ಪ್ರತಿಯೊಬ್ಬರೂ ಕಾನೂನು ಪಾಲಿಸಿ ಸದೃಢ ಸಮಾಜ ನಿರ್ಮಿಸಿ

 ಶನಿವಾರಸಂತೆಯ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ  ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್‌ ಟ್ರೇಡ್ ಯೂನಿಯನ್ ಸೋಮವಾರಪೇಟೆ ತಾಲೂಕು ಸಮಿತಿ ಮತ್ತು ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ವೃತ್ತ ನಿರೀಕ್ಷಕ ಕೃಷ್ಣರಾಜ್ ಉದ್ಘಾಟಿಸಿದರು. ಪ್ರದೀಪ್, ವಸಂತ್ ಆಚಾರ್ಯ, ಪರಶುರಾಮ್, ಡೆನ್ನಿಸ್, ಪ್ರದೀಪ್ ಚಾಮೇರ, ಕಷ್ಣಮಣಿ ಇತರರಿದ್ದರು.
ಶನಿವಾರಸಂತೆಯ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್‌ ಟ್ರೇಡ್ ಯೂನಿಯನ್ ಸೋಮವಾರಪೇಟೆ ತಾಲೂಕು ಸಮಿತಿ ಮತ್ತು ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ವೃತ್ತ ನಿರೀಕ್ಷಕ ಕೃಷ್ಣರಾಜ್ ಉದ್ಘಾಟಿಸಿದರು. ಪ್ರದೀಪ್, ವಸಂತ್ ಆಚಾರ್ಯ, ಪರಶುರಾಮ್, ಡೆನ್ನಿಸ್, ಪ್ರದೀಪ್ ಚಾಮೇರ, ಕಷ್ಣಮಣಿ ಇತರರಿದ್ದರು.
Published on
ಶನಿವಾರಸಂತೆ: ಪ್ರತಿಯೊಬ್ಬರೂ ಕಾನೂನು ನಿಯಮ ಪಾಲನೆ ಮಾಡುವ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡಲು ಸಹಕರಿಸಿ ಎಂದು ಶನಿವಾರಸಂತೆ ವೃತ್ತ ನಿರೀಕ್ಷಕ ಕೃಷ್ಣರಾಜ್ ಕರೆ ನೀಡಿದರು.
ಮಂಗಳವಾರ ಸ್ಥಳೀಯ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್‌ ಟ್ರೇಡ್ ಯೂನಿಯನ್ ಸೋಮವಾರಪೇಟೆ ತಾಲೂಕು ಸಮಿತಿ ಮತ್ತು ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹ, ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತಾ ಮತ್ತು ಅಪರಾಧ ತಡೆ ಕುರಿತು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕೆಲವು ಆಟೋ ಮತ್ತು ವಾಹನ ಚಾಲಕರು ಮಾದಕ ವಸ್ತು, ಮದ್ಯಪಾನ ಸೇವನೆ ಮಾಡಿ ವಾಹನ ಚಲಾಯಿಸುತ್ತಿರುವ ಪ್ರಕರಣಗಳು ಕಂಡುಬರುತ್ತಿದ್ದು ಈ ನಿಟ್ಟಿನಲ್ಲಿ ಕಾನೂನು ಪ್ರಕಾರವಾಗಿ ಅಂತಹವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮಕೈಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಇಂತಹ ಪ್ರಕರಣ ಕಂಡುಬಂದಾಗ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.
ಟ್ಯಾಕ್ಸಿ ಚಾಲಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿನ್ಸೆಂಟ್ ಬಾಬು ಮಾತನಾಡಿ, ವಾಹನ ಚಾಲಕರ ಸಂಸ್ಥೆಯು ಸುಮಾರು 7 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಕಡೆಯಲ್ಲಿ ಚಾಲಕರು ಅಪಘಾತಗೊಂಡಾಗ ಮತ್ತು ಚಾಲಕರಿಗೆ ಸಮಸ್ಯೆಯಾದಾಗ ಸಂಸ್ಥೆಯು ಸಹಾಯ ನೀಡಲು ಮುಂದಾಗುತ್ತದೆ. ಅಲ್ಲದೆ ಅವರ ಕುಟುಂಬದ ಜತೆ ನಿಲ್ಲುತ್ತದೆ ಎಂದರು.
ಸರ್ಕಾರದಿಂದ ಯಾವುದೇ ಭದ್ರತೆ ಇಲ್ಲ:
ಹಳದಿ ಬಣ್ಣದ ಬೋರ್ಡ್ ವಾಹನ ಮಾಲೀಕರಿಗೆ ಸರ್ಕಾರದಿಂದ ಯಾವುದೇ ಭದ್ರತೆ ಮತ್ತು ರಕ್ಷಣೆ ಇಲ್ಲ, ಬಿಳಿ ಬಣ್ಣದ ಬೋರ್ಡ್ ವಾಹನಗಳ ಹಾವಳಿಯಿಂದ ಹಳದಿ ಬಣ್ಣದ ಬೋರ್ಡ್ ಚಾಲಕ ಮತ್ತು ಮಾಲೀಕರಿಗೆ ಅನ್ಯಾಯವಾಗುತ್ತಿದೆ. ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಭಾಗಗಳಿಂದ ಶಾಲಾ ಮಕ್ಕಳನ್ನು ವೈಟ್ ಬೋರ್ಡ್ ಮಾಲೀಕರು ವಾಹನಗಳಲ್ಲಿ 30 ರಿಂದ 40ರಷ್ಟು ಮಕ್ಕಳನ್ನು ತುಂಬಿಸಿಕೊಂಡು ಹೋಗುತ್ತಾರೆ. ಆದರೆ ಇಂತಹ ಸಂದರ್ಭದಲ್ಲಿ ಅಪಘಾತವಾದಾಗ ಹಳದಿ ಬಣ್ಣದ ಬೋರ್ಡ್ ಚಾಲಕರು ರಕ್ಷಣೆಗೆ ಬರುತ್ತಾರೆ. ಮುಂದಿನ ದಿನಗಳಲ್ಲಿ ಆರ್‌ಟಿಒ ಮತ್ತು ಪೊಲೀಸ್ ಅಧಿಕಾರಿಗಳು ಇಂತಹ ವಾಹನ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಸಂಘದ ಕೋಶಾಧಿಕಾರಿ ದೀಪಕ್ ಸಭೆಯಲ್ಲಿ ಆರ್‌ಟಿಒ ಅಧಿಕಾರಿಗಳ ಗಮನ ಸೆಳೆದರು.
ಕೊಡಗಿನಲ್ಲಿ ಈಗಾಗಲೇ ಇಂತಹ ವಾಹನಗಳನ್ನು ಪರಿಶೀಲಿಸಿ ಪ್ರಕರಣ ದಾಖಲಿಸಲಾಗಿದೆ. ಮುಂದೆ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಭಾಗಗಳಲ್ಲಿ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಆರ್‌ಟಿಒ ಪ್ರದೀಪ್ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಸಂಘದ ಅಧ್ಯಕ್ಷ ವಸಂತ್ ಆಚಾರ್ಯ, ಜಿಲ್ಲಾ ಮತ್ತು ತಾಲೂಕು ಸಂಘದ ಪ್ರಮುಖರಾದ ಪರಶುರಾಮ್, ಡೆನ್ನಿಸ್, ಪ್ರದೀಪ್ ಚಾಮೇರ, ಕೃಷ್ಣಮಣಿ, ಹೇಮಂತ್, ಸಂತು ಕಾರ್ಯಪ್ಪ, ಪ್ರಕಾಶ್ ಪಟ್ಟು ಮುಂತಾದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net