ಕಾಡು ಉಳಿಸಲು ಸ್ವತಃ ಕಾರ್ಯೋನ್ಮುಖರಾಗುವುದು ಒಳಿತು

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮವನ್ನು ಕೇಶವ ಕಾಮತ್ ಉದ್ಘಾಟಿಸಿದರು. ಸಿ. ಜೆ.ಕುಶಾಲಪ್ಪ, ಡಾ.ಶಿವಕುಮಾರ್, ಡಾ.ನಾಗರಾಜ್, ದಯಾಚಂಗಪ್ಪ, ಟಿ.ಪಿ ರಮೇಶ್, ಪ್ರಮೋದ್ ಗಣಪತಿ, ಪಿ.ಜಿ.ಅಯ್ಯಪ್ಪ ಇದ್ದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮವನ್ನು ಕೇಶವ ಕಾಮತ್ ಉದ್ಘಾಟಿಸಿದರು. ಸಿ. ಜೆ.ಕುಶಾಲಪ್ಪ, ಡಾ.ಶಿವಕುಮಾರ್, ಡಾ.ನಾಗರಾಜ್, ದಯಾಚಂಗಪ್ಪ, ಟಿ.ಪಿ ರಮೇಶ್, ಪ್ರಮೋದ್ ಗಣಪತಿ, ಪಿ.ಜಿ.ಅಯ್ಯಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಪ್ರಭಾರ ಡೀನ್ ಡಾ.ಶಿವಕುಮಾರ್
  • ಕನ್ನಡ ಸಾಹಿತ್ಯ ಪರಿಷತ್‌ನ ಕೊಡಗು ಜಿಲ್ಲಾ ಘಟಕ
  • ಕೊಡಗು ಮಾಡೆಲ್ ಫಾರೆಸ್ಟ್ ಟ್ರಸ್ಟ್
ಪೊನ್ನಂಪೇಟೆ: ಅರಣ್ಯ ಶಾಸ್ತ್ರ ಅಧ್ಯಯನ ಮುಖ್ಯವಲ್ಲ. ಬದಲಾಗಿ ಪ್ರಕೃತಿಗೆ ನಾವು ಏನು ಕೊಡುತ್ತೇವೆ ಎನ್ನುವುದು ಮುಖ್ಯ ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಪ್ರಭಾರ ಡೀನ್ ಡಾ.ಶಿವಕುಮಾರ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್‌ನ ಕೊಡಗು ಜಿಲ್ಲಾ ಘಟಕ ಮತ್ತು ಕೊಡಗು ಮಾಡೆಲ್ ಫಾರೆಸ್ಟ್ ಟ್ರಸ್ಟ್ ಸಹಯೋಗದಲ್ಲಿ ದೇವರ ಕಾಡು ಸಂರಕ್ಷಣೆ ಕುರಿತು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಿಎಚ್.ಡಿ ಪಡೆಯುವುದು ಸಾಧನೆ ಅಲ್ಲ. ಬದಲಾಗಿ ಪ್ರಕೃತಿಗೆ ಆರಾಧಕರಾಗಬೇಕು. ಪ್ರಾಕೃತಿಕ ವಿಕೋಪ, ಮಾರಕ ಕಾಯಿಲೆಗಳಿಂದ ಪ್ರಾಣಿ ಸಂಕುಲಗಳು ನಾಶ ಆಗುತ್ತಿರುವುದು, ಮಾನವರಿಂದ ಪ್ರಕೃತಿ ಮೇಲೆ ಆಗುತ್ತಿರುವ ದಬ್ಬಾಳಿಕೆಯಿಂದ ಕಾಡನ್ನು ಉಳಿಸಬೇಕು ಎಂದು ಕೇವಲ ಕಾರ್ಯಕ್ರಮಗಳನ್ನು ಮಾಡಿದರೆ ಸಾಲದು. ನಿತ್ಯ ಅದನ್ನು ಉಳಿಸಲು ಸ್ವತಃ ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು.
ಕೊಡಗು ಮಾಡೆಲ್ ಫಾರೆಸ್ಟ್ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಜಿ.ಕುಶಾಲಪ್ಪ ಮಾತನಾಡಿ, ದೇವರ ಕಾಡು ನಾಶವಾಗುತ್ತಿದೆ, ಕೊಡಗಿನ 1,214 ದೇವರ ಕಾಡುಗಳಲ್ಲಿ 165 ಬೇರೆ ಬೇರೆ ದೇವರುಗಳು ನೆಲೆ ನಿಂತಿದೆ. ಎಲ್ಲ ಧರ್ಮ, ಜಾತಿಗಳನ್ನು ಒಂದುಗೂಡಿಸುವ ಶಕ್ತಿ ದೇವರ ಕಾಡುಗಳಿಗಿದೆ. ಭಾರತದ ಯಾವುದೇ ರಾಜ್ಯಗಳಲ್ಲಿ ದೇವರ ಕಾಡುಗಳನ್ನು ಕಾಪಾಡುವ ಪ್ರಯತ್ನ ಆಗಿಲ್ಲ. ಇದು ಕೊಡಗಿನಲ್ಲಿ ಮಾತ್ರ ಆಗಿದೆ ಎಂದು ಹೇಳಲು ಹೆಮ್ಮೆ ಇದೆ ಎಂದರು.
ಕೊಡಗು ಉಳಿಯಬೇಕಾದರೆ ಮೊದಲು ದೇವರ ಕಾಡುಗಳನ್ನು ಉಳಿಸುವ ಪ್ರಯತ್ನ ಮಾಡಬೇಕು. ಪ್ರಪಂಚದ 8 ದೇಶಗಳಿಂದ ಸಂಶೋಧಕರು ಕೊಡಗಿಗೆ ಬಂದು ದೇವರ ಕಾಡಿನ ಬಗ್ಗೆ ಸಂಶೋಧನೆ ಮಾಡಿ ಹೋಗಿದ್ದಾರೆ. ಹಾಗೆಯೇ ಕೊಡಗಿನ ವಿದ್ಯಾರ್ಥಿಗಳು ಕೂಡ ಸ್ಥಳೀಯ ದೇವರುಕಾಡುಗಳಿಗೆ ಹೋಗಿ ಸಂಶೋಧನೆ ಮಾಡಿ ಪ್ರಕೃತಿ ದೇವಿಯ ಆಶೀರ್ವಾದ ಪಡೆದು ಕೊಂಡರೆ ಭವಿಷ್ಯ ಉಜ್ವಲವಾಗಲಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್‌ನ ಕೊಡಗು ಜಿಲ್ಲಾಧ್ಯಕ್ಷ ಎಂ.ಪಿ.ಕೇಶವಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಎಂ.ಜಿ.ನಾಗರಾಜ್ ಸಮಾರೋಪ ಭಾಷಣ ಮಾಡಿದರು. ದೇವರ ಕಾಡುಗಳ ಪ್ರತಿನಿಧಿಗಳಾದ ಕೊಕ್ಕಂಡ ಗಿಣಿ ಗಣಪತಿ, ಕೋಡಿರ ಲೋಕೇಶ್, ಡಾ.ಜೆ ಸೋಮಣ್ಣ, ಸಹನಾ ಕಾಂತಬೈಲು ಹಾಗೂ ಚಂದನ್ ಕಾಮತ್ ಸಂವಾದದಲ್ಲಿ ಪಾಲ್ಗೊಂಡಿದ್ದರು. ಸಂಶೋಧಕ ಡಾ.ಎಂ.ಜಿ.ನಾಗರಾಜ್, ನಿವೃತ್ತ ಡೀನ್ ಡಾ.ಸಿ.ಜಿ ಕುಶಾಲಪ್ಪ ಅವರನ್ನು ಕೊಡಗು ಜಿಲ್ಲಾ ಕಸಾಪ ವತಿಯಿಂದ ಸನ್ಮಾನಿಸಲಾಯಿತು. ಕಸಾಪ ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಕೋಳೆರ ಚಂಗಪ್ಪ, ಹೋಬಳಿ ಕಸಾಪ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಸಂಶೋಧಕ ಡಾ.ಎಂ.ಜಿ.ಚಂದ್ರಕಾಂತ್, ಕೊಡವ ತಕ್ಕ್ ಜನಾಂಗಕಾರಡ ಒಕ್ಕೂಟ ಅಧ್ಯಕ್ಷ ಪಿ.ಜಿ.ಅಯ್ಯಪ್ಪ, ಡಾ.ಜೆ.ಸೋಮಣ್ಣ, ಶೀಲಾ ಬೋಪಣ್ಣ, ವಿನೋದ್, ರಾಮಕೃಷ್ಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net