ಗೋಣಿಕೊಪ್ಪ ಪೊಲೀಸ್ ಠಾಣೆ ವತಿಯಿಂದ ರಿಕ್ಷಾಗಳಿಗೆ ಜಿಪಿಎಸ್ ಸಂಖ್ಯೆಯ ಸ್ಟಿಕ್ಕರ್ ಅಳವಡಿಸಲಾಯಿತು. ಉಪ ಪೊಲೀಸ್ ಅಧೀಕ್ಷಕ ಮಹೇಶ್ ಕುಮಾರ್, ಶಿವರಾಜ್ ಆರ್.ಮುಧೋಳ್, ಕಾಳೇಗೌಡ ಇತರರಿದ್ದರು.
ಗೋಣಿಕೊಪ್ಪ: ಪ್ರಯಾಣಿಕರ ಸುರಕ್ಷತೆ ಹಾಗೂ ಸುಗಮ ಸಂಚಾರ ವ್ಯವಸ್ಥೆಗೆ ಉತ್ತೇಜನ ನೀಡುವ ಉದ್ದೇಶದಿಂದ ಗೋಣಿಕೊಪ್ಪ ಪೊಲೀಸ್ ಠಾಣೆ ವತಿಯಿಂದ ರಿಕ್ಷಾಗಳಿಗೆ ಜಿಪಿಎಸ್ ಸಂಖ್ಯೆಯ ಸ್ಟಿಕ್ಕರ್ ಅಳವಡಿಸುವ ಕಾರ್ಯಕ್ರಮ ಗುರುವಾರ ನಡೆಯಿತು.
ತಾಲೂಕು ಉಪ ಪೊಲೀಸ್ ಅಧೀಕ್ಷಕ ಮಹೇಶ್ ಕುಮಾರ್ ಆಯ್ದ ಆಟೋ ಚಾಲಕರಿಗೆ ಜಿಪಿಎಸ್ ಸಂಖ್ಯೆಯ ಸ್ಟಿಕ್ಕರ್‌ಗಳನ್ನು ವಿತರಿಸಿದರು.
ನಂತರ ಮಾತನಾಡಿದ ಅವರು, ಆಟೋ ಚಾಲಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ವಾಹನ ದಟ್ಟಣೆ ನಿಯಂತ್ರಣಕ್ಕೆ ಸಹಕರಿಸಬೇಕು. ಜಿಪಿಎಸ್ ಸಂಖ್ಯೆ ಅಳವಡಿಸಿರುವುದರಿಂದ ಪ್ರಯಾಣಿಕರು ಆಟೋವನ್ನು ಸುಲಭವಾಗಿ ಗುರುತಿಸಬಹುದು. ಜಿಪಿಎಸ್ ಹೊಂದಿರುವ ಆಟೋಗಳು ಅಗತ್ಯ ದಾಖಲಾತಿಗಳನ್ನು ಹೊಂದಿರುವ ವಾಹನಗಳಾಗಿವೆ ಎಂಬ ವಿಶ್ವಾಸ ಸಾರ್ವಜನಿಕರಿಗೆ ಮೂಡಲಿದೆ ಎಂದು ಹೇಳಿದರು.
ಪ್ರಯಾಣಿಕರು ಆಟೋ ಏರುವ ಹಾಗೂ ಇಳಿಯುವ ಸಂದರ್ಭದಲ್ಲಿ ಜಿಪಿಎಸ್ ಸಂಖ್ಯೆಯನ್ನು ಗಮನಿಸಬೇಕು. ಜಿಪಿಎಸ್ ಸ್ಟಿಕ್ಕರ್ ಇಲ್ಲದ ಆಟೋಗಳು ರಸ್ತೆಯಲ್ಲಿ ಸಂಚರಿಸಬಾರದು ಎಂದು ಚಾಲಕರಿಗೆ ಎಚ್ಚರಿಕೆ ನೀಡಿದರು.
ವೃತ್ತ ನಿರೀಕ್ಷಕ ಶಿವರಾಜ್ ಆರ್.ಮುಧೋಳ್ ಮಾತನಾಡಿ, ಆಟೋಗಳಿಗೆ ಜಿಪಿಎಸ್ ಅಳವಡಿಸುವುದು ಕಡ್ಡಾಯ ನಿಯಮವಾಗಿದೆ. ಇದರಿಂದ ಪ್ರಯಾಣಿಕರಿಗೆ ಯಾವುದೇ ರೀತಿಯ ಅನನುಕೂಲ ಉಂಟಾಗದಂತೆ ನೋಡಿಕೊಳ್ಳುವುದು ಮುಖ್ಯ ಉದ್ದೇಶವಾಗಿದೆ. ಜಿಪಿಎಸ್ ಅಳವಡಿಸದ ಚಾಲಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಗೋಣಿಕೊಪ್ಪ ಠಾಣಾಧಿಕಾರಿ ಕಾಳೇಗೌಡ, ಅಪರಾಧ ವಿಭಾಗದ ಠಾಣಾಧಿಕಾರಿ ವೆಂಕಟೇಶ್, ಪೊಲೀಸ್ ಸಿಬ್ಬಂದಿ, ಆಟೋ ಚಾಲಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.