ಆಧುನೀಕರಣಗೊಂಡ ಅಂಗನವಾಡಿ ಕೇಂದ್ರಕ್ಕೆ ಚಾಲನೆ

ಮಾದಾಪಟ್ಟಣ ಅಂಗನವಾಡಿ ಕೇಂದ್ರ-೧ ರ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿ.ಪಿ.ಶಶಿಧರ್, ದಾಮೋದರ್, ರುಕ್ಮಿಣಿ ಇತರರಿದ್ದರು.
ಮಾದಾಪಟ್ಟಣ ಅಂಗನವಾಡಿ ಕೇಂದ್ರ-೧ ರ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿ.ಪಿ.ಶಶಿಧರ್, ದಾಮೋದರ್, ರುಕ್ಮಿಣಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆಧುನೀಕರಣಗೊಂಡ ಅಂಗನವಾಡಿ ಕೇಂದ್ರಕ್ಕೆ ಚಾಲನೆ

ಕುಶಾಲನಗರ: ಗುಡ್ಡೆಹೊಸೂರು ಗ್ರಾ.ಪಂ ವಿಶೇಷ ಅನುದಾನದ ಅಡಿ ರೂ. ನಾಲ್ಕೂವರೆ ಲಕ್ಷ ವೆಚ್ಚದಲ್ಲಿ ನವೀಕರಣಗೊಂಡ ಮಾದಾಪಟ್ಟಣ ಅಂಗನವಾಡಿ ಕೇಂದ್ರ-೧ ರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಆಧುನೀಕರಣಗೊಂಡ ಅಂಗನವಾಡಿ ಕೇಂದ್ರಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಮಾದಾಪಟ್ಟಣದ ಕಾಂಗ್ರೆಸ್ ಮುಖಂಡ ದಾಮೋದರ್, ೪ ದಶಕಗಳ ಹಳೆಯದಾದ ಅಂಗನವಾಡಿ ಕೇಂದ್ರಕ್ಕೆ ಕಳೆದ ೩ ದಶಕಗಳಿಂದ ಖಾಯಂ ಶಿಕ್ಷಕರ ನೇಮಕಾತಿಯಾಗಿಲ್ಲ. ಶಿಕ್ಷಕರಿಲ್ಲದೆ ಹಲವು ವರ್ಷ ಈ ಕೇಂದ್ರಕ್ಕೆ ಬೀಗ ಜಡಿಯಲಾಗಿತ್ತು. ಬೇರೆ ಊರಿನವರನ್ನು ಇಲ್ಲಿಗೆ ನೇಮಕಾತಿ ಮಾಡುವ ಬದಲು ಕುಟುಂಬ ಸಹಿತ ಇದೇ ಗ್ರಾಮದಲ್ಲಿ ವಾಸವಿರುವವರಿಗೆ ಆದ್ಯತೆ ನೀಡಿ ಶಿಕ್ಷಕಿಯಾಗಿ ನೇಮಕಾತಿ ಮಾಡಬೇಕಿದೆ. ಆಗಾದಾಗ ಮಾತ್ರ ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗಲಿದೆ. ಜೊತೆಗೆ ಸಹಾಯಕಿ ನೇಮಕಾತಿ ಕೂಡ ಅಗತ್ಯವಿದೆ ಎಂದು ಆಗ್ರಹಿಸಿದರು.
ಪೋಷಕಿ ಶಶಿಕಲಾ ಮತ್ತು ಗುಡ್ಡೆಹೊಸೂರು ಗ್ರಾ.ಪಂ ಮಾಜಿ ಅಧ್ಯಕ್ಷೆ ರುಕ್ಮಿಣಿ ಅವರು ಮಾತನಾಡಿ, ಶಿಥಿಲಗೊಂಡಿದ್ದ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕಳಿಸಲು ಹಿಂಜರಿಕೆಯಿತ್ತು. ಇದೀಗ ಕಟ್ಟಡಕ್ಕೆ ಕಾಯಕಲ್ಪ ದೊರೆತಿರುವುದು ಪೋಷಕರಲ್ಲಿ ಆತಂಕ ದೂರಮಾಡಿದೆ ಎಂದರು. ಸಿಡಿಪಿಓ ಅವರು ಈ ಕೇಂದ್ರದ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಆರೋಪಿಸಿದರು.
ಸ್ಥಳೀಯರ ಮನವಿಗೆ ಮಾತನಾಡಿದ ವಿ.ಪಿ.ಶಶಿಧರ್ ಅವರು, ಮಕ್ಕಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸಲು, ಶಿಕ್ಷಣದ ಬಗ್ಗೆ ಕುತೂಹಲ ಉಂಟುಮಾಡಲು ಇಂತಹ ಪರಿಣಾಮಕಾರಿ ಪ್ರಯತ್ನಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ತುಂಬಾ ಹಳೆಯ ಕಟ್ಟಡವನ್ನು ಪುನರುಜ್ಜೀವನಗೊಳಿಸಿ ಈ ಭಾಗದ ಬಡ ವರ್ಗದ ಮಕ್ಕಳಿಗೆ ಆಶಾದಾಯಕ ವಾತಾವರಣ ಕಲ್ಪಿಸಿರುವುದು ಶ್ಲಾಘನೀಯ. ಈ ಕೇಂದ್ರದ ಉಳಿವಿಗೆ ಹಾಗೂ ಅಭಿವೃದ್ಧಿಗೆ ಸ್ಥಳೀಯರ ನಿರಂತರ ಪ್ರಯತ್ನ ಅಭಿನಂದನಾರ್ಹ ಎಂದರು.
ಅಗತ್ಯ ಮಾನದಂಡಗಳ ಅನುಸಾರವಾಗಿ ಆದ್ಯತೆ ಮೇರೆಗೆ ಇಲ್ಲಿಗೆ ಖಾಯಂ ಶಿಕ್ಷಕಿಯ ನೇಮಕಾತಿ ಮಾಡಬೇಕೆನ್ನುವ ಪೋಷಕರ ಒತ್ತಾಸೆಯಂತೆ ಸ್ಥಳೀಯರನ್ನೇ ಶಿಕ್ಷಕಿಯಾಗಿ ನೇಮಿಸುವ ಕುರಿತು ಆಯ್ಕೆ ಪಟ್ಟಿ ಪರಿಶೀಲಿಸಲಾಗುವುದು ಎಂದರು.
ಈ ಸಂದರ್ಭ ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್, ಗ್ಯಾರೆಂಟಿ ಅನುಷ್ಠಾನ ಸಮಿತಿ ತಾಲೂಕು ಸದಸ್ಯ ಆದಂ, ಗುಡ್ಡೆಹೊಸೂರು ವಲಯ ಯುವ ಘಟಕ ಅಧ್ಯಕ್ಷ ವಿಜಯ್, ಬೂತ್ ಅಧ್ಯಕ್ಷ ಹೆಚ್.ಕೆ.ಮಹೇಶ್, ಗ್ರಾಮದ ಬಸವರಾಜು.ಎಂ.ಎಂ, ಎಂ.ಎಲ್.ಪ್ರಕಾಶ್, ಎಂ.ಆರ್.ರವಿ, ಶಿಕ್ಷಕಿ ರೂಪಶ್ರೀ, ಗುತ್ತಿಗೆದಾರ ಸಿದ್ದಿಕ್ ಸೇರಿದಂತೆ ಪೋಷಕ ವೃಂದದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net