ಉದಯರವಿ ಮನೆ ಸಂಗ್ರಹಾಲಯವಾಗಿ ರೂಪುಗೊಳ್ಳಲಿದೆ

 ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಕುವೆಂಪುರವರ ಅಳಿಯ ಡಾ. ಚಿದಾನಂದ ಗೌಡ ರನ್ನು ಸನ್ಮಾನಿಸಲಾಯಿತು. ಪ್ರೊ. ಅಶೋಕ ಸಂಗಪ್ಪ ಆಲೂರ , ಡಾ. ಸುರೇಶ್ ಎಂ ., ಬಿ. ಎಸ್ ಲೋಕೇಶ್ ಸಾಗರ್, ಉ.ರಾ. ನಾಗೇಶ್ ಮತ್ತಿತರ ಗಣ್ಯರು ಇದ್ದರು.
ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಕುವೆಂಪುರವರ ಅಳಿಯ ಡಾ. ಚಿದಾನಂದ ಗೌಡ ರನ್ನು ಸನ್ಮಾನಿಸಲಾಯಿತು. ಪ್ರೊ. ಅಶೋಕ ಸಂಗಪ್ಪ ಆಲೂರ , ಡಾ. ಸುರೇಶ್ ಎಂ ., ಬಿ. ಎಸ್ ಲೋಕೇಶ್ ಸಾಗರ್, ಉ.ರಾ. ನಾಗೇಶ್ ಮತ್ತಿತರ ಗಣ್ಯರು ಇದ್ದರು.
Published on
ಕುಶಾಲನಗರ: 'ಕನ್ನಡ ಸಿರಿ ಸ್ನೇಹ ಬಳಗ' ಹಾಗೂ ಕುಶಾಲನಗರದ ನಾಡಪ್ರಭು ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಜರುಗಿದ ವಿಶ್ವಮಾನವ ಕುವೆಂಪುರವರ ಜನ್ಮೋತ್ಸವ ಮತ್ತು ಸಮಗ್ರ ಸಾಹಿತ್ಯದ ಕುರಿತು ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಹಾಗೂ ರಸಪ್ರಶ್ನೆ ಕಾರ್ಯಕ್ರಮದ ಸಮಾರೋಪ ಸಮಾರಂಭವು ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಆವರಣದ ಹಾರಂಗಿ ಸಭಾಂಗಣದಲ್ಲಿ ಸೋಮವಾರ ನಡೆಯಿತು .
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಕುವೆಂಪುರವರ ಅಳಿಯ ಡಾ. ಚಿದಾನಂದ ಗೌಡ ಮೈಸೂರಿನಲ್ಲಿರುವ ಕುವೆಂಪುರವರ 'ಉದಯ ರವಿ' ಮನೆಯನ್ನು ಅವರ ಪುಸ್ತಕ ಕೃತಿಗಳ ಪ್ರತಿ ಹಾಗೂ ಅವರು ಬಳಸುತ್ತಿದ್ದ ಹಲವಾರು ವಸ್ತುಗಳನ್ನು ಪ್ರದರ್ಶನಕ್ಕಿಡಲು ಉಪಯೋಗಿಸಲಾಗುತ್ತದೆ ಎಂದರಲ್ಲದೆ ಈ ಯೋಜನೆ 2026ರ ಡಿಸೆಂಬರ್ 29ರಂದು ಆರಂಭವಾಗಲಿದೆ ಎಂದು ಹೇಳಿದರು.
'ಕುಲಂ ತಾನೊಂದೆ ವಲಂ' ಎಂಬ ತತ್ವದ ಅಡಿಯಲ್ಲಿ ಮಾನವ ಜಾತಿ, ಧರ್ಮ, ಭಾಷೆಗಳ ಬೇಲಿಯನ್ನು ಕಳಚಿ ಸಂಕುಚಿತ ಮನೋಭಾವದಿಂದ ಹೊರಬರಬೇಕು ಎಂದರಲ್ಲದೆ 'ಮಂತ್ರ ಮಾಂಗಲ್ಯ' ಪರಿಕಲ್ಪನೆಯು ಕುವೆಂಪುರವರ ಚಿಂತನೆಯ ಕೂಸಾಗಿದ್ದು ಆಡಂಬರದ ಮದುವೆಗಳಿಂದಾಗಿ ಹೆತ್ತವರಿಗಾಗುವ ಆರ್ಥಿಕ ಭಾರವನ್ನು ತಪ್ಪಿಸಿ ಸರಳ ಮದುವೆಗಳಿಗೆ ಒಂದು ಉತ್ತಮ ಮಾದರಿಯಾಗಿದೆ ಎಂದು ಅವರು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ. ಅಶೋಕ ಸಂಗಪ್ಪ ಆಲೂರ ಅವರು ಮಾತನಾಡಿ ಕುವೆಂಪು ಕಾವ್ಯದಲ್ಲಿ ವಿಶ್ವಮಾನವತಾವಾದ, ಆತ್ಮಶೋಧ, ಮನಸ್ಸಿನ ಅಂತರಂಗ, ಪ್ರಕೃತಿ, ಮಾನವ -ದೇವತೆಗಳ ಆಂತರಿಕ ಸಂಬಂಧದ ಸೂಕ್ಷ್ಮತೆ ಭಾರತೀಯ ಧಾರ್ಮಿಕ ಪರಂಪರೆಯ ಸಂಧಾನಕ್ಕೆ ಅನುವು ಮಾಡಿಕೊಟ್ಟಿರುವುದನ್ನು ಕಾಣಬಹುದಾಗಿದೆ ಎಂದರು. ಮಾನವತ್ವವೇ ಪರಮಧರ್ಮ ಜಾತಿ ಧರ್ಮ ಭಾಷೆಗಳ ಮೀರಿದ ಮಾನವ ಬಾಂಧವ್ಯವೇ ನಿಜವಾದ ಮೌಲ್ಯ ಎಂಬುದನ್ನು ಅವರು ಸಾರಿದರು ಎಂದರು .
ಕಾರ್ಯಕ್ರಮದಲ್ಲಿ ಕೊಡಗು ವಿಶ್ವವಿದ್ಯಾಲಯದ ಕುಲ ಸಚಿವ ಡಾ.ಸುರೇಶ್ ಎಂ .ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ ಎಸ್ ಲೋಕೇಶ್ ಸಾಗರ್ ಮಾತನಾಡಿದರು .
ಕನ್ನಡ ಸಿರಿ ಸ್ನೇಹ ಬಳಗದ ಪದಾಧಿಕಾರಿಗಳು ಮತ್ತು ಸದಸ್ಯರು, ವಿವಿಧ ವಿಭಾಗಗಳ ಬೋಧಕ, ಬೋಧಕೇತರ ಸಿಬ್ಬಂದಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿವೃತ್ತ ಚಿತ್ರಕಲಾ ಶಿಕ್ಷಕ ಉ.ರಾ. ನಾಗೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.
ಸಮಾರಂಭದಲ್ಲಿ ನಡೆಸಲಾದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮೊದಲ ಬಹುಮಾನವನ್ನು ಅನಿಕೇತನ ತಂಡ ದ್ವಿತೀಯ ಸ್ಥಾನವನ್ನು ಕೊಳಲು ತಂಡ , ತೃತೀಯ ಬಹುಮಾನವನ್ನು ಅಗ್ನಿ ಹಂಸ ತಂಡ ಗೆದ್ದುಕೊಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net