ಸುಂಟಿಕೊಪ್ಪದಲ್ಲಿ ಕನ್ನಡದ ಕಲರವ

ಮೆರವಣಿಗೆಯಲ್ಲಿ ಸಾಗಿ ಬಂದ ಸಮ್ಮೇಳನಾಧ್ಯಕ್ಷ ಅಬ್ದುಲ್ ರಶೀದ್. ಸ್ವಾಗತ ಸಮಿತಿ ಉಪಾಧ್ಯಕ್ಷ ಎ. ಲೋಕೇಶ್ ಕುಮಾರ್, ಟಿ.ಪಿ. ರಮೇಶ್, ಸಬಾಸ್ಟಿನ್, ಕೆ.ಎಸ್. ನಾಗೇಶ್, ಕೇಶವ ಕಾಮತ್ ಮತ್ತಿತರರು ಇದ್ದರು.
ಮೆರವಣಿಗೆಯಲ್ಲಿ ಸಾಗಿ ಬಂದ ಸಮ್ಮೇಳನಾಧ್ಯಕ್ಷ ಅಬ್ದುಲ್ ರಶೀದ್. ಸ್ವಾಗತ ಸಮಿತಿ ಉಪಾಧ್ಯಕ್ಷ ಎ. ಲೋಕೇಶ್ ಕುಮಾರ್, ಟಿ.ಪಿ. ರಮೇಶ್, ಸಬಾಸ್ಟಿನ್, ಕೆ.ಎಸ್. ನಾಗೇಶ್, ಕೇಶವ ಕಾಮತ್ ಮತ್ತಿತರರು ಇದ್ದರು.
Published on
ಸುಂಟಿಕೊಪ್ಪ:
ಸೌಹಾರ್ದತೆಯ ನೆಲ ಹೆಗ್ಗಳಿಕೆಯ ಸುಂಟಿಕೊಪ್ಪದ ತುಂಬಾ ಇಂದು ಕನ್ನಡದ ಡಿಂಡಿಮ ರಿಂಗಣಿಸಿತು. ಕಾಫಿ ತೋಟಗಳ ಮಧ್ಯೆ ಹುದುಗಿರುವ ಊರಿನಲೆಲ್ಲಾ ರಾರಾಜಿಸಿದ ಅರಸಿನ ಕುಂಕುಮ ರಂಗಿನ ಬಾವುಟಗಳು ಕನ್ನಡದ ಇಂಪನ್ನು ಹರಡಿದವು. ಜಿಲ್ಲೆಯಾದ್ಯಂತದಿAದ ಹರಿದು ಬಂದ ಕನ್ನಡಾಭಿಮಾನಿಗಳು ಭುವನೇಶ್ವರಿ ತೇರನ್ನು ಎಳೆದು ಸಂಭ್ರಮಿಸಿದರು. ಇದು ಶುಕ್ರವಾರದಿಂದ ಸುಂಟಿಕೊಪ್ಪದಲ್ಲಿ ಆರಂಭವಾದ ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೈಭವ.
ಸರ್ಕಾರಿ ಶಾಲಾ ಮೈದಾನದಿಂದ ಆರಂಭವಾದ ಅಯ್ಯಪ್ಪ ದೇವಾಲಯ ಸಮೀಪ ತೆರಳಿ ಗದ್ದೆಹಳ್ಳದ ತನಕ ನಡೆದ ಸಮ್ಮೇಳನಾಧ್ಯಕ್ಷರಾದ ಸಾಹಿತಿ, ಕಥೆಗಾರ ಅಬ್ದುಲ್ ರಶೀದ್ ಅವರ ವರ್ಣರಂಜಿತ ಮೆರವಣಿUಯೊಂದಿಗೆ ಸಮ್ಮೇಳನದ ಸಡಗರ ಆರಂಭವಾಯಿತು. ಮಂಗಳ ವಾದ್ಯ, ಚಂಡೆ ವಾದ್ಯ, ಕಳಸ ಹೊತ್ತ ಮಹಿಳೆಯರು, ಸ್ತಬ್ಧಚಿತ್ರಗಳು, ಗೊಂಬೆಗಳು, ಪೂಜಾ ಕುಣಿತ, ಡೊಳ್ಳು ಕುಣಿತ, ಕೊಡಗಿನ ವಾಲಗ, ಬ್ಯಾಂಡ್ ಸೆಟ್, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಜೀವಿನಿ ಮಹಿಳಾ ಒಕ್ಕೂಟ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ, ಅಂಗನವಾಡಿ ಸಂಘಟನೆ, ಸ್ತ್ರೀ ಶಕ್ತಿ ಒಕ್ಕೂಟ, ಆಶಾ ಕಾರ್ಯಕರ್ತೆಯರು, ಶಿಕ್ಷಕರುಗಳು, ಸಂಘ ಸಂಸ್ಥೆಗಳ ಮತ್ತು ಸಮಾಜಗಳ ಪ್ರತಿನಿಧಿಗಳು ಪಾಲ್ಗೊಂಡು ಮೆರವಣಿಗೆಗೆ ಮೆರುಗು ನೀಡಿದರು. ಸೆಸ್ಕ್ನ ವಿಶೇಷ ಸ್ತಬ್ಧ ಚಿತ್ರ ಗಮನ ಸೆಳೆಯಿತು.
ಗದ್ದೆಹಳ್ಳದಲ್ಲಿರುವ ಖಾಸಗಿ ಸಭಾಂಗಣದ ಕವಿಶಿಷ್ಯ ಪಂಜೆ ಮಂಗೇಶರಾಯ ವೇದಿಕೆಯಲ್ಲಿ ನಡೆದ ಸಮ್ಮೇಳನದ ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು ಕೊಡಗಿನಂತಹ ಗುಡ್ಡಗಾಡು ಪ್ರದೇಶದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವುದು ಕಷ್ಟದ ಕೆಲ. ಆದರೂ ಎಲ್ಲರ ಸಹಕಾರಿಂದ ಸಮ್ಮೇಳನ ಯಶಸ್ವಿಯಾಗಿ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್‌ಗೆ ಸರ್ಕಾರ ಅನುದಾನದ ಕೊರತೆಯಿದೆ. ಕನ್ನಡ ನಾಡನ್ನು ಕಟ್ಟುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಹಲವಾರು ಕನ್ನಡ ಕಾರ್ಯಕ್ರಮ ಮಾಡಲಾಗಿದೆ. ನಮ್ಮ ಮಾತೃ ಭಾಷೆಯನ್ನು ಬೆಳೆಸುವ ಮೂಲಕ ಕನ್ನಡಕ್ಕೆ ಆದ್ಯತೆ ನೀಡಬೇಕಾಗಿದೆ ಎಂದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವ ಕಾಮತ್ ಮಾತನಾಡಿ ಕನ್ನಡದ ಮನಸ್ಸುಗಳನ್ನು ಒಂದುಗೂಡಿಸಲು, ನಾಡು-ನುಡಿ ಜನರಿಗೆ ತಿಳಿಸುವ ಮೂಲ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಗೊಂಡಿದ್ದು, ಕನ್ನಡದ ಏಳಿಗೆ ಕೆಲಸ ಮಾಡುವ ಮೂಲಕ ತನ್ನ ಉದ್ದೇಶ ಈಡೇರಿದೆ. ಸುಂಟಿಕೊಪ್ಪದಲ್ಲಿ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಯಲು ಎಲ್ಲಾ ಸಮಿತಿಗಳು ಉತ್ತಮವಾಗಿ ಕೆಲಸ ಮಾಡಿದೆ ಎಂದು ಹೇಳಿದರು.
ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ ಸುಂಟಿಕೊಪ್ಪದಲ್ಲಿ ಹಲವು ಭಾಷಿಕರು ನೆಲೆಸಿದ್ದಾರೆ. ಕನ್ನಡಕ್ಕಾಗಿ ಇಲ್ಲಿ ಹಲವರು ಕೆಲಸ ಮಾಡುತ್ತಿದ್ದು, ಕನ್ನಡಕ್ಕೆ ಕೊಡುಗೆ ಸಾಕಷ್ಟು ನೀಡಿದ್ದಾರೆ ಎಂದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ರೇವತಿ ಪೂವಯ್ಯ ಅವರು ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಅಬ್ದುಲ್ ರಶೀದ್ ಕನ್ನಡ ಧ್ವಜ ಅವರಿಗೆ ಹಸ್ತಾಂತರ ಮಾಡಿದರು. ಈ ಸಂದರ್ಭ ಮಾತನಾಡಿದ ರೇವತಿ ಪೂವಯ್ಯ ಜಾಗತಿಕ ಜಗತ್ತಿನಲ್ಲಿ ಭಾಷೆಗೆ ಭಯವಿದ್ದು, ಆತಂಕ ನಿರಂತರ ಕಾಡುತ್ತಿದೆ. ಆದರೆ ಸಮ್ಮೇಳನಕ್ಕೆ ಸೇರಿರುವ ಜನರು ಆತಂಕ ದೂರ ಮಾಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎಂ.ಜಿ. ನಾಗರಾಜ್, ಕಸಾಪ ಮಾಜಿ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಬೆಳೆಗಾರ ವಿಶಾಲ್ ಶಿವಪ್ಪ, ಸುಂಟಿಕೊಪ್ಪ ಹೋಬಳಿ ಕಸಾಪ ಅಧ್ಯಕ್ಷ ಸಬಾಸ್ಟಿನ್, ಜಿಪಂ ಮಾಜಿ ಸದಸ್ಯ ಲತೀಫ್, ಕಸಾಪ ಪ್ರಮುಖರಾದ ಮುನೀರ್ ಅಹಮದ್, ರೇವತಿ, ವಾಸು ರೈ, ಜಲಜಾ ಶೇಖರ್, ಮಂಜುನಾಥ್, ತಾಲೂಕು ಪಂಚಾಯಿತಿ ಇಒ ಪರಮೇಶ್, ಕಸಾಪ ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ನಾಗೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಸಮ್ಮೇಳನದಲ್ಲಿ ಸುಲೇಮಾನ್ ಅವರ ರಾಗವಿಲ್ಲದ ಕವಿತೆ, ಎಚ್. ಮಂಜುನಾಥ್ ಅವರ ಮನುಷ್ಯತ್ವದ ಸಾರ, ಜಯಪ್ರಕಾಶ್ ಪುತ್ತೂರು ಅವರ ವ್ಯಕ್ತಿತ್ವ ವಿಚಾರಧಾರೆ, ಡಾ. ಬೆಸೂರೂ ಮೋಹನ್ ಪಾಳೆಗಾರ್ ಅವರ ಸ್ವಾತಂತ್ರ‍್ಯ ಕ್ರಾಂತಿಯ ಕಿಡಿ, ಗಣೇಶ್ ಶರ್ಮ ಅವರ ಮಕ್ಕಳ ಕಥೆ, ಹೇಮಂತ್ ಪಾರೇರ ಅವರ ಶಕುನದ ಹಕ್ಕಿ, ಲಾವಣ್ಯ ಮೋಹನ್ ಅವರ ಛಾಯ ಕಾದಂಬರಿ, ಜಯಲಕ್ಷ್ಮಿ ಅವರ ಮನದ ಮಡಿಲೊಳಗೆ ಪುಸ್ತಕಗಳು ಬಿಡುಗಡೆ ಮಾಡಲಾಯಿತು.
ಸಮ್ಮೇಳನ ಅಂಗವಾಗಿ ವಿವಿಧ ಮಳಿಗೆಗಳನ್ನು ತೆರೆಯಲಾಗಿತ್ತು. ಪುಸ್ತಕ ಮಳಿಗೆ, ಚಿತ್ರಕಲಾ ಪ್ರದರ್ಶನ ಮಳಿಗೆ, ಗುಡ್ಡೆಮನೆ ವಿಶ್ವಕುಮಾರ್ ಅವರ ಛಾಯಾಚಿತ್ರ ಪ್ರದರ್ಶನ, ಆರೋಗ್ಯ ಇಲಾಖೆಯಿಂದ ಆರೋಗ್ಯ ಜಾಗೃತಿ ಮೂಡಿಸುವ ಕೇಂದ್ರ ಸೇರಿದಂತೆ ವಿವಿಧ ತಿಂಡಿ ತಿನಿಸು ಹಾಗೂ ಇತರೆ ಮಳಿಗೆಗಳನ್ನು ತೆರೆಯಲಾಗಿತ್ತು.
ಗದ್ದೆಹಳ್ಳ ಗುಂಡುಗುಟ್ಟಿ ಮಂಜನಾಥಯ್ಯ ಸಭಾಮಂಟಪದ ಮುಂಭಾಗದ ಸಭಾಂಗಣದಲ್ಲಿ ರಾಷ್ಟ್ರ ಧ್ವಜ, ಕನ್ನಡ ಧ್ವಜ ಹಾಗೂ ಪರಿಷತ್ತಿನ ಧ್ವಜಾರೋಹಣ ನೆರವೇರಿಸಲಾಯಿತು. ಮೆರವಣಿಗೆಯಲ್ಲಿ ಸಾಗಿದವರಿಗೆ ಅನಿಲ್ ಅವರು ಮಜ್ಜಿಗೆ ವಿತರಣೆ ಮಾಡಿದರು. ವಿಲಿಯಂ ಸಹೋದರರು ನೀರು ಹಾಗೂ ಬಿಸ್ಕೆಟ್ ವಿತರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net