ಭೂ ಮಂಜೂರಾತಿಯೇ ಆಗುತ್ತಿಲ್ಲ

ಬೇಡಿಕೆಗೆ ಅನುಗುಣವಾಗಿ ನಿಯಮಾನುಸಾರ ಭೂ ಲಭ್ಯತೆ ಇಲ್ಲದೇ ಇರುವ ಕಾರಣ ನೀಡಿ ಭೂ ಮಂಜೂರಾತಿ ಕೋರಿ ಸಲ್ಲಿಸಿರುವ ಮಾಜಿ ಸೈನಿಕರ ಅರ್ಜಿಗಳನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. (ಸಾಂದರ್ಭಿಕ ಚಿತ್ರ)
ಬೇಡಿಕೆಗೆ ಅನುಗುಣವಾಗಿ ನಿಯಮಾನುಸಾರ ಭೂ ಲಭ್ಯತೆ ಇಲ್ಲದೇ ಇರುವ ಕಾರಣ ನೀಡಿ ಭೂ ಮಂಜೂರಾತಿ ಕೋರಿ ಸಲ್ಲಿಸಿರುವ ಮಾಜಿ ಸೈನಿಕರ ಅರ್ಜಿಗಳನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. (ಸಾಂದರ್ಭಿಕ ಚಿತ್ರ)
Published on
ಮಡಿಕೇರಿ:
ದೇಶಸೇವೆಗೆ ಜೀವನ ಮುಡಿಪಾಗಿಟ್ಟ ಸೈನಿಕರಿಗೆ ನಿವೃತ್ತಿ ನಂತರ ನೆಮ್ಮದಿಯ ಜೀವನಕ್ಕೆ ಸರ್ಕಾರದಿಂದ ಭೂ ಮಂಜೂರಾತಿಯೇ ಆಗುತ್ತಿಲ್ಲ. ಒಂದಿಷ್ಟು ಭೂಮಿ ಸಿಕ್ಕಿದರೆ ಕೃಷಿ ಮಾಡಿಕೊಂಡು ಇರಬಹುದು ಎಂದು ಯೋಚಿಸಿ ಭೂಮಿಗಾಗಿ ಬೇಡಿಕೆ ಇಟ್ಟು ಮಾಜಿ ಸೈನಿಕರು ಸಲ್ಲಿಸಿರುವ ಅರ್ಜಿಗಳು ಹಾಗೆಯೇ ಉಳಿದುಬಿಟ್ಟಿದೆ. ಸರ್ಕಾರಿ ಭೂಮಿಯ ತೀವ್ರ ಕೊರತೆಯೇ ಇದಕ್ಕೆ ಕಾರಣ ಎನ್ನಲಾಗಿದ್ದು, ಜಿಲ್ಲೆಯಲ್ಲಿ ಸರ್ಕಾರದ ಭೂಮಂಜೂರಾತಿಗಾಗಿ ಕೋರಿ ಮಾಜಿ ಸೈನಿಕರು ಕಳೆದ 3 ವರ್ಷಗಳಲ್ಲಿ ಸಲ್ಲಿಸಿರುವ 1628 ಅರ್ಜಿಗಳು ಬಾಕಿ ಉಳಿದಿವೆ.
ಐದು ವರ್ಷಕ್ಕಿಂತಲೂ ಹೆಚ್ಚಿನ ಅವಧಿಗೆ ಸೇನೆಯಲ್ಲಿ ಸೇವೆ ಸಲ್ಲಿಸಿದ ಸೈನಿಕರು ಮತ್ತು ಮಾಜಿ ಸೈನಿಕರು ತಮ್ಮ ಸ್ವಂತ ತಾಲೂಕುಗಳಲ್ಲಿ ರಾಜ್ಯ ಸರ್ಕಾರದಿಂದ ಭೂಮಿ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಹಾಗಾಗಿ ಸೈನಿಕ ಜಿಲ್ಲೆ ಹೆಗ್ಗಳಿಕೆಯ ಕೊಡಗಿನಲ್ಲಿ ಭೂ ಮಂಜೂರಾತಿಗಾಗಿ ಕೋರಿ ಅರ್ಜಿ ಸಲ್ಲಿಸುವ ಸೈನಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಆದರೆ ಹೀಗೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸರ್ಕಾರ ಮಾತ್ರ ವಿಲೇವಾರಿ ಮಾಡದೇ ವಿಳಂಬ ಮಾಡುತ್ತಿದೆ. ಬೇಡಿಕೆಯಷ್ಟು ಪ್ರಮಾಣದಲ್ಲಿ ಸರ್ಕಾರಿ ಭೂಮಿ ಲಭ್ಯ ಇಲ್ಲದಿರುವುದರಿಂದ ಹೀಗೆ ಮಾಡಲಾಗುತ್ತಿದೆ ಎನ್ನುವ ಕಾರಣ ಸರ್ಕಾರ ಕೊಡುತ್ತಿದೆ.
ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ಸೈನಿಕರು ನಿವೃತ್ತರಾದ ನಂತರ ನೆಮ್ಮದಿಯ ಜೀವನ ನಡೆಸಲು ಅನುಕೂಲ ಮಾಡಿಕೊಡುವ ಸಲುವಾಗಿ ಉಚಿತವಾಗಿ ಸರ್ಕಾರದ ವತಿಯಿಂದ ಜಮೀನು ನೀಡಲಾಗುತ್ತದೆ. ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ಪ್ರಕಾರ 10 ಎಕರೆ ತನಕ ಜಮೀನು ಪಡೆದುಕೊಳ್ಳಲು ಅವಕಾಶವಿದೆ. ಆದರೆ ಬಹುತೇಕ ಪ್ರಕರಣಗಳಲ್ಲಿ ಅರ್ಜಿ ಸಲ್ಲಿಸಿ 15 ವರ್ಷಗಳಿಗೂ ಅಧಿಕ ಕಾಲ ಕಾದರೂ ಜಮೀನು ಲಭ್ಯವಾಗದಿರುವವವರು ದೊಡ್ಡ ಸಂಖ್ಯೆಯಲ್ಲಿ ಜಿಲ್ಲೆಯಲ್ಲಿ ಇದ್ದಾರೆ.
ಈ ಮಧ್ಯೆ ಸೈನಿಕರು, ಮಾಜಿ ಸೈನಿಕರಿಗೆ ಜಮೀನು ಅಥವಾ ನಿವೇಶನ ಮಂಜೂರಾತಿಗಾಗಿ ಸಲ್ಲಿಕೆಯಾಗುವ ಅರ್ಜಿಗಳನ್ನು ಇತ್ಯರ್ಥಗೊಳಿಸಲು ಸರ್ಕಾರ 2024ರ ಸೆ.20ರಂದು ಜಿಲ್ಲಾಧಿಕಾರಿಗಳಿಗೆ ಕೆಲವೊಂದು ಸೂಚನೆಗಳನ್ನು ನೀಡಿದೆ. ಸೈನಿಕರು, ಮಾಜಿ ಸೈನಿಕರಿಗೆ ಅವರ ಸೇವಾ ರಿಜಿಸ್ಟರ್‌ನಲ್ಲಿ ನಮೂದಿಸಿರುವ ಸ್ಥಳೀಯ ತಾಲೂಕಿನಲ್ಲಿ ಅಥವಾ ಸಂಬAಧಪಟ್ಟ ಜಿಲ್ಲೆಯಲ್ಲಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ (3)ರಡಿ ಪ್ರಕಟಿಸಿರುವ ಭೂ ಲಭ್ಯತಾ ಪಟ್ಟಿಯಂತೆ ಸರ್ಕಾರಿ ಜಮೀನು ಲಭ್ಯವಿದ್ದಲ್ಲಿ ನಿಯಮಗಳನ್ವಯ ಉಚಿತವಾಗಿ ಭೂಮಿ ಮಂಜೂರು ಮಾಡಲು ಕ್ರಮವಹಿಸಬೇಕು.
ಸೈನಿಕರು, ಮಾಜಿ ಸೈನಿಕರಿಗೆ ಅವರ ಸೇವಾ ರಿಜಿಸ್ಟರ್‌ನಲ್ಲಿ ನಮೂದಿಸಿರುವ ಸ್ಥಳೀಯ ತಾಲೂಕಿನಲ್ಲಿ ಜಮೀನು ಲಭ್ಯವಿಲ್ಲದಿದ್ದಲ್ಲಿ ಅರ್ಜಿಯನ್ನು ಅದೇ ಜಿಲ್ಲೆಯ ಯಾವುದಾದರೂ ತಾಲೂಕಿಗೆ ಮಾತ್ರÀ ವರ್ಗಾಯಿಸಲು ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಸಂಬAಧಿಸಿದ ಜಿಲ್ಲಾಧಿಕಾರಿ ಸಂಬAಧಪಟ್ಟ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಯಾವುದಾದರೂ ತಾಲೂಕಿನಲ್ಲಿ ಮಂಜೂರಾತಿಗಾಗಿ ಜಮೀನು ಲಭ್ಯವಿದ್ದಲ್ಲಿ ಮಂಜೂರು ಮಾಡಲು ಕ್ರಮ ತೆಗೆದುಕೊಳ್ಳಬಹುದಾಗಿದೆ.
ಒಂದು ವೇಳೆ ಅರ್ಜಿದಾರರು ಕೋರಿರುವ ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಲಭ್ಯವಿಲ್ಲದಲ್ಲಿ ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿ ನಗರ ಪ್ರದೇಶದಲ್ಲಿ 1,200 ಚದರ ಅಡಿ ವಿಸ್ತೀರ್ಣದ ನಿವೇಶನ ಅಥವಾ ಗ್ರಾಮೀಣ ಪ್ರದೇಶದಲ್ಲಿ 2,400 ಚದರ ಅಡಿ ನಿವೇಶನವನ್ನು ಜಾರಿಯಲ್ಲಿರುವ ಸರ್ಕಾರದ ಯಾವುದೇ ವಸತಿ ಯೋಜನೆಯಡಿಯಲ್ಲಿ ಅಥವಾ ಸರ್ಕಾರ ರೂಪಿಸಬಹುದಾದ ಯಾವುದೇ ಯೋಜನೆಯಡಿಯಲ್ಲಿ ಮಂಜೂರು ಮಾಡಲು ನಿಯಮಾನುಸಾರ ಕ್ರಮ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರು ನಗರ ಜಿಲ್ಲೆಗೆ ಸಂಬAಧಪಟ್ಟ ಅರ್ಜಿಗಳನ್ನು ಮಾತ್ರ ಪಕ್ಕದ ಜಿಲ್ಲೆಗೆ ವರ್ಗಾಯಿಸಲು ಅವಕಾಶವಿದೆ. ಉಳಿದ ಇತರ ಜಿಲ್ಲೆಯ ಅರ್ಜಿಗಳನ್ನು ಪಕ್ಕದ ಜಿಲ್ಲೆಗೆ ವರ್ಗಾಯಿಸಲು ಅವಕಾಶ ಇಲ್ಲ ಎನ್ನುವ ಸೂಚನೆಗಳನ್ನು ಸರ್ಕಾರ ಜಿಲ್ಲಾಧಿಕಾರಿಗಳಿಗೆ ನೀಡಿದೆ.
ಸರ್ಕಾರದ ಮಾಹಿತಿ ಪ್ರಕಾರ ಕೊಡಗಿನಲ್ಲಿ ಸುಮಾರು 5 ಸಾವಿರದಷ್ಟು ಸಂಖ್ಯೆಯಲ್ಲಿ ಮಾಜಿ ಸೈನಿಕರು ಇದ್ದಾರೆ. ಇವರ ಪೈಕಿ ಕಳೆದ ಮೂರು ವರ್ಷಗಳಲ್ಲಿ 1679 ಮಾಜಿ ಸೈನಿಕರು ಜಮೀನು ಮಂಜೂರಾತಿ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕೇವಲ 51 ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಲಾಗಿದೆ. 1628 ಅರ್ಜಿಗಳು ವಿಲೇವಾರಿಗಾಗಿ ಕಾದಿವೆ. ಜಮೀನು ಲಭ್ಯವಿಲ್ಲದ ಕಾರಣ ನೀಡಿ ಹಿಂಬರಹ ಕೊಟ್ಟು ಕೆಲವರಿಗೆ ಅರ್ಜಿ ವಿಲೇ ಮಾಡಲಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಲಭ್ಯವಿರುವ ಸರ್ಕಾರಿ ಜಮೀನುಗಳನ್ನು ಪ್ರತಿ ವರ್ಷ ಜುಲೈ ತಿಂಗಳಿನಲ್ಲಿ ಪ್ರಚುರಪಡಿಸಿ ಭೂ ಲಭ್ಯತಾ ಪಟ್ಟಿಯಂತೆ ಸರ್ಕಾರಿ ಜಮೀನು ಲಭ್ಯವಿಲ್ಲದೇ ಇರುವುದರಿಂದಲೂ ಕೆಲವು ಅರ್ಜಿಗಳನ್ನು ತಿರಸ್ಕರಿಸಲಾಗಿದೆ.
ಇದಲ್ಲದೆ ಕೆಲ ಅರ್ಜಿಗಳನ್ನು ಕೆಲವೊಂದು ವಿಭಿನ್ನ ಕಾರಣಗಳಿಂದಲೂ ತಿರಸ್ಕರಿಸಲಾಗಿದೆ. ಸರ್ಕಾರಿ ಜಮೀನು ಮಂಜೂರು ಮಾಡಲು ಸೈನಿಕರು ಸರ್ಕಾರ ನಿಗದಿಪಡಿಸಿರುವ ನಮೂನೆಯಲ್ಲಿ ಸಂಬAಧಪಟ್ಟ ತಾಲೂಕಿನಲ್ಲಿ ಅರ್ಜಿ ಸಲ್ಲಿಸದ ಕಾರಣ ನೀಡಿಯೂ ತಿರಸ್ಕರಿಸಿದ ಪ್ರಕರಣಗಳು ವರದಿಯಾಗಿದೆ. ಅರ್ಜಿದಾರರು ಆದಾಯದ ಬಗ್ಗೆ ದೃಢೀಕೃತ ದಾಖಲೆಗಳನ್ನು ಸಲ್ಲಿಸದೇ ಇರುವುದರಿಂದಲೂ ಆರ್ಜಿಗಳನ್ನು ತಿರಸ್ಕರಿಸಲಾಗಿದೆ.
ಈ ಮಧ್ಯೆ ರಾಜ್ಯದಲ್ಲಿರುವ ಮಾಜಿ ಸೈನಿಕರಿಗೆ ವ್ಯವಸಾಯದ ಉದ್ದೇಶಕ್ಕಾಗಿ ಭೂ ಮಂಜೂರಾತಿ ಮಾಡಲು ರಾಜ್ಯದಲ್ಲಿ ಸರ್ಕಾರಿ ಭೂಮಿಯ ತೀವ್ರ ಕೊರತೆಯಿರುವುದರಿಂದ, ಅವರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಕಳೆದ ವರ್ಷ ಬೆಳಗಾವಿ ಅಧಿವೇಶನದಲ್ಲಿ ಭರವಸೆ ನೀಡಿದ್ದರಾದರೂ ಅದು ಕೂಡ ಇನ್ನೂ ಈಡೇರದಿರುವುದು ಮಾಜಿ ಸೈನಿಕರ ನಿರಾಸೆಗೆ ಕಾರಣವಾಗಿದೆ.
"

ಕೊಡಗು ಜಿಲ್ಲೆಯಲ್ಲಿ ಭೂ ಲಭ್ಯತಾ ಪಟ್ಟಿಯಂತೆ ಒಟ್ಟು 80 ಎಕರೆ ಜಮೀನು ಲಭ್ಯವಿದೆ. ಮಾಜಿ ಸೈನಿಕ ಕೋಟಾದ ಅಡಿಯಲ್ಲಿ ಮಂಜೂರು ಮಾಡಲು 8 ಎಕರೆ ಜಮೀನು ಮಾತ್ರ ಲಭ್ಯವಿದೆ. ಬೇಡಿಕೆಗೆ ಅನುಗುಣವಾಗಿ ನಿಯಮಾನುಸಾರ ಭೂ ಲಭ್ಯತೆ ಇಲ್ಲದೇ ಇರುವುದರಿಂದ ಭೂ ಮಂಜೂರಾತಿ ಕೋರಿ ಸಲ್ಲಿಸಿರುವ ಮಾಜಿ ಸೈನಿಕರ ಅರ್ಜಿಗಳು ಬಾಕಿ ಉಳಿದಿವೆ. ಈ ಸಂಬAಧ 2024ರ ಸೆ.20ರಂದು ಸಂಬAಧಿಸಿದ ಜಿಲ್ಲಾಧಿಕಾರಿಗಳಿಗೆ ಕೆಲವೊಂದು ಸೂಚನೆಗಳನ್ನು ನೀಡಲಾಗಿದೆ. ಅರ್ಜಿದಾರರು ಕೋರಿರುವ ಜಿಲ್ಲೆಯಲ್ಲಿ ಭೂಮಿ ಲಭ್ಯವಿಲ್ಲದಿದ್ದಲ್ಲಿ ನಿವೇಶನ ಮಂಜೂರು ಮಾಡಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ.

"

ಎಲ್ಲಾ ಮಾಜಿ ಸೈನಿಕರಂತೆ ಭೂ ಮಂಜೂರಾತಿಗಾಗಿ ನಾನು ಕೂಡ ಅರ್ಜಿ ಸಲ್ಲಿಸಿ ಕಳೆದ 10 ವರ್ಷಗಳಿಂದ ಕಾಯುತ್ತಿದ್ದರೂ ಈತನಕ ಯಾವುದೇ ಪ್ರಯೋಜನ ಆಗಿಲ್ಲ. ನಮಗೆ ಭೂಮಿ ಕೊಡದಿರಲು ಜಮೀನು ಲಭ್ಯ ಇಲ್ಲ ಎನ್ನುವ ಕಾರಣ ಕೊಡುತ್ತಿರುವುದು ಸರಿಯಲ್ಲ. ಕೊಡಗಿನಲ್ಲಿ ವಿವಿಧ ಭಾಗಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸರ್ಕಾರಿ ಜಾಗ ಇದೆ. ಆದರೆ ಅವುಗಳು ದೊಡ್ಡ ಪ್ರಮಾಣದಲ್ಲಿ ಅತಿಕ್ರಮಣ ಆಗಿದೆ. ಸರ್ಕಾರ ಮನಸ್ಸು ಮಾಡಿದರೆ ಅತಿಕ್ರಮಿತ ಜಾಗ ತೆರವು ಮಾಡಿ ನಮ್ಮಂಥ ಯೋಧರಿಗೆ ಕೊಡುವುದು ಕಷ್ಟವೇನಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net