ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ರೇಣುಕಾಚಾರ್ಯ, ಬಸವ ಜಯಂತಿ

ಶನಿವಾರಸಂತೆ ಸಮೀಪದ ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರಾ ಮೈದಾನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡಗು ಜಿಲ್ಲಾ ಘಟಕ ಹಾಗೂ ಯುವ ಘಟಕದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಮಹಾತ್ಮರ ಜಯಂತ್ಯುತ್ಸವ
ಶನಿವಾರಸಂತೆ ಸಮೀಪದ ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರಾ ಮೈದಾನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡಗು ಜಿಲ್ಲಾ ಘಟಕ ಹಾಗೂ ಯುವ ಘಟಕದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಮಹಾತ್ಮರ ಜಯಂತ್ಯುತ್ಸವ
Published on
ಶನಿವಾರಸಂತೆ : ಕೊಡಗಿನ ಪುಣ್ಯಭೂಮಿಯಲ್ಲಿ ಶರಣರ ಜಯಂತಿ, ಕೊಡಗನ್ನು ಆಳಿದ ಅರಸರ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸಂಸ್ಮರಣೋತ್ಸವವನ್ನು ಆಚರಿಸುವ ಮೂಲಕ ವೀರಶೈವ ಸಮುದಾಯ ಆಧ್ಯಾತ್ಮಿಕ, ಸಾಮಾಜಿಕ ಮತ್ತು ರಾಷ್ಟ್ರಭಕ್ತಿಗೆ ಸಂಗಮ ಕಲ್ಪಿಸಿಕೊಟ್ಟಿರುವುದು ಶ್ಲಾಘನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಸಮೀಪದ ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರಾ ಮೈದಾನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡಗು ಜಿಲ್ಲಾ ಘಟಕ ಹಾಗೂ ಯುವ ಘಟಕದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಬಸವ ಜಯಂತಿ, ಸಿದ್ಧ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ರೇಣುಕಾಚಾರ್ಯ ಜಯಂತಿ, ಕೊಡಗನ್ನು ಆಳಿದ ಹಾಲೇರಿ ಅರಸರ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಹೆಮ್ಮನೆ ಪುಟ್ಟಬಸಪ್ಪ ಅವರ ಸಂಸ್ಮರಣೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬಸವಣ್ಣನವರು 12ನೇ ಶತಮಾನದಲ್ಲಿ ಸಾಮಾಜಿಕ ಚಿಂತನೆ, ಸಮಾನತೆ, ಜಾತಿ, ಬೇಧ ಕುರಿತು ಸಾಮಾಜಿಕ ಹೋರಾಟ ಮಾಡಿದ್ದರು. ಇವರಿಗೆ ಪೂರಕವಾಗಿ 21ನೇ ಶತಮಾನದಲ್ಲಿ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಶಿಕ್ಷಣ, ದಾಸೋಹ, ಸಮಾಜ ಸೇವೆ ಮೂಲಕ ಮುಂದಿನ ಪೀಳಿಗೆಗೂ ದಾರಿ, ದೀಪವಾಗಿದ್ದಾರೆ ಎಂದು ತಿಳಿಸಿದರು.
ರಾಜ್ಯಕ್ಕೆ ವೀರಶೈವ ಸಮುದಾಯದವರ ಆಧ್ಯಾತ್ಮಿಕ, ಸಂಸ್ಕೃತಿ, ಪರಂಪರೆ, ಸಾಮಾಜಿಕ ಕೊಡುಗೆ ಅಪಾರವಾದದ್ದು. ಈ ನಿಟ್ಟಿನಲ್ಲಿ ವೀರಶೈವ ಸಮುದಾಯ ಒಟ್ಟಾಗಿ ನಿಂತು ಸಮುದಾಯದ ಸಂಘಟನೆಯ ಬಲವರ್ಧನೆಗೆ ಸಹಕರಿಸಬೇಕು. ಕೊಡಗಿನಲ್ಲಿ ಸಿ ಆ್ಯಂಡ್ ಲ್ಯಾಂಡ್ ವಿಚಾರದಲ್ಲಿ ರೈತ ಹೋರಾಟಗಾರರೊಂದಿಗೆ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಬೆಂಬಲಕ್ಕೆ ಬರುತ್ತೇವೆ ಎಂದು ಹೇಳಿದರು.
ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಮಾತನಾಡಿ, ವೀರಶೈವ ಸಮುದಾಯದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಅಲ್ಲೇ ಬಗೆಹರಿಸಿಕೊಂಡು ಸಂಘಟನೆಯ ಬೆಳವಣಿಗಾಗಿ ಎಲ್ಲರೂ ಒಗ್ಗಟ್ಟಾಗಿರಬೇಕು. ಕೊಡಗು ಜಿಲ್ಲೆಯಲ್ಲಿ ಪ್ರತಿಯೊಂದು ತಾಲೂಕು, ಹೋಬಳಿ ಘಟಕಗಳು ಸಕ್ರಿಯರಾಗಿರಬೇಕು. ಬಸವಣ್ಣ ನಂತರದಲ್ಲಿ ಶಿವಕುಮಾರ ಸ್ವಾಮೀಜಿ 88 ವರ್ಷಗಳ ಕಾಲ ಶಿಕ್ಷಣ, ದಾಸೋಹ, ಸಾಮಾಜಿಕ ಕಳಕಳಿಯಲ್ಲಿ ಮಠವನ್ನು ಮುನ್ನಡೆಸಿದ್ದಾರೆ. ಈ ಹಾದಿ ಮುಂದೆ ಸೂರ್ಯ-ಚಂದ್ರ ಇರುವರೆಗೂ ಮುಂದುವರಿಯುತ್ತದೆ ಎಂದರು.
ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಸಮುದಾಯದ ಸಂಘಟನೆಯ ಬಲವರ್ಧನೆಗೆ ಇಂತಹ ಜಯಂತ್ಯುತ್ಸವ, ಸಂಸ್ಮರಣೋತ್ಸವ ಕಾರ್ಯಕ್ರಮಗಳ ಅಗತ್ಯ ಇದೆ. ಬಸವಣ್ಣ ಅವರ ತತ್ವ, ಆದರ್ಶ, ಸಾಮಾಜಿಕ ಮಾರ್ಗದರ್ಶನವನ್ನು ಮೈಸೂರು ರಾಜವಂಶರು ಪಾಲಿಸಿದ್ದರು ಎಂದು ಹೇಳಿದರು.
ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಸಮಾಜದಲ್ಲಿ ಜಾತಿ, ಸಮುದಾಯ ಎಂಬ ಭೇದ, ಭಾವ ಇಲ್ಲದೆ ಎಲ್ಲರನ್ನೂ ಒಂದೆಡೆಗೆ ಕೊಂಡೊಯ್ಯಬೇಕು. ಕೊಡಗಿನ ಸಿ ಆ್ಯಂಡ್ ಲ್ಯಾಂಡ್ ಹೋರಾಟಕ್ಕೆ ನಾವೆಲ್ಲರೂ ಹೋರಾಟಗಾರ ಬೆಂಬಲಕ್ಕೆ ನಿಂತಿದ್ದೇವೆ ಎಂದು ಹೇಳಿದರು. ಸ್ವಾತಂತ್ರ್ಯ ಹೋರಾಟಗಾರ ಹೆಮ್ಮನೆ ಪುಟ್ಟಬಸಪ್ಪ ಅವರ ಸ್ಮಾರಕ ನಿರ್ಮಾಣಕ್ಕೆ ಗ್ರಾಮದಲ್ಲಿ ಜಾಗ ನೀಡಿದ್ದಲ್ಲಿ ಸರ್ಕಾರದಿಂದ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲೆಯ ವಿವಿಧ ಮಠದ ಮಠಾಧೀಶರು ಸಾನ್ನಿಧ್ಯ ವಹಿಸಿದ್ದರು.
ಸಿದ್ಧಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ಮಾಮೀಜಿ ಮಾತನಾಡಿದರು. ಹೈಕೋರ್ಟ್ ಹಿರಿಯ ವಕೀಲ ಚಂದ್ರಮೌಳಿ, ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತ ವಿರೂಪಾಕ್ಷಯ್ಯ, ಯುವ ಘಟಕದ ಅಧ್ಯಕ್ಷ ಮೋಕ್ಷಿಕ್ ರಾಜ್, ಪ್ರಮುಖ ಕಾಂತರಾಜ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net