ಕೊಡವರಿಗೆ ಸಾಂವಿಧಾನಿಕ ರಕ್ಷಣೆ ಅಗತ್ಯ

 ಕೊಡವ ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ ಮಡಿಕೇರಿಯ ಹೊರ ವಲಯದಲ್ಲಿ ನಡೆದ ಕೊಡವರಿಗೆ ವಿಶೇಷ ಸ್ಥಾನಮಾನ, ಸಾಂವಿಧಾನಿಕ ಮಾರ್ಗಗಳು ಮತ್ತು ಅಂತರಾಷ್ಟ್ರೀಯ ಕಾನೂನು ವಿಷಯದ ಕುರಿತ  ರಾಷ್ಟ್ರೀಯ ವಿಚಾರ ಸಂಕಿರಣವನ್ನು ಬಂದೂಕಿನಿಂದ ಗುಂಡು ಹಾರಿಸುವ ಮೂಲಕ ಉದ್ಘಾಟಿಸಲಾಯಿತು. ವಿಕ್ರಮ ಹೆಗ್ಡೆ, ಎನ್.ಯು. ನಾಚಪ್ಪ, ಕೆ.ಪಿ. ಬಾಲಸುಬ್ರಹ್ಮಣ್ಯ ಮತ್ತಿತರರು ಇದ್ದರು.
ಕೊಡವ ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ ಮಡಿಕೇರಿಯ ಹೊರ ವಲಯದಲ್ಲಿ ನಡೆದ ಕೊಡವರಿಗೆ ವಿಶೇಷ ಸ್ಥಾನಮಾನ, ಸಾಂವಿಧಾನಿಕ ಮಾರ್ಗಗಳು ಮತ್ತು ಅಂತರಾಷ್ಟ್ರೀಯ ಕಾನೂನು ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಬಂದೂಕಿನಿಂದ ಗುಂಡು ಹಾರಿಸುವ ಮೂಲಕ ಉದ್ಘಾಟಿಸಲಾಯಿತು. ವಿಕ್ರಮ ಹೆಗ್ಡೆ, ಎನ್.ಯು. ನಾಚಪ್ಪ, ಕೆ.ಪಿ. ಬಾಲಸುಬ್ರಹ್ಮಣ್ಯ ಮತ್ತಿತರರು ಇದ್ದರು.
Published on
ಮಡಿಕೇರಿ
ಭಾರತದ ಬಹುತ್ವವನ್ನು ಕಾಪಾಡಿಕೊಳ್ಳಲು ಕೊಡವರ ವಿಶಿಷ್ಟ ಗುರುತನ್ನು ರಕ್ಷಿಸುವುದು ಅತ್ಯಗತ್ಯ. ನಿಜವಾದ ಒಕ್ಕೂಟ ವ್ಯವಸ್ಥೆಯಲ್ಲಿ ಕೊಡವರಿಗೆ ಸಾಂವಿಧಾನಿಕ ರಕ್ಷಣೆಯನ್ನು ನೀಡುವ ಅಗತ್ಯವಿದೆ. ಇದು ಭಾರತೀಯ ಸಂವಿಧಾನದ ಚೌಕಟ್ಟಿನೊಳಗೆ ಒಂದು ಕಾನೂನುಬದ್ಧ ಬೇಡಿಕೆಯಾಗಿದೆ ಎಂದು ಸುಪ್ರೀಂ ಕೋರ್ಟ್ ವಕೀಲ ವಿಕ್ರಮ್ ಹೆಗ್ಡೆ ಪ್ರತಿಪಾದಿಸಿದರು.
ಕೊಡವ ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ ಮಡಿಕೇರಿಯ ಹೊರ ವಲಯದಲ್ಲಿ ಶುಕ್ರವಾರವ ನಡೆದ ಕೊಡವರಿಗೆ ವಿಶೇಷ ಸ್ಥಾನಮಾನ, ಸಾಂವಿಧಾನಿಕ ಮಾರ್ಗಗಳು ಮತ್ತು ಅಂತರಾಷ್ಟ್ರೀಯ ಕಾನೂನು ವಿಷಯದ ಕುರಿತ ಶ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಕೊಡಗನ್ನು ವ್ಯವಸ್ಥಿತವಾಗಿ ದೊಡ್ಡ ಕ್ಷೇತ್ರಗಳೊಂದಿಗೆ ವಿಲೀನಗೊಳಿಸಲಾಗಿದೆ. ಮುಂಬರುವ ಕ್ಷೇತ್ರ ಪುನರ್ವಿಂಗಡಣೆಯ ಸಂದರ್ಭ ಕೊಡಗಿಗೆ ಪ್ರತ್ಯೇಕ ಲೋಕಸಭಾ ಸ್ಥಾನವನ್ನು ಕಲ್ಪಿಸುವುದಕ್ಕೆ ಪೂರಕವಾಗಿ ಚುನಾವಣಾ ಆಯೋಗಕ್ಕೆ ದತ್ತಾಂಶ ಆಧಾರಿತ, ವಸ್ತುನಿಷ್ಠ ವಾದಗಳನ್ನು ಮಂಡಿಸಬೇಕಾಗುತ್ತದೆ.
ಹಿಂದೆ ತನ್ನದೇ ಆದ 24 ಸದಸ್ಯರ ವಿಧಾನಸಭೆಯನ್ನು ಹೊಂದಿದ್ದ ಸ್ವತಂತ್ರ ಪಾರ್ಟ್-ಸಿ ರಾಜ್ಯವಾಗಿದ್ದ ಕೊಡಗನ್ನು ದೊಡ್ಡ ಕ್ಷೇತ್ರಗಳಲ್ಲಿ ವಿಲೀನಗೊಳಿಸಲಾಗಿದೆ. ಪ್ರಸ್ತುತ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ, ಕೊಡಗಿನ ಮತದಾರರಿಗಿಂತ ಮೈಸೂರು ಮತದಾರರು 3:1 ರ ಅನುಪಾತದಲ್ಲಿ ಹೆಚ್ಚಾಗಿದ್ದಾರೆ, ಇದು ಸ್ವತಂತ್ರ ರಾಜಕೀಯ ಪ್ರಾತಿನಿಧ್ಯವನ್ನು ಕೊಡಗಿಗೆ ಅಸಾಧ್ಯವಾಗಿಸಿದೆ.
ಕೊಡಗಿಗೆ ಪ್ರತ್ಯೇಕ ಲೋಕಸಭಾ ಸ್ಥಾನವನ್ನು ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಮೈಸೂರಿನ ಬಯಲು ಸೀಮೆ ಮತ್ತು ಕೊಡಗಿನ ಸೂಕ್ಷ್ಮ, ಪರ್ವತಮಯ ಪಶ್ಚಿಮಘಟ್ಟಗಳ ಭೂಪ್ರದೇಶದ ಪ್ರತ್ಯೇಕವಾದ ಭೂ ಪರಿಸರದ ಚಿತ್ರಣದ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಇರೊಂದಿಗೆ ಇಲ್ಲಿನ ವಿಶಿಷ್ಟವಾದ ಜಮ್ಮಾ, ಸಾಗು ಮತ್ತು ಬಾಣೆ ಭೂ ಹಿಡುವಳಿಗಳು ಮತ್ತು ಜಿಲ್ಲೆಯ ತೋಟಗಾರಿಕೆ ಆಧಾರಿತ ಆರ್ಥಿಕತೆಯನ್ನು ದಾಖಲಿಸಬೇಕಾಗುತ್ತದೆ. ಇವೆಲ್ಲವುಗಳೊಂದಿಗೆ ಎಲ್ಲಾ ಸ್ಥಳೀಯ ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಗಳಲ್ಲಿ ಅಧಿಕೃತ ನಿರ್ಣಯಗಳನ್ನು ಅಂಗೀಕರಿಸುವಂತಾಗಬೇಕು.
ಕೊಡವ ಸಾಂಪ್ರದಾಯಿಕ ಕೋವಿ ಹಕ್ಕು ಕೊಡವರ ಸಾಂಸ್ಕೃತಿಕ ಮತ್ತು ಧಾರ್ಮಿಕ ಅಗತ್ಯವನ್ನು ವಿಶ್ಲೇಷಿಸುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯವು 1959 ರ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 41ರ ಅಡಿಯಲ್ಲಿ ವಿನಾಯಿತಿಯನ್ನು ಎತ್ತಿ ಹಿಡಿದಿದೆ. ಕೋವಿ ಹಕ್ಕಿಗೆ ಖಾಯಂ ಸಾಂವಿಧಾನಿಕ ರಕ್ಷಣೆಯ ಅಗತ್ಯತೆ ಇದೆ. ಸರಕಾರಿ ಅಧಿಸೂಚನೆಗಳು ಬದಲಾಗಬಹುದಾದ್ದರಿಂದ, ಈ ಹಕ್ಕನ್ನು ವಿಧಿ 25 ರ (ಧಾರ್ಮಿಕ ಸ್ವಾತಂತ್ರ‍್ಯದ ಹಕ್ಕು) ಅಡಿಯಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆ ಎಂದು ಶಾಶ್ವತವಾಗಿ ಸುರಕ್ಷಿತಗೊಳಿಸಬೇಕು.
ಜನನ, ಮರಣ, ಕೈಲ್ ಪೋವ್ದ್, ಪುತ್ತರಿಯಂತಹ ಕೊಡವ ಸಾಂಪ್ರದಾಯಿಕ ಆಚರಣೆಗಳು ಬಂದೂಕುಗಳಿಲ್ಲದೆ ಸಂಪೂರ್ಣವಾಗುವುದಿಲ್ಲ. ಕೊಡವರ ಕೋವಿ ಹಕ್ಕು ಸಿಖ್ಖರು ಧರಿಸುವ ಕೃಪಾನ್ ಸ್ಥಾನಮಾನಕ್ಕೆ ಹೊಂದಿಕೆಯಾಗುತ್ತದೆ. ಕೋವಿ-ಹಕ್ಕುಬವಿಧಿ 25 ಮತ್ತು 26ರ ಅಡಿಯಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆಗೆ ಸೇರ್ಪಡೆಯಾಗಬೇಕು.
ತನ್ನದೇ ಆದ ವಿಶಿಷ್ಟ ಭಾಷೆ, ಆಚರಣೆಗಳು, ವಂಶಾವಳಿ ಮತ್ತು ಪವಿತ್ರ ಸ್ಥಳಗಳನ್ನು ಹೊಂದಿರುವ ಸಣ್ಣ ಸಮುದಾಯವನ್ನು ರಾಷ್ಟ್ರ ಹೇಗೆ ನಡೆಸಿಕೊಳ್ಳಬೇಕು ಎನ್ನುವುದಕ್ಕೆ ಸಾಂವಿಧಾನಿಕ ಉತ್ತರವೆಂದರೆ, ನೀವು ತುಂಬಾ ಚಿಕ್ಕವರಾಗಿದ್ದೀರಿ ಎಂದು ಹೇಳುವುದಲ್ಲ, ಬದಲಿಗೆ, ನೀವು ವಿಶಿಷ್ಟರಾಗಿರುವುದರಿಂದ ನಿಮ್ಮ ಧ್ವನಿಯನ್ನು ರಕ್ಷಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಹಿರಿಯ ವಕೀಲ ಕೆ.ಪಿ. ಬಾಲಸುಬ್ರಹ್ಮಣ್ಯ, ಕೊಡವರು ಅತ್ಯಂತ ಅಪರೂಪದ ಜನಾಂಗವಾಗಿದ್ದು, ಅವರನ್ನು ಸಂವಿಧಾನದ ಅಡಿಯಲ್ಲಿ ರಕ್ಷಿಸುವುದು ಇಂದಿನ ಅಗತ್ಯವಾಗಿದೆ. ಕೊಡವ ಸಾಂವಿಧಾನಿಕ ಹಕ್ಕುಗಳಿಗಾಗಿ ಸಿಎನ್‌ಸಿಯ 36 ವರ್ಷಗಳ ಶಾಂತಿಯುತ ಹೋರಾಟ ಹಾಗೂ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ಅಚಲ ಬದ್ಧತೆ ಶ್ಲಾಘನೀಯವಾಗಿದೆ. ಇವರ ಹೋರಾಟವನ್ನು ಕೊಡವರು ಬೆಂಬಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಕೊಡವರಿಗಾಗಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತವನ್ನು ಸಾಧಿಸುವ ತಮ್ಮ ಸಂಕಲ್ಪವನ್ನು ಪುನರುಚ್ಚರಿಸಿದರು.
ಕಳೆದ 36 ವರ್ಷಗಳಿಂದ ಶಾಂತಿಯುತವಾಗಿ ನಡೆಯುತ್ತಿರುವ ಈ ಹೋರಾಟವು, ಅತೀ ಸಣ್ಣ ಹಾಗೂ ಸೂಕ್ಷ್ಮ ಸಮುದಾಯವಾದ ಕೊಡವರಿಗೆ ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಸಾಂವಿಧಾನಿಕ ರಕ್ಷಣೆಯನ್ನು ನೀಡುವವರೆಗೆ ಮುಂದುವರೆಯಲಿದೆ. ಕೊಡವರ ಕೋವಿಗೆ 1949 ರಲ್ಲಿ ಸರ್ದಾರ್ ಪಟೇಲರು ನೀಡಿದ ಸಂಸದೀಯ ಮನ್ನಣೆ. ಶಾಸ್ತ್ರೀಯ ಕೊಡವ ಗುರುತನ್ನು ಮರುಸ್ಥಾಪಿಸಿದ 2021 ಡಿ.8 ರ ಕರ್ನಾಟಕ ಹೈಕೋರ್ಟ್ನ ತೀರ್ಪು, ಶಸ್ತ್ರಾಸ್ತ್ರ ಕಾಯ್ದೆ 2029 ರ ಅವಧಿ ಮುಗಿದ ನಂತರವೂ ಕೋವಿ-ತೋಕ್ ಗೆ ಶಾಶ್ವತ ವಿನಾಯಿತಿ ನೀಡುವುದು, ಪರಕೀಯ ರಾಜರು ಮತ್ತು ಬ್ರಿಟಿಷರು ವಶಪಡಿಸಿಕೊಂಡ ವಂಶಪಾರಂಪರ್ಯ ಜಮ್ಮಾಬಾಣೆ ಭೂಮಿಯ ಮರುಸ್ಥಾಪನೆ. ಅಂತರಾಷ್ಟ್ರೀಯ ಕಾನೂನಿನಡಿ ಕಂದಾಯ ರೈತರು ಮತ್ತು ಆದಿಮ ಸಂಜಾತ ಜನಾಂಗೀಯ ರೈತರ ನಡುವಿನ ವ್ಯತ್ಯಾಸ ಗುರುತಿಸಿಸುವಿಕೆ, ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯದ ಸಂಘ ಅಮೂರ್ತ ಕ್ಷೇತ್ರದ ಮಾದರಿಯಲ್ಲಿ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ನಂದೇಟಿರ ಕವಿತಾ ಸುಬ್ಬಯ್ಯ, ಪುಲ್ಲೇರ ಸ್ವಾತಿ ಕಾಳಪ್ಪ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಪಟ್ಟಮಾಡ ಲಲಿತಾ ಗಣಪತಿ, ಅಪ್ಪಾರಂಡ ನಂದಿನಿ ನಂಜಪ್ಪ, ಅಜ್ಜಿನಿಕಂಡ ಗಾನ ಮಾಚಯ್ಯ, ನಂದಿನೆರವಂಡ ನಿಶಾ ಅಚ್ಚಯ್ಯ, ನಂದಿನೆರವಂಡ ಸುಮಿತ್ರಾ ದಿನೇಶ್, ಅಚ್ಚಕಾಳೇರ ಸವಿತಾ ಮೊಣ್ಣಪ್ಪ, ಅಮ್ಮಯ್ಯಂಡ ಮೈನಾ, ಅಳಮಂಡ ಜೈ ಗಣಪತಿ, ಪಟ್ಟಮಾಡ ಕುಶ, ಬಾಚರಣಿಯಂಡ ಚಿಪ್ಪಣ್ಣ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net