ಶನಿವಾರಸಂತೆ: ಸಮಾಜದಲ್ಲಿ ಎಲ್ಲ ಸಮುದಾಯದವರು ಏಕತೆ ಮತ್ತು ಸಹಭಾಗಿತ್ವದಲ್ಲಿ ಜೀವನ ನಡೆಸಿದರೆ ಸಮಾಜದಲ್ಲಿ ಧರ್ಮ, ಜಾತಿ-ಬೇಧ ಭಾವನೆ ದೂರವಾಗುತ್ತದೆ ಎಂದು ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಅಭಿಪ್ರಾಯಪಟ್ಟರು.
ಭಾನುವಾರ ಸಮಿಪದ ಗುಡುಗಳಲೆ ಜಾತ್ರಾ ಮೈದಾನದಲ್ಲಿರುವ ಬದ್ರಿಯಾ ಜುಮಾ ಮಸೀದಿಯ ಹಜರತ್ ಫಬೀರ್ ಷಾಹ್‌ವಲಿಯುಲ್ಲಾಹಿ ಉರುಸ್ ವಾರ್ಷಿಕ ಉತ್ಸವದಲ್ಲಿ ಮಾತನಾಡಿದರು.
ಸಮಾಜದಲ್ಲಿ ಎಲ್ಲರೂ ಭೇದ-ಭಾವ ಮಾಡದೆ ಬದುಕುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ದೇವರು ಒಬ್ಬನೆ. ನಾಮ ಹಲವು ಎಂಬುದನ್ನು ನಾವು ಅರಿತುಕೊಳ್ಳಬೇಕು. ರಾಜಕೀಯ ಸಂದರ್ಭದಲ್ಲೇ ಮಾತ್ರ ರಾಜಕಿಯ ಮಾಡಬೇಕು ಹೊರತು ಉಳಿದ ಸಮಯದಲ್ಲಿ ಎಲ್ಲರನ್ನೂ ಸಮಾನತೆಯಿಂದ ಕಾಣುವುದೇ ನಮ್ಮ ಧರ್ಮ. ಎಲ್ಲ ಜಾತಿ-ಜನಾಂಗದವರಲ್ಲಿ ದಾನ-ಧರ್ಮ ಇದೆ.
ಈ ನಿಟ್ಟಿನಲ್ಲಿ ಇಲ್ಲಿನ ಮಸೀದಿಯು ಪ್ರತಿವರ್ಷ ಉರುಸ್‌ನಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಎಲ್ಲ ಜಾತಿ ಧರ್ಮದವರಲ್ಲಿ ಏಕತೆ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ. ಈ ಮಸೀದಿಯು ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದ ಅವರು, ನಾನು ಶಾಸಕನಾಗಿ ಬಂದ ಮೇಲೆ ಸೋಮವಾರಪೇಟೆ, ಶನಿವಾರಸಂತೆ ಮಸೀದಿಗೆ ನನ್ನ ಕೈಲಾದಷ್ಟು ಹಣ ತಂದುಕೊಡುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಯಾಕೂಬ್ ಮಾತನಾಡಿ, ಈಗಿನ ಶಾಸಕರು ಎಲ್ಲರನ್ನೂ ಸಮಾನತೆಯಿಂದ ಕಾಣುತ್ತಿರುವ ಜತೆಯಲ್ಲಿ ಅಲ್ಪಸಂಖ್ಯಾರು ಸೇರಿದಂತೆ ಎಲ್ಲ ಧರ್ಮದವರಿಗೂ ಸಹಕಾರ ನೀಡುತ್ತಾ ಬರುತ್ತಿದ್ದಾರೆ ಗುಡುಗಳಲೆ ಜುಮ್ಮಾ ಮಸೀದಿಗೆ ಮತ್ತಷ್ಟು ಸವಲತ್ತುಗಳನ್ನು ಒದಗಿಸಿಕೊಡುವಂತೆ ಮನವಿ ಮಾಡಿದರು.
ಮುಸ್ಲಿಂ ಧರ್ಮದ ಮುಖಂಡರು, ಮಸೀದಿ ಅಧ್ಯಕ್ಷ ಮುಸ್ತಾಫ ಖಾದರ್, ಹಮೀದ್, ಮುಸ್ತಾಫ, ಪ್ರಮುಖರಾದ ತೇಜಕುಮಾರ್, ಅಶೋಕ್, ಹರೀಶ್, ಮಹೇಶ್ ಮುಂತಾದವರು ಇದ್ದರು.