ಕೊಡಗಿನಲ್ಲಿ ಹೆಚ್ಚಿದ ಅಪರಾಧ ಪ್ರಕರಣಗಳು

ಕೊಡಗು ಎಸ್‌ಪಿ ಕಚೇರಿ
ಕೊಡಗು ಎಸ್‌ಪಿ ಕಚೇರಿ
Published on

ಪ್ರಮುಖ ಮುಖ್ಯಾಂಶಗಳು

  • ವಲಸೆ ಕಾರ್ಮಿಕರಿಂದ ಅಪರಾಧ
  • ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಅಪರಾಧ
  • ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಪ್ರಕರಣ
ಮಡಿಕೇರಿ
ಕೊಡಗಿನಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಕಂಡುಬರುತ್ತಿರುವ ಬೆನ್ನಲ್ಲೇ ಇವರಿಂದಾಗುವ ಅಪರಾಧ ಪ್ರಕರಣಗಳಲ್ಲೂ ಹೆಚ್ಚಳ ಆಗುತ್ತಿದೆ. ಸರ್ಕಾರವೇ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಯಾವುದೇ ಅನಧಿಕೃತ ಕಾರ್ಮಿಕರು ಇಲ್ಲ ಎನ್ನುವುದು ಸಮಧಾನಕರ ವಿಷಯವಾದರೂ ಕಳೆದ 2 ವರ್ಷಗಳಲ್ಲಿ ವಲಸೆ ಕಾರ್ಮಿಕರಿಂದ ನಡೆದಿರುವ 37 ವಿವಿಧ ಅಪರಾಧ ಪ್ರಕರಣಗಳು ಕೊಡಗಿನ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಪುಟ್ಟ ಜಿಲ್ಲೆ ಕೊಡಗಿನ ಒಟ್ಟು ವಿಸ್ತೀರ್ಣ 4,102 ಚದರ ಕಿಮೀ ಇದರಲ್ಲಿ 1,197 ಕಿಮೀ ವ್ಯಾಪ್ತಿಯ 1,06,921 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತದೆ. ರಾಜ್ಯದಲ್ಲಿ ಕಾಫಿ ಬೆಳೆಯುವ ಪ್ರದೇಶದಲ್ಲಿ ಶೇ.44ರಷ್ಟು ಜಾಗ ಕೊಡಗಿನಲ್ಲಿದೆ. ಕರ್ನಾಟಕದಲ್ಲಿ ಉತ್ಪಾದನೆ ಆಗುವ ಕಾಫಿ ಪೈಕಿ ಶೇ. 50ರಷ್ಟು ಕಾಫಿ ಹಾಗೂ ದೇಶದಲ್ಲಿ ಉತ್ಪಾದನೆ ಆಗುವ ಕಾಫಿಯಲ್ಲಿ ಶೇ. 35ರಷ್ಟು ಕಾಫಿ ಕೊಡಗಿನಲ್ಲೇ ಬೆಳೆಯಲಾಗುತ್ತಿದೆ. ಕಾಫಿ ಬೆಳೆಯಲು ಹೆಚ್ಚು ಕಾರ್ಮಿಕರ ಅವಶ್ಯಕತೆ ಇದ್ದು ಜಿಲ್ಲೆಯಲ್ಲಿ ಶೇ.51ರಷ್ಟು ಉದ್ಯೋಗ ಕಾಫಿ ವಲಯದಲ್ಲೇ ಲಭ್ಯವಾಗುತ್ತಿದೆ.
ಕಾಫಿ ತೋಟಗಳಲ್ಲಿ ವರ್ಷಪೂರ್ತಿ ಒಂದಿಲ್ಲೊAದು ಕೆಲಸ ಇದ್ದೇ ಇರುತ್ತದೆ. ಅದರಲ್ಲೂ ಕಾಫಿ ಕೊಯ್ಲಿನ ಅವಧಿಯಲ್ಲಿ ಎಷ್ಟು ಕಾರ್ಮಿಕರು ಇದ್ದರೂ ಸಾಲುವುದಿಲ್ಲ. ಕಾಫಿ ಕೊಯ್ಲು ಮಾಡಿ ಒಣಗಿಸುವ ಸಮಯದಲ್ಲಿ ಮಳೆ, ಮೋಡದ ವಾತಾವರಣ ಇದ್ದರಂತೂ ಕಾರ್ಮಿಕರಿಗೆ ಎಲ್ಲಿಲ್ಲದ ಬೇಡಿಕೆ ಶುರುವಾಗುತ್ತದೆ. 1, 2 ಎಕರೆ ಕಾಫಿ ತೋಟ ಇರುವವರು ಸಾಮಾನ್ಯವಾಗಿ ತಮ್ಮ ತೋಟದ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಆದರೆ ಇದಕ್ಕಿಂತಲೂ ಹೆಚ್ಚಿನ ಹಿಡುವಳಿ ಇದ್ದರೆ ಕಾರ್ಮಿಕರ ಅವಲಂಬನೆ ಅನಿವಾರ್ಯ.
2010ರ ತನಕವೂ ಸ್ಥಳೀಯ ಕಾರ್ಮಿಕರು ಕಾಫಿ ತೋಟಗಳಿಗೆ ಲಭ್ಯವಾಗುತ್ತಿದ್ದರು. ದೊಡ್ಡ ಹಿಡುವಳಿದಾರರು ತಮ್ಮ ತೋಟದಲ್ಲೇ ಮನೆಗಳನ್ನು ಕೊಟ್ಟು ಕಾರ್ಮಿಕರನ್ನು ಕಾಯಂ ಆಗಿ ಇಟ್ಟುಕೊಳ್ಳುವ ವ್ಯವಸ್ಥೆಯೂ ಇತ್ತು. ನಂತರ ಬದಲಾದ ಸಾಮಾಜಿಕ, ಆರ್ಥಿಕ ಕಾರಣಗಳಿಂದಾಗಿ ಸ್ಥಳೀಯ ಕಾರ್ಮಿಕರ ಸಂಖ್ಯೆ ಕಡಿಮೆ ಆಗಲಾರಂಭಿಸಿತು. ಈ ಸಂದರ್ಭದಲ್ಲಿ ಬಯಲು ಸೀಮೆ ಮತ್ತು ಉತ್ತರ ಕರ್ನಾಟಕ ಭಾಗದಿಂದ ಕೊಡಗಿನ ಕಾಫಿ ತೋಟಗಳಿಗೆ ಕಾರ್ಮಿಕರು ಬರಲಾರಂಭಿಸಿದರು. ಕಾಫಿ ಕೊಯ್ಲು ಸಮಯದಲ್ಲಿ ಕುಟುಂಬ ಸಮೇತ ಆಗಮಿಸುತ್ತಿದ್ದ ಇವರು ತಮ್ಮ ಕೆಲಸ ಮುಗಿದ ನಂತರ ಊರಿಗೆ ಮರಳುತ್ತಿದ್ದರು.
ಸುಮಾರು 10-15 ವರ್ಷಗಳ ಕಾಲ ಬಯಲು ಸೀಮೆ ಮತ್ತು ಉತ್ತರ ಕರ್ನಾಟಕ ಭಾಗದ ಕಾರ್ಮಿಕರು ಜಿಲ್ಲೆಯ ಕಾಫಿ ತೋಟಗಳು ಮತ್ತು ಇಲ್ಲಿಯ ಮಾಲೀಕರಿಗೆ ಹೊಂದಿಕೊAಡು ಕೆಲಸ ಮಾಡುತ್ತಿದ್ದರು. ದೊಡ್ಡ ಮಟ್ಟದ ನಂಬಿಕೆಯನ್ನೂ ಉಳಿಸಿಕೊಂಡಿದ್ದರು. ಆದರೆ ಉತ್ತರ ಭಾರತ, ಈಶಾನ್ಯ ಭಾರತದಿಂದ ಇಲ್ಲಿಗೆ ಕಾರ್ಮಿಕರು ಬರಲಾರಂಭಿಸಿದ ನಂತರ ಬಯಲು ಸೀಮೆ ಮತ್ತು ಉತ್ತರ ಕರ್ನಾಟಕ ಭಾಗದ ಕಾರ್ಮಿಕರು ಕೊಡಗಿನ ಕಾಫಿ ಕೆಲಸಗಳಿಗೆ ಬರುವುದು ಕಡಿಮೆ ಮಾಡಿದರು. ಅಲ್ಲಿಂದ ಈಚೆಗೆ ಜಿಲ್ಲೆಯಲ್ಲಿ ಉತ್ತರ ಭಾರತ, ಈಶಾನ್ಯ ಭಾರತದ ಕಾರ್ಮಿಕರ ಏಕಸ್ವಾಮ್ಯ ಕಂಡುಬರುತ್ತಿದೆ.
ಬಯಲು ಸೀಮೆ ಮತ್ತು ಉತ್ತರ ಕರ್ನಾಟಕ ಭಾಗದ ಕಾರ್ಮಿಕರು ಕಾಫಿ ಕೊಯ್ಲು ಕೆಲಸ ಮುಗಿದ ನಂತರ ತಮ್ಮ ಊರಿಗೆ ಮರಳುವುದು ರೂಢಿಯಾಗಿತ್ತು. ಆದರೆ ಉತ್ತರ ಭಾರತ, ಈಶಾನ್ಯ ಭಾರತದ ಕಾರ್ಮಿಕರು ಒಮ್ಮೆ ಇಲ್ಲಿಗೆ ಬಂದರೆ ವಾಪಸ್ ಹೋಗಲು ಮನಸ್ಸು ಮಾಡುವುದಿಲ್ಲ. ಆರಂಭದಲ್ಲಿ ಸ್ಥಳೀಯ ಕಾಫಿ ಬೆಳೆಗಾರರಿಗೂ ಈ ಕಾರ್ಮಿಕರು ಅಪ್ಯಾಯಮಾನವಾಗಿ ಕಂಡು ಬಂದರು. ದಿನದಲ್ಲಿ ಹೆಚ್ಚು ಅವಧಿ ಕೆಲಸ ಮಾಡುತ್ತಾರೆ. ಜಾಸ್ತಿ ಕೂಲಿ ಕೇಳುವುದಿಲ್ಲ. ಕಾಫಿ ತೋಟ ಮಾತ್ರವಲ್ಲದೆ ಇತರ ಕೆಲಸಗಳನ್ನೂ ಮಾಡುತ್ತಾರೆ ಎನ್ನುವ ಕಾರಣಕ್ಕೆ ಇವರ ಮೇಲಿನ ಅವಲಂಬನೆಯೂ ಹೆಚ್ಚಾಯಿತು.
ಅಸ್ಸಾಂ, ಬಿಹಾರ ಸೇರಿದಂತೆ ಉತ್ತರದಿಂದ ಬಂದ ಈ ಕಾರ್ಮಿಕರು ಕಾಫಿ ತೋಟಗಳಲ್ಲಿ ಕೆಲಸ ಇಲ್ಲದ ಸಂದರ್ಭದಲ್ಲಿ ಬೇರೆ ವೃತ್ತಿಯನ್ನೂ ಹುಡುಕಿಕೊಂಡರು. ಸಂತೆಗಳಲ್ಲಿ ವ್ಯಾಪಾರ ಮಾಡುವುದರಿಂದ ಆರಂಭಿಸಿ ಹೋಮ್ ಸ್ಟೇ, ರೆಸಾರ್ಟ್ಗಳಲ್ಲಿ ರೂಂ ಬಾಯ್ ತನಕವೂ ತಮ್ಮ ಕೆಲಸಗಳನ್ನು ವಿಸ್ತರಿಸಿಕೊಂಡಿದ್ದಾರೆ. ಕೃಷಿ, ವ್ಯಾಪಾರ, ಪೇಂಟಿAಗ್, ಗಾರೆ ಕೆಲಸದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಹೊಟೇಲ್‌ಗಳಲ್ಲಿ ಬಾಣಸಿಗರರಾಗಿ, ಸಪ್ಲೆöÊರ್‌ಗಳಾಗಿಯೂ ಕೆಲಸ ಮಾಡುತ್ತಿದ್ದಾರೆ. ಇದರ ಜತೆಗೆ ಜಿಲ್ಲೆಯಲ್ಲಿ ನಡೆಯುವ ಅಪರಾಧ ಚಟುವಟಿಕೆಗಳಲ್ಲೂ ಇಂಥ ಕಾರ್ಮಿಕರ ಹೆಸರು ಕಾಣಿಸಿಕೊಳ್ಳುತ್ತಿರುವುದು ಪ್ರಜ್ಞಾವಂತರ ಆತಂಕಕ್ಕೆ ಕಾರಣವಾಗಿದೆ.
ಹೊರ ರಾಜ್ಯದ ಕಾರ್ಮಿಕರ ಪೈಕಿ ಅಸ್ಸಾಂ ಮೂಲದವರಿಂದಲೇ ಹೆಚ್ಚಿನ ಅಪರಾಧ ಪ್ರಕರಣಗಳು ನಡೆದಿರುವುದು ದಾಖಲಾಗಿದೆ. ಕೆಲಸ ಕೊಟ್ಟ ಕಾಫಿ ಬೆಳೆಗಾರರ ಮೇಲೆಯೇ ಹಲ್ಲೆ, ಅಕ್ರಮ ಗೋಮಾಂಸ ಮಾರಾಟ, ಕಳುವು, ದರೋಡೆ, ಮಾದಕ ವಸ್ತುಗಳ ಮಾರಾಟ, ಅತ್ಯಾಚಾರ, ಹೊಡೆದಾಟದಂಥ ಪ್ರಕರಣಗಳಲ್ಲಿ ಹೊರ ರಾಜ್ಯದ ಕಾರ್ಮಿಕರು ಆರೋಪಿಗಳಾಗಿದ್ದಾರೆ. ಕೆಲವರ ಅಪರಾಧ ಸಾಬೀತಾಗಿ ಜೈಲು ಸೇರಿರುವುದೂ ಇದೆ. ಸರ್ಕಾರದ ಮಾಹಿತಿ ಪ್ರಕಾರ 2024ರಲ್ಲಿ ವಲಸೆ ಬಂದ 21 ಕಾರ್ಮಿಕರ ಮೇಲೆ 11 ಪ್ರಕರಣಗಳು ಮತ್ತು 2025ರಲ್ಲಿ 83 ಕಾರ್ಮಿಕರ ಮೇಲೆ 37 ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ.
ಭಾಗಮಂಡಲ, ನಾಪೋಕ್ಲು ಹಾಗೂ ಮಡಿಕೇರಿ ಕೊಡಗು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿಯಲ್ಲಿ ವಲಸೆ ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಾಗಿರುವುದು ಆತಂಕದ ಸಂಗತಿಯಾಗಿದೆ. ವಿರಾಜಪೇಟೆ ಟೌನ್, ಶನಿವಾರಸಂತೆ, ಸೋಮವಾರಪೇಟೆ, ಕುಶಾಲನಗರ ಟೌನ್, ಮಡಿಕೇರಿ ಟೌನ್, ಪೊನ್ನಂಪೇಟೆ, ಸುಂಟಿಕೊಪ್ಪ... ಹೀಗೆ ಜಿಲ್ಲೆಯ ಎಲ್ಲಾ ಪ್ರಮುಖ ಊರುಗಳ ಪೊಲೀಸ್ ಠಾಣೆಗಳಲ್ಲೂ ವಲಸೆ ಕಾರ್ಮಿಕರ ವಿರುದ್ಧ ಒಂದಿಲ್ಲೊAದು ಪ್ರಕರಣಗಳು ದಾಖಲಾಗಿರುವುದು ಕಂಡು ಬರುತ್ತಿದೆ.
ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿರುವ ವಲಸೆ ಕಾರ್ಮಿಕರ ಸಮಸ್ಯೆ ಬಗ್ಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಬೆಳಗಾವಿ ಅಧಿವೇಶನದಲ್ಲಿ ಗುರುವಾರ (ಡಿ.18) ಪ್ರಸ್ತಾಪ ಮಾಡಿದರು. ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಅಸ್ಸಾಂ, ಬಿಹಾರ ಮುಂತಾದ ಉತ್ತರ ಭಾರತದ ಭಾಗಗಳಿಂದ ಕೆಲಸ ಅರಸಿ ಬರುತ್ತಿರುವ ಅಧಿಕೃತ ಮತ್ತು ಅನಧಿಕೃತ ಕಾರ್ಮಿಕರು ದೌರ್ಜನ್ಯಗಳು ಮತ್ತು ಇನ್ನಿತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಕಂಡುಬAದಿದೆ. ಹಾಗಾಗಿ ಈ ಸಂಬAಧ ಕಾನೂನು ರೀತಿಯಲ್ಲಿ ಇವರುಗಳನ್ನು ಪೂರ್ವಾಪರ ಪರಿಶೀಲಿಸಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದರು. ಇದಕ್ಕೆ ಉತ್ತರಿಸಿದ ಗೃಹಸಚಿವ ಡಾ. ಜಿ. ಪರಮೇಶ್ವರ್ ಕೊಡಗು ಜಿಲ್ಲೆಯಲ್ಲಿ ಯಾವುದೇ ಅನಧಿಕೃತ ಕಾರ್ಮಿಕರು ಬಂದಿರುವುದಿಲ್ಲ ಎನ್ನುವ ಉತ್ತರ ನೀಡಿದ್ದಾರೆ. ಜತೆಗೆ ಅವರು ನಡೆಸಿರುವ ಅಪರಾಧ ಪ್ರಕರಣಗಳ ಮಾಹಿತಿಯನ್ನೂ ಕೊಟ್ಟಿದ್ದಾರೆ.
"

ಕೊಡಗು ಜಿಲ್ಲೆಯಲ್ಲಿ ಹೊರ ರಾಜ್ಯದಿಂದ ಬಂದAಥ ಕೂಲಿ ಕಾರ್ಮಿಕರುಗಳ ವಿವರವಾದ ದಾಖಲಾತಿಗಳನ್ನು ಪಡೆದುಕೊಂಡು ಕೆಲಸ ನೀಡುವಂತೆ ಎಸ್ಟೇಟ್, ರೆಸಾರ್ಟ್, ಹೋಂಸ್ಟೇ ಮಾಲೀಕರುಗಳಿಗೆ ಸೂಕ್ತ ತಿಳುವಳಿಕೆ ನೀಡಲಾಗುತ್ತಿದೆ. ಅದರಂತೆ ವಿವರವಾದ ದಾಖಲಾತಿಗಳನ್ನು ಪಡೆದುಕೊಂಡು ಠಾಣೆಗಳಿಗೆ ನೀಡುತ್ತಿರುತ್ತಾರೆ. ಅಲ್ಲದೇ ಕೊಡಗು ಜಿಲ್ಲೆಯಲ್ಲಿ ಅನಧಿಕೃತ ಕಾರ್ಮಿಕರು ಯಾರೂ ಕಂಡು ಬಂದಿರುವುದಿಲ್ಲ. ಕಂಡುಬAದಲ್ಲಿ ಅಂಥವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net