ಬೆಟ್ಟ, ಗುಡ್ಡ ಕರಗಿಸಿದ ಭೂ ಪರಿವರ್ತನೆ

2020ರಲ್ಲಿ ತಲಕಾವೇರಿಯಲ್ಲಿ ಸಂಭವಿಸಿದ್ದ ಭೂಕುಸಿತದ ನೋಟ (ಸಂಗ್ರಹ ಚಿತ್ರ)
2020ರಲ್ಲಿ ತಲಕಾವೇರಿಯಲ್ಲಿ ಸಂಭವಿಸಿದ್ದ ಭೂಕುಸಿತದ ನೋಟ (ಸಂಗ್ರಹ ಚಿತ್ರ)
Published on
ಮಡಿಕೇರಿ:
ಕೊಡಗಿನಲ್ಲಿ ನಿರಾತಂಕವಾಗಿ ಮುಂದುವರಿದಿರುವ ಭೂ ಪರಿವರ್ತನೆ ಪ್ರಕರಣಗಳು ಪರಿಸರ ಪ್ರಿಯರಲ್ಲಿ ಆತಂಕಕ್ಕೆ ಕಾರಣವಾಗಿದೆ. 2018, 19 ಹಾಗೂ 20ರಲ್ಲಿ ಜಿಲ್ಲೆಯಲ್ಲಿ ಅಲ್ಲಲ್ಲಿ ಸಂಭವಿಸಿದ ಭೂಕುಸಿತಕ್ಕೆ ಪರಿಸರದ ಮೇಲೆ ಮಾನವನ ಅನಗತ್ಯ ಹಸ್ತಕ್ಷೇಪವೇ ಕಾರಣ ಎಂದು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ವರದಿ ನೀಡಿದ್ದರೂ ಬೆಟ್ಟ, ಗುಡ್ಡಗಳ ಮೇಲೆ ಜೆಸಿಬಿ ಯಂತ್ರಗಳನ್ನು ನುಗ್ಗಿಸುವುದು ಇನ್ನೂ ನಿಲ್ಲಿಸಿಲ್ಲ. ಒಂದು ವೇಳೆ 2018ರಂತೆ ಮಳೆ ಅಬ್ಬರಿಸಿದರೆ ಜಿಲ್ಲೆ ಮತ್ತೊಂದು ದುರಂತಕ್ಕೆ ಸಾಕ್ಷಿ ಆಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎನ್ನುತ್ತಾರೆ ತಜ್ಞರು.
2020ರ ಆಗಸ್ಟ್ 5ರ ರಾತ್ರಿ ತಲಕಾವೇರಿ ಪ್ರದೇಶದಲ್ಲಿ ನಿರಂತರವಾಗಿ 478 ಮಿ.ಮೀ.ನಷ್ಟು ಸುರಿದ ಭಾರೀ ಮಳೆಯ ಪರಿಣಾಮ ಇಲ್ಲಿಯ ಗಜರಾಜಗಿರಿ ಬೆಟ್ಟದ ಒಂದು ಭಾಗ ಕುಸಿದು ತಲಕಾವೇರಿಯ ಹಿರಿಯ ಅರ್ಚಕ ಟಿ.ಎಸ್. ನಾರಾಯಣಾಚಾರ್, ಅವರ ಸಹೋದರ ಆನಂದ ತೀರ್ಥ ಸ್ವಾಮೀಜಿ, ಪತ್ನಿ ಸೇರಿ ಐವರು ದುರಂತ ಸಾವಿಗೀಡಾಗಿದ್ದರು. 6 ಜಾನುವಾರು, 1 ನಾಯಿ ಕೂಡ ಮೃತಪಟ್ಟಿತ್ತು. 2 ಮನೆ, 1 ದನದ ಕೊಟ್ಟಿಗೆ ಮಣ್ಣಿನಡಿಗೆ ಸೇರಿದ್ದಲ್ಲದೆ ಈ ವ್ಯಾಪ್ತಿಯ ಸ್ವಲ್ಪ ಅರಣ್ಯಪ್ರದೇಶಕ್ಕೂ ಹಾನಿಯಾಗಿತ್ತು.
ಇದಕ್ಕೂ ಮೊದಲು 2018, 2019ರಲ್ಲಿ ಮಡಿಕೇರಿ, ಸೋಮವಾರಪೇಟೆ ಹಾಗೂ ವಿರಾಜಪೇಟೆ ತಾಲೂಕಿನ ಹಲವು ಕಡೆಗಳಲ್ಲಿ ಭೂಕುಸಿತ ಸಂಭವಿಸಿ ಮನುಷ್ಯನ ಪ್ರಾಣಹಾನಿ ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ನಷ್ಟ ಸಂಭವಿಸಿತ್ತು. ತಲಕಾವೇರಿ ಸಮೀಪದ ಭಾಗಮಂಡಲ ವ್ಯಾಪ್ತಿಯ ಕೋರಂಗಾಲದಲ್ಲಿ ಒಂದು ಕುಟುಂಬವೇ ನಾಶವಾಗಿತ್ತು. ಕೊಡಗಿನಲ್ಲಿ ಈ ಹಿಂದೆಯೂ ಇದೇ ರೀತಿ ಮತ್ತು ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿತ್ತು. ಆದರೆ ಈ ಪ್ರಮಾಣದಲ್ಲಿ ಭೂಕುಸಿತಗಳು ಸಂಭವಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾರಣ ಹುಡುಕಲು ರಚಿಸಿದ್ದ ತಜ್ಞರ ಸಮಿತಿ ಪರಿಸರದ ಮೇಲಿನ ಮಾನವ ಹಸ್ತಕ್ಷೇಪದ ಕಡೆಗೆ ನೇರವಾಗಿ ಬೆರಳು ತೋರಿಸಿತ್ತು.
2020ರ ಆ. 6ರಂದು ತಲಕಾವೇರಿಯಲ್ಲಿ ಸಂಭವಿಸಿದ ಗಜರಾಜಗಿರಿ ಬೆಟ್ಟ ಕುಸಿತ ಪ್ರದೇಶಕ್ಕೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ತಜ್ಞರಾದ ಕಪಿಲ್ ಸಿಂಗ್ ಹಾಗೂ ಕಮಲ್ ಕುಮಾರ್ ಅದೇ ವರ್ಷದ ಆ.14 ಮತ್ತು 15ರಂದು ಭೇಟಿ ನೀಡಿದ್ದರು. ಅಂದಿನ ಜಿಲ್ಲಾಧಿಕಾರಿ ಕೋರಿಕೆ ಹಿನ್ನೆಲೆಯಲ್ಲಿ ಆಗಮಿಸಿದ್ದ ಅವರು ಸ್ಥಳದಲ್ಲಿ ವಿಸ್ತೃತ ಅಧ್ಯಯನ ನಡೆಸಿ 16 ಪುಟಗಳ ಪ್ರಾಥಮಿಕ ವರದಿ ಸಲ್ಲಿಸಿದ್ದರು. ದುರ್ಘಟನೆಗೆ ಕಾರಣವಾದ ಅಂಶಗಳು, ಈ ಹಿಂದಿನ ಇತಿಹಾಸ, ಮುಂದೆ ಇಂತಹ ದುರಂತಗಳು ಸಂಭವಿಸದAತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರ ಮಾಹಿತಿ ನೀಡಿದ್ದರು.
ಈ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಸೇರಿ ವಿವಿಧ ಕಾಮಗಾರಿಗಳಿಗೆ ಸಂಬAಧಿಸಿದAತೆ ಮಿತಿಮೀರಿದ ಮಾನವ ಹಸ್ತಕ್ಷೇಪ, ಅವೈಜ್ಞಾನಿಕ ನಿರ್ಮಾಣಗಳು ಬೆಟ್ಟವನ್ನು ದುರ್ಬಲಗೊಳಿಸಿದ್ದವು. 2019ರ ಭೂ ಕುಸಿತ ಸಂದರ್ಭದಲ್ಲಿ ಬೆಟ್ಟದ ಮೇಲೆ ನಿರ್ಮಾಣವಾದ ಬಿರುಕುಗಳು, ಅರಣ್ಯ ಇಲಾಖೆಯ ಕಂದಕಗಳ ಮೂಲಕ ನೀರು ಭೂಮಿಯೊಳಕ್ಕೆ ಇಳಿಯಿತು. ಭಾರಿ ಮಳೆಯಿಂದಲೂ ನೀರು ಭೂಮಿಗೆ ಸೇರಿ ಒತ್ತಡ ನಿರ್ಮಾಣ ಆಯಿತು. ಹಳೆಯ ಭೂಕುಸಿತದ ಸಂದರ್ಭದಲ್ಲಿ ನಿರ್ಮಾಣ ಆಗಿದ್ದ ಬಿರುಕುಗಳು ಕೂಡ ಭೂಮಿಯೊಳಗೆ ನೀರು ಇಂಗಿಸಲು ಸಹಕಾರಿ ಆದವು. ಇದು ಕೂಡ ಭೂ ಕುಸಿತಕ್ಕೆ ಪ್ರಮುಖ ಕಾರಣ ಆಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು.
ತಲಕಾವೇರಿಯಲ್ಲಿ ಆ.6ರಂದು ಸಂಭವಿಸಿದ ಭೂಕುಸಿತಕ್ಕೂ ಮೊದಲು 3 ಬಾರಿ ಅಲ್ಲಿ ಇಂಥಹದ್ದೇ ಘಟನೆಗಳು ನಡೆದಿತ್ತು. ಮೊದಲ ಭೂಕುಸಿತ 2007ರ ಜೂ.30ಕ್ಕೆ ಸಂಭವಿಸಿದರೆ, 2ನೆಯದ್ದು 2018ರಲ್ಲಿ ಹಾಗೂ ಮೂರನೆಯದ್ದು 2019ರ ಆ.19ಕ್ಕೆ ನಡೆದಿತ್ತು. ಈ ಎಚ್ಚರಿಕೆಯ ಗಂಟೆ ಮಧ್ಯೆಯೂ ತಲಕಾವೇರಿಯ ಗಜರಾಜಗಿರಿ ಬೆಟ್ಟ, ಬ್ರಹ್ಮಗಿರಿ ಬೆಟ್ಟದ ವ್ಯಾಪ್ತಿಯಲ್ಲಿ ನಿರಂತರವಾಗಿ ರಸ್ತೆ, ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳು ನಡೆದಿದ್ದವು. ಹಾಗಾಗಿ 2020ರ ಆ.6ಕ್ಕೆ ಗಜರಾಜಗಿರಿ ಬೆಟ್ಟ ಕುಸಿದಿದೆ ಎನ್ನುವ ಅಂಶವನ್ನು ತಜ್ಞರು ವರದಿಯಲ್ಲಿ ವಿವರಿಸಿದ್ದರು.
ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ತಜ್ಞರು ಕೊಟ್ಟಿದ್ದ ಈ ವರದಿ ತಲಕಾವೇರಿ ದುರಂತಕ್ಕೆ ಕೇಂದ್ರೀಕೃತವಾಗಿ ಇದ್ದರೂ ಇದೇ ರೀತಿಯ ಭೌಗೋಳಿಕ ರಚನೆ ಹೊಂದಿರುವ ಜಿಲ್ಲೆಯ ಇತರ ಬೆಟ್ಟ-ಗುಡ್ಡಗಳು, ಅಪಾಯಕಾರಿ ಪ್ರದೇಶಗಳಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳಿಗೂ ಅನ್ವಯಿಸುತ್ತದೆ. 2018, 2019ರಲ್ಲಿ ಭೂಕುಸಿತ ಸಂಭವಿಸಿದ್ದ ಬಹುತೇಕ ಪ್ರದೇಶಗಳು ಕೂಡ ಮಾನವನ ಅನಧಿಕೃತ ಹಸ್ತಕ್ಷೇಪಕ್ಕೆ ಒಳಗಾಗಿದ್ದವು ಎನ್ನುವುದನ್ನು ತಜ್ಞರು ನೆನಪಿಸುತ್ತಾರೆ. ಇಷ್ಟಿದ್ದರೂ ಬೆಟ್ಟ ಬಗೆಯುವುದು ಇನ್ನೂ ನಿಲ್ಲದಿರುವುದು ಆತಂಕಕಾರಿಯಾಗಿದೆ. ಎನ್ನುತ್ತಾರೆ ಅವರು.
ಭೂಕುಸಿತ ಬಗ್ಗೆ ಅಧ್ಯಯನ ನಡೆಸಿದ ತಜ್ಞರ ತಂಡ ಭವಿಷ್ಯದಲ್ಲಿ ಇಂಥ ದುರಂತಗಳನ್ನು ತಡೆಯುವ ಬಗ್ಗೆ ಅನೇಕ ಸಲಹೆಗಳನ್ನೂ ನೀಡಿತ್ತು.
ಅಪಾಯಕಾರಿ ಎಂದು ಗುರುತಿಸಿರುವ ಪ್ರದೇಶದಲ್ಲಿ ಸುರಿಯುವ ಭಾರಿ ಮಳೆಯನ್ನು ತಡೆಯುವ ರೀತಿಯಲ್ಲಿ ಉತ್ತಮ ರಸ್ತೆ ನಿರ್ಮಾಣ ಆಗಬೇಕು. ಸರಾಗವಾಗಿ ನೀರು ಹರಿದು ಹೋಗುವಂತೆ ಚರಂಡಿ ವ್ಯವಸ್ಥೆ ಮಾಡಬೇಕು. ಬೆಟ್ಟದ ಮೇಲೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ತಡೆಗೋಡೆ ಕಟ್ಟುವ ಸಂದರ್ಭದಲ್ಲಿ ಆಳವಾದ ಮತ್ತು ಗಟ್ಟಿಯಾದ ತಳಪಾಯ ಹಾಕಬೇಕು. ಆಳಕ್ಕೆ ಬೇರಿಳಿಸುವ ಗಿಡ, ಮರಗಳನ್ನು ಬೆಳೆಸುವಂತಾಗಬೇಕು. ಬೆಟ್ಟದ ಮೇಲೆ ಬಿರುಕುಗಳು, ತೆರೆದ ಸ್ಥಳಗಳು ಕಂಡು ಬಂದರೆ ಅವುಗಳನ್ನು ನೀರು ಭೂಮಿಯೊಳಗೆ ಒಳಸೇರದಂತೆ ಕೂಡಲೇ ಮುಚ್ಚುವ ಕೆಲಸ ಆಗಬೇಕು. ಮುಖ್ಯವಾಗಿ ಪರಿಸರದ ಮೇಲೆ ಮಾನವನ ಹಸ್ತಕ್ಷೇಪ ನಡೆಯಬಾರದು ಎನ್ನುವ ಸಲಹೆ ನೀಡಿದ್ದರು. ಆದರೆ ಎಲ್ಲವನ್ನೂ ಗಾಳಿಗೆ ತೂರಲಾಗಿದೆ.
ನಾಪೋಕ್ಲು ಸಮೀಪದ ನೆಲಜಿಯ ಮಲ್ಮ ಬೆಟ್ಟದ ಮೇಲೆ ನಡೆದಿದ್ದ ನಿರ್ಮಾಣ ಕಾಮಗಾರಿಗಳು, ಮಡಿಕೇರಿ ಬಳಿಯ ಕರ್ಣಂಗೇರಿ ಗ್ರಾಮದಲ್ಲಿ ಬೃಹತ್ ವಸತಿ ಯೋಜನೆಗಾಗಿ ನಡೆಯುತ್ತಿರುವ ಕೆಲಸಗಳು, ಗಾಳಿಬೀಡು ವ್ಯಾಪ್ತಿಯಲ್ಲಿ ಬೆಟ್ಟಗಳನ್ನು ಮಟ್ಟ ಮಾಡಿ ತಲೆ ಎತ್ತಿರುವ ರೆಸಾರ್ಟ್ಗಳು, ನರಿಯಂದಡ ವ್ಯಾಪ್ತಿಯಲ್ಲಿ ಸೂಕ್ಷö್ಮ ಅರಣ್ಯ ಪ್ರದೇಶದ ಬೆಟ್ಟದ ಮೇಲೆ ನಾಯಿಕೊಡೆಗಳಂತೆ ನಿರ್ಮಾಣವಾಗಿರುವ ಕಾಟೇಜ್‌ಗಳು ಕೊಡಗಿನಲ್ಲಿ ಪರಿಸರದ ಮೇಲೆ ಮುಂದುವರಿದಿರುವ ದೌರ್ಜನ್ಯಕ್ಕೆ ಕೆಲವು ಉದಾಹರಣೆಗಳಾಗಿ ಕಂಡುಬAದರೂ ಇಂಥ ಸಾಕಷ್ಟು ಪ್ರಕರಣಗಳು ಅಲ್ಲಲ್ಲಿ ತೆರೆ ಮರೆಯಲ್ಲಿ ನಡೆಯುತ್ತಲೇ ಇವೆ.
2018,19 ಹಾಗೂ 2020ರ ಪ್ರಾಕೃತಿಕ ದುರಂತದ ನಂತರ ಕೊಡಗಿನಲ್ಲಿ ಭೂ ಪರಿವರ್ತನೆಗೆ ಕಟ್ಟುನಿಟ್ಟಿನ ಕೆಲವು ನಿಯಮಗಳನ್ನು ಹೇರಲಾಗಿತ್ತು. ಆದರೆ ನಂತರದ ವರ್ಷಗಳಲ್ಲಿ ಈ ನಿಯಮಗಳನ್ನು ಸಡಿಲ ಮಾಡಿದ ಪರಿಣಾಮ ಈಗಿನ ಬೆಳಣಿಗೆಗಳು ನಡೆಯುತ್ತಿವೆ. ಪ್ರಕೃತಿಯ ಬಗ್ಗೆ ಕಾಳಜಿ ಇಲ್ಲದ, ಸಂವೇದನಾರಹಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೇ ಇದಕ್ಕೆಲ್ಲಾ ಕಾರಣ ಎನ್ನುವ ಆರೋಪ ಕೇಳಿ ಬರುತ್ತಿದೆ. ತಜ್ಞರ ಸಲಹೆಗಳನ್ನೂ ಪಾಲಿಸಲಿದ್ದರೆ ಮತ್ತೊಮ್ಮೆ ದುರಂತ ಮರುಕಳಿಸುವ ಆತಂಕವೂ ವ್ಯಕ್ತವಾಗುತ್ತಿದೆ.
"

2020ರ ತಲಕಾವೇರಿ ದುರಂತ ಪ್ರತ್ಯೇಕ ಘಟನೆಯಾಗಿರಲಿಲ್ಲ, ಬದಲಿಗೆ ಅದು ಪ್ರಕೃತಿಯ ಎಚ್ಚರಿಕೆಯಾಗಿತ್ತು. ಬದಲಾಗುತ್ತಿರುವ ಹವಾಮಾನ ಮಾದರಿಗಳು ಮತ್ತು ಮೋಡ ಬಿತ್ತನೆಯಂತಹ ಪ್ರಸ್ತಾವಿತ ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ, ವೈಜ್ಞಾನಿಕ ಆವಿಷ್ಕಾರಗಳನ್ನು ಸಾರ್ವಜನಿಕಗೊಳಿಸುವುದು ಮತ್ತು ತಕ್ಷಣವೇ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ. ಸಾರ್ವಜನಿಕ ಸುರಕ್ಷತೆ, ಪರಿಸರ ಸಂರಕ್ಷಣೆ ಮತ್ತು ಪರಂಪರೆಯ ರಕ್ಷಣೆ ಪರಸ್ಪರ ಜತೆಯಾಗಿ ಸಾಗಬೇಕಿದೆ.

— ಕೆ.ಬಿ. ರತನ್ ಬಾಬು, ನಿವೃತ್ತ ಅಧೀಕ್ಷಕ ಅಭಿಯಂತರ, ಕೆಪಿಟಿಸಿಎಲ್
"

ಸಿದ್ದಾಪುರದ 2400 ಎಕರೆ ಕಾಫಿ ತೋಟದ ಪ್ರದೇಶದಿಂದ ಹಿಡಿದು ಮಲ್ಮ ಕುಂದ್ ವರೆಗೆ ಮೆಗಾ-ರೆಸಾರ್ಟ್, ಟೌನ್‌ಶಿಪ್‌ಗಳು ಮತ್ತು ವಿಲ್ಲಾಗಳು ಇಡೀ ಕೊಡಗನ್ನು ಆವರಿಸುತ್ತಿದ್ದು, ತೀವ್ರ ವಿನಾಶ ಉಂಟು ಮಾಡುತ್ತಿದೆ. 2018ರಲ್ಲಿ ವಾಯವ್ಯ ಕೊಡಗಿನಲ್ಲಿ ಕಾಡಿದ ಭೀಕರ ಜಲಪ್ರಳಯ ಮತ್ತು ಪ್ರಾಕೃತಿಕ ವಿಕೋಪಗಳು ಕೊಡಗಿನಲ್ಲಿ ಮರುಕಳಿಸುವುದಿಲ್ಲ ಎಂಬುವುದಕ್ಕೆ ಯಾವುದೇ ಖಾತರಿ ಇಲ್ಲ. ಆದ್ದರಿಂದ ಆಡಳಿತ ನಡೆಸುವವರು ಕೊಡವ ಭೂಪ್ರದೇಶದ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

— ಎನ್.ಯು. ನಾಚಪ್ಪ, ಅಧ್ಯಕ್ಷ, ಕೊಡವ ನ್ಯಾಷನಲ್ ಕೌನ್ಸಿಲ್


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net