ಸಂತ ಅನ್ನಮ್ಮ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ವಿನೋದ್ ಮೂಡಗದ್ದೆ ಮಾತನಾಡಿದರು. ಗೋಪಾಲ್ ಬೋಪಯ್ಯ, ಶಾಂತಿಭೂಷಣ್, ತೃಪ್ತಿ ಬೋಪಣ್ಣ, ಆಶಾ, ಫ್ಯಾನ್ಸಿ ಲೋಬೋ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
Let service
ವಿರಾಜಪೇಟೆ: ನಮ್ಮ ಪೂರ್ವಜರು ಪ್ರಕೃತಿಯೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಹೀಗಾಗಿ ಸುಖಿ ಜೀವನ ನಡೆಸುತ್ತಿದ್ದರು. ಇದೀಗ ಆಧುನಿಕತೆಯ ಭರಾಟೆಯಲ್ಲಿ ಹಿರಿಯರ ಜೀವನ ಪದ್ಧತಿ ಕಣ್ಮರೆಯಾಗುತ್ತಿದೆ ಎಂದು ಮಡಿಕೇರಿ ಆಕಾಶವಾಣಿಯ ಉದ್ಘೋಷಕರಾದ ವಿನೋದ್ ಮೂಡಗದ್ದೆ ವಿಷಾದ ವ್ಯಕ್ತಪಡಿಸಿದರು.
ಕೊಡಗು ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಸಂತ ಅನ್ನಮ್ಮ ಪದವಿ ಕಾಲೇಜು ವಿರಾಜಪೇಟೆ, ಆಶ್ರಯದಲ್ಲಿ ಕಲ್ತೋಡು ನಾಂಗಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜನೆಗೊಂಡಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಸೇವೆ ಎಂಬುದು ಜೀವನದ ಅವಿಭಾಜ್ಯ ಅಂಗ. ಸೇವಾ ಮನೋಭಾವ ಮತ್ತು ಪರಿಸರ ಜಾಗೃತಿ ವಿದ್ಯಾರ್ಥಿಗಳ ಜೀವನದಲ್ಲಿ ಜಾಗೃತವಾಗಬೇಕು ಎನ್ನುವ ಸದುದ್ದೇಶದಿಂದ ರಾಷ್ಟ್ರೀಯ ಸೇವಾ ಯೋಜನೆ ಆರಂಭವಾಯಿತು. ಶಿಬಿರವು ಒಂದು ವಾರ ಜರುಗಿದರೂ ಇಲ್ಲಿ ಕಲಿತ ಸೇವಾ ಗುಣ ಜೀವನಪೂರ್ತಿ ಇರಬೇಕು. ನಾವು ಪರಿಸರವನ್ನು ಉಳಿಸಿಕೊಂಡು ವಿಜ್ಞಾನವನ್ನು ಬೆಳಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಶಾಲಾ ಸ್ಥಳ ದಾನಿಗಳಾದ ಕುಪ್ಪಂಡ ಗೋಪಾಲ್ ಬೋಪಯ್ಯ ಮಾತನಾಡಿ, ಆಧುನಿಕತೆ ಮತ್ತು ಹಣ ಮಾಡುವ ಚಿಂತನೆಯಿಂದಾಗಿ ಮಕ್ಕಳು ತಮ್ಮ ಪಾಲಕರನ್ನು ಮರೆಯುವ ಹಂತಕ್ಕೆ ಸಮಾಜ ತಲುಪಿದೆ. ಜೀವನದಲ್ಲಿ ಎಲ್ಲದನ್ನೂ ಪಡೆಯಲು ಅವಕಾಶವಿದೆ. ಆದರೆ ತಂದೆ ತಾಯಿಯನ್ನು ಪಡೆಯಲು ಅಸಾಧ್ಯ. ಗ್ರಾಮೀಣ ಭಾಗದಲ್ಲಿ ಶಿಬಿರ ಆಯೋಜನೆ ಮಾಡಿರುವುದು ಶ್ಲಾಘನೀಯ ಕಾರ್ಯ ಎಂದು ತಿಳಿಸಿದರು.
ಸೇಂಟ್ ಆನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಶಿಬಿರಾಧಿಕಾರಿಗಳಾದ ಬಿ.ಎನ್.ಶಾಂತಿಭೂಷಣ್, ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲರಾದ ತೃಪ್ತಿ ಬೋಪಣ್ಣ ಮತ್ತು ಸ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕರಾದ ಫ್ಯಾನ್ಸಿ ಲೋಬೋ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಆಶಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕುಪ್ಪಂಡ ಗೋಪಾಲ್ ಬೋಪಯ್ಯ, ಆಶಾ, ವಿನೋದ್ ಮೂಡಗದ್ದೆ, ಫ್ಯಾನ್ಸಿ ಲೋಬೋ ಹಾಗೂ ಬಿ.ಎನ್.ಶಾಂತಿ ಭೂಷಣ್ ಅವರನ್ನು ಸನ್ಮಾನಿಸಲಾಯಿತು.
ಎನ್‌ಎಸ್‌ಎಸ್ ಘಟಕದ ಶಿಬಿರಾರ್ಥಿಗಳು, ಸಂತ ಅನ್ನಮ್ಮ ಪದವಿ ಕಾಲೇಜಿನ ಉಪನ್ಯಾಸಕರು, ಸ.ಹಿ.ಪ್ರಾ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.