ತಣ್ಣೀರುಹಳ್ಳ ಗ್ರಾಮದಲ್ಲಿ ಪ್ರತಿಷ್ಠಾ ಬಂಧ ಬ್ರಹ್ಮಕಲಶೋತ್ಸವ
ಸೋಮವಾರಪೇಟೆ ತಾಲೂಕಿನ ತಣ್ಣೀರುಹಳ್ಳ ವೀರಭದ್ರ ಹಾಗೂ ಸಪರಿವಾರ ದೇವರುಗಳ ದೇವಾಲಯ ಪ್ರತಿಷ್ಠಾ ಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಧರ್ಮಗುರು ಮರ್ಝೂಕ್ ಸಖಾಫಿ, ಸ್ಥಳೀಯ ನಿವಾಸಿ ಇಬ್ರಾಹಿಂ ಅವರನ್ನು ಗೌರವಿಸಲಾಯಿತು. ದೇವಾಲಯ ಸಮಿತಿ ಅಧ್ಯಕ್ಷ ಕೆ.ರವಿ, ಉಪಾಧ್ಯಕ್ಷ ಸತ್ಯ, ಕಾರ್ಯದರ್ಶಿ ಅನಿಲ್ ಶೆಟ್ಟಿ, ಖಜಾಂಚಿ ಏಳುಮಲೈ ಇದ್ದರು.
ಸೋಮವಾರಪೇಟೆ : ತಾಲೂಕಿನ ತಣ್ಣೀರುಹಳ್ಳ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ವೀರಭದ್ರ ಸ್ವಾಮಿ ಹಾಗೂ ಸಪರಿವಾರ ದೇವರುಗಳ ದೇವಾಲಯ ಪ್ರತಿಷ್ಠಾ ಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ವಿಧಿ, ವಿಧಾನಗಳೊಂದಿಗೆ ಶ್ರದ್ಧಾ, ಭಕ್ತಿಯಿಂದ ಶುಕ್ರವಾರ ನೆರವೇರಿತು.
ಬಸವೇಶ್ವರ ದೇವಾಲಯ ಸಮಿತಿಯು ಗ್ರಾಮಸ್ಥರು ಹಾಗೂ ದಾನಿಗಳ ನೆರವಿನಿಂದ 80 ಲಕ್ಷ ರೂ. ವೆಚ್ಚದಲ್ಲಿ ನೂತನ ದೇವಾಲಯ ನಿರ್ಮಿಸಿ, ಸೇವೆಗೆ ಸಮರ್ಪಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ನಾಲ್ಕು ದಿನಗಳಿಂದ ನಡೆದ ಧಾರ್ಮಿಕ ವಿಧಿ, ವಿಧಾನ ಗಳ ಮೂಲಕ ಲಿಂಗರೂಪಿ ವೀರಭದ್ರ ಸ್ವಾಮಿ, ಗಣಪತಿ ಹಾಗೂ ಬಸವೇಶ್ವರ ದೇವರುಗಳ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ಶುಕ್ರವಾರ ಸಮಾಪನಗೊಂಡಿತು.
ಮೂಡಿಗೆರೆಯ ವೇದಮೂರ್ತಿ ಶಿವಪ್ರಸಾದ್ ಭಟ್ ಪುರೋಹಿತ್ವದ ಅರ್ಚಕರ ತಂಡ ವಿವಿಧ ಹೋಮ ಹವನಗಳನ್ನು ನೆರವೇರಿಸಿತು.
ದೇವಾಲಯ ಸಮಿತಿ ಅಧ್ಯಕ್ಷ ಕೆ.ರವಿ, ಉಪಾಧ್ಯಕ್ಷ ಸತ್ಯ, ಕಾರ್ಯದರ್ಶಿ ಅನಿಲ್ ಶೆಟ್ಟಿ, ಖಜಾಂಚಿ ಏಳುಮಲೈ, ದೇವಾಲಯ ನಿರ್ಮಾಣದ ಸ್ಥಳ ದಾನಿಗಳಾದ ರಾಣಿ ನರೇಂದ್ರ ಕುಟುಂಬಸ್ಥರು ಇದ್ದರು.
ಸ್ಥಳೀಯ ಜುಮ್ಮಾ ಮಸೀದಿಯ ಧರ್ಮಗುರು ಮರ್ಝೂಕ್ ಸಖಾಫಿ, ಇಬ್ರಾಹಿಂ ಉತ್ಸವದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.