ನಾಳೆ ಕೊಡಗಿನಲ್ಲಿ ಹುತ್ತರಿ (ಪುತ್ತರಿ) ಸಂಭ್ರಮ

ಹುತ್ತರಿ (ಪುತ್ತರಿ) ಹಬ್ಬದ ಹಿನ್ನೆಲೆಯಲ್ಲಿ ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ಕದಿರು ಕತ್ತರಿಸುವ ಸಂದರ್ಭ ನಡೆಯುವ ಪೂಜೆ
ಹುತ್ತರಿ (ಪುತ್ತರಿ) ಹಬ್ಬದ ಹಿನ್ನೆಲೆಯಲ್ಲಿ ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ಕದಿರು ಕತ್ತರಿಸುವ ಸಂದರ್ಭ ನಡೆಯುವ ಪೂಜೆ
Published on

ಪ್ರಮುಖ ಮುಖ್ಯಾಂಶಗಳು

  • ಕೊಡಗಿನವರ ಸುಗ್ಗಿ ಹಬ್ಬ ಹುತ್ತರಿ (ಪುತ್ತರಿ)
  • ಧಾನ್ಯಲಕ್ಷ್ಮೀಯನ್ನು ಮನೆಗೆ ಸ್ವಾಗತಿಸುವ ಹಬ್ಬ
  • ಪಾಡಿ ಇಗ್ಗುತಪ್ಪನಿಗೆ ಮೊದಲ ಕದಿರು ಅರ್ಪಣೆ
ಮಡಿಕೇರಿ:
ಜಿಲ್ಲೆಯಾದ್ಯಂತ ಗುರುವಾರ (ನ.04) ಹುತ್ತರಿ (ಪುತ್ತರಿ) ಹಬ್ಬ ಆಚರಿಸಲಾಗುತ್ತಿದೆ. ಕೊಡಗಿನ ಸುಗ್ಗಿ ಹಬ್ಬ ಎಂದೇ ಖ್ಯಾತಿ ಪಡೆದಿರುವ ಹುತ್ತರಿ
(ಪುತ್ತರಿ)ಯನ್ನು ಕೊಡಗಿನವರು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಮಳೆಗಾಲದಲ್ಲಿ ಬಿತ್ತಿದ ಭತ್ತ, ತೆನೆಯೊಡೆದು, ಫಸಲು ಬಂದಾಗ ಅದನ್ನು ಪೂಜಿಸಿ, ಸಂಭ್ರಮಿಸುವ ಹಬ್ಬ ಇದಾಗಿದೆ. ಹಬ್ಬದ ದಿನ ಭತ್ತದ ಗದ್ದೆಯಿಂದ ಭತ್ತದ ಕದಿರು ತಂದು ಅದನ್ನು ಪೂಜಿಸುವ ಸಂಪ್ರದಾಯವಿದೆ.
ಕೊಡವ ಭಾಷೆಯಲ್ಲಿ ಪುದಿಯ ಅರಿ ಎಂದರೆ ಹೊಸ ಅಕ್ಕಿ ಎಂದರ್ಥ. ಪುದಿಯ ಅರಿ ಎನ್ನುವದರ ಕನ್ನಡ ರೂಪಾಂತರ ಹುತ್ತರಿ. ಹುತ್ತರಿ (ಪುತ್ತರಿ) ಹಬ್ಬವನ್ನು ರೋಹಿಣಿ ನಕ್ಷತ್ರವಿರುವ ಹಣ್ಣಿಮೆಯ ರಾತ್ರಿ ಆಚರಿಸಲಾಗುತ್ತದೆ. ಧಾನ್ಯ ಲಕ್ಷ್ಮಿಯಾದ ಭತ್ತವನ್ನು ಮನೆ ತುಂಬಿಸಿಕೊಳ್ಳುವ ಕೊಡಗಿನ ಸುಗ್ಗಿ ಹಬ್ಬ ಹುತ್ತರಿ (ಪುತ್ತರಿ) ಆಚರಣೆಯ ಕಾಲವನ್ನು ಕೊಡಗಿನ ಆರಾಧ್ಯ ದೈವ ಕಕ್ಕಬೆಯ ಪಾಡಿ ಶ್ರೀ ಇಗ್ಗುತಪ್ಪ ಸನ್ನಿಧಾನದಲ್ಲಿ ನಿರ್ಧರಿಸಲಾಗುತ್ತದೆ.
ಕೊಡಗಿನವರ ಪ್ರಮುಖ ದೇಗುಲವಾದ ಪಾಡಿ ಇಗ್ಗುತಪ್ಪನಿಗೆ ಕದಿರು ಕೊಯ್ದು ಮೊದಲು ಅರ್ಪಿಸುವುದು ವಾಡಿಕೆ. ಇಲ್ಲಿ ಮೊದಲ ಪೂಜೆ ಆಗಿ ಹುತ್ತರಿ (ಪುತ್ತರಿ)ಹಬ್ಬ ಶುರುವಾದ ನಂತರ ಇಡೀ ಕೊಡಗಿನಾದ್ಯಂತ ಹುತ್ತರಿ (ಪುತ್ತರಿ) ಆಚರಿಸಲಾಗುತ್ತದೆ. ಈ ವರ್ಷ ನಾಪೋಕ್ಲು ಪಾಡಿ ಇಗ್ಗುತ್ತಪ್ಪ ದೇವಸ್ಥಾನದಲ್ಲಿ ರಾತ್ರಿ 8.10ಕ್ಕೆ ನೆರೆ ಕಟ್ಟುವುದು, 9.10ಕ್ಕೆ ಕದಿರು ತೆಗೆಯುವುದು ಹಾಗೂ 10.10ಕ್ಕೆ ಊಟೋಪಚಾರ ನಡೆಯುತ್ತದೆ. ನಂತರ ಕೊಡಗಿನ ಎಲ್ಲೆಡೆ ರಾತ್ರಿ 8.40ಕ್ಕೆ ನೆರೆ ಕಟ್ಟುವುದು, 9.40ಕ್ಕೆ ಕದಿರು ತೆಗೆಯುವುದು ಹಾಗೂ ರಾತ್ರಿ 10.40ಕ್ಕೆ ಊಟೋಪಚಾರ ನಡೆಯಲಿದೆ
ಹಬ್ಬದ ದಿನ ಸಂಜೆ ಫಲಹಾರದ ಬಳಿಕ ಸಿದ್ದಪಡಿಸಲಾದ 'ಕುತ್ತಿ'ಯನ್ನು ಕುಟುಂಬದ ಹಿರಿಯರೊಬ್ಬರು ಹೊತ್ತು ಊರಿನಲ್ಲಿರುವ ಅಂಬಲ(ಮೈದಾನ)ಕ್ಕೆ ತೆರಳುತ್ತಾರೆ. ಅಲ್ಲಿಗೆ ಸುತ್ತಮುತ್ತಲಿನ ಕುಟುಂಬದವರು, ಸಂಬAಧಿಕರು ಬರುತ್ತಾರೆ. ಅಲ್ಲಿಂದ ಮನೆಯ ಹಿರಿಯ ವ್ಯಕ್ತಿ ಕದಿರು ತೆಗೆಯಲು ಕುಡುಗೋಲನ್ನು ಕದಿರು ತೆಗೆಯುವವನ ಕೈಗೆ ನೀಡುತ್ತಾರೆ. ಈ ಸಂದರ್ಭ ಮುತೈದೆಯೊಬ್ಬರು 'ತಳಿಯಕ್ಕಿ ಬೊಳ್ಚ'ವನ್ನು ಹಿಡಿದುಕೊಳ್ಳುತ್ತಾರೆ. ಬಳಿಕ ಮನೆಯವರೆಲ್ಲರೂ ಒಡ್ಡೋಲಗದೊಂದಿಗೆ ಕದಿರು ಕೊಯ್ಯುವ ಗದ್ದೆಯತ್ತ ತೆರಳುತ್ತಾರೆ.
ಗದ್ದೆ ತಲುಪಿದ ಬಳಿಕ ಹಾಲು, ಜೇನು ಮೊದಲಾದುವುಗಳನ್ನು ಕದಿರಿನ ಬುಡಕ್ಕೆ ಸುರಿಯಲಾಗುತ್ತದೆ. ಹುತ್ತರಿ (ಪುತ್ತರಿ) ಕುಕ್ಕೆಯಲ್ಲಿ ಕೊಂಡೊಯ್ದ ಅಚ್ಚುನಾರಿನಿಂದ ಕಟ್ಟಿದ ಎಲೆಗಳನ್ನೊಳಗೊಂಡ ನೆರೆಯನ್ನು ಕದಿರಿನ ಬುಡಕ್ಕೆ ಕಟ್ಟಲಾಗುತ್ತದೆ. ಆ ನಂತರ ಹುತ್ತರಿ (ಪುತ್ತರಿ) ಮೂಹೂರ್ತಕ್ಕೆ ಸುಸೂತ್ರವೆನಿಸುವಂತೆ ಗುಂಡೊAದನ್ನು ಹಾರಿಸಲಾಗುತ್ತದೆ. ಕುತ್ತಿ ಹೊತ್ತ ಕುಟುಂಬದ ಹಿರಿಯ ವ್ಯಕ್ತಿ ದೇವರನ್ನು ಪ್ರಾರ್ಥಿಸಿ, ಕದಿರನ್ನು ಬೆಸ ಸಂಖ್ಯೆಯಲ್ಲಿ ಕೊಯ್ದು ಹುತ್ತರಿ (ಪುತ್ತರಿ) ಕುಕ್ಕೆಯಲ್ಲಿ ಇಡಲಾಗುತ್ತದೆ. ಈ ಸಂದರ್ಭ 'ಪೊಲಿ ಪೊಲಿ ದೇವಾ' ಎಂದು ಘೋಷಣೆ ಕೂಗಲಾಗುತ್ತದೆ. ಈ ವೇಳೆ ಪಟಾಕಿ ಸಿಡಿಸಿ ಎಲ್ಲರೂ ಸಂಭ್ರಮಿಸುತ್ತಾರೆ
ಭತ್ತದ ಗದ್ದೆಯನ್ನು ಹೊಂದಿದವರು ತಮ್ಮ ಗದ್ದೆಯಿಂದ ಭತ್ತದ ಕದಿರು ತಂದು ಅದನ್ನು ಪೂಜಿಸುವ ಸಂಪ್ರದಾಯ ಈ ಹಬ್ಬದಲ್ಲಿದೆ. ಪೂಜಿಸಿ ತಂದ ಕದಿರನ್ನು ಐದು ಬಗೆಯ ಮರದ ಎಲೆಯ ಸುರುಳಿ ಮಧ್ಯೆ ಸೇರಿಸಿ ಕಟ್ಟಲಾಗುತ್ತದೆ. ನಂತರ ದೇವರ ಕೋಣೆಯಲ್ಲಿ ಕಟ್ಟುವುದು, ಮನೆಯಲ್ಲಿರುವ ವಾಹನ, ಆಯುಧಗಳಿಗೆ ಕಟ್ಟವ ಸಂಪ್ರದಾಯ ಹಿಂದಿನಿAದಲೂ ನಡೆದು ಬಂದಿದೆ. ಇಡೀ ಕುಟುಂಬದವರೆಲ್ಲರೂ ಒಟ್ಟಾಗಿ ಆಚರಿಸುವ ವಿಶೇಷ ಹಬ್ಬ ಇದಾಗಿದೆ.
ಹುತ್ತರಿ (ಪುತ್ತರಿ) ಹಬ್ಬದ ವಿಶೇಷ ಹೊಸ ಅಕ್ಕಿಯ ಪಾಯಸ. ಹೊಸ ಅಕ್ಕಿಯ ಜೊತೆ ಹಾಲು, ತೆಂಗಿನ ಕಾಯಿ, ಡ್ರೈಫ್ರೂಟ್ಸ್, ಬೆಲ್ಲ ಅಥವಾ ಸಕ್ಕರೆ ಸೇರಿಸಿ ಅಕ್ಕಿ ಪಾಯಸ ತಯಾರಿಸಲಾಗುತ್ತದೆ. ಈ ಹಬ್ಬದಲ್ಲಿ ಅಕ್ಕಿಯಿಂದ ತಯಾರಿಸುವ ತಂಬಿಟ್ಟು ಸಹ ಪ್ರಮುಖ ಅಡುಗೆಯಾಗಿದೆ. ಶುಕ್ರವಾರದ (ಡಿ.05)ರ ನಂತರ ಈ ಹಬ್ಬದ ಅಂಗವಾಗಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಕೊಡಗಿನ ಸಾಂಪ್ರದಾಯಕ ಉಡುಗೆ, ತೊಡುಗೆಗಳನ್ನು ಧರಿಸಿ ಕೋಲಾಟ, ಪರಿಯ ಕಳಿ ಮುಂತಾದ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net