ಕೃಪಾ ದೇವರಾಜ್‌ಗೆ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ

ಮಡಿಕೇರಿ ಪತ್ರಿಕಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಕೃಪಾ ದೇವರಾಜ್ ಅವರಿಗೆ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್.ಜಿ. ಉಮೇಶ್, ಸುಬ್ರಾಯ ಸಂಪಾಜೆ, ರಜನಿ, ಕೇಶವ ಕಾಮತ್, ಟಿ.ಪಿ. ರಮೇಶ್, ರವಿಕುಮಾರ್, ರೇವತಿ ರಮೇಶ್, ಸಂಪತ್ ಕುಮಾರ್ ಮತ್ತಿತರರು ಇದ್ದರು.
ಮಡಿಕೇರಿ ಪತ್ರಿಕಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಕೃಪಾ ದೇವರಾಜ್ ಅವರಿಗೆ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್.ಜಿ. ಉಮೇಶ್, ಸುಬ್ರಾಯ ಸಂಪಾಜೆ, ರಜನಿ, ಕೇಶವ ಕಾಮತ್, ಟಿ.ಪಿ. ರಮೇಶ್, ರವಿಕುಮಾರ್, ರೇವತಿ ರಮೇಶ್, ಸಂಪತ್ ಕುಮಾರ್ ಮತ್ತಿತರರು ಇದ್ದರು.
Published on
ಮಡಿಕೇರಿ
ಕಥೆ ಎನ್ನುವಂತಹದ್ದು ನಮ್ಮ ಸುತ್ತ ಮುತ್ತಲಲ್ಲಿನ ಸಣ್ಣ ಪುಟ್ಟ ವಿಚಾರಗಳಲ್ಲೂ ಅಡಗಿ ಕುಳಿತಿದ್ದು ಎಲ್ಲರನ್ನೂ ಸೆಳೆಯುವ ಗುಣ ಹೊಂದಿದೆ ಎಂದು ಸಾಹಿತಿ ಸುಬ್ರಾಯ ಸಂಪಾಜೆ ಹೇಳಿದರು. ಈಚೆಗೆ ಇಲ್ಲಿನ ಪತ್ರಿಕಾ ಭವನದಲ್ಲಿ ನಡೆದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೊಡ ಮಾಡುವ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪಟ್ಟೋಲೆ ಪಳಮೆ, ಕೊಡವ ಜಯಾ ಭಾರತ ಮೊದಲಾದ ಅಮೂಲ್ಯ ಕೃತಿಗಳ ಕುರಿತು ವಿಚಾರಗೋಷ್ಠಿಗಳನ್ನು ಕನ್ನಡ ಸಾಹತ್ಯ ಪರಿಷತ್ತು ಹಮ್ಮಿಕೊಳ್ಳಬೇಕು ಎಂದು ಇದೇ ವೇಳೆ ಸಲಹೆ ನೀಡಿದರು.
ಸಾಹಿತಿ ಕೃಪಾ ದೇವರಾಜ್ ಅವರಿಗೆ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಉಪನ್ಯಾಸಕಿ ಎಸ್.ಎಂ. ರಜನಿ, ಪ್ರಸ್ತುತ ಕಾಲ ಘಟ್ಟದಲ್ಲಿ ಸ್ನೇಹಿತ, ಸ್ನೇಹಿತೆಯ ಸ್ಥಾನದಲ್ಲಿ ಮೊಬೈಲ್ ರಾರಾಜಿಸುತ್ತಿವೆ. ಇಂತಹ ಮೊಬೈಲ್‌ಗಳ ಮೂಲಕ ಕನ್ನಡ ಸಾಹಿತ್ಯ ಪರವಾದ ಚಟುವಟಿಕೆಗಳಿಗೆ ಒತ್ತು ನೀಡುವ ಕೆಲಸವನ್ನು ಮಾಡಬೇಕಿದೆ. ಇದಕ್ಕೆ ಬದಲಾಗಿ ಮೊಬೈಲ್‌ಗೆ ದಾಸರಾಗುವುದು ಬೇಡ. ಕೃಪಾದೇವರಾಜ್ ಅವರ ಮಂತ್ರ ಪುಷ್ಪ ಕೃತಿಯ ಕಥೆಗಳು ಓದುಗರೊಂದಿಗೆ ಮಾತನಾಡುತ್ತವೆ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೃಪಾದೇವರಾಜ್ ಗೌರಮ್ಮ ದತ್ತಿ ಪ್ರಶಸ್ತಿ ನನಗೆ ಸಂಭ್ರಮ ತಂದಿದ್ದು, ಮಾತನ್ನು ಮೂಕವಾಗಿಸಿದೆ. ಬಾಲ್ಯದಿಂದಲೇ ನನ್ನಲ್ಲಿದ್ದ ಓದಿನ ಹಂಬಲ ಇಂದು ನನ್ನನ್ನು ಈ ಸ್ಥಾನದಲ್ಲಿ ನಿಲ್ಲಲು ನೆರವಾಗಿದೆ. ನನ್ನೊಳಗಿನ ಭಾವನೆಗಳನ್ನು ಹೊರ ಹಾಕುವಲ್ಲಿ ಅಕ್ಷರಗಳು ಸಹಕಾರಿಯಾಗಿವೆ ಎಂದರು.
ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ವಿ. ರವಿಕುಮಾರ್ ಮಾತನಾಡಿ, ಸಾಹಿತ್ಯಾಸಕ್ತಿಯನ್ನು ಪ್ರತಿಯೊಬ್ಬರೂ ಮೂಡಿಸಿಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ಮಾತನಾಡಿ ಕೊಡಗಿನ ಗೌರಮ್ಮ ಅವರ ಕಥೆಗಳು ಗಟ್ಟಿತನದಿಂದ ಕೂಡಿವೆ. ಹಾಗಾಗಿಯೇ ಅವು ಇಂದೂ ಸಹ ಚರ್ಚೆಗೆ ಒಳಗಾಗುತ್ತಿವೆ. ಅವರು ರಚಿಸಿರುವ ಸಾಹಿತ್ಯ ಯುವ ಬರಹಗಾರರಿಗೆ ಪ್ರೇರಣೆ ನೀಡಿದೆ ಮತ್ತು ಮುಂದೆಯೂ ನೀಡುತ್ತಲೇ ಇರುತ್ತದೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಕೊಡಗಿನ ಗೌರಮ್ಮ ಅವರ ಪುತ್ರ ಬಿ.ಜಿ. ವಸಂತ ಅವರು ಜಿಲ್ಲಾ ಕಸಾಪದಲ್ಲಿ ತಮ್ಮ ತಾಯಿಯ ಸ್ಮರಣಾರ್ಥ ದತ್ತಿ ಸ್ಥಾಪಿಸಿದ್ದು, ಇಲ್ಲಿಯವರೆಗೆ 22 ಲೇಖಕಿಯರಿಗೆ ಪ್ರಶಸ್ತಿ ನೀಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಜಿಲ್ಲಾ ಕಸಾಪ ತನ್ನ ಸಾಹಿತ್ಯ ಕಾರ್ಯಕ್ರಮಗಳನ್ನು ಹಳ್ಳಿಯ ಗ್ರಾಮೀಣ ಭಾಗಗಳ ಕಡೆಗೆ ಕೊಂಡೊಯ್ಯುವ ಮೂಲಕ ಗ್ರಾಮೀಣ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.
ಗೌರಮ್ಮ ಸಣ್ಣ ಕಥೆಗಳ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯ ಎ.ಐ. ಕುಬ್ರಾ, ಕಡಗದಾಳು ಸರ್ಕಾರಿ ಪ್ರೌಢಶಾಲೆಯ ಬಿ.ಎನ್. ಹರ್ಷಿತ ಹಾಗೂ ತೃತೀಯ ಸ್ಥಾನ ಪಡೆದ ಕಡಗದಾಳು ಸರ್ಕಾರಿ ಪ್ರೌಢಶಾಲೆಯ ಭಾನುಪ್ರಿಯ ಅವರಿಗೆ ಇದೇ ಸಂದರ್ಭ ಬಹುಮಾನಗಳನ್ನು ವಿತರಿಸಲಾಯಿತು. ಕಡಗದಾಳು ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಉಪನ್ಯಾಸಕಿ ಪ್ರತಿಮಾ ರೈ, ಜಿಲ್ಲಾ ಕಸಾಪ ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net