಮುಖಂಡರ ಮೂಲಕ ಜನರಿಗೆ ತಲುಪಿಸಬೇಕು. ಇಂಥ ಕ್ರಮಗಳಿಂದ ಕೊಡಗಿನಲ್ಲಿ ಸ್ವಚ್ಛತೆ ಕಾಪಾಡಬಹುದು ಎನ್ನುವ ಸಲಹೆಗಳು ಕೇಳಿ ಬರುತ್ತಿದೆ.
"

ದಂಡ ವಿಧಿಸುವುದರಿಂದ ಮಾತ್ರ ಕಸ ಎಸೆಯುವುದನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳು ನದಿ ಹಾಗೂ ರಸ್ತೆ ಬದಿಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜತೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸ್ವಸಹಾಯ ಸಂಘಗಳು ಹಾಗೂ ಸಂಘ-ಸAಸ್ಥೆಗಳ ಮೂಲಕ ನಿರಂತರ ಜಾಗೃತಿ ಮೂಡಿಸಬೇಕು. ನಮ್ಮ ನದಿ-ನಮ್ಮ ಜವಾಬ್ದಾರಿ ಎಂಬ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕು.

"

ಮುಖ್ಯವಾಗಿ ಜನರ ಮನಸ್ಥಿತಿ ಬದಲಾಗಬೇಕು. ನದಿ, ಕೆರೆ ಹಾಗೂ ರಸ್ತೆ ಬದಿಯಲ್ಲಿ ಕಸ ಹಾಕುವುದರಿಂದ ಪರಿಸರ ಹಾಳಾಗುವುದರ ಜತೆಗೆ ಸಾರ್ವಜನಿಕ ಆರೋಗ್ಯಕ್ಕೂ ಅಪಾಯವಿದೆ ಎಂಬುದನ್ನು ಮನವರಿಕೆ ಮಾಡಬೇಕು. ಕಸ ಎಸೆಯುವ ಸ್ಥಳಗಳಲ್ಲಿ ಎಚ್ಚರಿಕೆ ಫಲಕ, ಕಸದ ಬುಟ್ಟಿಗಳ ವ್ಯವಸ್ಥೆ ಹಾಗೂ ನಿಯಮಿತ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ಕಸ ಎಸೆಯುವವರನ್ನು ಗುರುತಿಸಿ ಸಾರ್ವಜನಿಕವಾಗಿ ಎಚ್ಚರಿಕೆ ನೀಡುವುದರಿಂದಲೂ ಪರಿಣಾಮಕಾರಿ ಬದಲಾವಣೆ ತರಬಹುದು.

"

ನದಿಗೆ ಕಸ ಎಸೆಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಆಗಬೇಕು. ಆಯಾಯ ಗ್ರಾಮ ಪಂಚಾಯತಿಯವರು ನಿಗಾ ವಹಿಸಬೇಕು. ಕಸ ಎಸೆಯುವ ಜಾಗಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಸಾರ್ವಜನಿಕರು ತಮ್ಮ ಸಮಯ ಪ್ರಜ್ಞೆಯಿಂದ ಇಂತಹ ಕೃತ್ಯಗಳು ನಡೆಯದಂತೆ ಎಚ್ಚರವಹಿಸಬೇಕು.

"

ನದಿ ಮತ್ತು ಸಾರ್ವಜನಿಕ ಸ್ವಚ್ಛತೆಗೆ ತಿಂಗಳಿಗೊಮ್ಮೆ ಕಡ್ಡಾಯ ಸ್ವಚ್ಛತಾ ಅಭಿಯಾನ ನಡೆಸಬೇಕು. ಪ್ರತಿ ಗ್ರಾಮ-ಪಟ್ಟಣಗಳಲ್ಲಿ ಹಸಿ ಕಸ ಮತ್ತು ಒಣ ಕಸಕ್ಕೆ ಪ್ರತ್ಯೇಕ ಬುಟ್ಟಿಗಳನ್ನು ಇಡಬೇಕು. ಕಸ ಹೆಚ್ಚಿರುವ ಸ್ಥಳಗಳಲ್ಲಿ ಸಿಸಿಟಿವಿ ಮತ್ತು ದಂಡದ ಎಚ್ಚರಿಕೆ ಫಲಕಗಳನ್ನು ಹಾಕಬೇಕು. ರಸ್ತೆ ಬದಿ, ಶಾಲೆಗಳಲ್ಲಿ ಪ್ರಚಾರ ಫಲಕ, ಶಾಲಾ ಮಕ್ಕಳು ಮತ್ತು ಸ್ವಯಂಸೇವಕರಿAದ ಜಾಗೃತಿ ಕಾರ್ಯಕ್ರಮ ಮಾಡಬೇಕು. ಸ್ವಚ್ಛವಾಗಿರುವ ಗ್ರಾಮಗಳನ್ನು ಗುರುತಿಸಿ ಸನ್ಮಾನಿಸಿ, ಸ್ವಯಂಸೇವಕರಿಗೆ ಪ್ರೋತ್ಸಾಹ ನೀಡಬೇಕು. ಪ್ರವಾಸಿಗರು ಎಲ್ಲೆಂದರಲ್ಲಿ ಕಸ ಹಾಕದಂತೆ ಮತ್ತು ವಾಹನ ಸವಾರರು ರಸ್ತೆ ಬದಿಗೆ ಕಸ ಎಸೆಯದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಬೇಕು.

"

ವಿದ್ಯಾವಂತರ ಜಿಲ್ಲೆ ನಮ್ಮದಾದರೂ ಅವಿದ್ಯಾವಂತರ ರೀತಿ ವರ್ತಿಸುವವರಿಗೆ ಕಡಿಮೆ ಇಲ್ಲ. ಇನ್ನು ಮುಂದೆ ರಸ್ತೆ ಬದಿಯಲ್ಲಿ ಕಸ ತಂದು ಹಾಕುವುದನ್ನು ಯಾರೇ ನೋಡಿದರೂ ಅವರ ಬ್ಯಾಗಿಗೆ ಕಸವನ್ನು ತುಂಬಿಸಿ ಕಳುಹಿಸಬೇಕು. ಪ್ರತಿ ಗ್ರಾಮಗಳಲ್ಲಿ ಕೃಷಿ ಸಖಿ, ಪಶು ಸಖಿಗಳು ಇರುವಂತೆ, ಸ್ವಚ್ಛತಾ ಸಖಿಯರನ್ನು ನೇಮಿಸಬೇಕು. ಕಸ ಎಸೆಯುವುದರಿಂದ ಉಂಟಾಗುವ ಆರೋಗ್ಯ ಮತ್ತು ಪರಿಸರ ಹಾನಿಯ ಬಗ್ಗೆ ಶಾಲೆ, ಕಾಲೇಜು ಮತ್ತು ಮಾಧ್ಯಮಗಳ ಮೂಲಕ ಜನರಿಗೆ ಅರಿವನ್ನು ಮೂಡಿಸುವ ಕಾರ್ಯ ಆಗಬೇಕಾಗಿದೆ. ಕಸವನ್ನು ಹೆಚ್ಚಾಗಿ ಎಸೆಯುವ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ತಪ್ಪು ಮಾಡಿದವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು.ನದಿ ಮೂಲವನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಕೂಡ ಆಗಿದೆ.

"

ಸ್ವಚ್ಛ ಮತ್ತು ಸುಂದರ ಕೊಡಗಿಗಾಗಿ ತ್ಯಾಜ್ಯ ವಿಲೇವಾರಿ ವಿಷಯದಲ್ಲಿ ಸ್ವಲ್ಪ ಕಠಿಣ ಕ್ರಮಗಳನ್ನು ಅನುಸರಿಸಬೇಕಾದ ಅಗತ್ಯವಿದೆ. ಉತ್ಪತ್ತಿಯಾಗುವ ತ್ಯಾಜ್ಯದಲ್ಲಿ ಮರುಬಳಕೆ ಮಾಡಬಹುದಾದ ಮತ್ತು ಮಾಡಲಾಗದ ತ್ಯಾಜ್ಯವನ್ನು ಪ್ರತ್ಯೇಕಿಸಲು ಒಣ ತ್ಯಾಜ್ಯ ಷೆಡ್ ಸಾಮರ್ಥ್ಯ ಹೆಚ್ಚಿಸಬೇಕಾಗುತ್ತದೆ. ಮಳೆಗಾಲದಲ್ಲೂ ತ್ಯಾಜ್ಯ ಸುರಕ್ಷಿತವಾಗಿ ಸಂಗ್ರಹಿಸಿಡುವAತೆ ವ್ಯವಸ್ಥೆ ರೂಪಿಸಬೇಕು. ಪೌರಕಾರ್ಮಿಕರ ಮೂಲಕ ಪ್ರತಿಯೊಂದು ಮನೆಗೆ ತೆರಳಿ ಎರಡು ಬಕೆಟ್ ಪದ್ಧತಿಯಲ್ಲಿ ಕಸ ವಿಂಗಡಿಸುವAತೆ ಜಾಗೃತಿ ಮೂಡಿಸಲು ಕ್ರಮ ತೆಗೆದುಕೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net