ಕೊಡಗಿನಲ್ಲಿ ಭೂಮಿ ಮಾರಾಟ ನಿಲ್ಲಲಿ

ಪೊನ್ನಂಪೇಟೆಯಲ್ಲಿ ಕೊಡವ ಹಿತ ರಕ್ಷಣಾ ಬಳಗ ಕಗ್ಗಟ್ ನಾಡು ಪೊನ್ನಂಪೇಟೆ ವತಿಯಿಂದ ಕಕ್ಕಡ ಪದ್‌ನೆಟ್ಟ್ ಪ್ರಯುಕ್ತ ಪಂಜಿನ ಮೆರವಣಿಗೆ ನಡೆಯಿತು.
ಪೊನ್ನಂಪೇಟೆಯಲ್ಲಿ ಕೊಡವ ಹಿತ ರಕ್ಷಣಾ ಬಳಗ ಕಗ್ಗಟ್ ನಾಡು ಪೊನ್ನಂಪೇಟೆ ವತಿಯಿಂದ ಕಕ್ಕಡ ಪದ್‌ನೆಟ್ಟ್ ಪ್ರಯುಕ್ತ ಪಂಜಿನ ಮೆರವಣಿಗೆ ನಡೆಯಿತು.
Published on

ಗೋಣಿಕೊಪ್ಪಲು: 

ಪರಿಸರ ಸಂರಕ್ಷಣೆಯ ದೇವಕಾಡು, ನಮ್ಮ ಉಡುಪು, ಭಾಷೆ ಎಲ್ಲವನ್ನು ಹಿರಿಯರು ನೀಡಿದ್ದು ಅವುಗಳನ್ನು ನಾವು ಉಳಿಸಿಕೊಂಡು ಬಂದಿದ್ದೇವೆ. ಆದರೆ, ನಮ್ಮ ಜಾಗವನ್ನು ಕಳೆದುಕೊಳ್ಳುತ್ತಾ ಹೋಗುತ್ತಿದ್ದೇವೆ ಎಂದು ಕೊಡಗು ಮಾಡೆಲ್ ಟ್ರಸ್ಟ್ ಅಧ್ಯಕ್ಷರೂ ಆದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿವೃತ ಡೀನ್ ಡಾ.ಚೆಪ್ಪುಡಿರ ಜಿ.ಕುಶಾಲಪ್ಪ ಹೇಳಿದರು.

ಪೊನ್ನಂಪೇಟೆಯಲ್ಲಿ ಕೊಡವ ಹಿತ ರಕ್ಷಣಾ ಬಳಗ ಕಗ್ಗಟ್ ನಾಡು ಪೊನ್ನಂಪೇಟೆ ವತಿಯಿಂದ ಸೋಮವಾರ ಸಂಜೆ ಆಯೋಜಿಸಿದ್ದ ಕಕ್ಕಡ ಪದ್‌ನೆಟ್ಟ್ ಪ್ರಯುಕ್ತ ಪಂಜಿನ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮೊದಲು ಜನಸಂಖ್ಯೆ ಕಡಿಮೆ ಇದ್ದರೂ ಜಾಗ ನಮ್ಮ ಕೈಯಲ್ಲಿತ್ತು. ಇಂದು ಕಳೆದುಕೊಳ್ಳುತ್ತ ಸಾಗುತ್ತಿದ್ದೇವೆ. ಜಾಗ ಮಾರಾಟ ನಿಲ್ಲಬೇಕು. ಅದು ನಿಲ್ಲುತ್ತದೆ ಎಂಬ ಭರವಸೆ ಇದೆ. ಜಾಗವನ್ನು ಮರಳಿ ಪಡೆಯಲು ಸಂಘಟಕರಾಗಿ ಜನಾಂಗ ನಿಂತಿರುವುದು ಹೊಸ ಭರವಸೆ ಮೂಡಿಸಿದೆ. ನಮ್ಮ ಜಾಗ ಉಳಿಸಿಕೊಳ್ಳದಿದ್ದರೆ ನಮ್ಮ ಉಡುಪಿಗೂ ಹಾಗೂ ಭಾಷೆಗೂ ಯಾವುದೇ ಬೆಲೆ ಇಲ್ಲ ಎಂದರು.
ಜಿಲ್ಲೆಯಲ್ಲಿ ಭತ್ತದ ಕೃಷಿ ಕ್ಷೀಣಿಸುತ್ತಿದೆ. ಹಿಂದೆ ತಾಯಂದಿರು ಮುಂದೆ ನಿಂತು ಭತ್ತದ ಕೃಷಿ ನಿರ್ವಹಿಸುತ್ತಿದ್ದರು. ಆದ್ದರಿಂದಲೇ ಕಾರ್ಮಿಕರು ಅವರನ್ನು ಅವ್ವ ಎಂದು ಕರೆಯುತ್ತಿದ್ದರು. ಮತ್ತೊಮ್ಮೆ ಜಿಲ್ಲೆಯ ತಾಯಂದಿರು, ಅಕ್ಕ-ತಂಗಿಯರು ಮನಸು ಮಾಡಿ ಪಾಳು ಬಿಟ್ಟಿರುವ ಭತ್ತದ ಗದ್ದೆಗಳನ್ನು ಕೃಷಿಯಾಗಿ ರೂಪಿಸಲು ಮುಂದಾಗಬೇಕು. ಗದ್ದೆಯಿಂದ ಕೇವಲ ಆಹಾರಕ್ಕೆ ಭತ್ತ ಸಿಗುತ್ತದೆ ಎಂಬ ನಿಲುವು ತಪ್ಪು. ಭತ್ತದ ಕೃಷಿಯಿಂದ ನೀರಿನ ಸಂರಕ್ಷಣೆ ಸೇರಿದಂತೆ ಪರಿಸರದ ಸಂರಕ್ಷಣೆಯೊಂದಿಗೆ ಬಹು ಉಪಯೋಗ ಇದೆ. ಕೃಷಿ ಮತ್ತು ಕಾಫಿಗೆ ಉತ್ತಮ ಭವಿಷ್ಯವಿದೆ. ಕೃಷಿಯಿಂದ ಯಾರೂ ವಿಮುಖರಾಗಬಾರದು. ಉತ್ತರ ಕೊಡಗಿನಲ್ಲಿ ಯುವಕರು ನಗರದತ್ತ ವಲಸೆ ಹೋದ ಹಿನ್ನೆಲೆ ಮುಟ್ಲು, ಸೂರ್ಲಬ್ಬಿ, ಗರ್ವಾಲೆಗಳಲ್ಲಿ ಹೆಚ್ಚಿನ ಪ್ರಮಾಣದ ಜಾಗ ಮಾರಾಟವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ ಮಾತನಾಡಿ, ನಮ್ಮ ಸಂಸ್ಕೃತಿ ಉಳಿದರೆ ಜನಾಂಗ ಉಳಿಯುತ್ತದೆ. ಜನಾಂಗ ಉಳಿದರೆ ನೆಲ ಉಳಿಯುತ್ತದೆ. ನಮ್ಮ ಆಚಾರ, ವಿಚಾರ, ಪದ್ಧತಿ ಪರಂಪರೆಯನ್ನು ಕಿರಿಯರು ಕಲಿತಾಗ ಮಾತ್ರ ಅದು ಮುಂದಿನ ತಲೆಮಾರಿಗೆ ಹಸ್ತಾಂತರವಾಗಲಿದೆ. ಕೊಡವರ ಎಲ್ಲ ಹಬ್ಬಗಳು ಪ್ರಕೃತಿ, ಮಣ್ಣು, ಕೃಷಿಗೆ ಸಂಬಂಧಪಟ್ಟದ್ದಾಗಿದೆ. ಯಾವ ಋತುಗಳಿಗೆ ಯಾವ ಆಹಾರ ಬೇಕು, ಅದನ್ನು ಪ್ರಕೃತಿ ನಮಗೆ ನೀಡುತ್ತದೆ. ಪ್ರಕೃತಿಯಿಂದ ನಾವು ಹೊರತು, ನಮ್ಮಿಂದ ಪ್ರಕೃತಿ ಅಲ್ಲ. ಪ್ರತಿ ಹಬ್ಬಗಳ ಆಚರಣೆ ಸಂದರ್ಭ ಪ್ರಕೃತಿಯನ್ನು ನಾವು ಪೂಜಿಸುತ್ತೇವೆ. ಹಾಗೆಯೇ ಅದನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಕೊಡವ ಹಿತರಕ್ಷಣಾ ಬಳಗದ ಅಧ್ಯಕ್ಷ ಚಿರಿಯಪಂಡ ರಾಜ ನಂಜಪ್ಪ ಮಾತನಾಡಿ, ನಮ್ಮ ನೆಲವನ್ನು ಉಳಿಸಿಕೊಳ್ಳಬೇಕು. ಕೊಡಗಿನ ಮಣ್ಣು ಪರಭಾರೆಯಾಗದಂತೆ, ಕೊಡವಾಮೆ ಹಾಗೂ ಈ ನೆಲದ ರಕ್ಷಣೆಗೆ ವಿಶೇಷವಾಗಿ ಕೊಡವ ಮಹಿಳೆಯರು ಪಣ ತೊಡಬೇಕು. ಕಾವೇರಿ ತಪೋಭೂಮಿಯಲ್ಲಿ ಕೊಡವ ಸಂಸ್ಕೃತಿ ಜನ್ಮ ತಾಳಿದೆ. ಕೊಡವ ಸಂಸ್ಕೃತಿ ಉಳಿಕೆ, ಸಂಸಾರದ ಜವಾಬ್ದಾರಿ ನಿಭಾಯಿಸುವ ಮಹಿಳೆ ಕೊಡಗಿನ ನೆಲವನ್ನು ಉಳಿಸಿ ಅದನ್ನು ಮಾರಾಟ ಮಾಡಲು ಬಿಡದಂತೆ ತಡೆಯಬೇಕು ಎಂದರು.
ಕೊಡವ ಹಿತ ರಕ್ಷಣಾ ಬಳಗದ ಉಪಾಧ್ಯಕ್ಷ ಚೆಕ್ಕೇರ ರಮೇಶ್, ಕಾರ್ಯದರ್ಶಿ ಗಾಂಡಂಗಡ ಕೌಶಿಕ್ ದೇವಯ್ಯ, ಖಜಾಂಚಿ ಕೋಟೆರ ಕಿಶನ್ ಉತ್ತಪ್ಪ, ಚೆಟ್ಟಂಗಡ ಲೇಖನ ಉತ್ತಪ್ಪ, ಉಳುವಂಗಡ ಲೋಹಿತ್ ಭೀಮಯ್ಯ ಮತ್ತಿತರರು ಇದ್ದರು.
ಕೊಡವ ಹಿತರಕ್ಷಣಾ ಬಳಗ, ಕಗ್ಗಟ್ಟ್ ನಾಡ್, ಪೊನ್ನಂಪೇಟೆ ವತಿಯಿಂದ 15ನೇ ವರ್ಷದ ಕಕ್ಕಡ ಪದ್‌ನೆಟ್ಟ್ ಹಬ್ಬ ಆಚರಣೆ ಮತ್ತು ಪೊನ್ನಂಪೇಟೆ ಮುಖ್ಯ ಬೀದಿಯಲ್ಲಿ ಪಂಜಿನ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ನೂರಾರು ಮಹಿಳೆಯರು, ಪುರುಷರು, ಮಕ್ಕಳು ಪಾಲ್ಗೊಂಡು ಸಂಭ್ರಮಿಸಿದರು. ವಡ್ಡೋಲಗಕ್ಕೆ ಹೆಜ್ಜೆ ಹಾಕಿ ಕುಣಿದರು. ದ್ವಿತೀಯ ಪಿಯು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರನ್ನು ಅಭಿನಂದಿಸಲಾಯಿತು.
ಎಂಗ ಕಲಾರಂಗ ಕಲಾವಿದರಿಂದ ಕುರ್ಕಂಗ ನಾಟಕ ಪ್ರದರ್ಶನ, ಚೆಕ್ಕೇರ ವಾಣಿ ಸಂಜು ಅವರಿಂದ ಹಾಡು, ಚೆಟ್ಟಂಗಡ ಲೇಖನ ಉತ್ತಪ್ಪ ಅವರಿಂದ ಭರತನಾಟ್ಯ ಪ್ರದರ್ಶನ ನಡೆದವು. ಕಕ್ಕಡ ಪದ್‌ನೆಟ್ಟ್ ವಿಶೇಷ ಖಾದ್ಯ, ಸಾಮೂಹಿಕ ಭೋಜನ ಏರ್ಪಡಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net