ಗೋಣಿಕೊಪ್ಪಲು ಕಾವೇರಿ ಕಾಲೇಜಿನ ವಾರ್ಷಿಕ ಕ್ರೀಡಾ ದಿನಾಚರಣೆಯನ್ನು ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕಿ ಪಳಂಗAಡ ವಾಣಿ ಚಂಗಪ್ಪ ಉದ್ಘಾಟಿಸಿದರು. ಚೌಂಡೀರ ಪಿ. ಪೂಣಚ್ಚ, ಡಾ. ಎಂ. ಬಿ. ಕಾವೇರಿಯಪ್ಪ, ಡಾ. ನಯನ ತಮ್ಮಯ್ಯ, ಕೆ.ಕೆ. ಚಿತ್ರಾವತಿ, ಡಾ. ಪಿ. ಪಿ. ಸವಿತಾ, ಎಂ ಟಿ. ಸಂತೋಷ್, ಜಿ. ಟಿ. ಚಂಗಪ್ಪ ಇದ್ದರು.
ನಿಯಮಿತ ಕ್ರೀಡಾ ಚಟುವಟಿಕೆಗಳು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದರ ಜತೆಗೆ, ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ದೃಢ ಮನಸ್ಸು ಹಾಗೂ ಆರೋಗ್ಯವಂತ ದೇಹವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ನಿವೃತ್ತ ಹಿರಿಯ ಕ್ರೀಡಾ ಅಧಿಕಾರಿ ಚೌಂಡೀರ ಪಿ. ಪೂಣಚ್ಚ ಹೇಳಿದರು. ಗುರುವಾರ ನಡೆದ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ವಾರ್ಷಿಕ ಕ್ರೀಡಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಶಿಸ್ತು, ನಾಯಕತ್ವ ಗುಣ ಮತ್ತು ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಅತ್ಯಗತ್ಯ. ವಿದ್ಯಾರ್ಥಿಗಳು ಪಠ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಜತೆ ಜತೆಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸು ಉಲ್ಲಸಿತಗೊಳ್ಳುತ್ತದೆ. ಮಕ್ಕಳಿಂದ ಹಿಡಿದು ಹಿರಿಯರವರಿಗೆ ಎಲ್ಲರೂ ತಮ್ಮ ದೈನಂದಿನ ಜೀವನದಲ್ಲಿ ಯಾವುದಾದರೂ ಒಂದು ಕ್ರೀಡೆಯನ್ನು ಅಳವಡಿಸಿಕೊಳ್ಳುವುದರಿಂದ ಉತ್ತಮ ಅರೋಗ್ಯ ಪಡೆಯಲು ಸಾಧ್ಯ. ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲೂ ಉದ್ಯೋಗಾವಕಾಶಗಳು ಇದ್ದು ಕ್ರೀಡೆಯ ಮೂಲಕ ಬದುಕು ಕಟ್ಟಿಕೊಳ್ಳಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕಿ ಪಳಂಗAಡ ವಾಣಿ ಚಂಗಪ್ಪ ಮಾತನಾಡಿ ವಿದ್ಯಾರ್ಥಿಗಳು ಯಾವುದಾದರೂ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಂಡು, ಬದುಕಿನಲ್ಲಿ ಶಿಸ್ತು ಸಮಯಪಾಲನೆ ಅಳವಡಿಸಿಕೊಳ್ಳಬೇಕು. ದುಶ್ಚಟಗಳಿಂದ ದೂರ ಇರಬೇಕು ಎಂದರು.
ಇದೇ ಸಂದರ್ಭ ಕ್ರೀಡೆಯಲ್ಲಿ ವಿಶ್ವವಿದ್ಯಾಲಯ ಮಟ್ಟ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿವಿಧ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಎಂ. ಬಿ. ಕಾವೇರಿಯಪ್ಪ, ಐ ಕ್ಯೂ ಎ ಸಿ ಸಂಚಾಲಕಿ ಡಾ. ನಯನ ತಮ್ಮಯ್ಯ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಕೆ.ಕೆ. ಚಿತ್ರಾವತಿ, ಡಾ. ಪಿ. ಪಿ. ಸವಿತಾ, ದೈಹಿಕ ಶಿಕ್ಷಣ ನಿರ್ದೇಶಕ ಎಂ ಟಿ. ಸಂತೋಷ್, ಕ್ರೀಡಾ ಕಾರ್ಯದರ್ಶಿ ಜಿ. ಟಿ. ಚಂಗಪ್ಪ ಮತ್ತಿತರರು ಇದ್ದರು.