ಉತ್ತಮ ಸಮಾಜ ನಿರ್ಮಾಣಕ್ಕೆ ಬಿಲ್ಲವ ಸಮಾಜ ಮುಂದಾಗಲಿ

ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ ಮಹಾಸಭೆಯನ್ನು  ವಿಖ್ಯಾತಾನಂದ ಸ್ವಾಮೀಜಿ ಉದ್ಘಾಟಿಸಿದರು.
ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ ಮಹಾಸಭೆಯನ್ನು ವಿಖ್ಯಾತಾನಂದ ಸ್ವಾಮೀಜಿ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸೋಲೂರು ಮಠದ ಪೀಠಾಧ್ಯಕ್ಷ ಶ್ರೀ ವಿಖ್ಯಾತಾನಂದ ಸ್ವಾಮೀಜಿ
  • ಬಿಲ್ಲವ ಸಮಾಜ
  • ಉತ್ತಮ ಸಮಾಜ ಕಟ್ಟಲು ಮುಂದಾಗಬೇಕೆಂದು
ಕುಶಾಲನಗರ: ಬಿಲ್ಲವ ಸಮಾಜದವರು ಸಂಘಟಿತರಾಗುವ ಮೂಲಕ ಉತ್ತಮ ಸಮಾಜ ಕಟ್ಟಲು ಮುಂದಾಗಬೇಕೆಂದು ಸೋಲೂರು ಮಠದ ಪೀಠಾಧ್ಯಕ್ಷ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಸಲಹೆ ನೀಡಿದರು.
ತಾಲೂಕಿನ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜ ವತಿಯಿಂದ ಪಟ್ಟಣದ ಎಪಿಸಿಎಂಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾಜದ ವಾರ್ಷಿಕ ಮಹಾಸಭೆ ಹಾಗೂ ಗುರುನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ನಾಡು ಕಂಡ ಶ್ರೇಷ್ಠ ಸಾಧಕರಾದ ಕೋಟಿ ಚೆನ್ನಯ್ಯ, ನಾರಾಯಣಗುರುಗಳಂತಹ ಮಹನೀಯರ ಆದರ್ಶ ಹಾಗೂ ಚಿಂತನೆಗಳನ್ನು ಸಮಾಜದಲ್ಲಿ ಮೊಳಗಿಸುವ ಮೂಲಕ ಸುಸ್ಥಿರ ಹಾಗೂ ಸುಂದರ ಸಮಾಜ ಕಟ್ಟಲು ಸಮಾಜದವರು ಕಟಿಬದ್ಧರಾಗಬೇಕಿದೆ ಎಂದರು.
ನಾರಾಯಣಗುರು ನಿಗಮದ ಅಧ್ಯಕ್ಷ ಮಂಜುನಾಥ ಮಾತನಾಡಿ, ಬಿಲ್ಲವರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕು. ಶಿಕ್ಷಣ ಹಾಗೂ ಜ್ಞಾನ ಬಹಳ ಮುಖ್ಯವಾಗಿದ್ದು, ಸಮಾಜದವರು ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಬೇಕೆಂದು ಕರೆಕೊಟ್ಟರು.
ನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ಕೊಡಗಿನಲ್ಲಿ ಬಿಲ್ಲವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದು, ಸಂಘಟನೆಯನ್ನು ಬಲಪಡಿಸಲು ಅನುಕೂಲವಾಗುತ್ತಿದೆ. ಸಮಾಜದವರು ತಪ್ಪದೇ ಬಿಲ್ಲವ ಸಮಾಜದಲ್ಲಿ ಹೆಸರು ನೋಂದಾಯಿಸುವ ಮೂಲಕ ಸಮಾಜವನ್ನು ಇನ್ನಷ್ಟು ಬಲಗೊಳಿಸಲು ನೆರವಾಗಬೇಕು. ಹಾಗೆಯೇ ಸಮಾಜದ ಪದಾಧಿಕಾರಿಗಳು ಸಮುದಾಯದವರ ಕಷ್ಟಕ್ಕೆ ಕೈ ಜೋಡಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು ಎಂದರು.
ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ ಅಧ್ಯಕ್ಷ ಸುಧೀರ್ ಪೂಜಾರಿ ಮಾತನಾಡಿ, ಕೊಡಗು ಸೇರಿದಂತೆ ಕುಶಾಲನಗರದಲ್ಲಿ ಅಲ್ಪ ಸಮಯದಲ್ಲಿ ರಚನೆಯಾದ ಬಿಲ್ಲವ ಸಮಾಜ ಬಹಳ ಸಮರ್ಥವಾಗಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಚುನಾವಣೆಗಳಲ್ಲಿ ಬಿಲ್ಲವ ಸಮುದಾಯಕ್ಕೆ ಟಿಕೆಟ್ ನೀಡುವ ಮೂಲಕ ಹೆಚ್ಚು ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂದರು.
ಕಾರ್ಯಕ್ರಮದ ಆರಂಭಕ್ಕೂ ಮುನ್ನ ಶ್ರೀ ಕೋಟಿ ಚೆನ್ನಯ್ಯ ಮತ್ತು ಶ್ರೀ ನಾರಾಯಣ ಗುರುಗಳ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಕೊಡಗು ಎಂಎಲ್‌ಸಿ ಸುಜಾ ಕುಶಾಲಪ್ಪ ಉಪಸ್ಥಿತರಿದ್ದರು. ಮಹಾಸಭೆ ಅಂಗವಾಗಿ ಬೈಚನಳ್ಳಿಯ ಶ್ರೀ ಮಾರಿಯಮ್ಮ ದೇವಸ್ಥಾನದಿಂದ ಗಣಪತಿ ದೇವಸ್ಥಾನದವರೆಗೂ ಮುಖ್ಯ ರಸ್ತೆಗಳಲ್ಲಿ ಸಮಾಜದವರ ಒಗ್ಗಟ್ಟಿನ ಜಾಗೃತಿ ಯಾತ್ರೆ ನಡೆಯಿತು.
ಸಮಾಜದವರಿಗೆ ಆಯೋಜಿಸಿದ್ದ ಅಟೋಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವಿಜೇತರು ಮತ್ತು ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮಾಜದ ಗೌರವ ಅಧ್ಯಕ್ಷ ಬಿ.ಟಿ.ರಮೇಶ್, ಕಾರ್ಯದರ್ಶಿ ದಿನೇಶ್, ಉಪಾಧ್ಯಕ್ಷೆ ಕುಸುಮಾವತಿ, ಖಜಾಂಚಿ ಆಶಾ ಅಣ್ಣಪ್ಪ, ಸದಸ್ಯರಾದ ಅಶೋಕ್, ಉಮೇಶ್, ಸುನಿಲ್, ಮನೋಜ್, ಸೌಮ್ಯಾ ಭರತ್, ಶೋಭಾ, ಭವಾನಿ, ಸುಶೀಲಾ, ಲೀಲಾ ಇದ್ದರು.
22ಏಓ1000556487
ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ ಮಹಾಸಭೆಯನ್ನು ವಿಖ್ಯಾತಾನಂದ ಸ್ವಾಮೀಜಿ ಉದ್ಘಾಟಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net