ವೀರ ಯೋಧರ ಸೇವೆ ಯುವ ಜನಾಂಗಕ್ಕೆ ಮಾದರಿ

ಕುಶಾಲನಗರದಲ್ಲಿ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ವತಿಯಿಂದ ಏರ್ಪಡಿಸಿದ್ದ ಕಾರ್ಗಿಲ್ ವಿಜಯೋತ್ಸವ ಕುರಿತ ಸಂವಾದ ಕಾರ್ಯಕ್ರಮವನ್ನು ವಿ.ಪಿ.ಶಶಿಧರ್ ಉದ್ಘಾಟಿಸಿದರು. ಹವಾಲ್ದಾರ್ ಮಹಮ್ಮದ್ ನಬಿ, ಡಾ.ಪ್ರವೀಣ್, ರಂಜಿತ್ ಇತರರು ಇದ್ದರು.
ಕುಶಾಲನಗರದಲ್ಲಿ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ವತಿಯಿಂದ ಏರ್ಪಡಿಸಿದ್ದ ಕಾರ್ಗಿಲ್ ವಿಜಯೋತ್ಸವ ಕುರಿತ ಸಂವಾದ ಕಾರ್ಯಕ್ರಮವನ್ನು ವಿ.ಪಿ.ಶಶಿಧರ್ ಉದ್ಘಾಟಿಸಿದರು. ಹವಾಲ್ದಾರ್ ಮಹಮ್ಮದ್ ನಬಿ, ಡಾ.ಪ್ರವೀಣ್, ರಂಜಿತ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವೀರ ಯೋಧರ ಸೇವೆ ಯುವ ಜನಾಂಗಕ್ಕೆ ಮಾದರಿ
  • ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿ.ಪಿ.ಶಶಿಧರ್

ಕುಶಾಲನಗರ: ವೀರ ಯೋಧರ ಸೇವೆಯು ಇಂದಿನ ಯುವ ಜನಾಂಗಕ್ಕೆ ಮಾದರಿಯಾದದ್ದು ಎಂದು ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಹೇಳಿದರು.

ಕುಶಾಲನಗರ ಕೊಡವ ಸಮಾಜದ ಸಭಾಂಗಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ, ಕುಶಾಲನಗರ ಸ್ಥಳೀಯ ಸಂಸ್ಥೆ ಹಾಗೂ ಕುಶಾಲನಗರ ಕೊಡವ ಸಮಾಜದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ೨೭ನೇ ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ನಡೆದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಗಿಲ್ ವಿಜಯೋತ್ಸವ ವೀರ ಪರಂಪರೆಯ ಶೌರ್ಯ ಮತ್ತು ಪರಾಕ್ರಮದ ಯೋಧರ ಸಾಹಸಮಯ ಯುದ್ಧ ಹೋರಾಟದಲ್ಲಿ ಭಾಗಿಯಾಗಿ ರಾಷ್ಟ್ರದ ರಕ್ಷಣೆಗೆ ಶ್ರಮಿಸಿದ ಸೈನಿಕರ ಸೇವೆ ಅನನ್ಯವಾದುದು. ದೇಶರಕ್ಷಣೆಗೆ ಜೀವವನ್ನೇ ಅರ್ಪಿಸಿದ ವೀರ ಯೋಧರ ತ್ಯಾಗವನ್ನು ಸ್ಮರಿಸುವ ದಿನವಾಗಿದೆ. ವೀರ ಯೋಧರ ಸೇವೆಯು ಇಂದಿನ ಯುವ ಜನಾಂಗಕ್ಕೆ ಮಾದರಿಯಾದುದು ಎಂದು ಅವರು, ಅಂದು ದೇಶದ ಗಡಿ ರಕ್ಷಣೆಯಲ್ಲಿ ಸೇವೆ ಮಾಡಿ ನಿವೃತ್ತಿ ಹೊಂದಿ ತವರಿಗೆ ಬಂದು ನಮ್ಮೊಂದಿಗಿದ್ದು, ಜನಸೇವೆಯಲ್ಲಿ ತೊಡಗಿರುವ ಮಹಮ್ಮದ್ ನಬಿಯಂತಹ ಮಾಜಿ ಯೋಧರ ಸಾಹಸ ನಮ್ಮ ಯುವಜನಾಂಗಕ್ಕೆ ಸ್ಪೂರ್ತಿ ನೀಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ೧೯೯೯ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ಕೂಡಿಗೆಯ ನಿವೃತ್ತ ಹವಾಲ್ದಾರ್ ಮಹಮ್ಮದ್ ನಬಿ ಅವರು ಕಾರ್ಗಿಲ್ ಕಾರ್ಯಾಚರಣೆಯ ಅನುಭವವನ್ನು ಹಂಚಿಕೊಂಡರು. ಕಾರ್ಗಿಲ್ ಯುದ್ಧದ ಅವಧಿಯಲ್ಲಿ ಸೇನೆಯ ಎಂಇಜಿ-ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ವಿಭಾಗದಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸಿದ್ದ ಅವರು, ಶತ್ರು ರಾಷ್ಟ್ರ ಪಾಕಿಸ್ತಾನದೊಂದಿಗೆ ನಡೆದ ಕಾರ್ಗಿಲ್ ಯುದ್ಧದಲ್ಲಿ ತಾವು ಅನುಭವಿಸಿದ ಅನುಭವವನ್ನು ವಿವರಿಸಿದರು.
ಅಂದು ಯುದ್ಧಭೂಮಿಯಲ್ಲಿ ಕಠೋರವಾಗಿದ್ದ ಪರಿಸ್ಥಿತಿ ಹಾಗೂ ಘಟನೆಗಳು ಕಠಿಣವಾಗಿದ್ದವು. ಕ್ಷಣ ಮಾತ್ರದಲ್ಲಿ ಸೈನಿಕರ ಸಂಚಾರಕ್ಕೆ ಅದೆಂತಹ ದುರ್ಗಮ ಸ್ಥಳ ಸನ್ನಿವೇಶ ಎದುರಾದರೂ ನಮ್ಮ ಸೈನಿಕರು ಎದೆಗುಂದದೆ ಶತ್ರುಗಳನ್ನು ಹಿಮ್ಮೆಟ್ಟಿಸಿ ಕಾರ್ಗಿಲ್ ವಿಜಯ ಪತಾಕೆ ಹಾರಿಸಿದ ಬಗ್ಗೆ ನಿವೃತ್ತ ಹವಾಲ್ದಾರ್ ನಬಿ ಮನಮುಟ್ಟುವಂತೆ ವಿವರಿಸಿದರು.
ಯೋಧರ ಅನುಭವ ಕುರಿತು ಸ್ಕೌಟ್ಸ್, ಗೈಡ್ಸ್, ರೇಂಜರ್ ಮತ್ತು ರೋವರ್ಸ್ ತರಬೇತಿ ನಿರತ ಶಿಕ್ಷಕರು ಮತ್ತು ಉಪನ್ಯಾಸಕರು ಮಹಮ್ಮದ್ ನಬಿ ಅವರೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ಸ್ಕೌಟ್ಸ್‌ನ ತರಬೇತಿ ಆಯುಕ್ತ ಕೆ.ಯು.ರಂಜಿತ್, ಕಾರ್ಗಿಲ್ ವಿಜಯೋತ್ಸವವು ನಮ್ಮ ದೇಶದ ಸೈನಿಕರ ಶೌರ್ಯವನ್ನು ಪ್ರದರ್ಶಿಸುತ್ತದೆ ಎಂದರು.
ಸ್ಕೌಟ್ಸ್, ಗೈಡ್ಸ್‌ನ ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ.ಪ್ರವೀಣ್ ದೇವರಗುಂಡ ಸೋಮಪ್ಪ, ಜಿಲ್ಲಾ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಜಿ.ಪ್ರೇಮಕುಮಾರ್, ಜಿಲ್ಲಾ ಸಹಾಯಕ ಆಯುಕ್ತರಾದ ಸಿ.ಎಂ.ಸುಲೋಚನಾ, ಕೆ.ಬಿ.ಗಣೇಶ್, ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ, ಸ್ಥಳೀಯ ಸಂಸ್ಥೆಯ ಕಾರ್ಯಾಧ್ಯಕ್ಷ ಎ.ಎಸ್. ತಮ್ಮಯ್ಯ, ಕಾರ್ಯದರ್ಶಿ ಎಂ.ಎಸ್.ಗಣೇಶ್, ಸಹ ಕಾರ್ಯದರ್ಶಿ ಇಂದಿರಾ ಮುತ್ತಣ್ಣ, ಖಜಾಂಚಿ ಎನ್.ಎಸ್.ನರೇಶ್ ಕುಮಾರ್ ಇದ್ದರು. ನಿವೃತ್ತ ಹವಾಲ್ದಾರ್ ಸಿದ್ದಂಡ ತಮ್ಮಯ್ಯ ಅವರು ದೇಶಭಕ್ತಿ ಹಾಡಿ ರಾಷ್ಟ್ರಪ್ರೇಮ ಮೆರೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net