ಹಿಂದುತ್ವವೇ ಭಾರತದ ರಾಷ್ಟ್ರೀಯತೆ

ಶೋಭಾಯಾತ್ರೆಯಲ್ಲಿ ಛದ್ಮ ವೇಷಧಾರಿ ಮಕ್ಕಳು.
ಶೋಭಾಯಾತ್ರೆಯಲ್ಲಿ ಛದ್ಮ ವೇಷಧಾರಿ ಮಕ್ಕಳು.
Published on
ಸುಂಟಿಕೊಪ್ಪ: ಸಾಮರಸ್ಯ ಸಂಘಟನೆ ಧರ್ಮ, ಸಂಸ್ಕೃತಿ ಸಮಾಜವನ್ನು ಕಟ್ಟುವ ಮೂಲಕ ರಾಷ್ಟ್ರವನ್ನು ಸಧೃಢಗೊಳಿಸುವ ಕಾಯಕದಲ್ಲಿ ನಾವೆಲ್ಲರೂ ಕಟಿಬದ್ಧರಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಪ್ರಚಾರ ಪ್ರಮುಖ್ ಸೂರಜ್ ನುಡಿದರು.
ಇಲ್ಲಿಗೆ ಸಮೀಪದ ಏಳನೇ ಹೊಸಕೋಟೆ ಮಂಡಲದ ಹಿಂದೂ ಸಂಗಮ ಆಯೋಜನಾ ಸಮಿತಿಯಿಂದ ಅಲ್ಲಿನ ಮಹಾಗಣಪತಿ-ಗೋಪಾಲಕೃಷ್ಣ ದೇಗುಲ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಹಿಂದುತ್ವವೇ ಭಾರತದ ರಾಷ್ಟ್ರೀಯತೆ. ಶ್ರೇಷ್ಠವಾದ ಚಿಂತನೆಯೇ ಧರ್ಮ. ರಾಮನ ನಡೆ, ಕೃಷ್ಣನ ನುಡಿ, ರಾಮಾಯಣ, ಮಹಾಭಾರತವೇ ಜೀವನಕ್ಕೆ ಪಾಠ. ಹಿಂದೂ ಎಂಬುದು ರಾಷ್ಟ್ರೀಯತೆಯೇ ಹೊರತು ಅದೊಂದು ಜಾತಿ ಸೂಚಕ ಪದವಲ್ಲ ಎಂದು ವಿಶ್ಲೇಷಿದರು.
ನಾವೆಲ್ಲರೂ ರಾಷ್ಟ್ರೀಯತೆಯ ಪರಿಕಲ್ಪನೆಯಡಿ ತಾಯಿ ಭಾರತೀಯನ್ನು ಪೂಜಿಸುವ ಮೂಲಕ ಒಂದೇ ತಾಯಿಯ ಮಕ್ಕಳು ಎಂಬುದನ್ನು ಅರ್ಥೈಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ತನ್ನ ಶತಮಾನೋತ್ಸವ ಸಂದರ್ಭದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸುತ್ತಿದೆ. ಆ ಮೂಲಕ ಸಮಾಜವನ್ನು ಜಾಗೃತಗೊಳಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕಂಬಿಬಾಣೆಯ ಶ್ರೀ ಬ್ರಹ್ಮ ಜ್ಞಾನ ಧ್ಯಾನ ಮಂದಿರದ ಮುಖ್ಯಸ್ಥ ಎಂ.ವಿ.ರಘುನಾಥ್ ಮಾತನಾಡಿ, ಸನಾತನ ಎಂದರೆ ಸಂಸ್ಕೃತದಲ್ಲಿ ಶಾಶ್ವತ, ಪ್ರಾಚೀನ, ಅನಾದಿ ಅಥವಾ ಸದಾ ಅಸ್ತಿತ್ವದಲ್ಲಿರುವ ಎಂಬ ಅರ್ಥಗಳಿವೆ. ಇದು ಕಾಲಾತೀತ ಸತ್ಯಗಳು, ಧರ್ಮ ಮತ್ತು ಬದುಕಿನ ಮಾರ್ಗ ಸೂಚಿಸುತ್ತದೆ. ಇದನ್ನು ಸಾಮಾನ್ಯವಾಗಿ ಹಿಂದೂ ಧರ್ಮದ ಮೂಲ ರೂಪ ಎಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮಗ್ರಂಥಗಳಲ್ಲಿ ಅಪಾರವಾದ ಜ್ಞಾನ ಭಂಡಾರವಿದೆ. ಆದ್ದರಿಂದ ವೇದ, ಉಪನಿಷತ್ತು, ಭಗವದ್ಗೀತೆ, ರಾಮಾಯಣ ಮುಂತಾದವುಗಳನ್ನು ಅಧ್ಯಯನ ಮಾಡುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕಿ ಕೆ.ಎ.ಸಾವಿತ್ರಿ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಮೆಟ್ನಳ್ಳ ಎಸ್‌ಎಸ್‌ಡಿಪಿ ಬಳಿಯಿಂದ ಮಹಾಗಣಪತಿ ದೇವಾಲಯದವರೆಗೆ ಶೋಭಾಯಾತ್ರೆ ನಡೆಯಿತು. ಶೋಭಾಯಾತ್ರೆಯಲ್ಲಿ ಛದ್ಮವೇಷಧಾರಿ ಮಕ್ಕಳು ಗಮನ ಸಳೆದರು. 40ಕ್ಕೂ ಅಧಿಕ ಮಕ್ಕಳು ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಗೋಪೂಜೆ, ಭಾರತಮಾತೆಗೆ ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಏಳನೇ ಹೊಸಕೋಟೆ ಮಂಡಲದ ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಕೆ.ಎಂ.ರಮೇಶ್, ಮಹಾಗಣಪತಿ-ಗೋಪಾಲಕೃಷ್ಣ ದೇವಾಲಯ ಸಮಿತಿ ಅಧ್ಯಕ್ಷ ದಾಸಂಡ ರಮೇಶ್ ಚಂಗಪ್ಪ, ಹಿಂದು ಗೆಳೆಯರ ಬಳಗದ ಅಧ್ಯಕ್ಷ ಶರವಣ,ಏಳನೇ ಹೊಸಕೋಟೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಲಲಿತಾ, ಶಿಕ್ಷಕಿಯರಾದ ಶುಭಾ ಚಂದ್ರಶೇಖರ್, ಪ್ರಿಯಾ, ಎಸ್‌ಎನ್‌ಡಿಪಿ ಅಧ್ಯಕ್ಷ ರಿಜೇಶ್, ಬಸವೇಶ್ವರ ದೇವಾಲಯ ಸಮಿತಿ ಕಾರ್ಯದರ್ಶಿ ಕೆ.ಜಿ. ಶಿವನ್, ತಾಲೂಕು ಸೇವಾ ಪ್ರಮುಖ್ ಮುರಳಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net