ಸಂವಿಧಾನದ ಮೌಲ್ಯ ಎತ್ತಿಹಿಡಿಯುವುದು ನಾಗರಿಕನ ಕರ್ತವ್ಯ

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಚೆಪ್ಪುಡೀರ ಅರುಣ್ ಮಾಚಯ್ಯ ಅವರು ಉದ್ಘಾಟಿಸಿದರು. ಸಿ.ಎಸ್.ಸಂಜನಾ ಕೆ.ರಮೇಶ್, ಕಾಳೀಮಾಡ ಪ್ರಶಾಂತ್ ಇತರರಿದ್ದರು.
ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಚೆಪ್ಪುಡೀರ ಅರುಣ್ ಮಾಚಯ್ಯ ಅವರು ಉದ್ಘಾಟಿಸಿದರು. ಸಿ.ಎಸ್.ಸಂಜನಾ ಕೆ.ರಮೇಶ್, ಕಾಳೀಮಾಡ ಪ್ರಶಾಂತ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂವಿಧಾನದ ಮೌಲ್ಯ ಎತ್ತಿಹಿಡಿಯುವುದು ನಾಗರಿಕನ ಕರ್ತವ್ಯ
  • ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಚೆಪ್ಪುಡೀರ ಅರುಣ್ ಮಾಚಯ್ಯ
ಗೋಣಿಕೊಪ್ಪ: ಪೊನ್ನಂಪೇಟೆ ಹಾಗೂ ವಿರಾಜಪೇಟೆ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ, ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘಗಳ ಸಹಯೋಗದಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಪೊನ್ನಂಪೇಟೆಯ ತಾಲ್ಲೂಕು ಪಂಚಾಯತ್‌ನ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ನಂತರ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ, ಡಾ.ಬಿ.ಆರ್.ಅಂಬೇಡ್ಕರ್ ಅವರು ನಾನಾ ದೇಶಗಳ ಸಂವಿಧಾನಗಳನ್ನು ಸುದೀರ್ಘವಾಗಿ ಅಧ್ಯಯನ ಮಾಡಿ, ಭಾರತದಂತಹ ಬಹುಜಾತಿ, ಬಹುಭಾಷಾ ಮತ್ತು ಬಹುಧರ್ಮಗಳ ವೈವಿಧ್ಯಮಯ ದೇಶಕ್ಕೆ ಸೂಕ್ತವಾದ ಅತ್ಯುತ್ತಮ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನದ ಶಿಲ್ಪಿಯಾಗಿ ಅವರ ಕೊಡುಗೆ ಸ್ಮರಣೀಯ ಎಂದರು.
ಇಂದಿನ ರಾಜಕೀಯ ಹಾಗೂ ಚುನಾವಣಾ ವ್ಯವಸ್ಥೆಯಲ್ಲಿ ಮೌಲ್ಯಗಳ ಕುಸಿತ ಕಂಡುಬರುತ್ತಿದ್ದು, ಜನಸೇವೆಗಿಂತ ಹಣಬಲದ ಪ್ರಭಾವ ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷದಷ್ಟೇ ವಿರೋಧ ಪಕ್ಷಗಳ ಪಾತ್ರವೂ ಅತ್ಯಂತ ಪ್ರಮುಖವಾಗಿದ್ದು, ಸರ್ಕಾರದ ನ್ಯೂನತೆಗಳನ್ನು ತಿದ್ದಿ ಸರಿದಾರಿಗೆ ತರುವ ಕೆಲಸ ನಿರಂತರವಾಗಿ ನಡೆಯಬೇಕಿದೆ ಎಂದು ಹೇಳಿದರು.
ಪೊನ್ನಂಪೇಟೆ ತಹಶೀಲ್ದಾರ್ ಸಿ.ಎಸ್.ಸಂಜನಾ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ನಾಗರಿಕರ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಯುವ ಸಂಸತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಪ್ರೌಢಶಾಲೆ ಹಾಗೂ ಕಾಲೇಜು ಹಂತದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು, ವಿಧಾನಸೌಧದ ಅಧಿವೇಶನ ಮಾದರಿಯಲ್ಲಿ ಚರ್ಚೆ, ಸಂವಾದ ಹಾಗೂ ಚರ್ಚಾಸ್ಪರ್ಧೆಗಳನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಗಳು ವಿಷಯಗಳನ್ನು ಅರಿತುಕೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದರೊಂದಿಗೆ, ಇತರರ ಅಭಿಪ್ರಾಯಗಳನ್ನು ಗೌರವಿಸಿ ಆಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪೊನ್ನಂಪೇಟೆ ಕೆಪಿಎಸ್ ಶಾಲೆಯ ಶಿಕ್ಷಕ ಕೆ.ರಮೇಶ್ ಮಾತನಾಡಿ, ಪ್ರಜಾಪ್ರಭುತ್ವದ ಮೌಲ್ಯ ಅರಿತು ಉತ್ತಮ ನಾಯಕತ್ವ ಬೆಳೆಸಬೇಕು. ವಿಶ್ವ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಮಾತನಾಡಿದ ಅವರು, ಪ್ರಜಾಪ್ರಭುತ್ವವೆಂದರೆ ಕೇವಲ ಹಕ್ಕುಗಳ ವ್ಯವಸ್ಥೆಯಲ್ಲ ಅದು ಪ್ರಜೆಗಳ ಜವಾಬ್ದಾರಿ, ಪರಸ್ಪರ ಗೌರವ ಹಾಗೂ ಇತರರ ಅಭಿಪ್ರಾಯಗಳನ್ನು ಆಲಿಸುವ ಮನೋಭಾವವೂ ಆಗಿದೆ ಎಂದು ಹೇಳಿದರು.
೨೦೦೭ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೆ.೧೫ರಂದು ವಿಶ್ವ ಪ್ರಜಾಪ್ರಭುತ್ವ ದಿನ ಆಚರಿಸಲು ನಿರ್ಧರಿಸಲಾಗಿದ್ದು, ೨೦೦೮ರಿಂದ ಆಚರಣೆ ಆರಂಭವಾಗಿದೆ. ಇದೇ ದಿನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನವೂ ಆಗಿರುವುದು ಕರ್ನಾಟಕದ ಹೆಮ್ಮೆಯ ಸಂಗತಿ ಎಂದರು.
ಅಬ್ರಹಾಂ ಲಿಂಕನ್ ಅವರ ಪ್ರಕಾರ ಪ್ರಜಾಪ್ರಭುತ್ವವೆಂದರೆ ಪ್ರಜೆಗಳಿಂದ, ಪ್ರಜೆಗಳಿಗಾಗಿ ಮತ್ತು ಪ್ರಜೆಗಳಿಗೋಸ್ಕರ ಇರುವ ವ್ಯವಸ್ಥೆ. ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ಪರೋಕ್ಷ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಮತದಾನದ ಮೂಲಕ ಜನರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ ಎಂದು ವಿವರಿಸಿದರು.
ವಿರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಪೂವಣ್ಣ ಪ್ರಜಾಪ್ರಭುತ್ವ ದಿನದ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಕಾಳೀಮಾಡ ಪ್ರಶಾಂತ್, ವಿರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಪೂವಣ್ಣ,ವಿರಾಜಪೇಟೆ ಸರ್ವೋದಯ ಕಾಲೇಜಿನ ಪ್ರಾಂಶುಪಾಲೆ ಮಿನಿ, ವಿವಿಧ ಇಲಾಖೆಯ ಅಧಿಕಾರಿಗಳು, ದಲಿತ ಸಂಘದ ಮುಖಂಡರು, ಸಿಆರ್‌ಪಿ ವಾಸುವರ್ಮ, ಕರ್ತಮಾಡ ರಶಿಕ, ಮೂಕಳೇರ ಸುಮಿತ್ರಾ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net