ಕೊಡಗು ಮತ್ತು ಕೇರಳ ಮಧ್ಯೆ ಬಾಂಧವ್ಯದ ಸಂಕೇತವಾದ ಕಣ್ಣೂರಿನ ಉಳಿಕಲ್ ಗ್ರಾಮದ ಶ್ರೀ ಬೈತೂರಪ್ಪ ದೇವಾಲಯದ ಕೋಮರತಚ್ಚನ್ (ದರ್ಶನ ಪಾತ್ರಿ) ಸಂಪ್ರದಾಯದAತೆ ಬುಧವಾರ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಆಶೀರ್ವದಿಸಿದರು. ಪಂಚೆ, ಕೊರಳಲ್ಲಿ ಹೂವಿನ ಹಾರ ಧರಿಸಿ, ಕೈಯಲ್ಲಿ ಖಡ್ಗ ಹಿಡಿದು ಅಡಕೆ ಹಾಳೆಯಿಂದ ಮಾಡಿದ ವಿಶೇಷ ಛತ್ರಿಯ ನೆರಳಿನಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಕೋಮರತಚ್ಚನ್ ಅಲ್ಲಿಗೆ ವಿವಿಧ ಕೆಲಸಗಳಿಗೆ ಆಗಮಿಸಿದ ಸಾರ್ವಜನಿಕರ ಗಮನ ಸೆಳೆದರು. ನಂತರ ಡಿಸಿ ಚೇಂಬರ್ ಒಳಗೆ ತೆರಳಿ ಜಿಲ್ಲಾಧಿಕಾರಿ ಎಸ್.ಜಿ. ಸೋಮಶೇಖರ್ ಅವರಿಗೆ ಆಶೀರ್ವದಿಸಿದರು. ಕೋಮರತಚ್ಚನ್ ಜತೆಗೆ ಬಂದಿದ್ದವರು ಭೇಟಿಯ ಮಹತ್ವದ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು. ನಂತರ ಜಿಲ್ಲಾ ಖಜಾನೆ, ಕೋಟೆಗೂ ಭೇಟಿ ನೀಡಿದ್ದರು. ಕೇರಳದ ಕಣ್ಣೂರಿನ ಉಳಿಕಲ್ ಗ್ರಾಮದ ಶ್ರೀ ಬೈತೂರಪ್ಪ ದೇವಾಲಯದಲ್ಲಿ ನಡೆಯುವ ವಾರ್ಷಿಕ ಉತ್ಸವ ಹಿನ್ನೆಲೆಯಲ್ಲಿ ವರ್ಷಂಪ್ರತಿಯAತೆ ಈ ಬಾರಿಯೂ ಕೋಮರತಚ್ಚನ್ ಜಿಲ್ಲೆಯಲ್ಲಿ ಸಂಚಾರ ನಡೆಸುತ್ತಿದ್ದಾರೆ.