ಮೈಕ್ರೋ ಫೋಟೋಗ್ರಫಿಯತ್ತ ಆಸಕ್ತರಾಗಿ

ವೀರಾಜಪೇಟೆಯ ಸಂತ ಅನ್ನಮ್ಮ ಪದವಿ ಕಾಲೇಜಿನಲ್ಲಿ ನಡೆದ ವಿಶ್ವ ಛಾಯಾಗ್ರಹಣ ದಿನಾಚರಣೆ-2026ಯನ್ನು ಪಕ್ಷಿ ತಜ್ಞ ಡಾ. ಎಸ್.ವಿ. ನರಸಿಂಹನ್ ಉದ್ಘಾಟಿಸಿದರು. ಆರ್.ಕೆ. ಅಬ್ದುಲ್ ಸಲಾಂ, ಎನ್.ಕೆ. ಸಲಾಂ, ಎಚ್.ಟಿ. ಅನಿಲ್, ರೆ.ಫಾ. ಮದಲೈ ಮುತ್ತು ಮತ್ತಿತರರು ಇದ್ದರು.
ವೀರಾಜಪೇಟೆಯ ಸಂತ ಅನ್ನಮ್ಮ ಪದವಿ ಕಾಲೇಜಿನಲ್ಲಿ ನಡೆದ ವಿಶ್ವ ಛಾಯಾಗ್ರಹಣ ದಿನಾಚರಣೆ-2026ಯನ್ನು ಪಕ್ಷಿ ತಜ್ಞ ಡಾ. ಎಸ್.ವಿ. ನರಸಿಂಹನ್ ಉದ್ಘಾಟಿಸಿದರು. ಆರ್.ಕೆ. ಅಬ್ದುಲ್ ಸಲಾಂ, ಎನ್.ಕೆ. ಸಲಾಂ, ಎಚ್.ಟಿ. ಅನಿಲ್, ರೆ.ಫಾ. ಮದಲೈ ಮುತ್ತು ಮತ್ತಿತರರು ಇದ್ದರು.
Published on

ವಿರಾಜಪೇಟೆ:

ಪ್ರತಿಯೊಬ್ಬರೂ ಛಾಯಾಗ್ರಾಹಕರೇ ಆಗಿರುವ ಪ್ರಸ್ತುತ ಕಾಲ ಘಟ್ಟದಲ್ಲಿ, ತೆಗೆಯುವ ಫೋಟೋಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಿ ಮೌಲ್ಯವನ್ನು ತುಂಬುವ ಪ್ರಯತ್ನ ಮಾಡಬೇಕಾಗಿದೆ ಎಂದು ಖ್ಯಾತ ಛಾಯಾಗ್ರಾಹಕರೂ ಆಗಿರುವ ಪಕ್ಷಿ ತಜ್ಞ ಡಾ.ಎಸ್.ವಿ.ನರಸಿಂಹನ್ ಹೇಳಿದರು.

ಕೊಡಗು ಪತ್ರಕರ್ತರ ಸಂಘ ಮತ್ತು ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ವಿರಾಜಪೇಟೆಯ ಸಂತ ಅನ್ನಮ್ಮ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಬುಧವಾರ ಆಯೋಜಿತ ವಿಶ್ವ ಛಾಯಾಗ್ರಹಣ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಫಿಲ್ಮ್ ರೋಲ್‌ಗಳನ್ನು ಬಳಸಿ ಛಾಯಾಗ್ರಹಣ ಮಾಡುತ್ತಿದ್ದ ಹಳೆಯ ಕಾಲ ಘಟ್ಟದಲ್ಲಿ ಛಾಯಾಗ್ರಾಹಕ ಮತ್ತು ಪತ್ರಕರ್ತರು ಬೇರೆ ಬೇರೆಯಾಗಿ ಗುರುತಿಸಲ್ಪಡುತ್ತಿದ್ದರು. ಡಿಜಿಟಲ್ ಛಾಯಾಗ್ರಹಣ ಬಂದ ಬಳಿಕ ಒಟ್ಟು ಛಾಯಾಗ್ರಹಣದ ಆಯಾಮವೇ ಬದಲಾವಣೆ ಕಂಡುಕೊಂಡಿದೆ. ಪ್ರಸ್ತುತ ಅತ್ಯುನ್ನತ ತಂತ್ರಜ್ಞಾನದ ಮೊಬೈಲ್‌ಗಳ ಮೂಲಕ ಗುಣಮಟ್ಟದ ಛಾಯಾಗ್ರಹಣ ಸಾಧ್ಯವಾಗಿದೆ. ಛಾಯಾಗ್ರಹಣದತ್ತ ಆಸಕ್ತರಾಗಿರುವವರು ಸೂಕ್ಷಾತಿಸೂಕ್ಷ್ಯವಾದ ಮೈಕ್ರೋ ಫೋಟೋಗ್ರಫಿಯತ್ತ ಆಸಕ್ತರಾಗಬೇಕು. ಕೀಟಗಳು, ಚಿಟ್ಟೆಗಳು, ಕಪ್ಪೆ ಹೀಗೆ ನೂರಾರು ಬಗೆಯ ಸಣ್ಣ ಗಾತ್ರದ ಜೀವ ಜಗತ್ತೆ ಅತ್ಯಂತ ಅಚ್ಚರಿದಾಯಕವಾದದ್ದು. ಮೈಕ್ರೋ ಫೋಟೋಗ್ರಫಿ ಮೂಲಕ ಅತ್ಯಾಕರ್ಷಕವಾದ ಅಚ್ಚರಿಯ ಜೀವ ಜಗತ್ತನ್ನು ಕಾಣಲು ಸಾಧ್ಯವಿದೆ. ಇಂತಹ ಫೋಟೋಗ್ರಫಿಯಲ್ಲಿ ಜಿಲ್ಲೆಯವರೇ ಆದ ವಿಪಿನ್ ಬಾಳಿಗ ಮೊದಲಾದವರು ವಿಶ್ವ ಪ್ರಸಿದ್ಧಿ ಪಡೆದಿದ್ದಾರೆ ಎಂದರು.
ವಿರಾಜಪೇಟೆ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಆರ್.ಕೆ.ಅಬ್ದುಲ್ ಸಲಾಂ, ಮಾಜಿ ಯೋಧ ಎನ್.ಕೆ. ಸಲಾಂ ಮಾತನಾಡಿದರು. ಹಿರಿಯ ಪತ್ರಕರ್ತ ಮಂಡಿಬೆಲೆ ರಾಜಣ್ಣ, ಸಂತ ಅನ್ನಮ್ಮ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ.ಮದಲೈ ಮುತ್ತು, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ.ಅನಿಲ್ ಮಾತನಾಡಿದರು. ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಧೋಷ್ ಪೂವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಸ್ಥಾಪಕಾಧ್ಯಕ್ಷ ಎಸ್.ಎ. ಮುರಳೀಧರ್, ಸಂತ ಅನ್ನಮ್ಮ ಶಿಕ್ಷಣ ಸಂಸ್ಥೆಗಳ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net