ಶನಿವಾರಸಂತೆ ಆಟೋ ಚಾಲಕರ ಸಂಘ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಗ್ರಾ.ಪಂ.ಅಧ್ಯಕ್ಷೆ ಗೀತಾ ಹರೀಶ್ ಉದ್ಘಾಟಿಸಿದರು. ಉದ್ಯಮಿ ಹರಪಳ್ಳಿ ರವೀಂದ್ರ, ಪ್ರಮುಖರಾದ ಅನಂತ್‌ಕುಮಾರ್, ಭವಾನಿ ಗುರು, ಎಸ್.ಎನ್.ರಘು ಇತರರು ಇದ್ದರು.
ಶನಿವಾರಸಂತೆ: ಹೊರ ರಾಜ್ಯದವರ ದಬ್ಬಾಳಿಕೆಯಿಂದ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಧಕ್ಕೆಯಾಗಿದೆ ಎಂದು ಉದ್ಯಮಿ ಹರಪಳ್ಳಿ ರವೀಂದ್ರ ಬೇಸರ ವ್ಯಕ್ತ ಪಡಿಸಿದರು.
ಅವರು ಶನಿವಾರಸಂತೆ ಶ್ರೀ ವಿಘ್ನೇಶ್ವರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಶನಿವಾರ ಪಟ್ಟಣದ ಕೆಆರ್‌ಸಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೊರ ರಾಜ್ಯದಿಂದ ಕರ್ನಾಟಕಕ್ಕೆ ವಲಸೆ ಬಂದ ಅನೇಕರು ಈ ನಾಡಿನ ಭಾಷಾ ಸಂಸ್ಕೃತಿ ಮೇಲೆ ದಾಳಿ ನಡೆಸಿ ತಮ್ಮತನವನ್ನು ಹೇರುತ್ತಿದ್ದಾರೆ.
ನಮ್ಮ ಮಾತೃಭಾಷೆಯಾದ ಕನ್ನಡವೇ ಅನೇಕ ಭಾಗದಲ್ಲಿ
ಮಾಯವಾಗುವ ಸ್ಥಿತಿ ಬಂದಿದೆ. ಈ ನಿಟ್ಟಿನಲ್ಲಿ ಕನ್ನಡಿಗರಾದ ನಾವೆಲ್ಲಾರೂ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಹೋರಾಟದ ಹಾದಿ ಹಿಡಿಯಬೇಕಾಗಿದೆ ಎಂದರು.
ಶನಿವಾರಸಂತೆ ಗ್ರಾ.ಪಂ.ಅಧ್ಯಕ್ಷೆ ಗೀತಾ ಹರೀಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡವನ್ನು ಉಳಿಸಲು ಕನ್ನಡಿಗರೆಲ್ಲರೂ ಒಂದಾಗಬೇಕು ಎಂದರು. ಆಟೋ ಚಾಲಕರ ಸಂಘಟನೆಗಳು ಭಾಷೆಯನ್ನು ಉಳಿಸಿ ಬೆಳೆಸಲು ಒಂದಾಗುತ್ತಿರುವುದು ಶ್ಲಾಘನೀಯ ಎಂದರು.
ತಾಪಂ ಮಾಜಿ ಸದಸ್ಯ ಬಿ.ಎಸ್.ಅನಂತ ಕುಮಾರ್ ಮಾತನಾಡಿ, ಕೊಡಗಿನಲ್ಲಿ ಅಸ್ಸಾಂ, ಬಿಹಾರ, ತಮಿಳುನಾಡಿನ ಜನರು ತುಂಬಿಕೊಳ್ಳುತ್ತಿದ್ದಾರೆ. ಅವರು ವಾಸಿಸುವ ಪ್ರದೇಶದಲ್ಲಿ ಕನ್ನಡ ಮಾಯವಾಗುವ ಸಾಧ್ಯತೆ ಇದೆ ಎಂದು ಹೇಳಿದರು. ಗ್ರಾಪಂ ಸದಸ್ಯ ಎಸ್.ಎನ್.ರಘು ಮಾತನಾಡಿ, ಕನ್ನಡಕ್ಕೆ 2 ಸಾವಿರ ವರ್ಷಗಳ
ಇತಿಹಾಸ ಇದೆ. ನಮ್ಮ ಭಾಷೆಗೆ ಅತಿ ಹೆಚ್ಚು ಜ್ಞಾನ ಪೀಠ ಪ್ರಶಸ್ತಿಯೂ
ದೊರಕಿದ ಹೆಗ್ಗಳಿಕೆ ಇದೆ. ಈ ನಿಟ್ಟಿನಲ್ಲಿ ಕನ್ನಡಿಗರು ನಾಡಿನ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು. ಆಟೋ ಚಾಲಕರ ಸಂಘದ ಅಧ್ಯಕ್ಷ ರವಿ ಅಧ್ಯಕ್ಷತೆ ವಹಿಸಿದ್ದರು.
ಗ್ರಾಪಂ ಉಪಾಧ್ಯಕ್ಷ ಸರ್ದಾರ್ ಆಹಮ್ಮದ್, ದುಂಡಳ್ಳಿ ಗ್ರಾಪಂ ಅಧ್ಯಕ್ಷೆ ಭವಾನಿ ಗುರು, ಉಪಾಧ್ಯಕ್ಷೆ ಗೋಪಿಕಾ ಹರೀಶ್, ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲಾ ಶಿಕ್ಷಕ ಕೆ.ಪಿ.ಜಯಕುಮಾರ್ ಹಾಜರಿದ್ದರು. ಈ ಸಂದರ್ಭ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.