ಮಡಿಕೇರಿಯಲ್ಲಿ ನಡೆದ ಕೆಂಪೇಗೌಡರ ಜಯಂತಿ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಎಸ್.ಎಂ. ಚಂಗಪ್ಪ, ಆನಂದ್ ಕರಂದ್ಲಾಜೆ, ನಿತಿನ್ ಚಕ್ಕಿ, ಸಿ.ಬಿ. ರಾಮಚಂದ್ರ, ಅಂಬೆಕಲ್ಲು ಕುಶಾಲಪ್ಪ, ಶಾಂತಳ್ಳಿ ಲೋಕೇಶ್, ಸೂರ್ತಲೆ ಸೋಮಣ್ಣ ಮತ್ತಿತರರು ಇದ್ದರು.
ಆದರ್ಶ ಆಡಳಿತಗಾರ, ನಾಡಪ್ರಭು ಕೆಂಪೇಗೌಡ ಬೆಂಗಳೂರನ್ನು ಮಾದರಿ ನಗರವನ್ನಾಗಿ ನಿರ್ಮಿಸಿದ್ದರು. ಆದರೆ ಇಂದು ಬೆಂಗಳೂರು ಮಿತಿಮೀರಿ ಬೆಳೆದಿದ್ದು ಸುಸ್ಥಿರ ಅಭಿವೃದ್ಧಿಗೆ ಮತ್ತಷ್ಟು ಒತ್ತು ನೀಡಬೇಕಿದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಶನಿವಾರ ನಡೆದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೆಂಪೇಗೌಡರು ಅಂದಿನ ಆಡಳಿತ ಅವಧಿಯಲ್ಲಿ ಬೆಂಗಳೂರು ಪ್ರಾಂತ್ಯದಲ್ಲಿ ನೂರಾರು ಕೆರೆ-ಕಟ್ಟೆಗಳನ್ನು ನಿರ್ಮಿಸಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದAತೆ ನೋಡಿಕೊಂಡಿದ್ದರು. ಆದರೆ ಇಂದು ಬೆಂಗಳೂರು ಹೆಚ್ಚಿನ ವೇಗದ ಬೆಳವಣಿಗೆಯಿಂದ ಸುಸ್ಥಿರ ಅಭಿವೃದ್ಧಿ ಆಗುತ್ತಿದೆಯೇ ಎಂಬ ಬಗ್ಗೆ ಯೋಚಿಸಬೇಕಿದೆ.
ಕೆಂಪೇಗೌಡ ಜಯಂತಿಯನ್ನು ಒಕ್ಕಲಿಗರ ಸಂಘದಿAದ ತಾಲೂಕು ಮಟ್ಟದಲ್ಲಿಯೂ ಆಯೋಜಿಸುವಂತಾಗಬೇಕು. ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ತಾಲೂಕು ಕೇಂದ್ರ ಕುಶಾಲನಗರದಲ್ಲಿ ಒಕ್ಕಲಿಗರ ಸಂಘಕ್ಕೆ ಜಾಗ ಒದಗಿಸುವುದು ಮತ್ತು ಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು, ಜತೆಗೆ ಸೋಮವಾರಪೇಟೆಯ ಒಕ್ಕಲಿಗರ ಸಂಘಕ್ಕೆ 50 ಲಕ್ಷ ರೂ. ಅನುದಾನ, ಹಾಗೆಯೇ ಕುವೆಂಪು ಶಾಲೆ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲಾಗುವುದು, ಜತೆಗೆ ಕೊಡಗು ಗೌಡ ವಿದ್ಯಾ ಸಂಘಕ್ಕೆ 25 ಲಕ್ಷ ರೂ ಬಿಡುಗಡೆ ಮಾಡಿಸಲಾಗುವುದು. ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆ ಬಳಿ ಉದ್ಯಾನವನ ಅಭಿವೃದ್ಧಿಗೆ ಅನುದಾನ ನೀಡಲಾಗುವುದು.
ಎಲ್ ನಿನೋ ಪರಿಣಾಮದಿಂದ ಮಳೆಯಾಗುತ್ತಿಲ್ಲ, ಎಲ್ಲೋ ಸಮುದ್ರ ಪ್ರದೇಶದಲ್ಲಿ ಎಲ್ ನಿನೋ ಆಗಿರುವುದಕ್ಕೆ ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಸಾಕಷ್ಟು ಪ್ರಮಾಣದಲ್ಲಿ ಮಳೆ ಕಡಿಮೆಯಾಗಿದೆ. ರಾಜ್ಯದ ಮಲೆನಾಡು ಭಾಗದಲ್ಲಿ, ಅದರಲ್ಲೂ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾದಲ್ಲಿ ಇಡೀ ನಾಡಿಗೆ ಹಾಗೂ ದಕ್ಷಿಣ ಭಾರತಕ್ಕೆ ಸುಭಿಕ್ಷೆ ತರಲಿದೆ. ಆದ್ದರಿಂದ ಬೆಂಗಳೂರಿನ ಅಭಿವೃದ್ಧಿಯಲ್ಲಿ ಶೇ.1 ರಷ್ಟು ಪಾಲನ್ನು ಕೊಡಗು ಜಿಲ್ಲೆಗೆ ನೀಡುವಂತಾಗಬೇಕು. ಆ ನಿಟ್ಟಿನಲ್ಲಿ ಬೆಂಗಳೂರು ನಗರ ಅಭಿವೃದ್ಧಿ ಸಚಿವರ ಜತೆ ಚರ್ಚಿಸಲಾಗಿದೆ ಎಂದು ಹೇಳಿದರು.
ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ ಮಾತನಾಡಿ ಆದರ್ಶ ಆಡಳಿತಗಾರ ಕೆಂಪೇಗೌಡರAತೆ ಪ್ರತಿಯೊಬ್ಬರಲ್ಲಿಯೂ ದೂರದೃಷ್ಟಿ ಇರಬೇಕು. ಈಗ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ 32 ಶಾಸಕರು, ಹಲವರು ಎಂ.ಪಿಗಳು ಇದ್ದು ಅವರು ಬೆಂಗಳೂರು ಅಭಿವೃದ್ದಿಗೆ ಶ್ರಮಿಸಲಿದ್ದಾರೆ. ಸದ್ಯ ಶ್ರೀರಂಗಪಟ್ಟಣ-ಗುಡ್ಡೆ ಹೊಸೂರು ರಾಷ್ಟ್ರೀಯ ಮಾರ್ಗದಲ್ಲಿ ಹೆದ್ದಾರಿ ಕೆಲಸ ನಡೆಯುತ್ತಿದ್ದು, ಗುಡ್ಡೆ ಹೊಸೂರಿನಿಂದ ಮಡಿಕೇರಿ ವರೆಗೆ ವಾಹನ ದಟ್ಟಣೆ ಹೆಚ್ಚಾಗಿ ಸಮಸ್ಯೆಗಳು ಸೃಷ್ಟಿಯಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಯೋಚಿಸಬೇಕಿದೆ. ಅರಣ್ಯವೂ ಉಳಿಯಬೇಕು, ಅಭಿವೃದ್ಧಿಯೂ ಆಗಬೇಕು. ಆ ನಿಟ್ಟಿನಲ್ಲಿ ಚಿಂತಿಸಬೇಕಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಒಂದೇ ಕಟ್ಟಡದಲ್ಲಿ ಎಲ್ಲಾ ಅಭಿವೃದ್ಧಿ ಇಲಾಖೆಗಳ ಕಚೇರಿಗಳು ಇರುವಂತಾಗಬೇಕು. ಇದರಿಂದ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಆಗಲಿದೆ. ಆ ನಿಟ್ಟಿನಲ್ಲಿ ಚರ್ಚೆಗಳು ನಡೆಯಬೇಕು ಎಂದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ ಮಾತನಾಡಿ ಕೆಂಪೇಗೌಡರು ತಮ್ಮ ಆಡಳಿತ ಅವಧಿಯಲ್ಲಿ ನಾಡನ್ನು ಕಟ್ಟಲು ಶ್ರಮಿಸಿದ್ದಾರೆ. ಇವರ ಪ್ರತಿಮೆಯನ್ನು ಮಡಿಕೇರಿ ಅಥವಾ ಕುಶಾಲನಗರದಲ್ಲಿ ನಿರ್ಮಿಸುವಂತಾಗಬೇಕು ಎಂದು ಹೇಳಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಮಾತನಾಡಿ ನಾಡಪ್ರಭು ಕೆಂಪೇಗೌಡ ಬೆಂಗಳೂರು ಅಭಿವೃದ್ಧಿಗೆ ತಮ್ಮದೇ ಕೊಡಗೆ ನೀಡಿದ್ದು, 63 ಪೇಟೆಗಳು, 300 ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿದ್ದರು. ಬೆಂಗಳೂರು ಇಂದು ಅಂತರರಾಷ್ಟ್ರೀಯ ನಗರವಾಗಿ ವಿಶ್ವದ ಭೂಪಟದಲ್ಲಿ ತನ್ನದೇ ಆದ ಸ್ಥಾನ ಪಡೆಯುವಲ್ಲಿ ಕೆಂಪೇಗೌಡರ ದೂರದೃಷ್ಟಿ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಕೆಂಪೇಗೌಡರನ್ನು ಸದಾ ಸ್ಮರಿಸುವಂತಾಗಬೇಕು, ಜತೆಗೆ ಮುಂದಾಲೋಚನೆಯೂ ಇರಬೇಕು ಎಂದರು.
ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಮಾತನಾಡಿ ಕೆಂಪೇಗೌಡರು 500 ವರ್ಷಗಳ ಹಿಂದೆ ಬೆಂಗಳೂರು ನಗರವನ್ನು ದೂರದೃಷ್ಟಿಯ ಕಲ್ಪನೆ ಇಟ್ಟುಕೊಂಡು ಅಭಿವೃದ್ಧಿಗೆ ಚಾಲನೆ ನೀಡಿದ್ದರು. ಹಲವು ಅಭಿವೃದ್ಧಿ ಹೊಂದಿದ ನಗರಗಳು ನದಿ ಹಾಗೂ ಸಮುದ್ರದ ಬಳಿ ಇವೆ. ಆದರೆ ಬೆಂಗಳೂರು ನದಿ, ಸಮುದ್ರದ ಬಳಿ ಇಲ್ಲದೆಯೂ ಕೆಂಪೇಗೌಡರು ಕಟ್ಟಿದ ಕೆರೆ ಕಟ್ಟೆಗಳಿಂದ ಅಭಿವೃದ್ಧಿ ಹೊಂದಿದೆ ಎಂದರೆ ಅತಿಶಯೋಕ್ತಿಯಲ್ಲ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ಸಿ.ಬಿ. ರಾಮಚಂದ್ರ ಮಾತನಾಡಿ ಕೆಂಪೇಗೌಡರ ಶಿಸ್ತು, ಸಮಯ ಪ್ರಜ್ಞೆ ಮತ್ತು ದೂರದೃಷ್ಟಿಯಿಂದ ಬೆಂಗಳೂರು ನಗರ ವಿಶ್ವ ಮಟ್ಟದಲ್ಲಿ ಅಭಿವೃದ್ಧಿ ಕಂಡಿದೆ. ಬ್ರಿಟಿಷರು ಬಾಂಬೆ, ಚೆನೈ, ಕೊಲ್ಕತ್ತ ಮತ್ತು ದೆಹಲಿಯನ್ನು ಅಭಿವೃದ್ಧಿ ಪಡಿಸಿದರು, ಅದಕ್ಕೂ ಮೊದಲು ರಾಜ ಮಹಾರಾಜರು ಹಲವು ನಗರ ಮತ್ತು ಪಟ್ಟಣವನ್ನು ಬೆಳಿಸಿದರು, ಆ ನಿಟ್ಟಿನಲ್ಲಿ ಕೆಂಪೇಗೌಡರು ಬೆಂಗಳೂರನ್ನೂ ಮಾದರಿ ಉದ್ಯಾನವನ ನಗರವಾಗಿ ನಿರ್ಮಿಸುವಲ್ಲಿ ಅಡಿಪಾಯಕ್ಕೆ ಚಾಲನೆ ನೀಡಿದ್ದರು ಎಂದರು.
ಕೊಡಗು ಗೌಡ ಸಮಾಜದ ಅಧ್ಯಕ್ಷ ಡಿ.ಎಸ್. ಆನಂದ, ಮಡಿಕೇರಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವಿ.ಜಿ. ಮೋಹನ್, ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಅಂಬೆಕಲ್ಲು ನವೀನ್ ಅವರು ಕುಶಾಲಪ್ಪ ಮಾತನಾಡಿದರು.
ನಾಡಪ್ರಭು ಕೆಂಪೇಗೌಡ ಜೀವನ ಚರಿತ್ರೆ ಕುರಿತು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ಶಾಸಕ ಡಾ. ಮಂತರ್ ಗೌಡ ವಿತರಿಸಿದರು.
ಸರ್ವೋದಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಪ್ರಮುಖರಾದ ಶಾಂತಳ್ಳಿ ಲೋಕೇಶ್, ಸೂರ್ತಲೆ ಸೋಮಣ್ಣ, ಗಣಿ ಪ್ರಸಾದ್, ವಿ.ಪಿ. ಸುರೇಶ್, ಎಚ್.ಟಿ. ಅನಿಲ್, ಶಿರಸ್ತೆದಾರ ದೇವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ, ಮಣಜೂರು ಮಂಜುನಾಥ್ ಇದ್ದರು.