ಪದ್ಧತಿ, ಪರಂಪರೆ ಉಳಿಸಲು ಹಬ್ಬಗಳು ಅಗತ್ಯ

ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಸಭಾಂಗಣದಲ್ಲಿ ನಡೆದ ಕಕ್ಕಡ ಪದ್‌ನೆಟ್ಟ್ ಕಾರ್ಯಕ್ರಮ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಿದರು. ಬಾನಂಡ ಪ್ರತ್ಯು, ಉಮೇಶ್ ಕೇಚಮಯ್ಯ ಇತರರಿದ್ದರು.
ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಸಭಾಂಗಣದಲ್ಲಿ ನಡೆದ ಕಕ್ಕಡ ಪದ್‌ನೆಟ್ಟ್ ಕಾರ್ಯಕ್ರಮ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಿದರು. ಬಾನಂಡ ಪ್ರತ್ಯು, ಉಮೇಶ್ ಕೇಚಮಯ್ಯ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪದ್ಧತಿ, ಪರಂಪರೆ ಉಳಿಸಲು ಹಬ್ಬಗಳು ಅಗತ್ಯ

ಗೋಣಿಕೊಪ್ಪ: ಅಮ್ಮ ಕೊಡವ ಸಮಾಜದ ಪದ್ಧತಿ, ಪರಂಪರೆ, ಆಚರಣೆಗಳನ್ನು ಉಳಿಸಿ ಬೆಳೆಸಲು ಕಕ್ಕಡ ಪದ್‌ನೆಟ್ಟ್ ನಂತಹ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ವಿಧಾನಸಭಾ ಉಪಾಧ್ಯಕ್ಷ ಎ.ಎಸ್.ಪೊನ್ನಣ್ಣ ಅವರು ಹೇಳಿದರು.

ಅಖಿಲ ಅಮ್ಮ ಕೊಡವ ಸಮಾಜ, ಕೋತೂರು ಶ್ರೀ ಕೃಷ್ಣ ಅಮ್ಮಕೊಡವ ಸಮಾಜ ಹಾಗೂ ಕೋತೂರು ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಸಂಘದ ವತಿಯಿಂದ ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಸಭಾಂಗಣದಲ್ಲಿ ನಡೆದ ಕಕ್ಕಡ ಪದ್‌ನೆಟ್ಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಮತ್ತು ವಿಶೇಷ ಪರಂಪರೆ ಹೊಂದಿರುವ ಕೊಡಗಿನಲ್ಲಿ ಹಿಂದಿನಿಂದಲೂ ಆಚರಿಸಿಕೊಂಡು ಬರುತ್ತಿರುವ ಕಕ್ಕಡ ಹಬ್ಬದ ಮಹತ್ವವನ್ನು ನಮ್ಮ ಮುಂದಿನ ಪೀಳಿಗೆಗೂ ತಿಳಿಸಿಕೊಡುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪ್ರಕೃತಿಯನ್ನು ಪೂಜಿಸುವ ಕೊಡಗಿನ ಜನತೆಗೆ ಈ ಹಬ್ಬ ಅತ್ಯಂತ ಮಹತ್ವದ್ದಾಗಿದೆ. ಅಮ್ಮ ಕೊಡವ ಸಮಾಜದ ಪದ್ಧತಿ, ಪರಂಪರೆ, ಆಚರಣೆಗಳನ್ನು ಉಳಿಸಿ ಬೆಳೆಸಲು ಇಂತಹ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಬಹು ಸಂಸ್ಕೃತಿಯನ್ನು ಹೊಂದಿರುವ ನಮ್ಮ ದೇಶದಲ್ಲಿ ಚಿಕ್ಕ ಸಮುದಾಯವೇ ಆಗಲಿ, ದೊಡ್ಡ ಸಮುದಾಯವೇ ಆಗಲಿ ಪ್ರತಿಯೊಬ್ಬರಿಗೂ ತನ್ನದೇ ಆದ ಪದ್ಧತಿ, ಪರಂಪರೆ ಇರುತ್ತದೆ. ನಾವು ಎಲ್ಲವನ್ನು ಗೌರವಿಸಿದಾಗ, ಎಲ್ಲಾ ಜನಾಂಗಗಳಿಗೂ ಅವರದೇ ಆದ ಸ್ಥಾನಮಾನಗಳನ್ನು ನೀಡಿದಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಅತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರತ್ಯು ಮಾತನಾಡಿ, ಹಿರಿಯರಿಂದ ಬಳುವಳಿಯಾಗಿ ಬಂದಿರುವ ಪದ್ಧತಿ ಪರಂಪರೆಯನ್ನು ಸಮಾಜದ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ನಡೆಸಲಾಗುತ್ತಿದೆ. ಜನಾಂಗ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದ ಅವರು, ಸರ್ಕಾರದ ಅನುದಾನ ಸೇರಿದಂತೆ ಒಟ್ಟು ೩೫ ಲಕ್ಷ ವೆಚ್ಚದಲ್ಲಿ ಗೋಣಿಕೊಪ್ಪದಲ್ಲಿ ಅಮ್ಮ ಕೊಡವ ಸಮಾಜದ ಕಟ್ಟಡ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಸಮಾರಂಭದಲ್ಲಿ ವಿಧಾನಸಭಾ ಉಪಾಧ್ಯಕ್ಷರಾಗಿ ಆಯ್ಕೆಯಾದ ಎ.ಎಸ್.ಪೊನ್ನಣ್ಣ ಹಾಗೂ ವೇದಿಕೆಯಲ್ಲಿದ್ದ ಎಲ್ಲಾ ಅತಿಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಜನಾಂಗ ಬಾಂಧವರು ಭೋಜನಕೂಟದಲ್ಲಿ ಪಾಲ್ಗೊಂಡರು.
ಈ ಸಂದರ್ಭ ಮುಖ್ಯ ಅಥಿತಿಗಳಾದ ಅಮ್ಮ ಕೊಡವ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ನಾಳಿಯಮಂಡ ಉಮೇಶ್ ಕೇಚಮಯ್ಯ, ಖಜಾಂಚಿ ಮನ್ನಕ್ಕಮನೆ ಬಾಲು, ಮೈಸೂರು ಅಮ್ಮ ಕೊಡವ ಸಮಾಜ ಅಧ್ಯಕ್ಷ ಹೆಮ್ಮಚ್ಚಿಮನೆ ಮಹೇಂದ್ರ, ಕಾನೂನು ಸಲಹೆಗಾರ ಚಮ್ಮಣಮಾಡ ಗಿರೀಶ್, ನಿವೃತ್ತ ಶಿಕ್ಷಕಿ ಹೆಮ್ಮಚ್ಚಿಮನೆ ಮೀನಾಕ್ಷಿ ಗೋಪಾಲ್, ಮಾಯಮುಡಿ ಕಂಗಳತ್ನಾಡ್ ಅಮ್ಮ ಕೊಡವ ಸಂಘದ ಅಧ್ಯಕ್ಷೆ ಬಾನಂಡ ಆಶಾ ಸೂದನ್, ಮಡಿಕೇರಿ ಅಮ್ಮ ಕೊಡವ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ನಾಳಿಯಮ್ಮನ ಪಾಲಾಕ್ಷ, ಕೋತೂರು ಅಮ್ಮ ಕೊಡವ ಸಮಾಜ ಸ್ಥಳ ದಾನಿ ಅಚ್ಚಿಯಂಡ ವೇಣುಗೋಪಾಲ್, ಕೋತೂರು ಶ್ರೀಕೃಷ್ಣ ಅಮ್ಮ ಕೊಡವ ಸಮಾಜ ಅಧ್ಯಕ್ಷ ಹೆಮ್ಮಚ್ಚಿಮನೆ ಅಶಿತ, ಕೋತೂರು ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಸಂಘದ ಅಧ್ಯಕ್ಷೆ ಹೆಮ್ಮಚ್ಚಿಮನೆ ಲತಾ ಗಣೇಶ್, ಮನ್ನಕ್ಕಮನೆ ಪ್ರಕಾಶ್ ಸೇರಿದಂತೆ ಹಲವು ಗಣ್ಯರು ಹಾಗೂ ಜನಾಂಗ ಬಾಂಧವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net