ಕುಶಾಲನಗರಕ್ಕೆ ಬೇಕಿದೆ ಸುಸಜ್ಜಿತ ಕ್ರೀಡಾಂಗಣ

ತಾಲೂಕು ಕ್ರೀಡಾಂಗಣಕ್ಕೆ ಸೂಕ್ತ ಎಂದು ಹೇಳಲಾಗುತ್ತಿರುವ ಕುಶಾಲನಗರದ ಗುಂಡೂರಾವ್ ಬಡಾವಣೆಯ ಮೈದಾನ
ತಾಲೂಕು ಕ್ರೀಡಾಂಗಣಕ್ಕೆ ಸೂಕ್ತ ಎಂದು ಹೇಳಲಾಗುತ್ತಿರುವ ಕುಶಾಲನಗರದ ಗುಂಡೂರಾವ್ ಬಡಾವಣೆಯ ಮೈದಾನ
Published on

ಪ್ರಮುಖ ಮುಖ್ಯಾಂಶಗಳು

  • ಗು0ಡೂರಾವ್ ಹೆಸರಿನ ಕ್ರೀಡಾಂಗಣಕ್ಕೆ ಬೇಡಿಕೆ
  • ಹೋರಾಟಕ್ಕಾಗಿ ಸಮಿತಿ ರಚನೆ
  • ರಚನಾತ್ಮಕ ಹೋರಾಟಕ್ಕೆ ನಿರ್ಧಾರ
ಮಡಿಕೇರಿ:
ತಮ್ಮೂರಿಗೆ ಶತಾಯ ಗತಾಯ ಸುಸಜ್ಜಿತ ಕ್ರೀಡಾಂಗಣವೊAದನ್ನು ತರಲೇಬೇಕು ಎನ್ನುವ ಉದ್ದೇಶದಿಂದ ರಚನಾತ್ಮಕ ಹೋರಾಟ ರೂಪಿಸುವ ನಿಟ್ಟಿನಲ್ಲಿ ಕುಶಾಲನಗರದ ಉತ್ಸಾಹಿ ಯುವಕರು ಸಮಿತಿಯೊಂದನ್ನು ರಚನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಹೆಸರಿನಲ್ಲೇ ತಾಲೂಕು ಸ್ಟೇಡಿಯಂ ಆಗಬೇಕು ಎನ್ನುವುದು ಈ ಸಮಿತಿಯ ಇಂಗಿತ. ಮೊದಲ ಹಂತವಾಗಿ ಮುಂದಿನ ಶುಕ್ರವಾರ (ಡಿ.12) ಕುಶಾಲನಗರದಿಂದ ಮಡಿಕೇರಿಗೆ ಬೃಹತ್ ವಾಹನ ಜಾಥಾ ನಡೆಸಲು ನಿರ್ಧರಿಸಲಾಗಿದ್ದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಮುಖಾಂತರ ಹೋರಾಟದ ಮೊದಲ ಹೆಜ್ಜೆ ಇಡಲಿದ್ದಾರೆ.
ಬೆಟ್ಟ, ಗುಡ್ಡಗಳಿಂದ ಕೂಡಿರುವ ವಿಶಿಷ್ಟ ಜಿಲ್ಲೆಯಾಗಿರುವ ಕೊಡಗಿನಿಂದ ಕ್ರೀಡಾ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ಸಿಕ್ಕಿದೆ. ಸೀಮಿತ ಸವಲತ್ತುಗಳ ನಡುವೆಯೇ ಇಲ್ಲಿನ ಕ್ರೀಡಾ ಪ್ರತಿಭೆಗಳು ಅಂತಾರಾಷ್ಟಿçÃಯ ಮಟ್ಟದಲ್ಲೂ ಮಿಂಚುತ್ತಿವೆ. ಆದರೆ ಕ್ರೀಡಾ ಜಿಲ್ಲೆಯಾಗಿ ಗುರುತಿಸಿಕೊಂಡಿದ್ದರೂ ಕ್ರೀಡೆಗಳಿಗೆ ಸಂಬAಧಿಸಿದAತೆ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಹೆಚ್ಚಿನ ಪ್ರತಿಭೆಗಳು ಅರಳುವ ಮೊದಲೇ ಕಮರುತ್ತಿವೆ. ಬೆರಳೆಣಿಕೆಯಷ್ಟು ಸುಸಜ್ಜಿತ ಕ್ರೀಡಾಂಗಣಗಳನ್ನು ಹೊರತುಪಡಿಸಿದರೆ ಸ್ಥಳೀಯವಾಗಿ ಕಚ್ಛಾ ಮೈದಾನಗಳೇ ಸ್ಥಳೀಯ ಕ್ರೀಡಾಪಟುಗಳ ಅಭ್ಯಾಸದ ಅಂಗಣಗಳಾಗಿವೆ. ಕ್ರೀಡಾ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಹಿಂದಿನಿAದಲೂ ಸ್ಥಳೀಯ ಕ್ರೀಡಾಭಿಮಾನಿಗಳು ಸÀರ್ಕಾರದ ಮುಂದೆ ಬೇಡಿಕೆ ಇಡುತ್ತಾ ಬಂದಿದ್ದರೂ ನಿರೀಕ್ಷಿತ ಪ್ರತಿಕ್ರಿಯೆ ಸಿಗದಿರುವ ಬಗ್ಗೆ ಸ್ಥಳೀಯವಾಗಿ ಅಸಮಾಧಾನವಿದೆ.
ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಾಹಿತಿ ಪ್ರಕಾರ ಇಲಾಖೆಯ ಅಧೀನದಲ್ಲಿ ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ ಜ. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ, ಮಡಿಕೇರಿ ಷಟಲ್ ಒಳಾಂಗಣ ಕ್ರೀಡಾಂಗಣ, ಹೊದ್ದೂರು ಮೈದಾನ ಎ. ಚೆಂಬು ಗ್ರಾಮದಲ್ಲಿ ಆಟದ ಮೈದಾನಗಳಿವೆ. ಸೋಮವಾರಪೇಟೆ ತಾಲೂಕಿನಲ್ಲಿ ಸೋಮವಾರಪೇಟೆ ಹಾಕಿ ಟರ್ಫ್ ಮೈದಾನವಿದ್ದರೆ, ವಿರಾಜಪೇಟೆ ತಾಲೂಕಿನಲ್ಲಿ ವಿರಾಜಪೇಟೆ ಒಳಾಂಗಣ ಷಟಲ್ ಕೋರ್ಟ್ ಇದೆ. ಪೊನ್ನಂಪೇಟೆ ತಾಲೂಕಿನಲ್ಲಿ ಪೊನ್ನಂಪೇಟೆ ಹಾಕಿ ಟರ್ಫ್ ಮೈದಾನ ಹಾಗೂ ಪೊನ್ನಂಪೇಟೆ ತಾಲೂಕು ಮೈದಾನ ಲಭ್ಯವಿದೆ. ಉಳಿದಂತೆ ಶಾಲಾ, ಕಾಲೇಜುಗಳ ಆಟದ ಮೈದಾನಗಳೇ ಕ್ರೀಡಾಪಟುಗಳಿಗೆ ಅಭ್ಯಾಸದ ಅಂಗಣಗಳಾಗಿವೆ.
ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯಾವುದೇ ಸ್ಟೇಡಿಯಂ ಅಥವಾ ಆಟದ ಮೈದಾನ ಇಲ್ಲ. ಈ ಭಾಗದಲ್ಲೂ ಆಟೋಟಗಳಿಗೆ ಶಾಲಾ-ಕಾಲೇಜು ಮೈದಾನವನ್ನು ಅವಲಂಬಿಸುವ ಅನಿವಾರ್ಯತೆ ಇದೆ. ಜಿಲ್ಲೆಯಲ್ಲೇ ಹೆಚ್ಚು ಕ್ರೀಡಾಕೂಟಗಳು ಕುಶಾಲನಗರ ವ್ಯಾಪ್ತಿಯಲ್ಲಿ ಸಂಘಟಿಸಲಾಗುತ್ತಿದ್ದು, ಬೇಸಿಗೆಯ ಸಮಯದಲ್ಲಿ ಕೆಲವೊಂದು ಕ್ರೀಡಾಕೂಟಗಳ ಆಯೋಜನೆಗೆ ಮೈದಾನಗಳು ಲಭ್ಯವಾಗದೆ ಕ್ರೀಡಾಕೂಕುಟಗಳೇ ರದ್ದಾದ ಉದಾಹರಣೆಗಳಿವೆ. ಹಾಗಾಗಿ ಇಲ್ಲಿಗೆ ಒಂದು ಸುಸಜ್ಜಿತ ಕ್ರೀಡಾಂಗಣ ತರುವ ನಿಟ್ಟಿನಲ್ಲಿ ಸ್ಥಳೀಯ ಯುವಕರು, ಕ್ರೀಡಾ ಪ್ರೇಮಿಗಳು ಒಗ್ಗಟ್ಟಿನ ಹೋರಾಟಕ್ಕೆ ಇಳಿದಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಶಾಲನಗರ ಮೂಲದ ಆರ್. ಗುಂಡೂರಾವ್ ಅವರ ದೂರದೃಷ್ಟಿಯ ಯೋಜನೆಗಳಿಂದಾಗಿ ಪಟ್ಟಣ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಅವರ ಹೆಸರಿನಲ್ಲೇ ಇಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಾಣ ಆಗಬೇಕು ಎನ್ನುವ ಗುರಿ ಇಟ್ಟುಕೊಂಡು ಆಸಕ್ತ ಯುವಕರು ಗುಂಡೂರಾವ್ ಕ್ರೀಡಾಂಗಣ ಹೋರಾಟ ಸಮಿತಿ ರಚಿಸಿಕೊಂಡಿದ್ದಾರೆ. ಕುಶಾಲನಗರ ಒಳಗೊಂಡು ಕೊಡಗಿನಿಂದ ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟುಗಳನ್ನು ಸೃಷ್ಟಿಸÀಬೇಕಿದೆ. ಈ ನಿಟ್ಟಿನಲ್ಲಿ ಕ್ರೀಡೆಗಳು ನಡೆಯಲು ಸೂಕ್ತ ಸ್ಥಳದಲ್ಲಿ ಮೈದಾನದ ಅಗತ್ಯವಿದೆ. ಇದಕ್ಕಾಗಿ ಸಂಬAಧಿಸಿದವರ, ಚುನಾಯಿತ ಜನಪ್ರತಿನಿಧಿಗಳ ಗಮನ ಸೆಳೆಯಬೇಕಿದೆ. ಈ ನಿಟ್ಟಿನಲ್ಲಿ ಕ್ಲಬ್ ಒಂದರ ಸ್ಥಾಪನೆಯ ಅಗತ್ಯವು ಇದೆ. ಈ ಮೂಲಕ ಹೋರಾಟವನ್ನು ಸಂಘಟಿಸಬೇಕಿದೆ ಎನ್ನುವ ಉದ್ದೇಶ ಇಟ್ಟುಕೊಂಡು ಈ ಸಮಿತಿ ರಚಿಸಲಾಗಿದೆ.
ಪಟ್ಟಣದ ಗುಂಡೂರಾವ್ ಬಡಾವಣೆಯಲ್ಲಿ ಈಗಿರುವ ಮೈದಾನವೇ ತಾಲೂಕು ಕ್ರೀಡಾಂಗಣಕ್ಕೆ ಸೂಕ್ತವಾಗಿದ್ದು ಅದನ್ನೇ ಅಭಿವೃದ್ಧಿಪಡಿಸಿದಲ್ಲಿ ಉತ್ತಮ ಎಂಬ ಅಭಿಪ್ರಾಯಗಳು ಸ್ಥಳೀಯವಾಗಿ ವ್ಯಕ್ತವಾಗುತ್ತಿದೆ. ಅಥವಾ ಬೇರೆ ಉತ್ತಮ ಸ್ಥಳ ಇದ್ದರೆ ಅಲ್ಲಿ ಬೇಕಾದರೂ ಸ್ಟೇಡಿಯಂ ನಿರ್ಮಿಸಲಿ. ಒಟ್ಟಿನಲ್ಲಿ ತಾಲೂಕು ಕ್ರೀಡಾಂಗಣ ಕುಶಾಲನಗರಕ್ಕೆ ತುರ್ತು ಅಗತ್ಯವಿದೆ ಎನ್ನುವುದು ಗುಂಡೂರಾವ್ ಕ್ರೀಡಾಂಗಣ ಹೋರಾಟ ಸಮಿತಿಯ ಪ್ರಮುಖ ಬೇಡಿಕೆಯಾಗಿದ್ದು, ಈ ನಿಟ್ಟಿನಲ್ಲಿ ಹೋರಾಟ ರೂಪಿಸಲಾಗುತ್ತಿದೆ.
ಹೋರಾಟದ ಮೊದಲ ಹಂತವಾಗಿ ಮುಂದಿನ ಶುಕ್ರವಾರ (ಡಿ.12) ಕುಶಾಲನಗರದಿಂದ ಮಡಿಕೇರಿಗೆ ವಾಹನ ಜಾಥಾ ಆಯೋಜಿಸಲಾಗಿದೆ. ಸುಮಾರು 1 ಸಾವಿರ ಯುವಕರು ಈ ಜಾಥದಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಜಾಥಾ ಮೂಲಕ ಆಗಮಿಸಲಿರುವ ಯುವಕರು ತಮ್ಮ ಬೇಡಿಕೆ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಿದ್ದಾರೆ. ಮುಂದಿನ ಹಂತದಲ್ಲಿ ಸ್ಥಳೀಯ ಶಾಸಕರನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಲಿದ್ದಾರೆ. ನಂತರ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ಮುಂದೆಯೂ ಬೇಡಿಕೆ ಇಡಲಿದ್ದು, ಈ ಸಂಬAಧ ಮುಖ್ಯಮಂತ್ರಿ ಭೇಟಿಗೂ ಯೋಜನೆ ರೂಪಿಸಲಾಗಿದೆ. ಸಮಿತಿ ಮೂಲಕ ರಚನಾತ್ಮಕವಾಗಿ ಹೋರಾಟ ನಡೆಸಲಾಗುತ್ತಿದ್ದು, ಕುಶಾಲನಗರಕ್ಕೆ ತಾಲೂಕು ಕ್ರೀಡಾಂಗಣ ಬರುವ ತನಕವೂ ಹೋರಾಟವನ್ನು ಜೀವಂತವಾಗಿಡಲು ಸಮಿತಿ ತೀರ್ಮಾನಿಸಿದೆ.
ಗುಂಡೂರಾವ್ ಹೆಸರಿನಲ್ಲಿ ಕ್ರೀಡಾಂಗಣಕ್ಕಾಗಿ ಹೋರಾಟ ನಡೆಸಲು ರಚಿಸಲಾಗಿರುವ ಸಮಿತಿಯ ಗೌರವಾಧ್ಯಕ್ಷರಾಗಿ ಪವನ್ ಗಣಪತಿ ಕಾರ್ಯ ನಿರ್ವಹಿಸಲಿದ್ದಾರೆ. ಅಧ್ಯಕ್ಷರಾಗಿ ಲಕ್ಷ್ಮಿನಾರಾಯಣ, ಉಪಾಧ್ಯಕ್ಷರುಗಳಾಗಿ ಡೈಮಂಡ್ ಮಣಿ, ಫಯಾಜ್, ಪ್ರಧಾನ ಸಂಚಾಲಕರಾಗಿ ಮಹದೇವ್, ಪ್ರಧಾನ ಕಾರ್ಯದರ್ಶಿಯಾಗಿ ಎಸ್. ಆದಂ, ಖಜಾಂಚಿಯಾಗಿ ಸಲ್ಮಾನ್, ಸಂಘಟನಾ ಕಾರ್ಯದರ್ಶಿ ಹರೀಶ್, ಸಂಚಾಲಕರಾಗಿ ಸಮದ್, ರಿಜು ಬಸಪ್ಪ, ಕೃತಿಕ್, ವಿನೋದ್, ಕಾರ್ಯದರ್ಶಿಯಾಗಿ ದೇವೇಂದ್ರ, ಸಹ ಕಾರ್ಯದರ್ಶಿಯಾಗಿ ವೇಣು, ಮಾಧ್ಯಮ ಸಲಹೆಗಾರರಾಗಿ ಟಿ.ಆರ್. ಪ್ರಭುದೇವ್, ಜಯಪ್ರಕಾಶ್, ಕಾನೂನು ಸಲಹೆಗಾರರಾಗಿ ಶಿವಮೂರ್ತಿ, ನಿರ್ದೇಶಕರುಗಳಾಗಿ ವೆಂಕಿ, ಚಂದು, ಚಂದ್ರಶೇಖರ್, ಖಾಜಾ, ಇಲ್ಲುಬಾಯ್, ನೂತನ್, ಉಲ್ಲಾಸ್ ಕೃಷ್ಣ, ನಂದೀಶ್, ಇರ್ಫಾನ್ ಆಯ್ಕೆ ಆಗಿದ್ದಾರೆ.
"

ಜಿಲ್ಲೆಯ ಶೈಕ್ಷಣಿಕ ರಾಜಧಾನಿಯಾಗಿ ಗುರುತಿಸಿಕೊಂಡಿರುವ ವಾಣಿಜ್ಯನಗರ ಕುಶಾಲನಗರ ಕ್ರೀಡಾ ಚಟುವಟಿಕೆಗಳ ಮೂಲಕ ದೇಶದ ಗಮನ ಸೆಳೆದಿದೆ. ಇಲ್ಲಿ ಪ್ರತಿ ವರ್ಷ ಉತ್ಸವದ ಮಾದರಿಯಲ್ಲಿ ನಡೆಯುವ ಲೆಜೆಂಡ್ ಕ್ರಿಕೆಟ್ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ. ಕೊಡಗಿನ ಇತರ ಭಾಗಗಳಿಗೆ ಹೋಲಿಸಿದರೆ ವರ್ಷದ ಬಹುತೇಕ ದಿನಗಳು ಇಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಪೂರಕ ವಾತಾವರಣ ಇರುತ್ತದೆ. ಈಗ ತಾಲೂಕು ಕೇಂದ್ರವಾಗಿಯೂ ಗುರುತಿಸಿಕೊಂಡಿದೆ. ಹಾಗಾಗಿ ಇಲ್ಲಿಗೊಂದು ತಾಲೂಕು ಕ್ರೀಡಾಂಗಣದ ಅಗತ್ಯ ದೊಡ್ಡ ಮಟ್ಟದಲ್ಲಿ ಕಂಡುಬAದಿರುವುದರಿAದ ಇದಕ್ಕಾಗಿ ಹೋರಾಟ ರೂಪಿಸಲಾಗುತ್ತಿದೆ.

"

ರಾಜ್ಯಕ್ಕೆ ಮುಖ್ಯಮಂತ್ರಿ ಒಬ್ಬರನ್ನು ಕೊಡುಗೆಯಾಗಿ ಕೊಟ್ಟ ಊರು ಕುಶಾಲನಗರ. ಆರ್. ಗುಂಡೂರಾವ್ ಅವರ ದೂರದೃಷ್ಟಿಯ ಫಲವಾಗಿಯೇ ಈ ಊರು ಇಂದು ಇಷ್ಟರ ಮಟ್ಟಿಗೆ ಅಭಿವೃದ್ಧಿ ಸಾಧಿಸಿದೆ. ಕುಶಾಲನಗರ ತಾಲೂಕು ಆಗಬೇಕು ಎನ್ನುವ ಅವರ ಕನಸು ಈಗಾಗಲೇ ಈಡೇರಿದೆ. ಕೂಡಿಗೆಗೆ ಕ್ರೀಡಾಶಾಲೆ ತಂದಿದ್ದ ಗುಂಡೂರಾವ್ ಅವರು ಜಿಲ್ಲೆಯಿಂದ ಕ್ರೀಡಾ ಕ್ಷೇತ್ರಕ್ಕೆ ಸಾಧಕರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎನ್ನುವ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದರು. ಇದಕ್ಕೆ ಪೂರಕವಾಗಿ ಕುಶಾಲನಗರಕ್ಕೆ ಗುಂಡೂರಾವ್ ಹೆಸರಿನಲ್ಲಿ ಕ್ರೀಡಾಂಗಣ ಬರಲೇಬೇಕಿದೆ.

"

ಒಂದು ಊರು ಆರೋಗ್ಯಯುತವಾಗಿ ಇರಬೇಕು ಎಂದರೆ ಅಲ್ಲಿಗೆ ಸುಸಜ್ಜಿತ ಕ್ರೀಡಾಂಗಣದ ಅಗತ್ಯ ಇರುತ್ತದೆ. ಒಳ್ಳೆಯ ಕ್ರೀಡಾ ಮೈದಾನಗಳು ಇದ್ದಾಗ ಸಹಜವಾಗಿ ಯುವಜನತೆ ಕ್ರೀಡಾ ಚಟುವಟಿಕೆಗಳತ್ತ ಆಸಕ್ತರಾಗುತ್ತದೆ. ಇದರಿಂದ ಅವರು ದುಶ್ಚಟಗಳಿಂದ ದೂರ ಉಳಿಯಲು ಸಾಧ್ಯವಾಗುತ್ತದೆ. ಹಾಗಾಗಿ ಕುಶಾಲನಗರಕ್ಕೆ ಗುಂಡೂರಾವ್ ಹೆಸರಿನಲ್ಲಿ ಕ್ರೀಡಾಂಗಣ ತರುವ ಸಲುವಾಗಿ ಹಂತ ಹಂತವಾಗಿ ಹೋರಾಟ ಮಾಡಲಾಗುವುದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗದುಕೊಂಡು ಕ್ರೀಡಾಂಗಣದ ಕನಸು ನನಸು ಮಾಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net