ಜನಮನ ಸೂರೆಗೊಂಡ ಹಾಡಿ ಕಿನ್ನರ ಲೋಕ ಕಾರ್ಯಕ್ರಮ

ನಾಗರಹೊಳೆ ನಾಣಚ್ಚಿ ಗದ್ದೆ ಹಾಡಿಯಲ್ಲಿ ನಡೆದ ಹಾಡಿ ಕಿನ್ನರ ಲೋಕ ಕಾರ್ಯಕ್ರಮದಲ್ಲಿ ಹಾಡಿಯ ಮಕ್ಕಳು ಅಭಿನಯಿಸಿದ ಬೊಮ್ಮನಹಳ್ಳಿ ಕಿಂದರಿ ಜೋಗಿ ನಾಟಕ ಗಮನ ಸೆಳೆಯಿತು. 22ಎಂಡಿಕೆ06: ನಾಗರಹೊಳೆ ನಾಣಚ್ಚಿ ಗದ್ದೆ ಹಾಡಿಯಲ್ಲಿ ನಡೆದ ಹಾಡಿ ಕಿನ್ನರ ಲೋಕ ಕಾರ್ಯಕ್ರಮದಲ್ಲಿ ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆಯ ಸದಸ್ಯರು ಗಿರಿಜನ ಸಂಸ್ಕೃತಿ ಬಿಂಬಿಸುವ ನೃತ್ಯ ಪ್ರದರ್ಶನ ನೀಡಿದರು.
ನಾಗರಹೊಳೆ ನಾಣಚ್ಚಿ ಗದ್ದೆ ಹಾಡಿಯಲ್ಲಿ ನಡೆದ ಹಾಡಿ ಕಿನ್ನರ ಲೋಕ ಕಾರ್ಯಕ್ರಮದಲ್ಲಿ ಹಾಡಿಯ ಮಕ್ಕಳು ಅಭಿನಯಿಸಿದ ಬೊಮ್ಮನಹಳ್ಳಿ ಕಿಂದರಿ ಜೋಗಿ ನಾಟಕ ಗಮನ ಸೆಳೆಯಿತು. 22ಎಂಡಿಕೆ06: ನಾಗರಹೊಳೆ ನಾಣಚ್ಚಿ ಗದ್ದೆ ಹಾಡಿಯಲ್ಲಿ ನಡೆದ ಹಾಡಿ ಕಿನ್ನರ ಲೋಕ ಕಾರ್ಯಕ್ರಮದಲ್ಲಿ ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆಯ ಸದಸ್ಯರು ಗಿರಿಜನ ಸಂಸ್ಕೃತಿ ಬಿಂಬಿಸುವ ನೃತ್ಯ ಪ್ರದರ್ಶನ ನೀಡಿದರು.
Published on
ಗೋಣಿಕೊಪ್ಪಲು:
ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆ, ಮೈಸೂರು ರಂಗಯಾನ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಸಹಯೋಗದಲ್ಲಿ ಪೊನ್ನಂಪೇಟೆ ತಾಲೂಕು ನಾಗರಹೊಳೆ ನಾಣಚ್ಚಿ ಗದ್ದೆ ಹಾಡಿಯಲ್ಲಿ ಗುರುವಾರ ಸಂಜೆ ಹಾಡಿ ಕಿನ್ನರ ಲೋಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಲ್ಲಿ ಪ್ರದರ್ಶಿತವಾದ ಬೊಮ್ಮನಹಳ್ಳಿ ಕಿಂದರಿ ಜೋಗಿ ನಾಟಕ ಹಾಗೂ ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆಯ ಕಲಾವಿದರ ಜೇನುಕುರುಬರ ಹಾಡು- ಕುಣಿತ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದವು.
ರಾಷ್ಟ್ರಕವಿ ಕುವೆಂಪು ವಿರಚಿತ ಕನ್ನಡದ ಅತ್ಯಂತ ಜನಪ್ರಿಯ ಮಕ್ಕಳ ಕವನ ಬೊಮ್ಮನಹಳ್ಳಿ ಕಿಂದರಿ ಜೋಗಿ ಆಧರಿಸಿ ರಚನೆ ಮಾಡಿರುವ ರಂಗಕರ್ಮಿ ಬಿ. ವಿ. ಕಾರಂತರ ಸಂಗೀತ ನಿರ್ದೇಶನದ ಬೊಮ್ಮನಹಳ್ಳಿಯ ಕಿಂದರಿಜೋಗಿ ನಾಟಕವನ್ನು ವಿಕಾಸ್ ಚಂದ್ರ ನಿರ್ದೇಶನ ಮಾಡಿದ್ದರು. ಗದ್ದೆಹಾಡಿಯ ಗಿರಿಜನ ಮಕ್ಕಳ ಮನೋಜ್ಞ ಅಭಿನಯದಲ್ಲಿ ಅದ್ಬುತವಾಗಿ ಮೂಡಿಬಂದ ನಾಟಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.
ಬೊಮ್ಮನಹಳ್ಳಿ ಎಂಬ ಸುಂದರ ಗ್ರಾಮದಲ್ಲಿ ಇಲಿಗಳ ಹಾವಳಿ ಹೆಚ್ಚಾಗಿ ಇಲಿಗಳು ಜನರಿಗೆ ತೊಂದರೆ ಕೊಟ್ಟು ದವಸ ಧಾನ್ಯಗಳನ್ನು ನಾಶಮಾಡಿ, ನಾಯಿ-ಬೆಕ್ಕುಗಳನ್ನು ಕಚ್ಚಿ ಸಾಯಿಸುತ್ತವೆ. ಇದರಿಂದ ಹಳ್ಳಿಯ ಜನರು ಕಂಗಾಲಾಗಿ ಊರ ಗೌಡನಲ್ಲಿ ಇಲಿಗಳನ್ನು ನಿಯಂತ್ರಿಸುವAತೆ ವಿನಂತಿಸಿಕೊಳ್ಳುತ್ತಾರೆ.
ಇಲಿಗಳ ಕಾಟದಿಂದ ಬೇಸತ್ತ ಜನರಿಗೆ ಸಹಾಯ ಮಾಡಲು ಒಂದು ದಿನ ಬೊಮ್ಮನಹಳ್ಳಿಗೆ ಕಿಂದರಿ ಜೋಗಿ ಬರುತ್ತಾನೆ. ಹಳ್ಳಿಯ ಗೌಡ ಇಲಿಗಳಿಂದ ಮುಕ್ತಿ ನೀಡಿದರೆ ಹಣ ಕೊಡುವುದಾಗಿ ಹೇಳುತ್ತಾನೆ. ಆಗ ಜೋಗಿ ತನ್ನ ಕಿಂದರಿ(ಕೊಳಲು)ಬಾರಿಸುತ್ತಾ ಮಂತ್ರದAತೆ ಇಂಪಾದ ನಾದವನ್ನು ಹೊರಡಿಸುತ್ತಾನೆ. ಜೋಗಿಯ ಕೊಳಲಿನ ನಾದಕ್ಕೆ ಮಾರುಹೋದ ಇಲಿಗಳೆಲ್ಲವೂ, ಅವನ ಹಿಂದೆ ಸಾಲಾಗಿ ಹೊರಡುತ್ತವೆ. ಜೋಗಿಯು ಅವೆಲ್ಲವನ್ನು ಕರೆದೊಯ್ದು, ನದಿಗೆ ದೂಡಿ ಗ್ರಾಮಕ್ಕೆ ಮುಕ್ತಿ ನೀಡುತ್ತಾನೆ. ಆದರೆ ಇಲಿಗಳನ್ನು ಓಡಿಸಿದ ಜೋಗಿಗೆ ಊರ ಗೌಡ ಹಣ ಕೊಡಲು ನಿರಾಕರಿಸುತ್ತಾನೆ.
ಇದರಿಂದ ಕೋಪಗೊಂಡ ಜೋಗಿ ಮತ್ತೆ ಕಿಂದರಿಯನ್ನು ಬಾರಿಸುತ್ತಾನೆ. ಈ ಬಾರಿ ಇಲಿಗಳ ಬದಲು, ಗ್ರಾಮದ ಮಕ್ಕಳೆಲ್ಲರೂ ಮಂತ್ರಮುಗ್ಧರಾಗಿ ಜೋಗಿಯ ಹಿಂದೆಯೇ ಹೊರಟು ಹೋಗುತ್ತಾರೆ. ಕೊನೆಯಲ್ಲಿ ಜೋಗಿಯು ಮಕ್ಕಳನ್ನು ಗುಡ್ಡದೊಳಗೆ ಕರೆದೊಯ್ಯುವುದರೊಂದಿಗೆ ನಾಟಕ ಮುಕ್ತಾಯವಾಗುತ್ತದೆೆ.
ನಾಣಚ್ಚಿ ಗದ್ದೆ ಹಾಡಿಯ 25 ಮಕ್ಕಳ ಅಭಿನಯದಲ್ಲಿ ಉತ್ತಮ ಹಿನ್ನೆಲೆ ಸಂಗೀತದೊAದಿಗೆ ಮೂಡಿಬಂದ ನಾಟಕದಲ್ಲಿ ಕೊಟ್ಟಮಾತಿಗೆ ತಪ್ಪಿದರೆ ಪರಿಣಾಮ ಗಂಭೀರವಾಗಿರುತ್ತದೆ ಎಂಬ ಸಂದೇಶವನ್ನು ಸಾರಲಾಯಿತು.
ರಂಗದ ಹಿಂದೆ ಮೈಸೂರು ರಂಗ ಯಾನ ಟ್ರಸ್ಟ್ ಪ್ರದರ್ಶನ ಕಲೆಗಳ ಅಧ್ಯಯನ ಕೇಂದ್ರದ ಡಿಪ್ಲೊಮೊ ವಿದ್ಯಾರ್ಥಿಗಳು ಸಹಕಾರ ನೀಡಿದರು.
ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆಯ ಅಧ್ಯಕ್ಷ ಜೆ. ಬಿ. ರಮೇಶ್ ನೇತೃತ್ವದಲ್ಲಿ ತಂಡದ ಸದಸ್ಯರಿಂದ ಜೇನುಕುರುಬರ ಆಚಾರ ವಿಚಾರ, ಸಂಸ್ಕೃತಿಯನ್ನು ಬಿಂಬಿಸುವ ಹಾಡು, ಕುಣಿತಗಳು ಅದ್ಭುತವಾಗಿ ಮೂಡಿಬಂದವು. ಡ್ರಮ್ ಸೇರಿದಂತೆ, ತಗಡಿನ ವಾದನ ಬಳಸಿಕೊಂಡು ನುಡಿಸಿದ ತಾಳಗಳು ಪ್ರೇಕ್ಷಕರನ್ನೂ ಕುಣಿಯುವಂತೆ ಮಾಡಿದವು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಡಾ. ಗಂಗೂಭಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಪ್ರೊ. ರಾಮಕೃಷ್ಣಯ್ಯ ಅವರು ಒಲೆ ಹೊತ್ತಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರಂಗ ಭೂಮಿಯು ಮಕ್ಕಳಿಗೆ ಧೈರ್ಯ ಹಾಗೂ ಆತ್ಮಸ್ಥೈರ್ಯವನ್ನು ತುಂಬಿ, ವಿದ್ಯಾಭ್ಯಾಸದ ಕಡೆಗೆ ಗಮನಹರಿಸುವಂತೆ ಮಾಡುತ್ತದೆ. ರಂಗಭೂಮಿ ಬದುಕಿನ ಎಲ್ಲಾ ಮಜಲುಗಳಲ್ಲಿಯೂ ಕೂಡ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಹಾಡಿಗಳಲ್ಲಿ ಈ ರೀತಿಯ ಕಾರ್ಯಕ್ರಮಗಳು ಪ್ರತಿವರ್ಷವೂ ನಡೆಯುವಂತಾಗಬೇಕು ಎಂದರು.
ನಾಟಕ ನಿರ್ದೇಶಕ ವಿಕಾಸ್ ಚಂದ್ರ ಮಾತನಾಡಿ ಕಾಡಂಚಿನ ಹಾಡಿಯಲ್ಲಿರುವ ಮಕ್ಕಳಿಗೆ ನಗರ ಪ್ರದೇಶದ ಜನರಿಗೆ ಸಿಗುವ ರೀತಿಯಲ್ಲಿ ನಾಟಕ ತರಬೇತಿಯಾಗಲಿ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳ ತರಬೇತಿಯಾಗಲಿ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ರಂಗಯಾನ ಟ್ರಸ್ಟ್ ವತಿಯಿಂದ ಹಾಡಿ ಮಕ್ಕಳಿಗೆ ರಂಗ ಶಿಬಿರದ ಅನುಭವ ಸಿಗಲಿ ಎಂಬ ಉದ್ದೇಶದಿಂದ 10 ದಿನಗಳ ಕಾಲ ತರಬೇತಿ ನೀಡಿ ನಾಟಕ ಮಾಡಿಸಿಲಾಗಿದೆ. ಎಲ್ಲ ಮಕ್ಕಳು ಉತ್ತಮವಾಗಿ ಅಭಿನಯಿಸಿದ್ದು ಖುಷಿ ತಂದಿದೆ ಎಂದರು.
ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆಯ ಅಧ್ಯಕ್ಷ ಜೆ. ಬಿ. ರಮೇಶ್ ಮಾತನಾಡಿ ಜೇನು ಕುರುಬ ಸಮುದಾಯದ ಆಚಾರ ವಿಚಾರ ಮತ್ತು ಸಾಂಪ್ರದಾಯಿಕ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆ ಶ್ರಮಿಸುತ್ತಿದೆ ಎಂದು ಹೇಳಿದರು.
ಕುಟ್ಟ ಪೊಲೀಸ್ ಠಾಣೆಯ ಎಎಸ್‌ಐ ಕಾರ್ಯಪ್ಪ, ಹೆಡ್ ಕಾನ್ಸ್ಟೇಬಲ್ ಮನು ಅವರು ಹಾಡಿಜನರಿಗೆ ಪೋಕ್ಸೋ ಕಾಯಿದೆ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸಿದರು.
ಈ ಸಂದರ್ಭ ಬೊಮ್ಮಾಡು ಹಾಡಿ ಮುಖಂಡರಾದ ಜೆ. ಕೆ. ಸೋಮಯ್ಯ, ಜೆ. ಬಿ. ಮನು, ನಾಣಚ್ಚಿ ಗದ್ದೆಹಾಡಿ ಮುಖಂಡ ಜೆ. ಕೆ. ಕಾಳ, ಹಾಡಿಯ ಯಜಮಾನ ಜೆ. ಕೆ. ತಿಮ್ಮ, ಕೊಡಂಗೆ ಹಾಡಿ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಮಣಿ ಇನ್ನಿತರರು ಇದ್ದರು. ವಿವಿಧ ಹಾಡಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಕಾರ್ಯಕ್ರಮ ವೀಕ್ಷಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net