ಫೆ. 26ರಿಂದ ಮಾರ್ಚ್ 1ರ ವರೆಗೆ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿ

* ಕ್ಲಬ್ ಅಧ್ಯಕ್ಷ ಎಂ. ಈ. ಮಹೇಶ್ ಮಾಹಿತಿ
* ಕ್ಲಬ್ ಅಧ್ಯಕ್ಷ ಎಂ. ಈ. ಮಹೇಶ್ ಮಾಹಿತಿ
Published on
ಸೋಮವಾರಪೇಟೆ : ಡಾಲ್ಫಿನ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಫೆ. 26ರಿಂದ ಮಾರ್ಚ್ 1ರ ವರೆಗೆ ದಿ. ಬಿ.ಈ. ರಂಗಸ್ವಾಮಿ ಚೂರಿಗಿಡ್ನ ಅವರ ಜ್ಞಾಪಕಾರ್ಥವಾಗಿ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಳಿ ಟರ್ಫ್ ಮೈದಾನದಲ್ಲಿ ನಡೆಯಲಿದೆ ಎಂದು ಕ್ಲಬ್ ಅಧ್ಯಕ್ಷ ಎಂ.ಈ. ಮಹೇಶ್ ತಿಳಿಸಿದ್ದಾರೆ.
ಈ ಬಾರಿ 5ನೇ ವರ್ಷದ ಜಿಲ್ಲೆಯ ಪ್ರತಿಷ್ಠಿತ ಆಹ್ವಾನಿತ ತಂಡಗಳ ನಡುವೆ ಪಂದ್ಯ ನಡೆಯಲಿದ್ದು, ಪ್ರತಿ ತಂಡದಲ್ಲಿಯೂ ಐವರು ಅತಿಥಿ ಆಟಗಾರರಿಗೆ ಆಡಲು ಅವಕಾಶವಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಿಜೇತ ತಂಡಕ್ಕೆ ಒಂದು ಲಕ್ಷ ರೂ. ಹಾಗೂ ಪಾರಿತೋಷಕ, ದ್ವಿತೀಯ ಸ್ಥಾನ ಪಡೆದ ತಂಡ 50 ಸಾವಿರ ರೂ. ಮತ್ತು ಪಾರಿತೋಷಕ ಮತ್ತು ಪಂದ್ಯ ಪುರುಷೋತ್ತಮ, ಸರಣಿ ಪುರುಷೋತ್ತಮ ಸೇರಿದಂತೆ ಪ್ರತಿಯೊಂದು ವಿಭಾಗದಲ್ಲಿ ವೈಯಕ್ತಿಕ ಸಾಧನೆ ತೋರುವ ಕ್ರೀಡಾ ಪಟುಗಳಿಗೆ ಬಹುಮಾನ ನೀಡಲಾಗುವುದು ಎಂದರು.
ಮಡಿಕೇರಿಯ ಚಾರ್ಮರ್ಸ್‌, ಕೂಡಿಗೆ ಕ್ರೀಡಾ ಶಾಲೆ, ಗೋಣಿಕೊಪ್ಪ ಬಿ.ಬಿ.ಸಿ, ಬೇರಳಿನಾಡ್ ತಂಡ, ಕುಂದ, ಅಂಜಿಗೇರಿನಾಡ್, ಕೂರ್ಗ್ ಚಾಲೆಂಜರ್ಸ್‌, ಕೋಣನಕಟ್ಟೆ, ಮಲ್ಮ ಕಕ್ಕಬ್ಬೆ ಹಾಗು ಅತಿಥೇಯ ಡಾಲ್ಪಿನ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
ಫೆ. 26 ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಡಾ.ಮಂತರ್ ಗೌಡ, ಸಂಸದ ಯದುವೀರ್ ಸೇರಿದಂತೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಹಾಕಿ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮಡಿಕೇರಿಯ ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ಕೂಡಿಗೆಯ ಕ್ರೀಡಾ ಶಾಲೆಯ ಬಾಲಕಿಯರ ತಂಡದ ನಡುವೆ ಪ್ರದರ್ಶನ ಪಂದ್ಯಾಟ ನಡೆಯಲಿದೆ ಎಂದು ತಿಳಿಸಿದರು.
ದೇಶದ ರಾಷ್ಟ್ರೀಯ ಹಾಕಿ ಆಟಗಾರರಾದ ಎ.ಬಿ. ಸುಬ್ಬಯ್ಯ, ಅರ್ಜುನ್ ಹಾಲಪ್ಪ, ಎಸ್.ವಿ. ಸುನೀಲ್, ವಿಕ್ರಂಕಾಂತ್, ಭಾರತ ಜೂನಿಯರ್ ಹಾಕಿ ತಂಡದ ತರಬೇತುದಾರರಾದ ಸಿ.ಬಿ. ಜನಾರ್ದನ್ ಸೇರಿದಂತೆ ಹಲವಾರು ಕ್ರೀಡಾಪಟುಗಳು ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿಲಿದ್ದಾರೆ ಎಂದು ಹೇಳಿದರು.
ಪಂದ್ಯದಲ್ಲಿ ಪಾಲ್ಗೊಳ್ಳುವ ತಂಡಗಳು ಎರಡು ಗೋಲ್ ಕೀಪರ್‌ನೊಂದಿಗೆ 18 ಮಂದಿ ಆಟಗಾರರನ್ನು ಒಳಗೊಂಡಿರಬೇಕು. ಪ್ರತಿ ತಂಡಗಳು 5 ಮಂದಿ ಅತಿಥಿ ಆಟಗಾರರನ್ನು ತಂಡದಲ್ಲಿ ಆಡಲು ಅವಕಾಶ ಮಾಡಿಕೊಡಬಹುದಾಗಿದೆ.
ಡಾಲ್ಫಿನ್ಸ್ ಕ್ಲಬ್ ಕಳೆದ 15 ವರ್ಷಗಳಿಂದ ಎಳೆಯ ಮಕ್ಕಳಿಗೆ ಹಾಕಿ ಹಾಗೂ ಈಜು ತರಬೇತಿ ಶಿಬಿರಗಳನ್ನು ನೀಡುತ್ತಿದ್ದು, ಇಲ್ಲಿ ತರಬೇತಿ ಪಡೆದ ಅನೇಕ ವಿದ್ಯಾರ್ಥಿಗಳು ಎಂ.ಇ.ಜಿ. ಬೆಂಗಳೂರು, ಮೈಸೂರು, ಕೂಡಿಗೆ, ಪೊನ್ನಂಪೇಟೆ ಕ್ರೀಡಾ ವಸತಿ ಶಾಲೆಗಳಿಗೆ ಆಯ್ಕೆಯಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಗಮನ ಸೆಳೆದಿದ್ದಾರೆ.
ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ಆಟಗಾರರಾದ ಎಚ್.ಎ.ವಚನ್, ಎನ್.ಎಂ.ಸೂರ್ಯ, ದೃತಿವರ್ಣೆಕರ್, ಬಿ.ಎಂ.ಲಿಖಿತ್ ಡಾಲ್ಫಿನ್ಸ್ ಕ್ಲಬ್ ವತಿಯಿಂದ ತರಬೇತಿ ಪಡೆದವರಾಗಿದ್ದಾರೆ ಎಂದು ಸಂಸ್ಥೆಯ ಗೌರವಾಧ್ಯಕ್ಷರಾದ ಎಚ್.ಎನ್.ಅಶೋಕ್ ತಿಳಿಸಿದರು.
ಕಾರ್ಯದರ್ಶಿ ಬಿ.ಎನ್. ಮಂಜುನಾಥ್, ಖಜಾಂಚಿ ಕೆ.ಜೆ.ಗಿರೀಶ್, ನಿರ್ದೆಶಕರುಗಳಾದ ಬಿ.ಆರ್.ಮಹೇಶ್, ಪ್ರಕಾಶ್, ಕೆ.ಪಿ.ರಾಯ್ ಮತ್ತಿತರರು ಇದ್ದರು.
----------------------------------------
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net