ಕೆಲವು ನಕಲಿ ನಾಯಕರು ಸುಲಿಗೆ, ವಸೂಲಿ ಮಾಡಲು ನಮ್ಮ ಸಂಘಟನೆ ಹೆಸರು ಬಳಕೆ ಮಾಡಿಕೊಳ್ಳುತ್ತಿದ್ದು, ಅವರಿಗೆ ಕರ್ನಾಟಕದ ಬಗ್ಗೆ ನೈಜತೆ, ಪ್ರೀತಿ, ಬದ್ಧತೆ ಇದ್ದರೆ ಬೇರೆ ಹೆಸರಿನಲ್ಲಿ ಸಂಘಟನೆ ಕಟ್ಟಿ ಹೋರಾಟ ಮಾಡಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಹೇಳಿದರು. ರಾಜ್ಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹುಟ್ಟಿ 27 ವರ್ಷ ಪೂರೈಸಿದೆ. ಕನ್ನಡ ನಾಡು, ನುಡಿ, ನೆಲ, ಜಲ ಸಂರಕ್ಷಣೆಗೆ ಟೊಂಕ ಕಟ್ಟಿ ಹೋರಾಟ ನಡೆಸಿಕೊಂಡಿ ಬಂದಿದೆ. ಆದರೆ ಕೆಲವು ವ್ಯಕ್ತಿಗಳು ನಮ್ಮ ಸಂಘಟನೆಯ ಹೆಸರನ್ನು ಬಳಸಿಕೊಂಡು ನಕಲಿ ಬ್ರಾಂಡ್ ಸಂಘಟನೆಗಳನ್ನು ಕಟ್ಟಿಕೊಂಡಿದ್ದಾರೆ.ನಾರಾಯಣ್ ಗೌಡ ಅವರ ಕರ್ನಾಟಕ ರಕ್ಷಣಾ ವೇದಿಕೆಯೇ ಅಧಿಕೃತ ಎಂದು ನ್ಯಾಯಾಲಯದಿಂದ ಆದೇಶ ಬಂದಿದೆ. ನಮ್ಮ ಸಂಘಟನೆಯೇ ಅಧಿಕೃತ ಎಂಬ ತೀರ್ಪು ಬಂದಿದ್ದರೂ ಕರವೇ ಹೆಸರು ಬಳಕೆ ಮಾಡುವ ಮೂಲಕ ಕಾನೂನಿಗೆ ಅಪಚಾರ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.