ತಾಲ್ಲೂಕು ಮಟ್ಟದ ಪ್ರಜಾಸೇವಾ ಆಂದೋಲನ

ಸಾರ್ವಜನಿಕರಿಂದ ೧೦೧ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ : ಉಸ್ತುವಾರಿ ಸಚಿವ ನರೇಂದ್ರ ಸ್ವಾಮಿ ಭಾಗಿ
ತಾಲ್ಲೂಕು ಮಟ್ಟದ ಪ್ರಜಾಸೇವಾ ಆಂದೋಲನ
ತಾಲ್ಲೂಕು ಮಟ್ಟದ ಪ್ರಜಾಸೇವಾ ಆಂದೋಲನಕ್ಕೆ ಉಸ್ತುವಾರಿ ಸಚಿವ ನರೇಂದ್ರ ಸ್ವಾಮಿ ಅವರು ಶನಿವಾರ ಚಾಲನೆ ನೀಡಿದರು.
Published on: 

ಮಡಿಕೇರಿ: ಈ ಬಾರಿ ಹವಾಮಾನ ವೈಪರೀತ್ಯದಿಂದ ಮುಂದಿನ ಎರಡು-ಮೂರು ತಿಂಗಳ ನಂತರ ಅತ್ಯಂತ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೃಷಿ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಎಚ್ಚರಿಸಿದರು.

ವಿರಾಜಪೇಟೆ ತಾಲ್ಲೂಕು ಆಡಳಿತ ವತಿಯಿಂದ ವಿರಾಜಪೇಟೆ ಬಳಿ ನಡೆದ ತಾಲ್ಲೂಕು ಮಟ್ಟದ ಪ್ರಜಾಸೇವಾ ಆಂದೋಲನಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಎಲ್-ನಿನೋ ಪರಿಣಾಮದಿಂದ ಇಡೀ ಪ್ರಪಂಚ ಹವಾಮಾನ ವೈಪರೀತ್ಯ ಎದುರಿಸುತ್ತಿದೆ. ಇದರಿಂದಾಗಿ ಆಹಾರ ಉತ್ಪಾದನೆ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ, ಜೊತೆಗೆ ಕುಡಿಯುವ ನೀರಿನ ಸಮಸ್ಯೆ ಮತ್ತಿತರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಎಚ್ಚರಿಸಿದರು.

ಮುಂದಿನ ದಿನಗಳಲ್ಲಿ ಮೂರರಿಂದ ಆರು ಡಿಗ್ರಿ ಸೆಂಟಿಗ್ರೇಡ್ ನಷ್ಟು ಬಿಸಿಲಿನ ಪ್ರಖರತೆ ಹೆಚ್ಚಾಗಲಿದೆ. ಆದ್ದರಿಂದ ಅಗತ್ಯ ಮುನ್ನೆಚ್ಚರ ವಹಿಸಬೇಕು ಎಂದು ಸಚಿವರು ಕಿವಿಮಾತು ಹೇಳಿದರು.

ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಲಿದೆ. ಸೈಕ್ಲೋನ್ ಪರಿಣಾಮದಿಂದ ಅಲ್ಪಸ್ವಲ್ಪ ಮಳೆ ಆಗಬಹುದು. ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಕೃಷಿ ಸಚಿವರ ಸಮ್ಮೇಳನದಲ್ಲಿ ಈ ಮಾಹಿತಿ ದೊರೆತಿದೆ ಎಂದು ಸಚಿವರು ತಿಳಿಸಿದರು.

ಕೊಡಗು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು. ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಪ್ರಯತ್ನಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರ ಪ್ರಜಾಸೇವಾ ಅಭಿಯಾನ ಆಯೋಜಿಸಿದ್ದು, ತಾಲ್ಲೂಕು, ಹೋಬಳಿ, ಗ್ರಾ.ಪಂ.ಮಟ್ಟದಲ್ಲಿಯೂ ಸಭೆ ನಡೆಸಿ ಪರಿಹಾರ ಒದಗಿಸಲು ಮುಂದಾಗಲಾಗಿದೆ ಎಂದು ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಅವರು ಹೇಳಿದರು.

ಸರ್ಕಾರ ಗ್ಯಾರಂಟಿ ಯೋಜನೆ ಜೊತೆಗೆ ಹಲವು ಕಾರ್ಯಕ್ರಮ ನೀಡುತ್ತಿದೆ. ಪಾರದರ್ಶಕ ಆಡಳಿತ ನೀಡಲು ಸರ್ಕಾರ ಮುಂದಾಗಿದೆ. ಕೃಷಿ ಇಲಾಖೆ ವ್ಯಾಪ್ತಿಯಲ್ಲಿ ಕೃಷಿ ಯಂತ್ರೋಪಕರಣ ಬದಲಾಗಿ, ೩ ಎಕರೆ ಒಳಗೆ ಇರುವ ಭೂಮಿಯನ್ನು ಸರ್ಕಾರವೇ ಉಳುಮೆ ಮಾಡಲಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದರು.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಮಾತನಾಡಿ, ಸರ್ಕಾರ ಪ್ರಜಾಸೇವಾ ಆಂದೋಲನವನ್ನು ವಿವಿಧ ಹಂತದಲ್ಲಿ ಆಯೋಜಿಸಿದ್ದು, ಅಧಿಕಾರಿಗಳು ಬದ್ಧತೆ, ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಆಡಳಿತ ನಡೆಸಬೇಕು ಎಂದು ಸಲಹೆ ನೀಡಿದರು.

ಸರ್ಕಾರ ಎಲ್ಲಾ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದು, ಹಲವು ಯೋಜನೆಗಳನ್ನು ಬಳಸಿಕೊಂಡು ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಎ.ಎಸ್.ಪೊನ್ನಣ್ಣ ಅವರು ಸಲಹೆ ಮಾಡಿದರು.

ತಾಲ್ಲೂಕು ಮಟ್ಟದ ಪ್ರಜಾಸೇವಾ ಆಂದೋಲನದಲ್ಲಿ ಸಾರ್ವಜನಿಕರಿಂದ ೧೦೧ ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾದವು. ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್, ಕ್ರೀಡಾ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ತಾಲ್ಲೂಕು ಅಧ್ಯಕ್ಷರಾದ ಜಾನ್ಸನ್, ಬಗರ್ ಹುಕುಂ ಸಮಿತಿ ಅಧ್ಯಕ್ಷ ಅಬ್ದುಲ್ ಸಲಾಂ, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಅಭಿಷೇಕ್, ತಹಶಿಲ್ದಾರರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಕಂದಾಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕೃಷಿ, ತೋಟಗಾರಿಕೆ, ಪಶುಪಾಲನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸೆಸ್ಕ್, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಗ್ರ ಗಿರಿಜನ ಕಲ್ಯಾಣ, ಆಹಾರ ಹೀಗೆ ವಿವಿಧ ಇಲಾಖೆಗಳಿಂದ ಮಾಹಿತಿ ಮಳಿಗೆ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು, ಸಚಿವರು ಮಾಹಿತಿ ಮಳಿಗೆ ವೀಕ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net