ಹಿಂದಿನ ಸಭೆಯ ನಿರ್ಣಯಗಳನ್ನು ಅನುಷ್ಠಾನಗೊಳಿಸಿ

ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 2025-26ನೇ ಸಾಲಿನ ಗ್ರಾಮಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು.
ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 2025-26ನೇ ಸಾಲಿನ ಗ್ರಾಮಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು.
Published on
ಕುಶಾಲನಗರ: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 2025-26ನೇ ಸಾಲಿನ ಗ್ರಾಮಸಭೆಯನ್ನು ಅಧ್ಯಕ್ಷೆ ಜಿ.ಟಿ. ಶೋಭಾ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ತೊರೆನೂರು ಬಯಲು ರಂಗಮಂದಿರದಲ್ಲಿ ಏರ್ಪಡಿಸಲಾಗಿತ್ತು.
ಹಿಂದಿನ ಸಭೆಯ ನಿರ್ಣಯಗಳನ್ನು ಅನುಷ್ಠಾನಗೊಳಿಸಿದ ಬಗ್ಗೆ, ಚರ್ಚೆಯಾದ ವಿಷಯಗಳ ಬಗ್ಗೆ ಆಯಾ ಇಲಾಖೆಗೆ ಪತ್ರ ವ್ಯವಹಾರ ಮಾಡಿದರೂ ಕೆಲವು ಇಲಾಖೆಯಿಂದ ಸಮರ್ಪಕ ಸ್ಪಂದನೆ ಸಿಗದಿದ್ದುದರಿಂದ ಅವುಗಳಿಗೆ ಸಂಬಂಧಿಸಿದಂತೆ ಗ್ರಾಮಸ್ಥರಾದ ಟಿ.ಕೆ.ಪಾಂಡುರಂಗ, ಅಳುವಾರ ಮೂರ್ತಿ, ಶಿವಣ್ಣ, ಪ್ರಕಾಶ್, ಪಿ.ಡಿ.ರವಿ, ವಸಂತ್, ಮಂಜುನಾಥ ಸೇರಿದಂತೆ ಹಲವರು ನಿರ್ಣಯಗಳನ್ನು ಅನುಷ್ಠಾನಗೊಳಿಸುವಂತೆ ಆಗ್ರಹಿಸಿದರು.
ಕೆಲವು ಇಲಾಖೆಯವರು ಕೆಡಿಪಿ ಸಭೆಯಲ್ಲಿ ಮಾಹಿತಿ ನೀಡಿದರೆ ಉಳಿದ ಇಲಾಖೆಯವರನ್ನು ಗ್ರಾಮ ಪಂಚಾಯತಿ ಮಾಸಿಕ ಸಭೆಯ ಸಂಧರ್ಭದಲ್ಲಿ ಸಭೆಗೆ ಬರಮಾಡಿ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಕಾರ್ಯಗತಗೊಳಿಸಲು ಪ್ರಯತ್ನ ಮಾಡುವಂತೆ ಹಾಜರಿದ್ದ ಗ್ರಾಮಸ್ಥರು ಒತ್ತಾಯಿಸಿದರು.
ಸಭೆಯಲ್ಲಿ ಹಾಜರಿದ್ದ ಕಂದಾಯ, ಅಬಕಾರಿ, ವಿದ್ಯುತ್, ಅರಣ್ಯ, ಪಶುಪಾಲನಾ ಇಲಾಖೆ, ನೀರಾವರಿ ಇಲಾಖೆ, ಗ್ರಾಮೀಣ ಕುಡಿಯುವ ನೀರಿನ ಸರಬರಾಜು ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ ಸೇರಿದಂತೆ ಹತ್ತಕ್ಕೂ ಹೆಚ್ಚು ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಸವಲತ್ತುಗಳ ಬಗ್ಗೆ, ಕಾಮಗಾರಿ ನಡೆಯುತ್ತಿರುವ ಬಗ್ಗೆ, ಗ್ರಾಮಸ್ಥರು ತಿಳಿಸಿದ ಯೋಜನೆಯನ್ನು ಕೈಗೊಳ್ಳುವ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜಿ.ಟಿ.ಶೋಭಾ ಮಾತನಾಡಿ, ಗ್ರಾಮ ಸಭೆಯಲ್ಲಿ ಚರ್ಚೆಯಾದ ವಿಷಯಗಳನ್ನು ಈಗಾಗಲೇ ಗ್ರಾಮ ಪಂಚಾಯಿತಿ ನೋಂದಣಿ ಪುಸ್ತಕದಲ್ಲಿ ನೋಂದಣಿ ಮಾಡಲಾಗಿದ್ದು, ಅದರ ಮುಖೇನ ಕ್ರಮ ವಹಿಸಲಾಗುವುದು ಎಂದರು.
ಸಭೆಯಲ್ಲಿ ಉಪಾಧ್ಯಕ್ಷೆ ರೂಪಾ ಮಹೇಶ್, ಸದಸ್ಯರಾದ ಶಿವಕುಮಾರ್, ದೇವರಾಜ್, ಮಹದೇವ, ಯೋಶೋದಾ, ಸಾವಿತ್ರಿ, ನಿಂಗಾಜಮ್ಮ, ತೊರೆನೂರು ಸಹಕಾರ ಸಂಘದ ಅಧ್ಯಕ್ಷ ಟಿ.ಕೆ. ಜಗದೀಶ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಸಂಜೀವಯ್ಯ, ಅಭಿವೃದ್ಧಿ ಅಧಿಕಾರಿ ಶ್ಯಾಮ್ , ಸೇರಿದಂತೆ ತೊರೆನೂರು, ಅಳುವಾರ, ಸಿದ್ದಲಿಂಗಪುರ, ಅರಸಿನಗುಪ್ಪೆ, ಬಸರಿನಗುಪ್ಪೆ ಗ್ರಾಮಸ್ಥರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net