ಕುಶಾಲನಗರದ ಆರ್. ಸಿ. ಬಡಾವಣೆಯಲ್ಲಿ ಮೌಲಾನಾ ಆಜಾದ್ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಮಂತರಗೌಡ ಭೂಮಿಪೂಜೆ ನೆರವೇರಿಸಿದರು. ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್, ಶಬ್ಬೀರ ಅಹಮದ್, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಶಾಲಾ ಮುಖ್ಯಶಿಕ್ಷಕಿ ಎಂ.ಎಸ್. ಸೌಮ್ಯಾ ಇದ್ದರು.
ಕುಶಾಲನಗರ : ಕುಶಾಲನಗರದ ಆರ್. ಸಿ. ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಮೌಲಾನಾ ಆಜಾದ್ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಮಂತರಗೌಡ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಈ ಶಾಲೆಯಲ್ಲಿ 6 ರಿಂದ 10 ನೇ ತರಗತಿ ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಸೌಲಭ್ಯ ಸಿಗಲಿದೆ. ಅಲ್ಪಸಂಖ್ಯಾತ ವರ್ಗದ ಶೇ.75 ಹಾಗೂ ಇತರ ಸಮುದಾಯಗಳ ಶೇ. 25 ಮಕ್ಕಳಿಗೆ ಪ್ರವೇಶ ದೊರಕಲಿದೆ. ಎಲ್ಲರೂ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡುವ ಮೂಲಕ ಮಕ್ಕಳನ್ನು ಆದರ್ಶ ವ್ಯಕ್ತಿಗಳಾಗಿ ರೂಪಿಸ ಬೇಕು ಎಂದರು.
ಬಡಾವಣೆಯ ನಿವಾಸಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಉದ್ದೇಶಿತ ಕಟ್ಟಡದ ಜಾಗದ ಬಳಿ ಇರುವ ಉದ್ಯಾನವನವನ್ನು ಅಭಿವೃದ್ಧಿ ಪಡಿಸುವುದಾಗಿ ಶಾಸಕರು ಭರವಸೆ ನೀಡಿದರು.
ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್, ಶಬ್ಬೀರ ಅಹಮದ್, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಶಾಲಾ ಮುಖ್ಯಶಿಕ್ಷಕಿ ಎಂ.ಎಸ್. ಸೌಮ್ಯಾ ಇದ್ದರು.
ಇಲಾಖೆಯ ಅಧಿಕಾರಿಗಳು ಗೈರು: ಅಲ್ಪಸಂಖ್ಯಾತ ಇಲಾಖೆಯ ಅನುದಾನದಡಿ ನಿರ್ಮಾಣ ಗೊಳ್ಳಲಿರುವ ಆಜಾದ್ ಶಾಲಾ ಕಟ್ಟಡದ ಭೂಮಿಪೂಜೆ ಸಂದರ್ಭ ಅಗತ್ಯ ಮಾಹಿತಿ ಪಡೆಯಲು ಶಾಸಕ ಡಾ.ಮಂತರಗೌಡ ಮುಂದಾದಾಗ ಸಂಬಂಧಿಸಿದ ಇಲಾಖೆಯ ಯಾವ ಅಧಿಕಾರಿಗಳೂ ಅಲ್ಲಿ ಇರಲಿಲ್ಲ. ಕಾಮಗಾರಿ ನಿರ್ಮಾಣ ಸಂಸ್ಥೆಯ ಅಭಿಯಂತರರೂ ಗೈರು ಹಾಜರಾಗಿದ್ದರು. ಇದರಿಂದ ಶಾಸಕರು
ಗರಂ ಆದರು. ಗುತ್ತಿಗೆದಾರರು ಮಾಹಿತಿಯನ್ನು ಶಾಸಕರಿಗೆ ನೀಡಿದರು. ಕಟ್ಟಡ ಕಾಮಗಾರಿ ಶೀಘ್ರಗತಿಯಲ್ಲಿ ನಡೆಯಬೇಕು. ಕಟ್ಟಡವಿಲ್ಲದೇ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಸೌಕರ್ಯ ದೊರಕುವಂತಾಗಬೇಕು ಎಂದು ಶಾಸಕರು ಸೂಚಿಸಿದರು.