ಕೊಡಗು ಗೌಡ ಯುವ ವೇದಿಕೆ ವೈವಿಧ್ಯಮಯ ಕಾರ್ಯಕ್ರಮ

ಸುದ್ದಿಗೋಷ್ಠಿಯಲ್ಲಿ ಕೊಡಗು ಗೌಡ ಯುವ ವೇದಿಕೆ ಕಾರ್ಯದರ್ಶಿ ಪುದಿಯನೆರವನ ರಿಶಿತ್ ಮಾದಯ್ಯ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಗೌಡ ಯುವ ವೇದಿಕೆ ಕಾರ್ಯದರ್ಶಿ ಪುದಿಯನೆರವನ ರಿಶಿತ್ ಮಾದಯ್ಯ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕೊಡಗು ಗೌಡ ಯುವ ವೇದಿಕೆ ವೈವಿಧ್ಯಮಯ ಕಾರ್ಯಕ್ರಮ
  • ಕ್ರಿಕೆಟ್, ರಿಂಕ್ ಹಾಕಿ, ಸಾಂಸ್ಕೃತಿಕ ಕಲರವ ಆಯೋಜನೆ: ರಿಶಿತ್ ಮಾದಯ್ಯ ಮಾಹಿತಿ
ಮಡಿಕೇರಿ: ೨೦೨೬ರಲ್ಲಿ ಗೌಡ ಜನಾಂಗದ ಒಗ್ಗಟ್ಟು ಮತ್ತು ಜನಾಂಗದ ಅಭಿವೃದ್ಧಿಗಾಗಿ ಕ್ರೀಡೆ, ಸಾಮಾಜಿಕ, ಜನಾಂಗದ ಹಕ್ಕೊತ್ತಾಯ ಮತ್ತು ಸಾಂಸ್ಕೃತಿಕವಾಗಿ ವಿವಿಧ ರೀತಿಯ ವೈವಿಧ್ಯಮಯ ಕಾರ್ಯಕ್ರಮವನ್ನು ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಕಾರ್ಯದರ್ಶಿ ಪುದಿಯನೆರವನ ರಿಶಿತ್ ಮಾದಯ್ಯ ತಿಳಿಸಿದ್ದಾರೆ.
ಬಾಳಾಡಿ ಮನೋಜ್ ಅವರ ಅಧ್ಯಕ್ಷತೆಯಲ್ಲಿ ಕೊಡಗು ಗೌಡ ವೇದಿಕೆಯ ನೂತನ ಸಮಿತಿ ರಚನೆಯಾಗಿದ್ದು, ಈ ಸಮಿತಿಯಿಂದ ೨೦೨೬ನೇ ವರ್ಷಕ್ಕೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲು ಕಾರ್ಯಯೋಜನೆಯನ್ನು ರೂಪಿಸಿದೆ. ೧೦ ಕುಟುಂಬ ೧೮ ಗೋತ್ರದ ಗೌಡ ಜನಾಂಗದ ೨೭ನೇ ವರ್ಷದ ಗೌಡ ಕುಟುಂಬಗಳ ಸಮ್ಮಿಲನ ಕ್ರೀಡಾಕೂಟ ಏ.೨೭ ರಿಂದ ಮೇ ೧೭ರವರೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಈ ಕ್ರೀಡಾಕೂಟದಲ್ಲಿ ಕುಟುಂಬವಾರು ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಹಾಗೂ ಪ್ರಪ್ರಥಮ ಬಾರಿಗೆ ಗೌಡ ಜನಾಂಗಬಾಂಧವರಿಗೆ ಕುಟುಂಬವಾರು ಸೂಪರ್ ೫ ರಿಂಕ್ ಹಾಕಿ ಕ್ರೀಡಾಕೂಟ, ಗುಂಡು ಹೊಡೆಯುವ ಸ್ಪರ್ಧೆ ಮತ್ತು ಮಿಸ್ಟರ್ ಗೌಡ, ಮಿಸ್ ಗೌಡತಿ ಎಂಬ ಸಾಂಸ್ಕೃತಿಕ ಕಲರವವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕೊಡಗು ಗೌಡ ಯುವ ವೇದಿಕೆ ಯುವ ಪ್ರತಿಭೆ ಗಳನ್ನು ಗುರುತಿಸಿ ಪ್ರೆಫೆಷನಲ್ ಕ್ರಿಕೆಟಿಂಗ್ ಕೆರಿಯರ್ ರೂಪಿಸಿಕೊಳ್ಳಲು ಜಿಪಿಎಲ್ ಸೀಸನ್‌೪ ನ್ನು ಡಿ.೧೬ ರಿಂದ ಡಿ.೩೧ ರವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಕ್ರೀಡಾಕೂಟದಲ್ಲಿ ಕೊಡಗು ಮತ್ತು ದಕ್ಷಿಣ ಕನ್ನಡದ ಎಲ್ಲಾ ಒಕ್ಕಲಿಗ ಬಾಂಧವರು ಭಾಗವಹಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ವೇದಿಕೆ ಅಧ್ಯಕ್ಷ ಬಾಳಾಡಿ ಮನೋಜ್ ಕುಮಾರ್ ಮಾತನಾಡಿ, ಕೊಡಗು ಗೌಡ ಯುವ ವೇದಿಕೆಯ ಜನಾಂಗದ ಕ್ರೀಡಾಕೂಟಕ್ಕೆ ಸರ್ಕಾರದ ಅನುದಾನ ಬರುತ್ತಿದ್ದು, ೨೦೨೩ ರಿಂದ ಈಚೆ ಮೂರು ವರ್ಷಗಳ ಕಾಲ ಯಾವುದೇ ಅನುದಾನ ಬಂದಿರುವುದಿಲ್ಲ. ಜನಾಂಗದ ಮತ್ತು ಜನಾಂಗದ ಹಿತೈಷಿಗಳ ನೆರವಿನಿಂದ ಕ್ರೀಡಾಕೂಟಗಳನ್ನು ಮುಂದುವರೆಸುತ್ತಾ ಬಂದಿದ್ದೇವೆ. ಸರ್ಕಾರದ ಅನುದಾನ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರ ಗಮನಕ್ಕೆ ತಂದಿದ್ದು, ಅವರು ಈ ವರ್ಷ ಸರ್ಕಾರದ ಅನುದಾನವನ್ನು ಕೊಡಿಸುವ ಭರವಸೆಯನ್ನು ನೀಡಿದ್ದಾರೆ. ಮಡಿಕೇರಿ ಶಾಸಕರಾದ ಡಾ.ಮಂತರ್ ಗೌಡ ಅವರು ಆಶ್ವಾಸನೆ ನೀಡಿ ಕ್ರೀಡಾಕೂಟಕ್ಕೆ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಈ ಕಾರ್ಯಕ್ರಮಕ್ಕೆ ಬಹಳಷ್ಟು ಅನುದಾನದ ಅವಶ್ಯಕತೆ ಇದ್ದು, ನಾವು ಈ ಮೂಲಕ ಮತ್ತೊಮ್ಮೆ ಶಾಸಕರುಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಕುಟುಂಬವಾರು ಟೆನ್ನಿಸ್ ಬಾಲ್ ಕ್ರೀಡಾಕೂಟ ಹಾಗೂ ಮೊದಲ ಬಾರಿಗೆ ಆಯೋಜನೆ ಗೊಳ್ಳುತ್ತಿರುವ ರಿಂಕ್ ಹಾಕಿ ಕ್ರೀಡಾಕೂಟಕ್ಕೆ ಕುಟುಂಬಗಳು ಹೆಸರು ನೊಂದಾಯಿಸಲು ಕುಟ್ಟನ ಪ್ರಶಾಂತ್ ೭೦೧೯೬೭೧೧೩೦, ಪೂಜಾರಿರ ಮಿತ್ರ ೯೬೬೩೨೫೩೦೨೫, ಪರಿಚನ ಸೋನಿ ೭೬೭೬೪೫೨೧೦೭ ಹಾಗೂ ಮಿಸ್ಟರ್ ಗೌಡ ಮತ್ತು ಮಿಸ್ ಗೌಡತಿ ಸ್ಪರ್ಧೆಗೆ ೯೦೦೮೧೯೮೯೫೫ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಗೌಡ ಯುವ ವೇದಿಕೆ ಉಪಾಧ್ಯಕ್ಷರಾದ ಪರಿಚನ ಸತೀಶ್, ಎಡಿಕೇರಿ ಪ್ರಸನ್ನ, ಕಾರ್ಯದರ್ಶಿ ಕೆದಂಬಾಡಿ ಕಾಂಚನ ಗೌಡ, ಪ್ರಮುಖರಾದ ಪೈಕೇರ ಗಗನ್ ದೇವಯ್ಯ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net