ಪೊನ್ನಂಪೇಟೆ ಮುಗುಟಗೇರಿ ಗ್ರಾಮದಲ್ಲಿ ಕೈಲ್‌ಪೊಳ್ದ್ ಆಚರಣೆ

ಊರಿನ ತಕ್ಕ ಮುಖ್ಯಸ್ಥರಾದ ಮಲಚೀರ ಬೋಜಪ್ಪ ಗಾಳಿಯಲ್ಲಿ ಮುಹೂರ್ತ ಗುಂಡು ಹೊಡೆಯುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು. ಚೀರಂಡ ಶಂಭು ಬೆಳ್ಳಿಯಪ್ಪ, ಮುದ್ದಿಯಡ ಪ್ರಕಾಶ್ ಇತರರಿದ್ದರು.
ಊರಿನ ತಕ್ಕ ಮುಖ್ಯಸ್ಥರಾದ ಮಲಚೀರ ಬೋಜಪ್ಪ ಗಾಳಿಯಲ್ಲಿ ಮುಹೂರ್ತ ಗುಂಡು ಹೊಡೆಯುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು. ಚೀರಂಡ ಶಂಭು ಬೆಳ್ಳಿಯಪ್ಪ, ಮುದ್ದಿಯಡ ಪ್ರಕಾಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪೊನ್ನಂಪೇಟೆ ಮುಗುಟಗೇರಿ ಗ್ರಾಮದಲ್ಲಿ ಕೈಲ್‌ಪೊಳ್ದ್ ಆಚರಣೆ
ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದ ತೋಣಕೇರಿ ಅಂಬಲದಲ್ಲಿ ಕೈಲ್ ಪೊಳ್ದ್ ಹಬ್ಬವನ್ನು ಸಾಮೂಹಿಕವಾಗಿ ಹಾಗೂ ಸಾಂಪ್ರದಾಯಕವಾಗಿ ಆಚರಿಸಲಾಯಿತು.
ಗ್ರಾಮಸ್ಥರು ತಮ್ಮ ಮನೆಗಳಲ್ಲಿ ಕೃಷಿ ಪರಿಕರಗಳಿಗೆ ಹಾಗೂ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿ ನಂತರ ಊರಿನ ಅಂಬಲದಲ್ಲಿ ಬಂದು ಸೇರಿದರು. ನಂತರ ಅರಳಿ ಕಟ್ಟೆಯ ಸುತ್ತಾ ಪ್ರದಕ್ಷಿಣೆ ಹಾಕುತ್ತಾ ಮುಹೂರ್ತ ಹಾಡನ್ನು ಹಾಡಿ ದೇವರನ್ನು ಸ್ತುತಿಸಿದರು. ನಂತರ ಊರಿನ ತಕ್ಕ ಮುಖ್ಯಸ್ಥರಾದ ಮಲಚೀರ ಬೋಜಪ್ಪ ಗಾಳಿಯಲ್ಲಿ ಮುಹೂರ್ತ ಗುಂಡು ಹೊಡೆಯುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು.
ಈ ಸಂಧರ್ಭ ಗ್ರಾಮಸ್ಥರಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಆಯೋಜಿಸಲಾಗಿತ್ತು. ಗ್ರಾಮದ ಹಿರಿಯರು, ಕಿರಿಯರು, ಮಹಿಳೆಯರು, ತಮ್ಮ ಗುರಿ ಪ್ರದರ್ಶನ ಮಾಡುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಊರಿನ ಹಿರಿಯರಾದ ಮುದ್ದಿಯಡ ಗಣೇಶ್ ಕೃಷಿ ಪರಿಕರ ಹಾಗೂ ಆಯುಧಗಳಿಗೆ ಪೂಜೆ ಸಲ್ಲಿಸಿ, ಗ್ರಾಮದ ಒಳಿತಿಗಾಗಿ ಪ್ರಾರ್ಥಿಸಿದರು.
ಈ ಸಂಧರ್ಭ ಊರಿನ ಹಿರಿಯರಾದ ಚೀರಂಡ ಶಂಭು ಬೆಳ್ಳಿಯಪ್ಪ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗ್ರಾಮಸ್ಥರು ಒಂದೆಡೆ ಸೇರಿ ಹಬ್ಬ ಆಚರಿಸುತ್ತಿದ್ದೇವೆ. ಕೈಲ್ ಪೋಳ್ದ್ ಹಬ್ಬ ಕೃಷಿ ಚಟುವಟಿಕೆಗಳನ್ನು ಮುಗಿಸಿ ದಣಿದ ದೇಹಕ್ಕೆ ಹಾಗೂ ಮನಸಿಗೆ ಖುಷಿ ಕೊಡುವ ಹಬ್ಬವಾಗಿದ್ದು, ಹಿಂದಿನ ಕಾಲದಲ್ಲಿ ಗ್ರಾಮಸ್ಥರು ಆಯುಧಗಳಿಗೆ ಪೂಜೆ ಸಲ್ಲಿಸಿ ನಂತರ ಊರಿನ ನಿಗದಿತ ಜಾಗದಲ್ಲಿ ಧೂಪದ ಮರ ಹಾಗೂ ಕಬ್ಬಕಾಯಿ ಮರಕ್ಕೆ ಗುಂಡು ಹೊಡೆಯುವ ಸಂಪ್ರದಾಯ ಇತ್ತು. ಕಾಲ ಬದಲಾದಂತೆ ಸಂಪ್ರದಾಯವು ಬದಲಾಗಿ ಇತ್ತೀಚಿನ ಕೆಲವು ವರ್ಷಗಳಿಂದ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸಂಪ್ರದಾಯ ಚಾಲನೆಗೆ ಬಂದು, ಇಂದಿನ ಪೀಳಿಗೆ ಅದೇನೆ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದರು.
ವಿಶಿಷ್ಟ ಆಚಾರ ವಿಚಾರ ಪದ್ಧತಿ ಪರಂಪರೆಯನ್ನು ಒಳಗೊಂಡಿರುವ ಕೊಡವ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವ ಜನತೆಯ ಮೇಲಿದೆ ಎಂದರು.
ಊರಿನ ಪ್ರಮುಖರಾದ ಮುದ್ದಿಯಡ ಪ್ರಕಾಶ್ ಮಾತನಾಡಿ, ಮುಂದಿನ ಅ.೧೦,೧೧ ರಂದು ಇದೇ ಊರಿನ ಆಲೇಮಾಡ ಕುಟುಂಬಸ್ಥರಿಂದ ಆಯೋಜನೆಗೊಳ್ಳುತ್ತಿರುವ ತೋಕ್ ನಮ್ಮೆಯಲ್ಲಿ ಕೊಡಗಿನ ಎಲ್ಲಾ ಕೊಡವ ಕುಟುಂಬದವರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿದರು.
ನಂತರ ಊರಿನ ಹಿರಿಯರು ಆಲೆಮಾಡ ಕುಟುಂಬಸ್ಥರಾದ ರೋಷನ್ ಹಾಗೂ ನವೀನ್ ದೇವಯ್ಯ ಅವರಿಗೆ ಸಾಂಪ್ರದಾಯವಾಗಿ ಕೋವಿ ಹಾಗೂ ತೆಂಗಿನಕಾಯಿಯನ್ನು ನೀಡಿ ತೊಕ್ ನಮ್ಮೆ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಸ್ಪರ್ಧೆಯ ಫಲಿತಾಂಶ
ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಮುದ್ದಿಯಡ ಕಿರಣ್ ಜೋಯಪ್ಪ ಪ್ರಥಮ, ಆಲೇಮಾಡ ರೋಷನ್ ದ್ವಿತೀಯ, ಚೀರಂಡ ಗಿರೀಶ್ ತೃತೀಯ ಬಹುಮಾನ ಪಡೆದುಕೊಂಡರು. ಮಕ್ಕಳ ವಿಭಾಗದಲ್ಲಿ ಆಲೇಮಾಡ ತ್ರಿಷಾ ಕಾವೇರಮ್ಮ ಬಹುಮಾನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಮುಗುಟಗೇರಿಯ ದೇವಸ್ಥಾನ ಹಾಗೂ ಮರಣ ನಿಧಿ ಆಡಳಿತ ಮಂಡಳಿ ಸದಸ್ಯರು, ಮಹಿಳೆಯರು, ಮಕ್ಕಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net