ಆತ್ಮರಕ್ಷಣೆ, ಅಪಾಯದ ಸಂದರ್ಭಗಳಲ್ಲಿ ತನ್ನನ್ನು ತಾನು ಸುರಕ್ಷಿತವಾಗಿ ಕಾಪಾಡಿಕೊಳ್ಳುವ ಕೌಶಲ್ಯ ಮತ್ತು ಜಾಗೃತಿಯನ್ನು ಕರಾಟೆ ಕಲಿಯುವುದರ ಮೂಲಕ ರೂಢಿಸಿಕೊಳ್ಳಬಹುದು ಎಂದು ಕರಾಟೆ - ಡೋ ಇಂಡಿಯಾದ ಐದನೇ ಡಿಗ್ರಿ ಬ್ಲಾö್ಯಕ್ ಬೆಲ್ಟ್ ಪಡೆದಿರುವ ಕರ್ನಾಟಕದ ಮುಖ್ಯ ತರಬೇತುದಾರ ಚಂದ್ರನ್ ಗೋಜುರ್ಯ ಹೇಳಿದರು. ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಕರಾಟೆ ತರಬೇತಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕರಾಟೆ ಸ್ವರಕ್ಷಣೆಯಲ್ಲಿ ಮಹತ್ವದ್ದಾಗಿದ್ದು, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಅಪಾಯಕಾರಿ ಸಂದರ್ಭಗಳಲ್ಲಿ ಧೈರ್ಯದಿಂದ ಪ್ರತಿಕ್ರಿಯಿಸಲು ಸಹಾಯ ಮಾಡುತ್ತದೆ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯನ್ನು ಬಲಪಡಿಸುತ್ತದೆ. ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸುತ್ತದೆ ಎಂದರು.
ಪ್ರಾಂಶುಪಾಲರಾದ ಎಂ.ಕೆ. ಪದ್ಮ, ಉಪನ್ಯಾಸಕಿ ಎಂ.ಪಿ. ದಮಯಂತಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಕೆ.ಪಿ. ಗಾಯತ್ರಿ, ಅನುಪಮಾ ತಿಮ್ಮಯ್ಯ, ಪ್ರೇಮಾಂಜಲಿ, ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಇದ್ದರು.
ಚಂದ್ರನ್ ಗೋಜುರ್ಯ ಮತ್ತು ತಂಡದವರು ವಿದ್ಯಾರ್ಥಿಗಳಿಗೆ ಕರಾಟೆಯ ಮೂಲಕ ಆತ್ಮರಕ್ಷಣೆ, ಶಿಸ್ತು, ಆತ್ಮವಿಶ್ವಾಸ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ತರಬೇತಿ ನೀಡುತ್ತಿದ್ದಾರೆ. ಮಹಿಳೆಯರು, ಮಕ್ಕಳು ಹಾಗೂ ಯುವಕರಿಗೆ ಆತ್ಮರಕ್ಷಣೆಯ ಮಹತ್ವವನ್ನು ತಿಳಿಸಿ ಪ್ರಾಯೋಗಿಕ ತರಬೇತಿ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ.