ಕೂಡಿಗೆ ಗ್ರಾಮ ಪಂಚಾಯಿತಿಯಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ವಿಶೇಷ ಗ್ರಾಮ ಸಭೆ ಅಧ್ಯಕ್ಷ ಕೆ.ಟಿ.ಗಿರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಜಯಶ್ರೀ, ಟಿ.ಪಿ.ಹಮೀದ್, ಮೋಹಿನಿ, ಅನಂತ, ವಾಣಿ, ಮಂಗಳಾ, ಡಾ.ಕೆ.ನಾಗರಾಜ್, ಮಂಜುಳಾ, ಪುನೀತ್ ಇದ್ದರು.
ಕುಶಾಲನಗರ:ಕೂಡಿಗೆ ಗ್ರಾಮ ಪಂಚಾಯಿತಿ ವತಿಯಿಂದ 2025-26ನೇ ಸಾಲಿನ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ವಿಶೇಷ ಗ್ರಾಮ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ.ಗಿರೀಶ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.
ಸಭೆಯ ಆರಂಭದಲ್ಲಿ ಮೊದಲಿಗೆ ಕೂಡಿಗೆ ಗ್ರಾಮ ವ್ಯಾಪ್ತಿಯಲ್ಲಿ ಹಿಂದು ರುದ್ರಭೂಮಿ, ಕಾವೇರಿ ನದಿಗೆ ತೆರಳುವ ದಾರಿ ಹಾಗೂ ಈಗಾಗಲೇ ನಿರ್ಮಾಣಗೊಂಡಿರುವ ಸೋಪಾನ ಕಟ್ಟೆಯನ್ನು ದುರಸ್ತಿಪಡಿಸಿಕೊಡಬೇಕು ಎಂದು ಗ್ರಾಮಸ್ಥರಾದ ಕೆ.ಪಿ.ಸೋಮಣ್ಣ, ಕೆ.ಎಂ.ನಾಗರಾಜ್ ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಸಮೀಪದಲ್ಲಿರುವ ಕೂಡಿಗೆ ಸರ್ಕಲ್‌ನಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಿಸುವಂತೆ ಸ್ಥಳೀಯರಾದ ಕೆ.ಇ. ರಾಜಣ್ಣ, ಗಣೇಶ್ ಸೇರಿದಂತೆ ಅನೇಕರು ಸಭೆಯ ಗಮನಕ್ಕೆ ತಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಕೆ.ಟಿ.ಗಿರೀಶ್ ಮಾತನಾಡಿ, ಕೂಡಿಗೆ ಸರ್ಕಲ್‌ನಲ್ಲಿ ಪ್ರಮುಖವಾಗಿ ಹೈಟೆಕ್ ಮಾದರಿಯ ಶೌಚಗೃಹ ನಿರ್ಮಾಣ ಮಾಡುವ ಎಲ್ಲ ಕ್ರಿಯಾ ಯೋಜನೆ, ಅದಕ್ಕೆ ಸಂಬಂಧಿಸಿದ ಪತ್ರ ವ್ಯವಹಾರವನ್ನು ಇಲಾಖೆಯ ನಿಯಮಾನುಸಾರ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗೆ ಕಳುಹಿಸಲಾಗಿದೆ. ಶೌಚಗೃಹ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಾಗದ ಸಮಸ್ಯೆಯಿಂದಾಗಿ ನಿಧಾನಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆ ಸಹಕಾರದೊಂದಿಗೆ ಜಾಗ ಗುರುತಿಸಿ ಶೌಚಗೃಹ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ಟಿ.ಪಿ.ಹಮೀದ್, ಮೋಹಿನಿ, ಅನಂತ, ವಾಣಿ, ಮಂಗಳಾ, ಹಿರಿಯ ಪಶುವೈದ್ಯಾಧಿಕಾರಿ ಡಾ.ಕೆ.ನಾಗರಾಜ್, ಪಿಡಿಒ ಮಂಜುಳಾ, ಕಾರ್ಯದರ್ಶಿ ಪುನೀತ್ ಇದ್ದರು.