ಸಂಸತ್ತು, ವಿಧಾನಸಭೆಯಲ್ಲಿ ಪ್ರತ್ಯೇಕ ಪ್ರಾತಿನಿಧ್ಯಕ್ಕೆ ಆಗ್ರಹ

ಕೊಡವ ಸಮುದಾಯಕ್ಕೆ ಭಾರತದ ಸಂಸತ್ತು ಮತ್ತು ಕರ್ನಾಟಕ ವಿಧಾನಸಭೆ ಎರಡರಲ್ಲೂ ಪ್ರತ್ಯೇಕ ಪ್ರಾತಿನಿಧ್ಯವನ್ನು ನೀಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿಯಲ್ಲಿ ಸತ್ಯಾಗ್ರಹ ನಡೆಸಲಾಯಿತು.
ಕೊಡವ ಸಮುದಾಯಕ್ಕೆ ಭಾರತದ ಸಂಸತ್ತು ಮತ್ತು ಕರ್ನಾಟಕ ವಿಧಾನಸಭೆ ಎರಡರಲ್ಲೂ ಪ್ರತ್ಯೇಕ ಪ್ರಾತಿನಿಧ್ಯವನ್ನು ನೀಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿಯಲ್ಲಿ ಸತ್ಯಾಗ್ರಹ ನಡೆಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಸಂಸತ್ತು, ವಿಧಾನಸಭೆಯಲ್ಲಿ ಪ್ರತ್ಯೇಕ ಪ್ರಾತಿನಿಧ್ಯಕ್ಕೆ ಆಗ್ರಹ
ಮಡಿಕೇರಿ: ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯದ ಸಂಘ ಕ್ಷೇತ್ರದ ಮಾದರಿಯಲ್ಲೇ ಆದಿಮಸಂಜಾತ ಕೊಡವ ಸಮುದಾಯಕ್ಕೆ ಭಾರತದ ಸಂಸತ್ತು ಮತ್ತು ಕರ್ನಾಟಕ ವಿಧಾನಸಭೆ ಎರಡರಲ್ಲೂ ಪ್ರತ್ಯೇಕ ಪ್ರಾತಿನಿಧ್ಯವನ್ನು ನೀಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿಯಲ್ಲಿ ಸತ್ಯಾಗ್ರಹ ನಡೆಯಿತು.
ಸತ್ಯಾಗ್ರಹದ ನೇತೃತ್ವ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಕೊಡವರು ಪ್ರಕೃತಿಯ ಆರಾಧಕರು. ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಇವರು ಆದಿಮಸಂಜಾತ ಸಮುದಾಯದವರಾಗಿದ್ದು, ಭಾರತದ ಪ್ರಜಾಪ್ರಭುತ್ವ ರಚನೆಯಲ್ಲಿ ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲು ವಿಶೇಷ ಪ್ರಾತಿನಿಧ್ಯದ ಅಗತ್ಯವಿದೆ ಎಂದರು.
ಈ ವರ್ಚುವಲ್ ಕ್ಷೇತ್ರವು ಯಾವುದೇ ನಿರ್ದಿಷ್ಟ ಭೌಗೋಳಿಕ ಗಡಿಗಳನ್ನು ಹೊಂದಿರುವುದಿಲ್ಲ. ೧೯೫೮ ರಲ್ಲಿ ರಚಿಸಲಾದ ಸಿಕ್ಕಿಂ ಸಂಘದ ಮಾದರಿಯಲ್ಲಿ, ಕೊಡಗು ಜಿಲ್ಲೆಯ ಎಲ್ಲೇ ವಾಸವಿದ್ದರೂ, ಕೊಡವ ಸಮುದಾಯದ ಸದಸ್ಯರು ಮಾತ್ರ ಸ್ಪರ್ಧಿಸಲು ಮತ್ತು ಮತ ಚಲಾಯಿಸಲು ಇದು ಅವಕಾಶ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.
ಕೊಡಗು ೧೯೫೨ ರಿಂದ ೧೯೫೬ ರವರೆಗೆ ಸಿ ರಾಜ್ಯವಾಗಿತ್ತು, ನಂತರ ಮೈಸೂರು ರಾಜ್ಯದೊಂದಿಗೆ (ಈಗಿನ ಕರ್ನಾಟಕ) ವಿಲೀನಗೊಂಡಿತು. ವಿಲೀನದ ನಂತರ ಕೊಡವರ ರಾಜಕೀಯ ಪ್ರಾತಿನಿಧ್ಯ ಕುಸಿದಿದೆ ಎಂದು ಸಮುದಾಯವು ಭಾವಿಸಿದೆ. ಕಾಶ್ಮೀರಿ ಪಂಡಿತರು ಹೇಗೆ ಕಾಶ್ಮೀರಕ್ಕೆ ಆದಿಮಸಂಜಾತರೋ ಕಾಶ್ಮೀರದ ಹೊರಗೆ ಅವರಿಗೆ ಹೇಗೆ ತಾಯಿ ಬೇರಿಲ್ಲವೋ ಮತ್ತು ಅಮೇರಿಕಾದ ರೆಡ್ ಇಂಡಿಯನ್ ಹೇಗೆ ಅಮೆರಿಕಕ್ಕೆ ಮೂಲವೋ ಅದೇ ರೀತಿ ಕೊಡವರು ಕೊಡಗಿನಲ್ಲಿ ಮಾತ್ರ ಅವರ ತಾಯಿ ಬೇರು ಇದೆ. ಕೊಡಗಿನ ಹೊರಗೆ ಕೊಡವರಿಗೆ ತಾಯಿ ಬೇರಿಲ್ಲ ಎಂದರು.
ಪ್ರಸ್ತುತ ಸರ್ಕಾರವು ಜನಸಂಖ್ಯೆಯ ಆಧಾರದ ಮೇಲೆ ವಿಧಾನಸಭೆ ಮತ್ತು ಸಂಸತ್ತನ್ನು ಮರುಹೊಂದಿಸುತ್ತಿದೆ ಮತ್ತು ಇದು ಮತ್ತೊಂದು ರೀತಿಯಲ್ಲಿ ಸರ್ಕಾರವು ದೇಶದ ಒಳಿತಿಗಾಗಿ ಜನಸಂಖ್ಯಾ ನಿಯಂತ್ರಣ ಮಾಡಿದ ದೇಶಭಕ್ತ ಕೊಡವರನ್ನು ಸಂಸತ್ತಿನಲ್ಲಿ ಪ್ರಾತಿನಿಧ್ಯವನ್ನು ಕಸಿದುಕೊಳ್ಳುವ ಮೂಲಕ ಶಿಕ್ಷಿಸುತ್ತಿದೆ. ಆದಿಮಸಂಜಾತ ಕೊಡವರು ಒಂದೇ ಜನಾಂಗವಾಗಿದ್ದು, ಈ ಮಣ್ಣಿನೊಂದಿಗೆ ಅಂತರ್ಗತವಾದ ಅನನ್ಯ ಮತ್ತು ಅಪರೂಪದ ಬುಡಕಟ್ಟು ಜನರಾಗಿದ್ದೇವೆ ಎಂದರು.
ಭಾರತೀಯ ಸಂವಿಧಾನದಡಿಯಲ್ಲಿ ಕೊಡವರಿಗೆ ಬುಡಕಟ್ಟು ಮಾನ್ಯತೆ ನೀಡಬೇಕು, ೮ನೇ ಶೆಡ್ಯೂಲ್ ಅಡಿಯಲ್ಲಿ ಕೊಡವ ತಕ್ (ಭಾಷೆ) ಗೆ ಸಾಂವಿಧಾನಿಕ ರಕ್ಷಣೆ ನೀಡಬೇಕು. ೬ನೇ ಶೆಡ್ಯೂಲ್ ಅಡಿಯಲ್ಲಿ ಸ್ವಾಯತ್ತ ಕೊಡವ ಭೂಮಿ ನಿರ್ಮಾಣಕ್ಕೆ ಅವಕಾಶ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ ಮನವಿ ಪತ್ರವನ್ನು ಎನ್.ಯು.ನಾಚಪ್ಪ ಅವರು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರ ಮೂಲಕ ಭಾರತದ ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಕಾನೂನು ಮಂತ್ರಿ ಹಾಗೂ ಭಾರತದ ಚುನಾವಣಾ ಆಯೋಗಕ್ಕೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಚೋಳಪಂಡ ಜ್ಯೋತಿ ನಾಣಯ್ಯ, ಕಲಿಯಂಡ ಪ್ರಕಾಶ್, ಅಳಮಂಡ ಜೈ ಗಣಪತಿ, ಪಟ್ಟಮಾಡ ಕುಶ, ಅಜ್ಜಿಕುಟ್ಟಿರ ಲೋಕೇಶ್, ಬೇಪಡಿಯಂಡ ಬಿದ್ದಪ್ಪ, ನಂದೇಟಿರ ರವಿ ಸುಬ್ಬಯ್ಯ, ಅರೆಯಡ ಗಿರೀಶ್ ತಿಮ್ಮಯ್ಯ, ಮಂದಪಂಡ ಮನೋಜ್ ಮಂದಣ್ಣ, ಕಿರಿಯಮಾಡ ಶೆರಿನ್ ಇತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net