ಸಂಸ್ಕೃತಿ ಉಳಿವಿಗೆ ಕೆಸರುಗದ್ದೆ ಕ್ರೀಡಾಕೂಟ ಪ್ರೇರಣೆ

 ಜಿಲ್ಲಾ ಮಟ್ಟದ ಮುಕ್ತ ಕೆಸರುಗದ್ದೆ ಕ್ರೀಡಾ ಸಂಗಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೂಫಿ ಹಾಜಿ ಮಾತನಾಡಿದರು. ಕಿಲನ್ ಗಣಪತಿ, ಎಸ್.ಮೊಯ್ದು ಇತರರಿದ್ದರು.
ಜಿಲ್ಲಾ ಮಟ್ಟದ ಮುಕ್ತ ಕೆಸರುಗದ್ದೆ ಕ್ರೀಡಾ ಸಂಗಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೂಫಿ ಹಾಜಿ ಮಾತನಾಡಿದರು. ಕಿಲನ್ ಗಣಪತಿ, ಎಸ್.ಮೊಯ್ದು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಸ್ಕೃತಿ ಉಳಿವಿಗೆ ಕೆಸರುಗದ್ದೆ ಕ್ರೀಡಾಕೂಟ ಪ್ರೇರಣೆ
  • ಕೊಮ್ಮೆತೋಡಿನಲ್ಲಿ ಕೆಸರುಗದ್ದೆ ಕ್ರೀಡಾ ಸಂಗಮದಲ್ಲಿ ಸೂಫಿ ಹಾಜಿ ನುಡಿ

ಪೊನ್ನಂಪೇಟೆ: ಹಿಂದಿನ ಕಾಲದಲ್ಲಿ ಕೃಷಿ ಸಂಸ್ಕೃತಿಯಿಂದ ಕೆಸರು ನಮ್ಮ ಜೀವನವಾಗಿತ್ತು. ಆದರೆ, ಈಗ ಕಾಲ ಬದಲಾಗಿದೆ. ಈ ತಂತ್ರಜ್ಞಾನ ಯುಗದಲ್ಲಿ ಆಧುನಿಕ ರೂಪದಲ್ಲಾದರೂ ಕೆಸರುಗದ್ದೆ ಕ್ರೀಡಾಕೂಟ ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್(ಕೆಎಂಎ)ಅಧ್ಯಕ್ಷರಾದ ದುದ್ದಿಯಂಡ ಹೆಚ್.ಸೂಫಿ ಹಾಜಿ ಹೇಳಿದರು.

ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ(ಕೆ.ಎಂ.ಎಸ್.ಎ.) ವತಿಯಿಂದ ಭಾನುವಾರ ವಿರಾಜಪೇಟೆ-ಅಮ್ಮತಿ ಮುಖ್ಯರಸ್ತೆಯಲ್ಲಿರುವ ಕೊಮ್ಮೆತೋಡು ಸೇತುವೆ ಬಳಿಯ ಭತ್ತದ ಗದ್ದೆಯಲ್ಲಿ ಮೊದಲನೇ ವರ್ಷದ ಜಿಲ್ಲಾ ಮಟ್ಟದ ಮುಕ್ತ ಕೆಸರುಗದ್ದೆ ಕ್ರೀಡಾ ಸಂಗಮ-೨೦೨೬ ಅನ್ನು ವಿದ್ಯುಕ್ತವಾಗಿ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವ ಜನಾಂಗಕ್ಕೆ ಕೃಷಿ ಸಂಸ್ಕೃತಿಯನ್ನು ನೆನಪಿಸಲು ಇಂತಹ ಗ್ರಾಮೀಣ ಕ್ರೀಡಾಕೂಟಗಳು ಹೆಚ್ಚು ಸಹಕಾರಿಯಾಗಿವೆ. ಕೊಡಗಿನ ಮೂಲ ಸಂಸ್ಕೃತಿ ಉಳಿವಿಗೂ ಕೆಸರುಗದ್ದೆ ಕ್ರೀಡಾಕೂಟ ಪ್ರೇರಣೆಯಾಗಿವೆ ಎಂದು ಅಭಿಪ್ರಾಯಪಟ್ಟರು.
ಹಿಂದಿನ ಕಾಲದಲ್ಲಿ ಭತ್ತದ ನಾಟಿ ಸಂದರ್ಭದಲ್ಲಿ ಪ್ರತಿ ಗ್ರಾಮದಲ್ಲಿ ನಾಟಿ ಓಟ ನಡೆಯುತ್ತಿತ್ತು. ಇದರಲ್ಲಿ ವಿಜೇತರಾದವರಿಗೆ ನಗದು ಬಹುಮಾನದೊಂದಿಗೆ ಬಾಳೆಗೋನೆ, ತೆಂಗಿನಕಾಯಿ ಹಾಗೂ ವಿಳ್ಯೆದೆಲೆ ನೀಡಿ ಗೌರವಿಸಲಾಗುತ್ತಿತ್ತು. ಇದನ್ನು ಸ್ವೀಕರಿಸುವಾಗ ದೊರೆಯುವ ಆನಂದವೇ ಬೇರೆಯಾಗಿತ್ತು ಎಂದು ಹಿಂದಿನ ಸಾಂಪ್ರದಾಯಿಕ ಆಚರಣೆಯನ್ನು ಮೆಲುಕು ಹಾಕಿದ ಸೂಫಿ ಹಾಜಿ ಅವರು, ಜಿಲ್ಲೆಯಾದ್ಯಂತ ಮಳೆಗಾಲದಲ್ಲಿ ನಡೆಯುವ ಕೆಸರುಗದ್ದೆ ಕ್ರಿಡಾಕೂಟಗಳಲ್ಲಿ ಅವಕಾಶ ವಂಚಿತ ಸ್ಥಳೀಯ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವಂತಾಗಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಬಿಜೆಪಿ ಮುಖಂಡರಾದ ಗುಮ್ಮಟ್ಟೀರ ಕಿಲನ್ ಗಣಪತಿ ಮಾತನಾಡಿ, ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯಲ್ಲಿ ಜಾತಿ, ಮತ, ಜನಾಂಗಗಳ ನಡುವೆ ವಿವಿಧತೆಯಲ್ಲಿ ಏಕತೆಯನ್ನು ತರಲು ಕ್ರೀಡಾಕೂಟ ಪ್ರಬಲವಾದ ಸಾಧನವಾಗಿದ. ಕ್ರೀಡಾಕೂಟವನ್ನು ನಿರಂತರವಾಗಿ ಆಯೋಜಿಸಿ ಮುಂದುವರೆಸುವುದರ ಮೂಲಕ ಗ್ರಾಮೀಣ ಕ್ರೀಡಾಪಟುಗಳ ಪ್ರತಿಭಾ ಪ್ರದರ್ಶನಕ್ಕೆ ಮೊದಲ ಆದ್ಯತೆ ನೀಡುವಂತಾಗಬೇಕು. ಕ್ರೀಡೆಯಿಂದಲೂ ಸಮಾಜದಲ್ಲಿ ಜನಾಂಗೀಯ ಸಾಮರಸ್ಯ ಮೂಡಿಸಲು ಸಾಧ್ಯವಿದೆ ಎಂದು ಹೇಳಿದರು.
ಕೆ.ಎಂ.ಎಸ್.ಎ ಗೌರವಾಧ್ಯಕ್ಷರಾದ ಅಕ್ಕಳತಂಡ ಎಸ್.ಮೊಯ್ದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೊಮ್ಮೆತೊಡು(ಐಮಂಗಲ) ಜಮಾಅತ್ ಅಧ್ಯಕ್ಷರಾದ ಪೊಯಕೆರ ಎಸ್.ರಫೀಕ್, ಬೆಮ್ಮತಿ ಜಮಾಅತ್ ಅಧ್ಯಕ್ಷರಾದ ಕೆ.ಎಂ.ಅಬ್ದುಲ್ ರೆಹಮಾನ್(ಬಾಪು), ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೋಳುಮಂಡ ರಫೀಕ್, ಕೊಡವ ಮುಸ್ಲಿಂ ಅಸೋಸಿಯೇಷನ್(ಕೆ.ಎಂ.ಎ) ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್, ಪೊನ್ನಂಪೇಟೆಯ ಕೂರ್ಗ್ ರೈಸ್ ಟ್ರೇಡರ್ಸ್‌ನ ಮಾಲೀಕರಾದ ಕೆ.ಎಂ.ಇಬ್ರಾಹಿಂ, ಅಮ್ಮತ್ತಿಯ ಸಮಾಜ ಸೇವಕರಾದ ಅನಿಲ್, ಗೋಣಿಕೊಪ್ಪಲಿನ ಉಮ್ಮರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ಕೆ.ಎಂ.ಎಸ್.ಎ. ಉಪಾಧ್ಯಕ್ಷರಾದ ಕೆಂಗೋಟಂಡ ಎಸ್.ಸೂಫಿ, ಕುಂಡಂಡ ಎ.ರಜ್ಹಾಕ್, ಕೋಶಾಧಿಕಾರಿ ಆಲೀರ ಎ.ಅಬ್ದುಲ್ ಅಜೀಜ್ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೆ.ಎಂ.ಎಸ್.ಎ ಅಧ್ಯಕ್ಷರಾದ ಆಲೀರ ಎಂ.ರಶೀದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಂ.ಎಸ್.ಎ ಪ್ರಧಾನ ಕಾರ್ಯದರ್ಶಿ ಮೀತಲ್ ತಂಡ ಎಂ.ಇಸ್ಮಾಯಿಲ್ ಸ್ವಾಗತಿಸಿದರು. ಕ್ರೀಡಾ ಸಂಚಾಲಕರಾದ ಕತ್ತಣಿರ ಎ.ಅಂದಾಯಿ ವಂದಿಸಿದರು. ಕಾರ್ಯದರ್ಶಿ ಬಲ್ಯತ್ಕಾರಂಡ ಯು.ಅಶ್ರಫ್ ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net