ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಯುವನಿಧಿ ಯೋಜನೆಯ ಫಲಾನುಭವಿಗಳಿಗೆ ಆಯೋಜಿಸಿದ್ದ ವಿಶೇಷ ಕೌಶಲ ತರಬೇತಿ ಕಾರ್ಯಕ್ರಮವನ್ನು ಯೋಜನೆಯ ಫಲಾನುಭವಿಗಳು ಉದ್ಘಾಟಿಸಿದರು. ಡಾ.ಮಂತರ್‌ಗೌಡ, ವಿ.ಪಿ.ಶಶಿಧರ್, ಪ್ರೊ.ಅಶೋಕ ಸಂಗಪ್ಪ ಆಲೂರ, ಕೆ.ಸಿ.ಭೀಮಯ್ಯ, ಪ್ರೊ.ಎಂ.ಸುರೇಶ್ ಮತ್ತಿತರರು ಇದ್ದರು.
ಮಳೆ ಕಡಿಮೆಯಾಗುತ್ತಿದ್ದಂತೆಯೇ ದಸರಾದೊಳಗಾಗಿ ಮಡಿಕೇರಿಯಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿ, ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರಿಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡ ಹೇಳಿದರು.
ಚಿಕ್ಕ ಅಳುವಾರದ ಕೊಡಗು ವಿಶ್ವವಿದ್ಯಾಲಯದಲ್ಲಿ ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಯುವನಿಧಿ ಯೋಜನೆಯ ಫಲಾನುಭವಿಗಳಿಗಾಗಿ ಆಯೋಜಿಸಿದ್ದ ವಿಶೇಷ ಕೌಶಲ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವು ಗಳಿಸುವ ಆಸ್ತಿ ಅಥವಾ ಜಮೀನನ್ನು ಕಳೆದುಕೊಳ್ಳಬಹುದು. ಆದರೆ ನಾವು ಪಡೆದ ಶಿಕ್ಷಣ ಮತ್ತು ಕೌಶಲವನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಅದೇ ನಮ್ಮ ದೊಡ್ಡ ಆಸ್ತಿಯಾಗಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಇಂದಿನ ಕಾಲಘಟ್ಟದಲ್ಲಿ ಎಐ ಮತ್ತು ಚಾಟ್ ಜಿಪಿಟಿಯಂತಹ ತಂತ್ರಜ್ಞಾನ ಬೆಳೆದಿದ್ದು, ಮಾಹಿತಿಯನ್ನು ಬೆರಳ ತುದಿಯಲ್ಲೇ ಪಡೆಯಬಹುದು. ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ಯುವಜನತೆ ತಮ್ಮ ಕೌಶಲ ಮತ್ತು ಉತ್ಪಾದಕತೆ ಹೆಚ್ಚಿಸಿಕೊಳ್ಳಬೇಕು.
ಯಾವುದೇ ಕೆಲಸ ಸಣ್ಣದಲ್ಲ. ಕೆಲಸ ಮಾಡುವಾಗ ಮನಸ್ಫೂರ್ತಿಯಾಗಿ ಶ್ರಮಿಸಬೇಕು. ಉದ್ಯೋಗ ಸಿಕ್ಕಾಗ ಕೀಳರಿಮೆ ಬಿಟ್ಟು ಶೇ.100 ಶ್ರಮ ಹಾಕಿದರೆ ಯಶಸ್ಸು ಖಚಿತ. ಕುಶಾಲನಗರ ಕೈಗಾರಿಕಾ ಪ್ರದೇಶದಲ್ಲಿ ಇರುವ 70-80 ಸಂಸ್ಥೆಗಳು ಹಾಗೂ ಫ್ಯಾಕ್ಟರಿಗಳನ್ನು ಉದ್ಯೋಗ ಮೇಳಕ್ಕೆ ಆಹ್ವಾನಿಸಿ, ಸ್ಥಳೀಯ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಕೊಡಗು ವಿಶ್ವವಿದ್ಯಾಲಯದಲ್ಲಿ ಶೀಘ್ರವೇ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಆರಂಭಿಸುವ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಸರ್ಕಾರ ಪದವೀಧರರಿಗೆ ಪ್ರತಿ ತಿಂಗಳು 3 ಸಾವಿರ ಮತ್ತು ಡಿಪ್ಲೊಮಾ ಪಡೆದವರಿಗೆ 2 ಸಾವಿರ ರೂ.ಗಳನ್ನು 2 ವರ್ಷಗಳವರೆಗೆ ನೀಡುತ್ತಿದ್ದು, ಎರಡು ವರ್ಷಗಳ ನಂತರ ಯುವಕರು ಕಂಗಾಲಾಗಬಾರದು. ಅದಕ್ಕಾಗಿಯೇ ಈ ಕೌಶಲ ತರಬೇತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಮಾತನಾಡಿ, ಕೊಡಗು ಜಿಲ್ಲೆಯ ವಿಶಿಷ್ಟ ಉದ್ಯಮಗಳಿಗೆ ಬೇಕಾದ ಕೌಶಲಗಳನ್ನು ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ಸ್ಥಳೀಯವಾಗಿ ಆದ್ಯತೆ ಮೇರೆಗೆ ಉದ್ಯೋಗ ಸಿಗುವಂತೆ ಇಂಡಸ್ಟ್ರಿ ಅಕಾಡೆಮಿ ಕಾನ್‌ಕ್ಲೇವ್ ಆಯೋಜಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಕೆ.ಸಿ.ಭೀಮಯ್ಯ, ಕೊಡಗು ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ.ಎಂ.ಸುರೇಶ್, ಸಂಪನ್ಮೂಲ ವ್ಯಕ್ತಿಗಳಾದ ಶಿಕ್ಷಣ ತಜ್ಞ ಎ.ಎಚ್.ಸಾಗರ್, ಡಿ.ಕೆ.ಮಹೇಶ್‌ಕುಮಾರ್, ತಾಲೂಕು ಪಂಚಾಯಿತಿ ಇಒ ಕೆ.ಸಿ.ಅಪ್ಪಣ್ಣ, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಸಿ.ಬಿ.ಮಂಜುನಾಥ್ ಹಾಗೂ ಪ್ರಮುಖರಾದ ನಟೇಶ್ ಗೌಡ, ಉಪನ್ಯಾಸಕ ಮಂಜುನಾಥ್, ಡಾ. ವಿನು, ಮಮತಾ ಇದ್ದರು.