ಸಮಾಜದ ಅಗತ್ಯತೆಗೆ ತಕ್ಕಂತೆ ವಿನೂತನ ಯೋಜನೆ ಜಾರಿಗೊಳಿಸಿ

ರೋಟರಿ ವಲಯ ೬ರ ೧೪ ರೋಟರಿ ಸಂಸ್ಥೆಗಳಿಗೆ ಸೇರಿದ ಸದಸ್ಯರ ಸಮ್ಮಿಲನ ಸಮಾರಂಭವನ್ನು ನಾಗೇಂದ್ರಪ್ರಸಾದ್ ಉದ್ಘಾಟಿಸಿದರು. ಸತೀಶ್ ಬೋಳಾರ್, ಯಶಸ್ವಿ ಸೋಮಶೇಖರ್, ರಾಜುಗೌಡ, ರತ್ನಾಕರ್ ರೈ ಇತರರಿದ್ದರು.
ರೋಟರಿ ವಲಯ ೬ರ ೧೪ ರೋಟರಿ ಸಂಸ್ಥೆಗಳಿಗೆ ಸೇರಿದ ಸದಸ್ಯರ ಸಮ್ಮಿಲನ ಸಮಾರಂಭವನ್ನು ನಾಗೇಂದ್ರಪ್ರಸಾದ್ ಉದ್ಘಾಟಿಸಿದರು. ಸತೀಶ್ ಬೋಳಾರ್, ಯಶಸ್ವಿ ಸೋಮಶೇಖರ್, ರಾಜುಗೌಡ, ರತ್ನಾಕರ್ ರೈ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಮಾಜದ ಅಗತ್ಯತೆಗೆ ತಕ್ಕಂತೆ ವಿನೂತನ ಯೋಜನೆ ಜಾರಿಗೊಳಿಸಿ
  • ರೋಟರಿಯ ೧೪ ಕ್ಲಬ್‌ಗಳ ಸದಸ್ಯರ ಸಮ್ಮಿಲನದಲ್ಲಿ ನಾಗೇಂದ್ರಪ್ರಸಾದ್ ಕರೆ
ಮಡಿಕೇರಿ: ಸಮಾಜದ ಅಗತ್ಯತೆಗೆ ತಕ್ಕಂತೆ ವಿನೂತನವಾದ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಗಳು ಕಾರ್ಯಪ್ರವತ್ತವಾಗಬೇಕು. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಸಮಾಜದಲ್ಲಿಯೂ ಅಗತ್ಯತೆಗಳ ಬದಲಾವಣೆಗೆ ತಕ್ಕಂತೆ ಯೋಜನೆ ಜಾರಿಯಾಗಬೇಕೆಂದು ರೋಟರಿ ಜಿಲ್ಲೆ ೩೧೯೨ನ ಬೆಂಗಳೂರು ಪೀಣ್ಯ ರೋಟರಿ ಸಂಸ್ಥೆಯ ಪ್ರಮುಖ ನಾಗೇಂದ್ರಪ್ರಸಾದ್ ಕರೆ ನೀಡಿದರು.
ನಗರದ ಹೊರವಲಯದಲ್ಲಿನ ಸಂಪಿಗೆ ಇಕೋ ವಿಲೇಜ್ ರೆಸಾರ್ಟ್‌ನಲ್ಲಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಪಿರಿಯಾಪಟ್ಟಣ ರೋಟರಿ ಮಿಡ್ ಟೌನ್ ವತಿಯಿಂದ ರೋಟರಿ ವಲಯ ೬ರ ೧೪ ರೋಟರಿ ಸಂಸ್ಥೆಗಳಿಗೆ ಸೇರಿದ ಸದಸ್ಯರ ಸಮ್ಮಿಲನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರೋಟರಿ ಸಂಸ್ಥೆಗಳಿಗೆ ಯುವಕ, ಯುವತಿಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಬೇಕು. ಸೇವಾ ಕಾರ್ಯಗಳಿಗೆ ಯುವಪೀಳಿಗೆ ಮುಂದಾಗುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಬೇಕೆಂದು ಕರೆ ನೀಡಿದ ಅವರು, ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿಯೂ ರೋಟರಿ ಸಂಸ್ಥೆಗಳು ವಿಶ್ವವ್ಯಾಪಿ ಸಕ್ರಿಯವಾದ ಕಾರ್ಯಚಟುವಟಿಕೆ ಮೂಲಕ ಜನರ ನೆರವಿಗೆ ಮುಂದಾಗಿತ್ತು. ಹಲವೊಮ್ಮೆ ಸರ್ಕಾರಗಳಿಂದಲೂ ಸಾಧ್ಯವಾಗದ ಕಾರ್ಯಯೋಜನೆಗಳು ರೋಟರಿ ಮೂಲಕ ಸಾಧ್ಯವಾಗುತ್ತಿದೆ ಎಂದು ಹೆಮ್ಮೆಯಿಂದ ನುಡಿದರು.
ಮುಂದಿನ ಸಾಲಿನ ರೋಟರಿ ಗವರ್ನರ್ ಸತೀಶ್ ಬೋಳಾರ್ ಮಾತನಾಡಿ, ರೋಟರಿಗೆ ವಿಶ್ವವ್ಯಾಪಿ ಗೌರವದ ಮನ್ನಣೆಯಿದೆ. ಭಾರತದ ರೋಟರಿ ಸದಸ್ಯರ ವಿನೂತನ ಕಾರ್ಯಯೋಜನೆಗಳು ಜಗತ್ತಿನ ಗಮನ ಸೆಳೆದಿವೆ. ಸಾಮಾಜಿಕ ಸೇವೆಗೆ ಭಾರತೀಯ ರೋಟರಿ ಸದಸ್ಯರು ಸದಾ ಸ್ಪಂದಿಸುವುದಕ್ಕೆ ಭಾರತದ ಮಣ್ಣಿನ ಗುಣವೇ ಪ್ರಮುಖ ಕಾರಣವಾಗಿದೆ ಎಂದು ಅಬಿಪ್ರಾಯಪಟ್ಟರು.
ರೋಟರಿಯ ಚುನಾಯಿತ ಗವರ್ನರ್ ಯಶಸ್ವಿ ಸೋಮಶೇಖರ್ ಮಾತನಾಡಿ, ಸ್ವಾರ್ಥರಹಿತ ಸಮಾಜಸೇವೆಯ ಧ್ಯೇಯದೊಂದಿಗೆ ನಾನಾ ಕಾರ್ಯಯೋಜನೆ ಜಾರಿಗೊಳಿಸುವ ಮೂಲಕ ರೋಟರಿಯು ಸಮಾಜದಲ್ಲಿ ಅತ್ಯಂತ ಪ್ರಮುಖ ಸೇವಾ ಸಂಸ್ಥೆಯಾಗಿದೆ. ಜನಪರ ಸೇವಾ ಚಳುವಳಿಗೆ ರೋಟರಿ ಪ್ರಸಿದ್ಧಿ ಪಡೆದಿದೆ. ರೋಟರಿ ಸದಸ್ಯರೆಲ್ಲರೂ ಒಗ್ಗೂಡಿ ಸಮಾಜ ಸೇವೆಗೆ ಮುಂದಾದಲ್ಲಿ ಸಮಾಜದಲ್ಲಿ ಸಾಕಷ್ಟು ಪರಿವರ್ತನೆ ಸಾಧ್ಯವಿದೆ ಎಂದರು.
ರೋಟರಿ ವಲಯ ೬ರ ಸಹಾಯಕ ಗವರ್ನರ್ ರಾಜುಗೌಡ ಮಾತನಾಡಿ, ರೋಟರಿ ಸೇವಾ ಕಾರ್ಯಗಳು ಇತರರಿಗೂ ಸ್ಪೂರ್ತಿಯ ಸೆಲೆಯಾಗಿದೆ ಎಂದರು.
ಸಹಾಯಕ ಗವರ್ನರ್ ಧಿಲ್ಲನ್ ಚಂಗಪ್ಪ, ರೋಟರಿ ವಲಯ ಸಹಾಯಕ ಗವರ್ನರ್ ಉಲ್ಲಾಸ್ ಕೃಷ್ಣ, ರೋಟರಿ ಸಮ್ಮಿಲನ ಆಚರಣಾ ಸಮಿತಿ ಅಧ್ಯಕ್ಷ ಪಿರಿಯಾಪಟ್ಟಣ ರೋಟರಿ ಮಿಡ್ ಟೌನ್‌ನ ಸತ್ಯನಾರಾಯಣ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಪಿರಿಯಾಪಟ್ಟಣ ರೋಟರಿ ಮಿಡ್ ಟೌನ್ ಅಧ್ಯಕ್ಷ ಜಿ.ಕೆ.ಜಗನ್, ಕಾರ್ಯಕ್ರಮ ಸಮಿತಿ ಸಂಚಾಲಕ ಎಚ್.ಟಿ.ಅನಿಲ್, ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಬಿ.ಕೆ.ಕಾರ್ಯಪ್ಪ, ಮಿಡ್ ಟೌನ್ ಕಾರ್ಯದರ್ಶಿ ಟಿ.ಕೆ.ಚೇತನ್ ವೇದಿಕೆಯಲ್ಲಿದ್ದರು. ವಿರಾಜಪೇಟೆಯ ಟಿ.ಡಿ.ಮೋಹನ್, ಅನ್ವಿತ್ ಕುಮಾರ್, ಸುಪ್ರಿತಾ ದಿಲೀಪ್, ಅಜಿತ್ ಕುಮಾರ್, ಇಶಾನಿ ರೈ ತಂಡದಿಂದ ಸಂಗೀತ ಸಂಜೆ ಆಯೋಜಿತವಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net