ಜೀರ್ಣೋದ್ಧಾರಗೊಂಡ ಅಂಗನವಾಡಿ ಉದ್ಘಾಟನೆ

ಮಾದಾಪಟ್ಟಣ ಅಂಗನವಾಡಿ ಕೇಂದ್ರ-1ರ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿ.ಪಿ.ಶಶಿಧರ್, ದಾಮೋದರ್, ರುಕ್ಮಿಣಿ ಇತರರಿದ್ದರು.
ಮಾದಾಪಟ್ಟಣ ಅಂಗನವಾಡಿ ಕೇಂದ್ರ-1ರ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿ.ಪಿ.ಶಶಿಧರ್, ದಾಮೋದರ್, ರುಕ್ಮಿಣಿ ಇತರರಿದ್ದರು.
Published on

ಕುಶಾಲನಗರ:

ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವಿಶೇಷ ಅನುದಾನದಡಿ ನಾಲ್ಕೂವರೆ ಲಕ್ಷ ರೂ.ವೆಚ್ಚದಲ್ಲಿ ನವೀಕರಣಗೊಂಡ ಮಾದಾಪಟ್ಟಣ ಅಂಗನವಾಡಿ ಕೇಂದ್ರ-1ರ ಉದ್ಘಾಟನಾ ಕಾರ್ಯಕ್ರಮ ಶನಿವಾರ ನಡೆಯಿತು.

ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಆಧುನೀಕರಣಗೊಂಡ ಅಂಗನವಾಡಿ ಕೇಂದ್ರಕ್ಕೆ ಚಾಲನೆ ನೀಡಿದರು.
ಮಾದಾಪಟ್ಟಣದ ಕಾಂಗ್ರೆಸ್ ಮುಖಂಡ ದಾಮೋದರ್ ಮಾತನಾಡಿ, 4 ದಶಕಗಳ ಹಳೆಯದಾದ ಅಂಗನವಾಡಿ ಕೇಂದ್ರಕ್ಕೆ ಕಳೆದ 3 ದಶಕಗಳಿಂದ ಕಾಯಂ ಶಿಕ್ಷಕರ ನೇಮಕಾತಿಯಾಗಿಲ್ಲ. ಶಿಕ್ಷಕರಿಲ್ಲದೆ ಹಲವು ವರ್ಷ ಈ ಕೇಂದ್ರಕ್ಕೆ ಬೀಗ ಜಡಿಯಲಾಗಿತ್ತು. ಬೇರೆ ಊರಿನವರನ್ನು ಇಲ್ಲಿಗೆ ನೇಮಕಾತಿ ಮಾಡುವ ಬದಲು ಕುಟುಂಬ ಸಹಿತ ಇದೇ ಗ್ರಾಮದಲ್ಲಿ ವಾಸವಿರುವವರಿಗೆ ಆದ್ಯತೆ ನೀಡಿ ಶಿಕ್ಷಕಿಯಾಗಿ ನೇಮಕಾತಿ ಮಾಡಬೇಕಿದೆ. ಹಾಗಾದಾಗ ಮಾತ್ರ ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗಲಿದೆ. ಜತೆಗೆ ಸಹಾಯಕಿ ನೇಮಕಾತಿಯ ಅಗತ್ಯವಿದೆ ಎಂದು ಆಗ್ರಹಿಸಿದರು.
ಪೋಷಕಿ ಶಶಿಕಲಾ ಮತ್ತು ಗುಡ್ಡೆಹೊಸೂರು ಗ್ರಾಪಂ ಮಾಜಿ ಅಧ್ಯಕ್ಷೆ ರುಕ್ಮಿಣಿ ಮಾತನಾಡಿ, ಶಿಥಿಲಗೊಂಡಿದ್ದ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕಳುಹಿಸಲು ಹಿಂಜರಿಕೆಯಿತ್ತು. ಇದೀಗ ಕಟ್ಟಡಕ್ಕೆ ಕಾಯಕಲ್ಪ ದೊರೆತಿರುವುದು ಪಾಲಕರಲ್ಲಿ ಆತಂಕ ದೂರಮಾಡಿದೆ ಎಂದರು.
ಸ್ಥಳೀಯರ ಮನವಿಗೆ ಸ್ಪಂದಿಸಿ ಸಮಾತನಾಡಿದ ವಿ.ಪಿ.ಶಶಿಧರ್, ಮಕ್ಕಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸಲು, ಶಿಕ್ಷಣದ ಬಗ್ಗೆ ಕುತೂಹಲ ಉಂಟುಮಾಡಲು ಇಂತಹ ಪರಿಣಾಮಕಾರಿ ಪ್ರಯತ್ನಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ತುಂಬ ಹಳೆಯ ಕಟ್ಟಡವನ್ನು ಪುನರುಜ್ಜೀವನಗೊಳಿಸಿ ಈ ಭಾಗದ ಬಡ ವರ್ಗದ ಮಕ್ಕಳಿಗೆ ಆಶಾದಾಯಕ ವಾತಾವರಣ ಕಲ್ಪಿಸಿರುವುದು ಶ್ಲಾಘನೀಯ ಎಂದರು.
ಅಗತ್ಯ ಮಾನದಂಡಗಳ ಅನುಸಾರವಾಗಿ ಆದ್ಯತೆ ಮೇರೆಗೆ ಇಲ್ಲಿಗೆ ಕಾಯಂ ಶಿಕ್ಷಕಿಯ ನೇಮಕಾತಿ ಮಾಡಬೇಕೆನ್ನುವ ಪಾಲಕರ ಒತ್ತಾಸೆಯಂತೆ ಸ್ಥಳೀಯರನ್ನೇ ಶಿಕ್ಷಕಿಯಾಗಿ ನೇಮಿಸುವ ಕುರಿತು ಆಯ್ಕೆಪಟ್ಟಿ ಪರಿಶೀಲಿಸಲಾಗುವುದು ಎಂದರು.
ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಸದಸ್ಯ ಆದಂ, ಗುಡ್ಡೆಹೊಸೂರು ವಲಯ ಯುವ ಘಟಕ ಅಧ್ಯಕ್ಷ ವಿಜಯ್, ಬೂತ್ ಅಧ್ಯಕ್ಷ ಎಚ್.ಕೆ.ಮಹೇಶ್, ಗ್ರಾಮದ ಎಂ.ಎಂ. ಬಸವರಾಜು., ಎಂ.ಎಲ್.ಪ್ರಕಾಶ್, ಎಂ.ಆರ್.ರವಿ, ಶಿಕ್ಷಕಿ ರೂಪಶ್ರೀ, ಗುತ್ತಿಗೆದಾರ ಸಿದ್ದಿಕ್, ಪಾಲಕರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net