ಮಹಿಳೆಯರು ಸಂಗ್ರಹಿಸಿದ ಜೇನು ತುಪ್ಪ ಬಿಡುಗಡೆ

ವನಧನ ಯೋಜನೆಯಡಿ ಆಯೋಜಿಸಿದ್ದ ಜೇನುಹನಿ ಬಿಡುಗಡೆ ಕಾರ್ಯಕ್ರಮವನ್ನು ತಾಲೂಕು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜೇಶ್ ಉದ್ಘಾಟಿಸಿದರು. ತಿಮ್ಮಯ್ಯ, ಚಾಂದಿನಿ, ಲೇಖನಿ, ಮಂಜುನಾಥ್ ಇದ್ದರು.
ವನಧನ ಯೋಜನೆಯಡಿ ಆಯೋಜಿಸಿದ್ದ ಜೇನುಹನಿ ಬಿಡುಗಡೆ ಕಾರ್ಯಕ್ರಮವನ್ನು ತಾಲೂಕು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜೇಶ್ ಉದ್ಘಾಟಿಸಿದರು. ತಿಮ್ಮಯ್ಯ, ಚಾಂದಿನಿ, ಲೇಖನಿ, ಮಂಜುನಾಥ್ ಇದ್ದರು.
Published on
ಸಿದ್ದಾಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ವನಸಿರಿ ವನ ಧನ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಸಿದ್ದಾಪುರ ಸಂಜೀವಿನಿ ಒಕ್ಕೂಟದ ಮಹಿಳೆಯರು ಸಂಗ್ರಹಿಸಿದ ಸುಮಾರು 25 ಲೀ. ಜೇನನ್ನು ತಾಲೂಕು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜೇಶ್ ಮಾರುಕಟ್ಟೆಗೆ ಬಿಡುಗಡೆ ಮಾಡಿದರು.
ಸಿದ್ದಾಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಸ್ವಉದ್ಯೋಗ ಸೃಷ್ಟಿಯ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ಕೊಡಗು ಜಿಲ್ಲಾ ಪಂಚಾಯಿತಿಯ ಸಹಕಾರದೊಂದಿಗೆ ಮಹಿಳೆಯರಿಗೆ ವನ ಉತ್ಪನ್ನಗಳ ಸಂಗ್ರಹಣೆ ಮತ್ತು ಮೌಲ್ಯವರ್ಧನೆ ಕುರಿತ ಅಗತ್ಯ ತರಬೇತಿ ನೀಡಲಾಗಿದ್ದು, ಅದರ ಫಲವಾಗಿ ಮಹಿಳೆಯರು ಜೇನುಹನಿ ಸಂಗ್ರಹಣೆ ಮೂಲಕ ಸ್ವಾವಲಂಬಿ ಬದುಕಿನತ್ತ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ ಎಂದು ಹೇಳಿದರು.
ಕೊಡಗು ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಂಜೀವಿನಿ ಒಕ್ಕೂಟವು ಸರ್ಕಾರಿ ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಂಡು ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಸಾಧನೆ ಮಾಡಿ ಮಹಿಳಾ ದಿನಾಚರಣೆ ಪ್ರಶಸ್ತಿ ಪಡೆದಿರುವುದನ್ನು ಶ್ಲಾಘಿಸಿದರು.
ಸಂಘಟನೆಯ ಅಧ್ಯಕ್ಷೆ ರೀನಾ ತುಳಸಿ ಮಾತನಾಡಿ, ಸಿದ್ದಾಪುರ ಸಂಜೀವಿನಿ ಒಕ್ಕೂಟವು ಈಗಾಗಲೇ ಮೀನು ಕೃಷಿ, ಹೊಲಿಗೆ ತರಬೇತಿ ಹಾಗೂ ಗೃಹೋಪಯೋಗಿ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದ ಮೂಲಕ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸುತ್ತಿದೆ ಎಂದರು. ಮಹಿಳಾ ಸಂತೆಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದ್ದು, ಅಕ್ಕ ಕೆಫೆ ಕಟ್ಟಡ ಕಾಮಗಾರಿ ಶೀಘ್ರ ಪೂರ್ಣಗೊಂಡರೆ ಮಹಿಳೆಯರ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ, ಜಿಲ್ಲಾ ವ್ಯವಸ್ಥಾಪಕಿ ಚಾಂದಿನಿ, ಇಂಡಸ್ಟ್ರಿ ಫೌಂಡೇಶನ್‌ನ ಲೇಖನಿ, ತಾಲೂಕು ವ್ಯವಸ್ಥಾಪಕ ಮಂಜುನಾಥ್, ವಿಡಿವಿಕೆ ಸಮಿತಿ ಕಾರ್ಯದರ್ಶಿ ಇಂದಿರಾ ಹಾಗೂ ಸದಸ್ಯೆಯರಾದ ಯಮುನಾ, ಸುಮತಿ, ವಸಂತಿ ಸೇರಿದಂತೆ ಸಂಜೀವಿನಿ ಒಕ್ಕೂಟದ ಸದಸ್ಯರು ಮತ್ತು ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net