ವಿಶೇಷ ಪರಿಕಲ್ಪನೆಯೊಂದಿಗೆ ಕೊಡವಾಮೆರ ಅರ್ತಿ ಸಪ್ತಾಹ ಆಚರಣೆ

ಗೋಣಿಕೊಪ್ಪ ಕಾವೇರಿ ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿದರು. ಡಾ.ಕಾಳೀಮಾಡ ಶಿವಪ್ಪ, ಡಾ.ಪುಷ್ಪಾ ಕುಟ್ಟಣ್ಣ ಇದ್ದರು.
ಗೋಣಿಕೊಪ್ಪ ಕಾವೇರಿ ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿದರು. ಡಾ.ಕಾಳೀಮಾಡ ಶಿವಪ್ಪ, ಡಾ.ಪುಷ್ಪಾ ಕುಟ್ಟಣ್ಣ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ
  • ಯುನೈಟೆಡ್ ಕೊಡವ ಆರ್ಗನೈಸೇಷನ್
  • ಗೋಣಿಕೊಪ್ಪ ಕಾವೇರಿ ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ
  • ‘ಕೊಡವಾಮೆರ ಅರ್ತಿ’ ವಿಚಾರಗೋಷ್ಠಿ
ಪೊನ್ನಂಪೇಟೆ: ಕೊಡವಾಮೆರ ಅರ್ತಿ ಸಪ್ತಾಹ-2027 ಫೆ.2ರಿಂದ 7ರವರೆಗೆ 6 ವಿಶೇಷ ಪರಿಕಲ್ಪನೆಯೊಂದಿಗೆ ನಡೆಯಲಿದೆ ಎಂದು ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ತಿಳಿಸಿದರು.
ಕಳೆದ ವರ್ಷದ ಮಡಿಕೇರಿಯಲ್ಲಿ ನಡೆದ ಕೊಡವಾಮೆ ಬಾಳೋ ಎಂಬ ಐತಿಹಾಸಿಕ ಪಾದಯಾತ್ರೆಗೆ ಒಂದು ವರ್ಷ ತುಂಬಿದ ಸ್ಮರಣಾರ್ಥ ಯುನೈಟೆಡ್ ಕೊಡವ ಆರ್ಗನೈಸೇಷನ್ ವತಿಯಿಂದ ಇತ್ತೀಚೆಗೆ ಗೋಣಿಕೊಪ್ಪ ಕಾವೇರಿ ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ಆಯೋಜಿಸಿದ್ದ ‘ಕೊಡವಾಮೆರ ಅರ್ತಿ’ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಫೆ.7 ಕೊಡವರ ಪಾಲಿಗೆ ಇತಿಹಾಸ ದಿನವಾಗಿ ರೂಪುಗೊಂಡಿದೆ. ಕಳೆದ ವರ್ಷದ ಆರಂಭದಲ್ಲಿ ಕೆಲವು ಕಿಡಿಗೇಡಿಗಳು ಕೊಡವರ ಭಾವನೆಗಳನ್ನು ಭಾವನಾತ್ಮಕವಾಗಿ ಘಾಸಿಗೊಳಿಸಿ, ಕೊಡವರ ಸ್ವಾಭಿಮಾನಕ್ಕೆ ಧಕ್ಕೆಯುಂಟು ಮಾಡಿದರು. ಈ ಸಂದರ್ಭ ಸಮಸ್ತ ಕೊಡವರು ಸ್ವಯಂಪ್ರೇರಣೆಯಿಂದ ಸಾಗರೋಪಾದಿಯಲ್ಲಿ ಒಂದೆಡೆ ಸೇರಿ ಕೊಡವರ ಐಕ್ಯತೆಗೆ ಸಾಕ್ಷಿಯಾದರು. ಈ ದಿನದ ಮಹತ್ವ ಮಾಸಿಹೋಗಬಾರದೆಂಬ ಉದ್ದೇಶದಿಂದ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕೊಡವಾಮೆಯ ಅರ್ತಿ ಎಂದರೆ ಕೊಡವಾಮೆಯ ಪಕ್ವತೆ ಎಂದರ್ಥ. ಕೊಡವಾಮೆಯ ಅಳವಾದ ಅರಿವು ಇದ್ದಾಗ ಮಾತ್ರವೇ ಕೊಡವಾಮೆಯ ಕುರಿತು ಪಕ್ವತೆ ಇರುತ್ತದೆ. ಕೊಡವಾಮೆಯ ಕುರಿತ ಪಕ್ವತೆಯ ಕೊರತೆಯಿಂದಾಗಿ ಎಲ್ಲವೂ ಸೊರಗಿದಂತೆ ತೋರುತ್ತಿದೆ. ಕೊಡವಾಮೆಯಲ್ಲಿ ಅಡಕವಾಗಿರುವ ಮಣ್ಣ್ ಮನಸ್ಥಾನ, ಆಯಿಮೆ ಕೋಯಿಮೆ ಹಾಗೂ ಒಕ್ಕಾಮೆ ತಕ್ಕಾಮೆಯ ಮೌಲ್ಯಗಳನ್ನು ಗ್ರಹಿಸಿಕೊಂಡಾಗ ಮಾತ್ರವೇ ಕೊಡವಾಮೆಯ ಕುರಿತು ಪಕ್ವತೆಯನ್ನು ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಯುಕೊ ಸಂಘಟನೆ ವತಿಯಿಂದ 15 ವರ್ಷಗಳಿಂದ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದ್ದು, ಈ ವಿಚಾರಗೋಷ್ಠಿಯೂ ಅದರ ಭಾಗವಾಗಿದೆ. ಈ ನಿಟ್ಟಿನಲ್ಲಿ ಇನ್ನು ಮುಂದೆಯೂ ನಿರಂತರ ವೈಚಾರಿಕ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಲು ಚಿಂತಿಸಲಾಗಿದೆ ಎಂದು ತಿಳಿಸಿದರು.
ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಾ.ಪುಷ್ಪಾ ಕುಟ್ಟಣ್ಣ, ಕೊಡವಾಮೆ ಇಂದು ಐನ್‌ಮನೆ ಹಾಗೂ ಕೈಮಡಗಳಲ್ಲಿ ಮೀದಿ ಸಮರ್ಪಣೆಗಷ್ಟೇ ಸೀಮಿತವಾದಂತೆ ತೋರುತ್ತದೆ. ಆಧುನಿಕತೆಯ ಆಲಿಂಗನದಲ್ಲಿರುವ ಇಂದಿನ ಪೀಳಿಗೆಯವರಿಗೆ ಕೊಡವಾಮೆಯನ್ನು ಬೋಧಿಸುವುದು ಸವಾಲಿನ ಕೆಲಸವಾಗಿದೆ. ಆದರೂ ಇಂದಿನ ಕೆಲವು ಯುವಕರ ಅವಿರತ ಪ್ರಯತ್ನದ ಫಲವಾಗಿ ಎಲ್ಲೆಡೆ ಕೊಡವಾಮೆಯ ಗಾಳಿ ಬೀಸುವಂತಾಗಿದೆ ಎಂದರು.
ಮಕ್ಕಳ ವಿಷಯದಲ್ಲಿ ಪಾಲಕರು ದಿನೇ ದಿನೆ ಅಸಹಾಯಕರಾಗುತ್ತಿದ್ದಾರೆ. ಬಡವ-ಬಲ್ಲಿದ ಎಂಬ ಆಂತರಿಕ ತಾರತಮ್ಯ ಕೊಡವರಲ್ಲಿ ಕಡಿಮೆ ಎನಿಸಿದರೂ ಇದೆ. ಇದು ಮದುವೆ ಮುಂತಾದ ಕಡೆಗಳಲ್ಲಿ ದುಂದುವೆಚ್ಚಕ್ಕೆ ಕಾರಣವಾಗುತ್ತಿದೆ. ಕೊಡವರು ಈ ತರಹದ ಅತಿಯಾದ ವೈಯಕ್ತಿಕ ಪ್ರತಿಷ್ಠೆಯಿಂದ ಹೊರಬರಬೇಕಾದ ಅನಿವಾರ್ಯತೆ ಇದೆ ಎಂದು ಪ್ರತಿಪಾದಿಸಿದರು.
ಕೊಡವ ಹಾಗು ಕೊಡವಾಮೆ ಜೀವನ ಕ್ರಮವಾಗಿದೆ. ಅಂದು ಕವಿ ಪಂಜೆ ಮಂಗೇಶರಾಯರು ಕಂಡು ಹಾಡಿ ಹೊಗಳಿದ ಕೊಡಗು ಮತ್ತು ಕೊಡವರನ್ನು ಇಂದು ಹುಡುಕಿದರೂ ಕಾಣದ ಸ್ಥಿತಿಯಿದೆ. ಕೊಡವಾಮೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಮೌಲ್ಯಯುತ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ಕಾಳಿಮಾಡ ಡಾ.ಶಿವಪ್ಪ ಹೇಳಿದರು.
ಕಾರ್ಯಕ್ರಮದ ಮೊದಲಿಗೆ ಅತಿಥಿಗಳಾದ ಡಾ.ಪುಷ್ಪಾ ಕುಟ್ಟಣ್ಣ ಹಾಗು ಡಾ.ಶಿವಪ್ಪ ಜೋಡಿ ತಳಿಯತಕ್ಕಿ ಬೊಳ್ಚವನ್ನು ಬೆಳಗಿಸುವ ಮೂಲಕ ವಿಚಾರಗೋಷ್ಠಿಗೆ ಚಾಲನೆ ನೀಡಿದರು. ಡೆಲ್ಲಿ ಕೊಡವ ಸಮಾಜದ ಅಧ್ಯಕ್ಷ ಮಾಚಿಮಂಡ ತಮ್ಮು ಕಾರ್ಯಪ್ಪ, ನ್ಯೂಜಿಲೆಂಡ್ ಕೊಡವಕೂಟ ಸ್ಥಾಪನೆಯ ಪ್ರಮುಖ ರುವಾರಿ ತೀತಿಮಾಡ ಅನಿಲ್ ಅಪ್ಪಣ್ಣ, ಮುಲ್ಲೇಂಗಡ ಡಾ.ರೇವತಿ ಪೂವಯ್ಯ, ಕೇಟೋಳಿರ ಸನ್ನಿ ಸೋಮಣ್ಣ, ಆರ್ಟ್ ಆಫ್ ಲಿವಿಂಗ್‌ನ ಪ್ರಮುಖರಾದ ಅಳಮೇಂಗಡ ಡಾನ್ ರಾಜಪ್ಪ, ಮುಲ್ಲೇಂಗಡ ಮದೋಶ್ ಪೂವಯ್ಯ, ಅಂಜಿಕೇರಿ ನಾಡ್ ತಕ್ಕರಾದ ಚೆಕ್ಕೇರ ರಾಜೇಶ್, ಚೊಟ್ಟೆಯಾಂಡಮಾಡ ಮಾದಪ್ಪ, ಮಲ್ಲಮಾಡ ಪ್ರಭು, ಕೊಡವ ಅಕಾಡೆಮಿ ಸದಸ್ಯರಾದ ಚೊಟ್ಟೆಯಂಡ ಸಂಜು ಕಾವೇರಪ್ಪ, ಕಂಬೆಯಂಡ ಡೀನ ಬೋಜಣ್ಣ, ಚೆಯ್ಯಂಡ ಸತ್ಯ, ಸಣ್ಣುವಂಡ ಕಿಶೋರ್, ರೀನ, ಕೋಟೆರ ಮಾದಪ್ಪ, ಪಳಂಗಿಯಂಡ ದರ್ಶನ್, ಮುಂಡಂಡ ಅರುಣ, ಸೇರಿದಂತೆ ಹಲವರು ಚರ್ಚೆಯಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net