ಕೊಡವ ಭಾಷಿಕ ಜನಾಂಗದವರನ್ನು ಕಡೆಗಣಿಸಿದರೆ ತೀವ್ರ ಹೋರಾಟ

ಕೊಡವ ಭಾಷಿಕ ಸಮುದಾಯಗಳ ಕೂಟದ ೨೦೨೫-೨೬ನೇ ಸಾಲಿನ ಮಹಾಸಭೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ಕೊಡವ ಭಾಷಿಕ ಸಮುದಾಯಗಳ ಕೂಟದ ೨೦೨೫-೨೬ನೇ ಸಾಲಿನ ಮಹಾಸಭೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೊಡವ ಭಾಷಿಕ ಜನಾಂಗದವರನ್ನು ಕಡೆಗಣಿಸಿದರೆ ತೀವ್ರ ಹೋರಾಟ
  • ಕೊಡವ ಭಾಷಿಕ ಸಮುದಾಯಗಳ ಕೂಟದ ಮಹಾಸಭೆಯಲ್ಲಿ ನಿರ್ಧಾರ
ಮಡಿಕೇರಿ: ಕೊಡವ ಭಾಷಾ ಸಂಸ್ಕೃತಿ, ಸಂಪ್ರದಾಯಗಳ ಮೂಲ ತಾಯಿ ಬೇರಿನಂತಿರುವ ಕೊಡವ ಭಾಷಿಕ ಜನಾಂಗದವರನ್ನು ಹಲವಾರು ವರ್ಷಗಳಿಂದ ಸರಕಾರ ಹಾಗೂ ಜನಪ್ರತಿನಿಧಿಗಳು ತಾತ್ಸಾರ ಮನೋಭಾವನೆಯಿಂದ ಕಾಣುತ್ತಿದ್ದಾರೆ ಎಂದು ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಅವರು ಬೇಸರ ವ್ಯಕ್ತಪಡಿಸಿದರು.
ಮೂರ್ನಾಡು ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಕೊಡವ ಭಾಷಿಕ ಸಮುದಾಯಗಳ ಕೂಟದ ೨೦೨೫-೨೬ನೇ ಸಾಲಿನ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತೀರಾ ಹಿಂದುಳಿದ ಮೂಲ ನಿವಾಸಿ ಜನಾಂಗದವರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಆಡಳಿತ ವ್ಯವಸ್ಥೆ ವಿಫಲತೆಯನ್ನು ಕಾಣುತ್ತಿದೆ. ಕೊಡವ ಭಾಷಿಕ ಜನಾಂಗದವರನ್ನು ಕೇವಲ ಮತ ಬ್ಯಾಂಕ್ ಗಾಗಿ ಬಳಸಿಕೊಳ್ಳುತ್ತಿರುವುದು ವಿಪರ್ಯಾಸ ಎಂದರು.
ಶಾಶ್ವತ ನೆಲೆ ಕಂಡುಕೊಳ್ಳುವುದು ಕೊಡವ ಭಾಷಿಕ ಜನಾಂಗದವರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ. ಜಾಗವನ್ನು ಗುರುತಿಸಿ ಸಂಬಂಧಿಸಿದ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಇಲ್ಲಿಯವರೆಗೆ ಮಂಜೂರು ಮಾಡಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು.
ಜನಾಂಗದ ಪ್ರಮುಖರಾದ ಕೋಲೆಯಂಡ ಡಾ.ಮೋಹನ್ ಅಪ್ಪಾಜಿ, ಅಂಬಾಡಿರ ಕಾರ್ಯಪ್ಪ, ಕುಡಿಯರ ಮುತ್ತಪ್ಪ, ವಾಸುದೇವ್, ಪ್ರಭುಕುಮಾರ್, ಬಿದ್ದಪ್ಪ ಮುಂತಾದವರು ಮಾತನಾಡಿ, ಶಾಶ್ವತ ಜಾಗವನ್ನು ಪಡೆಯಲು ಕೂಟದೊಂದಿಗೆ ಜನಾಂಗ ಬಾಂಧವರು ಸಂಪೂರ್ಣ ಸಹಕಾರ ನೀಡಲಿದ್ದೇವೆ. ಜನಾಂಗದ ಸ್ವಾಭಿಮಾನಕ್ಕೆ ದಕ್ಕೆ ಬರುವಂತಹ ಯಾವುದೇ ಸಮಸ್ಯೆ ಎದುರಾದರೂ ಕೂಟದ ಮೂಲಕ ಹೋರಾಟಕ್ಕೆ ಮುಂದಾಗಬೇಕು. ಪ್ರತಿಷ್ಠೆಯನ್ನು ಬದಿಗೊತ್ತಿ ಎಲ್ಲರೂ ಒಗ್ಗಟ್ಟಾಗಿ ಬೀದಿಗಿಳಿದು ಹೋರಾಟ ಮಾಡಲು ಸಭೆ ಬೆಂಬಲ ಸೂಚಿಸಿತು.
ಶಾಶ್ವತ ಜಾಗದ ವಿಚಾರದಲ್ಲಿ ತೀವ್ರ ಹೋರಾಟ ನಡೆಸುವುದಲ್ಲದೆ, ಮುಂದಿನ ಸಂದರ್ಭಗಳನ್ನು ಅವಲೋಕಿಸಿ ಸ್ಥಳೀಯ ಪಂಚಾಯಿತಿ ಚುನಾವಣೆಗಳನ್ನು ಬಹಿಷ್ಕರಿಸಲು ಸಭೆ ನಿರ್ಣಯ ಕೈಗೊಂಡಿತು.
ಸರ್ವ ಸದಸ್ಯರ ಅಭಿಪ್ರಾಯದಂತೆ ಇದೀಗ ಕಾರ್ಯನಿರ್ವಹಿಸುತ್ತಿರುವ ಕೂಟದ ಕಾರ್ಯಕಾರಿ ಮಂಡಳಿಯನ್ನು ಮೂರು ವರ್ಷಗಳಿಂದ ಮುಂದಿನ ೫ ವರ್ಷಗಳ ವರೆಗೆ ಮುಂದುವರೆಸುವಂತೆಯೂ ಮತ್ತು ಯಾವುದೇ ಒಡಕು ಬಾರದಂತೆ ಜನಾಂಗ ಬಾಂಧವರು ಒಗ್ಗಟ್ಟಿನಿಂದ ಇರುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.
ಅಂಗಾಂಗ ದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾದ ಪಣಿಕ ಜನಾಂಗದ ದಿ.ಡಾಲು ಉತ್ತಯ್ಯ ಅವರ ತ್ಯಾಗವನ್ನು ಸ್ಮರಿಸಿ ಅವರ ಪತ್ನಿ ರಾಜೇಶ್ವರಿ (ರಾಜಿ) ಅವರನ್ನು ಕೂಟದ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಉಪಾಧ್ಯಕ್ಷರಾದ ನೆರೆಯಂಡಮಂಡ ಉಮಾಪ್ರಭು, ಪೊನ್ನಿರ ಗಗನ್, ಕುಡಿಯರ ಬೋಪಯ್ಯ, ಕೂಟದ ಗೌರವ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ, ಕಾರ್ಯದರ್ಶಿ ಪಟ್ಟಚಾರಿರ ದಿನೇಶ್ ಕಾರ್ಯಪ್ಪ, ಬಾಳೆಕುಟ್ಟಂಡ ಉದಯ ಮಾದಪ್ಪ, ಖಜಾಂಚಿ ಪಡಿಞರಂಡ ಪ್ರಭು ಕುಮಾರ್ ಸೇರಿದಂತೆ ನಿರ್ದೇಶಕರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net